ತಮ್ಮದಲ್ಲದ ತಪ್ಪಿಗೆ ಜೀವತ್ಯಾಗ ಮಾಡಿದ ಅಮಾಯಕರ ಕರುಣಾಜನಕ ಕತೆ

ನೋಟು ರದ್ದಾಗಿ ಅದನ್ನು ಬದಲಾಯಿಸಿಕೊಳ್ಳುವ ಪ್ರಕ್ರಿಯೆ ಇದ್ದ ಐವತ್ತು ದಿನಗಳಲ್ಲಿ ಸಾವಿನ ಸಂಖ್ಯೆ ನೂರು ದಾಟಿತು. ಒಂದೊಂದು ಸಾವಿನ ಹಿಂದೆಯೂ ಮನಕಲಕುವ ನೂರೆಂಟು ಕತೆಗಳಿವೆ. ಅಪನಗದೀಕರಣದ ವೇಳೆಯಲ್ಲಿ ದೇಶಾದ್ಯಂತ ಜನಸಾಮಾನ್ಯರು ಅನುಭವಿಸಿದ ವಿಚಿತ್ರ ಯಾತನೆ ಚಿತ್ರಣ ಇಲ್ಲಿದೆ

ಉತ್ತರ ಪ್ರದೇಶದ ಮಾಹ್ವಾಮಾಫಿ ಗ್ರಾಮದ 8 ವರ್ಷದ ಬಾಲಕಿಗೆ ನೋಟು ಅಮಾನ್ಯ ಸಾವಾಗಿ ಕಾಡಿತ್ತು. ಅನಾರೋಗ್ಯಕ್ಕೀಡಾದ ಮಗಳನ್ನು ಆಸ್ಪತ್ರೆಗೆ ಸೇರಿಸಲು ಹೊರಟ ತಂದೆ, ವಾಹನಕ್ಕೆ ಪೆಟ್ರೋಲ್ ಹಾಕಿಸಬೇಕಿತ್ತು. ಆತ ಕೊಟ್ಟ 1 ಸಾವಿರ ರುಪಾಯಿ ನೋಟನ್ನು ಪೆಟ್ರೋಲ್ ಪಂಪ್ ಸಿಬ್ಬಂದಿ ಸ್ವೀಕರಿಸಲಿಲ್ಲ. ಅಲ್ಲಿ ವಿಳಂಬವಾಗಿದ್ದರಿಂದ ಬಾಲಕಿ ಆಸ್ಪತ್ರೆಗೆ ಸೇರುವ ಮುನ್ನವೇ ಕೊನೆಯುಸಿರೆಳೆದಳು. ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ ಈ ಘಟನೆ ನಡೆದದ್ದು ನೋಟು ರದ್ದು ಮಾಡಿದ ಮರುದಿನ.

ನೋಟು ರದ್ದು ಸುದ್ದಿ ಹರಡುತ್ತಿದ್ದಂತೆ ಮೂವರು ಹೃದಯಾಘಾತದಿಂದ ಸಾವನ್ನಪ್ಪಿದರು. ಉತ್ತರ ಪ್ರದೇಶದ ಫೈಜಾಬಾದ್ ವ್ಯಾಪಾರಿ ಹೃದಯಾಘಾತಕ್ಕೀಡಾದರೆ ಎಂದು ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ. ಎಬಿಪಿ ವರದಿ ಪ್ರಕಾರ, ಜಮೀನು ಮಾರಾಟ ಮಾಡಿ 70 ಲಕ್ಷ ಮುಂಗಡ ಪಡೆದಿದ್ದ ಕಾನ್‌ಪುರದ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೆ ಬಲಿಯಾದರು.

ತೀರ್ಥಾಜಿ ಎಂಬ 60 ವರ್ಷದ ಮಹಿಳೆ ಖುಷಿನಗರದ ಚಾಂದನಿಚೌಕದಲ್ಲಿ ಮುಚ್ಚಿದ ಬ್ಯಾಂಕ್ ಗೇಟ್ ಬಳಿ ಹೃದಯಾಘಾತದಿಂದ ಮೃತಪಟ್ಟರು. ಆಕೆಯ ಬಳಿ 1ಸಾವಿರ ರೂ.ನ ಎರಡು ನೋಟುಗಳಿದ್ದವು ಎಂದು ಪತಿ ರಾಮ್ ಪ್ರಸಾದ್ ಹೇಳೀಕೆಯನ್ನಾಧರಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತು.

ಒಡಿಸಾದ ಗಂಜಾಂ ಜಿಲ್ಲೆಯ ರಾಂಜಿಪುರದಲ್ಲಿ ಪ್ರಭಾತಿ ಎಂಬ ನವವಿವಾಹಿತೆಯನ್ನು ಆಕೆಯ ಪತಿಯ ಮನೆಯವರೇ ಕೊಲೈಗೈದರು. ಆಕೆಯ ತಂದೆ ವರದಕ್ಷಿಣೆಯಾಗಿ 1.70 ಲಕ್ಷ ರೂ. ಹೊಸ ನೋಟುಗಳನ್ನು ನೀಡಲು ವಿಫಲವಾಗಿದ್ದು ಇದಕ್ಕೆ ಕಾರಣ.

