ನೋಟು ರದ್ದತಿ ಉದ್ದೇಶದ ಬಗ್ಗೆ ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಟ್ಟಿದ್ದರ ಮರ್ಮ

ನೋಟ್‌ ಬ್ಯಾನ್‌ ಕ್ರಮವನ್ನು ಖೋಟಾನೋಟು, ಭಯೋತ್ಪಾದನೆಯ ವಿರುದ್ಧದ ಸಮರ ಎಂದೇ ಬಿಂಬಿಸಿಕೊಂಡು ಬರಲಾಗಿತ್ತು. ಆದರೆ ಮಧ್ಯದಾರಿಗೆ ಬಂದಾಗ ಎಡುವುತ್ತಿದ್ದೇವೆ ಎನಿಸಿ, ಹಣದುಬ್ಬರದ ವಿರುದ್ಧದ ಹೋರಾಟ ಎಂದರು. ಈಗ ನಗದುರಹಿತ ಆರ್ಥಿಕತೆಯೇ ಅದರ ಉದ್ದೇಶ ಎನ್ನುತ್ತಿದ್ದಾರೆ!

"ಮಹಾತ್ಮ ಗಾಂಧಿಯವರು ಸಾಮಾಜಿಕ ಅಸ್ಪೃಶ್ಯತೆಯ ನಿರ್ಮೂಲನಕ್ಕಾಗಿ ಶ್ರಮಿಸಿದರು, ಇಂದು ನಾವು ಆರ್ಥಿಕ ಅಸ್ಪೃಶ್ಯತೆಯನ್ನು ತೊಲಗಿಸಬೇಕಾಗಿದೆ," ಇದನ್ನು ಹೇಳಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು. ಇದು ಜನಧನ ಯೋಜನೆಯನ್ನು ಅಧಿಕೃತವಾಗಿ ಪ್ರಾರಂಭ ಮಾಡುವಾಗ ಹೇಳಿದ ಮಾತು. ನಿಜ, ಸಮಾಜದ ಕಟ್ಟಕಡೆಯ ಮನುಷ್ಯ ಆರ್ಥಿಕ ಚಟುವಟಿಕೆಯ ಭಾಗವಾದಾಗಷ್ಟೇ ನಿಜವಾದ ಆರ್ಥಿಕ ಪ್ರಗತಿ ಸಾಧ್ಯ, ಆರ್ಥಿಕ ಪ್ರಗತಿಗೆ ಅರ್ಥಬರುವುದು ಆಗಲೇ.

ಆದರೆ ಸರ್ಕಾರದ ಆರ್ಥಿಕ ನೀತಿಗಳನ್ನು, ನೋಟು ಅಪನಗದೀಕರಣ, ಜಿಎಸ್‌ಟಿಯಂತಹ ಕ್ರಮಗಳನ್ನು ನೋಡಿದಾಗ ಅವರ ಕಾಳಜಿಯ ಬಗ್ಗೆ ಸಹಜವಾಗಿಯೇ ಅನುಮಾನ ಬರುತ್ತದೆ. ನೋಟು ಅಮಾನ್ಯವನ್ನು ಜಾರಿಗೊಳಿಸಿದಾಗ ಅದು “ದೇಶವನ್ನು ಶುದ್ಧಗೊಳಿಸುವ ಆಂದೋಲನ’ ಅಂದಿದ್ದರು. ಮೊದಲಲ್ಲಿ ಅದನ್ನು ಕಪ್ಪುಹಣ, ಖೋಟಾನೋಟು, ಭಯೋತ್ಪಾದನೆಯ ವಿರುದ್ಧದ ಸಮರವಾಗಿ ಬಿಂಬಿಸಲಾಗಿತ್ತು. ಮಧ್ಯದಲ್ಲಿ ಎಲ್ಲೋ ಎಡುವುತ್ತಿದ್ದೇವೆ ಎನಿಸಿ, ಅದನ್ನು ಹಣದುಬ್ಬರದ ವಿರುದ್ಧದ ಹೋರಾಟವೆಂದರು. ಈಗ ಅದನ್ನೂ ಬಿಟ್ಟು ನಗದುರಹಿತ ಆರ್ಥಿಕತೆಯೇ ಅದರ ನಿಜವಾದ ಉದ್ದೇಶ ಎನ್ನುತ್ತಿದ್ದಾರೆ. ಆ ಬಗ್ಗೆ ಚರ್ಚೆ ಮಾಡುವುದು ಸದ್ಯಕ್ಕೆ ನಮ್ಮ ಉದ್ದೇಶವಲ್ಲ.

ಮೋದಿಯವರು ಹೇಳುವ ಆರ್ಥಿಕ ಅಸ್ಪೃಶ್ಯತೆಯ ದೃಷ್ಟಿಯಿಂದ ನೋಟು ಅಮಾನ್ಯವನ್ನುಒಮ್ಮೆ ಗಮನಿಸೋಣ. ನೋಟು ಅಮಾನ್ಯ ಆದೇಶ ಜಾರಿಗೊಳಿಸಿದ್ದು ನವೆಂಬರ್ ತಿಂಗಳಿನಲ್ಲಿ. ಅದು ನಮ್ಮ ರೈತರಿಗೆ ನಗದು ತುಂಬಾ ಬೇಕಾದ ಸಮಯ. ಇಂಥ ಸಮಯದಲ್ಲಿ ಚಲಾವಣೆಯಿಂದ ಶೇಕಡ 86.9ರಷ್ಟು ಹಣವನ್ನು ಹಿಂತೆಗೆದುಕೊಳ್ಳಲಾಯಿತು. ಕೋಯ್ಲಿಗೆ, ಬಿತ್ತನೆಗೆ, ಮಾರಾಟಕ್ಕೆ ಎಲ್ಲಕ್ಕೂ ರೈತರು ಪರದಾಡಬೇಕಾಯಿತು. ಇನ್ನು ಅಸಂಘಟಿತ ಉದ್ದಿಮೆಗಳಲ್ಲಿ ವ್ಯವಹಾರ ಹೆಚ್ಚಾಗಿ ನಡೆಯುವುದೇ ನಗದಿನಲ್ಲಿ.

ಸ್ವಾಭಾವಿಕವಾಗಿಯೇ ಅಂತಹ ಹಲವು ಉದ್ದಿಮೆಗಳು ಮುಚ್ಚಿಹೋದುವು. ಲಕ್ಷಾಂತರ ಜನ ನಿರುದ್ಯೋಗಿಗಳಾದರು. ಅಂತಹ ನೂರಾರು ಘಟನೆಗಳು ಆಗ ವರದಿಯಾದವು.

"ನಾನೊಬ್ಬ ರೈತ. ನನ್ನ ಬಳಿ ಕೇವಲ ಮೂರು ಭೀಘಾ ಜಮೀನಿದೆ. ತುಂಬಾ ಕಷ್ಟದಲ್ಲಿದ್ದೇನೆ. ಮುಂದಿನ ಬಿತ್ತನೆಗೆ ನನ್ನ ಬಳಿ ಹಣವಿಲ್ಲ. ಬೀಜಕ್ಕೆ ಸಾಲ ಸಿಗಬಹುದು. ಆದರೆ ಗೊಬ್ಬರಕ್ಕೇನು ಮಾಡಲಿ, ಕೂಲಿ ಹೇಗೆ ಕೊಡಲಿ, ಸಾಧ್ಯವೇ ಇಲ್ಲ" (ದಿ ಇಂಡಿಯನ್ ಎಕ್ಸ್ ಪ್ರೆಸ್, 8 ಡಿಸೆಂಬರ್, 2016).

"ನಾನೊಂದು ಇಟ್ಟಿಗೆಗೂಡಿನಲ್ಲಿ ಕೆಲಸ ಮಾಡುತ್ತಿದ್ದೇನೆ. ದಿನಕ್ಕೆ 250 ರೂಪಾಯಿ ದುಡಿಯುತ್ತಿದ್ದೆ. ಆದರೆ ದೀಪಾವಳಿಯ ನಂತರ ಅದನ್ನು ತೆರೆದೇ ಇಲ್ಲ. ಅದಕ್ಕೂ ಮೊದಲು ಮಳೆ ಎಂದು ಮುಚ್ಚಲಾಗಿತ್ತು. ನಾನು ಕಳೆದ ಐದು ತಿಂಗಳಿಂದ ನಿರುದ್ಯೋಗಿ" (ದಿ ಟೈಮ್ಸ್‌ ಆಫ್ ಇಂಡಿಯಾ, 11 ಜನವರಿ 2017).