ಲೂಧಿಯಾನದ ಬ್ಯಾಂಕ್ ಮುಂದೆ ಹಳೆ ನೋಟು ಠೇವಣಿ ಇಡಲು ನಿಂತಿದ್ದ ವೃದ್ಧ ಮಹಿಳೆಯೊಬ್ಬರು ಗಾರ್ಡ್ ತಳ್ಳಿದ್ದರಿಂದ ನೆಲಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. ಗಡಿ ರಕ್ಷಣಾ ಪಡೆ ಯೋಧರೊಬ್ಬರ ಪುತ್ರ 18 ವರ್ಷದ ಸುಜೀತ್ ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದ. ಆ ಯುವಕ ಸಾವಿಗೆ ಶರಣಾಗಲು ಕಾರಣ ತನ್ನಲ್ಲಿದ್ದ ನೋಟಿಗೆ ಸಕಾಲದಲ್ಲಿ ಚಿಲ್ಲರೆ ಸಿಗಲಿಲ್ಲ ಎಂಬುದು. ಸತತ ಎರಡು ದಿನಗಳ ನಂತರವೂ ಚಿಲ್ಲರೆ ದಕ್ಕದಾಗ ಹತಾಶಗೊಂಡು ಸಾವಿಗೆ ಶರಣಾದ.

ಪುತ್ರಿಯ ವಿಹಾಹದ ಕನಸು ಕಾಣುತ್ತಿದ್ದ ಪಂಜಾಬ್ ರಾಜ್ಯದ ತರನ್ ತರನ್ ಜಿಲ್ಲೆಯ ಸುಖ್ ದೇವ್ ಸಿಂಗ್ ಅವರು ಹೃದಯಾಘಾತಕ್ಕೀಡಾಗಿ ಮೃತಪಟ್ಟರು. ಹಳೆ 500 ಮತ್ತು 1000 ರುಪಾಯಿ ನೋಟುಗಳು ತಮ್ಮ ಪುತ್ರಿಯ ವಿವಾಹಕ್ಕೆ ನೆರವಾಗಲಿಲ್ಲ ಎಂಬ ಹತಾಶೆ ಅವರ ಹೃದಯಾಘಾತಕ್ಕೆ ಕಾರಣವಾಗಿತ್ತು.

ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಬ್ಯಾಂಕ್ ನಲ್ಲಿ ಬ್ಯಾಂಕಿಗೆ ಠೇವಣಿ ಜಮಾ ಮಾಡಲು ತಂದಿದ್ದ 15000 ಮೌಲ್ಯದ 500 ಮತ್ತು 1000 ರುಪಾಯಿ ನೋಟುಗಳನ್ನು ಕಳೆದುಕೊಂಡ ಈಶ್ವರಮ್ಮ ಎಂಬವರು ಆತ್ಮಹತ್ಯೆ ಮಾಡಿಕೊಂಡರು. ರೋಹ್ಟಕ್ ಸಹಕಾರಿ ಬ್ಯಾಂಕ್ ಮ್ಯಾನೆಜರ್ ರಾಜೇಶ್ ಕುಮಾರ್ ಕೆಲಸದ ಒತ್ತಡ ಹೆಚ್ಚಿ ಬ್ಯಾಂಕ್ ನಲ್ಲಿ ಕರ್ತವ್ಯ ನಿರ್ವಹಿಸುವ ಹೊತ್ತಿನಲ್ಲೇ ಹೃದಯಾಘಾತದಿಂದ ಮೃತಪಟ್ಟರು.

ನೋಟು ರದ್ದಾಗಿ ಅದನ್ನು ಬದಲಾಯಿಸಿಕೊಳ್ಳುವ ಪ್ರಕ್ರಿಯೆ ಇದ್ದ 50 ದಿನಗಳಲ್ಲಿ ಸಾವಿನ ಸಂಖ್ಯೆ ಶತಕ ದಾಟಿದೆ. ಒಂದೊಂದು ಸಾವಿನ ಹಿಂದೆಯೂ ಮನಕಲಕುವ ಕಥೆಗಳು. ಜನಸಾಮಾನ್ಯರು ಅನುಭವಿಸಿದ ಯಾತನೆಯ ಪ್ರತಿಫಲನದ ಸಂಕೇತವೆ ಈ ಸಾವಿನ ಸರಣಿ. ನ. 13ರಂದು ಒಂದೇ ದಿನ 12 ಮಂದಿ ಸಾವನ್ನಪ್ಪಿದರು.

500 ಮತ್ತು 1000 ನೋಟು ರದ್ದಾದ ಪರಿಣಾಮದಿಂದ ಉದ್ಭವಿಸಿದ ವಿವಿಧ ಸಮಸ್ಯೆಗಳು ಸಾವಿನ ಕದವನ್ನು ತೆರೆದವು. ಮಕ್ಕಳ ಮದುವೆಗೆ ಕೂಡಿಟ್ಟ ಹಣವನ್ನು ನಗದು ಸಿಗದೇ, ಬಳಸಿಕೊಳ್ಳಲಾಗದ ಹತಾಶೆ, ಸಕಾಲದಲ್ಲಿ ಚಿಕಿತ್ಸೆ ಕೊಡಿಸಲಾಗದೇ ಅಸಹಾಯಕತೆ, ಬೆವರು ಹರಿಸಿ ಉಳಿಸಿಟ್ಟ ಹಣವನ್ನು ಕಳೆದುಕೊಳ್ಳುವ ಆತಂಕ ಹೀಗೆ ಸಾವಿಗೆ ಕಾರಣಗಳು ಬೇರೆ ಬೇರೆಯಾಗಿದ್ದವು. ಆದರೆ, ಈ ಎಲ್ಲಾ ಸಾವುಗಳ ಮೂಲ 500 ಮತ್ತು 1000 ನೋಟುಗಳ ಚಲಾವಣೆ ರದ್ದಾಗಿದ್ದದ್ದು.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More