"ಹಣವಿಲ್ಲದೆ, ಗ್ವಾಲಿಯರ್ ನ ಹಳ್ಳಿಯೊಂದರ ಹದಿನೈದು ರೈತರು, ಮಕ್ಕಳ ಶಾಲಾಶುಲ್ಕಕ್ಕಾಗಿ 45 ಕ್ವಿಂಟಾಲ್ ಭತ್ತವನ್ನು ಪಾವತಿಸಿದರು" (ದಿ ಟೈಮ್ಸ್‌ ಆಫ್ ಇಂಡಿಯಾ, 25 ಡಿಸೆಂಬರ್ 2106).

"ನೋಟು ಅಮಾನ್ಯದಿ ಉಂಟಾದ ನಗದಿನ ಅಭಾವದಿಂದ ಜನ ಕೆಲಸ ಬಿಟ್ಟು ಊರಿಗೆ ಮರಳಿದ್ದಾರೆ.   ಕಾರ್ಮಿಕರ ವಲಸೆಯಿಂದಾಗಿ ತಿರುಪ್ಪೂರಿನ ಬಟ್ಟೆ ಉದ್ದಿಮೆ ಸಂಕಟಕ್ಕೆ ಸಿಲುಕಿದೆ. ಇದರಲ್ಲಿ ನೌಕರಿ ಮಾಡುತ್ತಿದ್ದವರು ಬಿಹಾರ, ಉತ್ತರಪ್ರದೇಶ ಮುಂತಾದೆಡೆಗಳಿಂದ ಬಂದಿದ್ದರು. ಆದರೆ ಕೂಲಿ ಕೊಡುವುದಕ್ಕೆ ನಮ್ಮ ಬಳಿ ನಗದೇ ಇರಲಿಲ್ಲ. ಹಾಗಾಗಿ ಅವರೆಲ್ಲರೂ ವಾಪಸ್ಸು ಹೋಗಬೇಕಾಯಿತು" (ಮಿಂಟ್, 27 ಜನವರಿ 2017).

"ನವೆಂಬರ್ 8ಕ್ಕೆ ಮೊದಲು ನಮ್ಮಲ್ಲಿ ತಿಂಗಳಿಗೆ 3 ಕೋಟಿ ವ್ಯವಹಾರವಾಗುತ್ತಿತ್ತು. ಈಗದು ಅರ್ಧಕ್ಕೆ ಕುಸಿದಿದೆ. ಅದರಿಂದ ನಾವು ಅರ್ಧದಷ್ಟು ಕೆಲಸಗಾರರನ್ನು ತೆಗೆಯಬೇಕಾಯಿತು. ನಾವು ಹೀರೋ ಮೋಟಾರ್ ಕಾರ್ಪ್ ಗೆ ಬಿಡಿಭಾಗಗಳನ್ನು ಒದಗಿಸುತ್ತೇವೆ. ದ್ವಿಚಕ್ರ ವಾಹನಗಳಿಗೆ ಬೇಡಿಕೆ ಕಮ್ಮಿಯಾಗಿರುವುದರಿಂದ ನಮ್ಮಂತಹ ಘಟಕಗಳು ಸಂಕಟದಲ್ಲಿವೆ. ನಮ್ಮಂತಹ ಬಿಡಿಭಾಗಗಳನ್ನು ಪೂರೈಸುವ ನೂರಾರು ಘಟಕಗಳದ್ದೂ ಇದೇ ಪರಿಸ್ಥಿತಿ" (ತಲ್ವಾರ್, ಗುರ್‌ಗಾಂ ಜಿಲ್ಲೆ ಪೂರಕ ಉದ್ದಿಮೆಯ ಮಾಲಿಕ -ದಿ ಹಿಂದು, 13 ಜನವರಿ 2017).

ಇವೆಲ್ಲಾ ಗ್ರಾಮೀಣ ಹಾಗೂ ಅಸಂಘಟಿತ ಕೈಗಾರಿಕಗಳ ಬವಣೆ. ರಾಷ್ಟ್ರೀಯ ವರಮಾನಕ್ಕೆ ಈ ಅಸಂಘಟಿತ ಆರ್ಥಿಕತೆ ಅಪಾರವಾಗಿ ನೆರವಾಗುತ್ತದೆ. ಉದ್ಯೋಗ ಸೃಷ್ಟಿಯಲ್ಲಂತೂ ಅವುಗಳದ್ದೇ ಸಿಂಹಪಾಲು. ಸಂಘಟಿತ ವಲಯ ಕೂಡ ಈ ಅಸಂಘಟಿತ ವಲಯವನ್ನೇ ಹಲವು ಕಾರಣಕ್ಕೆ ನೆಚ್ಚಿಕೊಂಡಿದೆ. ಹಾಗಾಗಿ ಅವುಗಳೂ ತೊಂದರೆ ಅನುಭವಿಸಬೇಕಾಯಿತು. ಒಟ್ಟಾರೆ ಈಗಾಗಲೇ ಹಿಂಜರಿಕೆ ಎದುರಿಸುತ್ತಿದ್ದ ಆರ್ಥಿಕತೆಗೆ ಇನ್ನಷ್ಟು ಪೆಟ್ಟುಬಿತ್ತು. ಕೈಯಲ್ಲಿ ನಗದಿಲ್ಲ. ಜೊತೆಗೆ ಸುಮಾರು 1.5 ಮಿಲಿಯನ್ ಜನ ಕೆಲಸ ಕಳೆದುಕೊಂಡರು. ಇದರಿಂದ ಬೇಡಿಕೆ ಕುಸಿಯಿತು. ಉತ್ಪಾದನೆ ನಿಂತದ್ದರಿಂದ ಪೂರೈಕೆಯಲ್ಲೂ ತೊಂದರೆಯಾಯಿತು. ನಿಜವಾಗಿ ಸರ್ಕಾರ ಹೆಚ್ಚು ಹಣ ಹೂಡಬೇಕಾಗಿದ್ದ ಬಿಕ್ಕಟ್ಟಿನ ಸಮಯ ಅದು. ಜನ ಖರ್ಚಿಗಾಗಿ ತಮ್ಮ ಬಳಿ ಇಟ್ಟುಕೊಂಡಿದ್ದ ಹಣವನ್ನು ಬ್ಯಾಂಕಿನ ಖಾತೆಗೆ ವರ್ಗಾಯಿಸಿ, ಅಲ್ಲದು ಕೊಳೆಯುವಂತಾಯಿತು. ಅಷ್ಟೇ ಅಲ್ಲ, ತಮ್ಮಲ್ಲಿದ್ದ ಹಣವನ್ನು ಬದಲಿಸಿಕೊಳ್ಳುವುದಕ್ಕೆ ಬ್ಯಾಂಕಿನೆದುರು ಕ್ಯೂ ನಿಂತು ಅಂದಿನ ಕೂಲಿಯನ್ನೂ ಕಳೆದುಕೊಳ್ಳಬೇಕಾಯಿತು. ಆರ್ಥಿಕವಾಗಿ ಜನ ಹೆಚ್ಚೆಚ್ಚು “ಅಸ್ಪೃಶ್ಯ’ರಾಗುತ್ತಾ ಹೋದರು.

ವಿಪರ್ಯಾಸವೆಂದರೆ ಬಡವರನ್ನು ಒಳಗೊಳ್ಳುವ ಉದ್ದೇಶದಿಂದ ಪ್ರಾರಂಭಿಸಿದ್ದ ಜನಧನ ಯೋಜನೆಯಲ್ಲಿ ತಿಂಗಳಿಗೆ ಕೇವಲ 10,000ವಷ್ಟೇ ಪಡೆಯಬಹುದಿತ್ತು. ಆದರೆ ಉಳಿದ ಬ್ಯಾಂಕಿನಿಂದ ವಾರಕ್ಕೆ 24,000 ರೂ.ಗಳನ್ನು ಪಡೆಯಬಹುದಿತ್ತು. ಕಾರಣ ಏನೇ ಇರಲಿ, ಅಂತಿಮವಾಗಿ ಸೊರಗುವುದು ಬಡವರಿಗಾಗಿ ಹಮ್ಮಿಕೊಂಡ ಕಾರ್ಯಕ್ರಮಗಳು.

ಆರ್ಥಿಕ ಬೆಳವಣಿಗೆ ಕಡಿಮೆಯಾದರೆ ತೆರಿಗೆ ಸಂಗ್ರಹಣೆಯೂ ಕಡಿಮೆಯಾಗುತ್ತದೆ; ಸರ್ಕಾರದ ಹೂಡಿಕೆಯೂ ಕಮ್ಮಿಯಾಗುತ್ತದೆ. ಮತ್ತೆ ಹೊಡೆತ ಬೀಳುವುದು ಬಡವರ ಕ್ಷೇಮಾಭಿವೃದ್ಧಿ ಕಾರ್ಯಕ್ರಮಗಳಿಗೆ. ವಂಚಿತರಾಗುವುದು ಸಮಾಜದ ಕೆಳಸ್ತರದವರೇ.

ಈಗ ನಗದು ರಹಿತ ಆರ್ಥಿಕತೆಯನ್ನು ಸರ್ವರೋಗ ಪರಿಹಾರಕವೆಂಬಂತೆ ನೋಡಲಾಗುತ್ತಿದೆ. ಭ್ರಷ್ಟಾಚಾರ ನಿರ್ಮೂಲನ, ಬಡತನ ನಿರ್ಮೂಲನ, ಕೊನೆಗೆ ಸುಸ್ಥಿರ ಅಭಿವೃದ್ಧಿಗೂ ಅದೇ ಪರಿಹಾರವೆನ್ನುತ್ತಿದ್ದಾರೆ. ನಗದುರಹಿತ ಆರ್ಥಿಕತೆ ತನ್ನಷ್ಟಕ್ಕೇ ಸಹಜವಾಗಿ ಆಗಬೇಕಾದಂತಹ ಪ್ರಕ್ರಿಯೆ. ಬಲವಂತವಾಗಿ ಹೇರುವುದು ಪ್ರಜಾಸತ್ತಾತ್ಮಕವಲ್ಲ, ಅಷ್ಟೇ ಅಲ್ಲ ಸೂಕ್ತವೂ ಅಲ್ಲ. ಅದರಿಂದ ನೋಡುವ ಕಣ್ಣಿದ್ದರೆ ತಳಸಮುದಾಯದ ಜನರ ಪಾಡು ಢಾಳಾಗಿ ಕಾಣಿಸುತ್ತದೆ. ಈಗಾಗಲೇ ಹೊರಗುಳಿದವರನ್ನು ಇನ್ನಷ್ಟು ಆಚೆಗೆ ತಳ್ಳುತ್ತಿದ್ದೇವೆ. ಭ್ರಷ್ಠರನ್ನು ಮತ್ತು ರಾಜಕಾರಣಿಗಳನ್ನು, ಕಾರ್ಪೋರೇಟ್ ಜಗತ್ತನ್ನು ನೋಟು ಅಮಾನ್ಯ ಅಷ್ಟಾಗಿ ಕಾಡಲೇ ಇಲ್ಲ. ಅವರ ಸಂಪತ್ತು ಬೆಳೆಯುತ್ತಲೇ ಇದೆ. ಅದು ಕಾಡಿದ್ದೇ ಸಾಮಾನ್ಯರನ್ನು. ದೇಶಕ್ಕಾಗಿ ಮಾಡುತ್ತಿರುವ ತ್ಯಾಗ ಅಂದುಕೊಂಡು ಜನಸಾಮಾನ್ಯರು ನೋವುಂಡರು. ಯುದ್ದಕ್ಕೆ ಹೊರಟ ಯೋಧರಂತೆ ಬೆಂಬಲಿಸಿದರು. ಈಗ ಭ್ರಮನಿರಸನಗೊಂಡಿದ್ದಾರೆ. ಜಿಎಸ್‌ಟಿ ಗಾಯದ ಮೇಲೆ ಬರೆ ಎಳೆದಿದೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More