ಒಂದು ಬಿಟ್ ಕಾಯಿನ್ ಬೆಲೆ ಈಗ ಎಷ್ಟು ಗೊತ್ತಾ? ಬರೋಬ್ಬರಿ ₹6,87,725

ಈಗ ಎಲ್ಲೆಲ್ಲೂ ಬಿಟ್ ಕಾಯಿನ್‌ನದ್ದೇ ಸುದ್ದಿ. $10,000 ದಾಟುವ ಮೂಲಕ ದಾಖಲೆ ಮಾಡಿರುವ ಬಿಟ್ ಕಾಯಿನ್ ಕರೆನ್ಸಿ ಎಲ್ಲೆಡೆ ವಹಿವಾಟು ಆಗುತ್ತಿದ್ದರೂ ಅದರ ಮೇಲಿನ ಹೂಡಿಕೆ ಜೂಜು ಆಡಿದಂತೆ ಎಂಬ ಭಯವೂ ಇದೆ. ಭಾರತದಲ್ಲಿ ಬಿಟ್ ಕಾಯಿನ್ ಅಧಿಕೃತವಲ್ಲ, ಕಾನೂನುಬಾಹಿರವೂ ಅಲ್ಲ

ವರ್ಚುವಲ್ ಕರೆನ್ಸಿ ಈಗ ಜಾಗತಿಕ ದಾಖಲೆ ಮಾಡಿದೆ. $10,000 ದಾಟುವ ಮೂಲಕ ಅತ್ಯಲ್ಪ ಅವಧಿಯಲ್ಲಿ ಭಾರಿ ಲಾಭ ತಂದುಕೊಟ್ಟ ಹೂಡಿಕೆ ಎಂಬ ಹೆಗ್ಗಳಿಕೆ ಪಡೆದಿದೆ.

ಅಮೆರಿಕ ಮತ್ತಿತರ ಮುಂದುವರಿದ ರಾಷ್ಟ್ರಗಳಲ್ಲಿ ಬಿಟ್ ಕಾಯಿನ್ ವಹಿವಾಟು ಅಧಿಕೃತವಾಗಿ ನಡೆಯುತ್ತಿದೆ. ಭಾರತದಲ್ಲಿ ಬಿಟ್ ಕಾಯಿನ್ ವಹಿವಾಟು ನಡೆಯುತ್ತದೆ. ಆದರೆ ವಹಿವಾಟು ಅಧಿಕೃತವಲ್ಲ. ಹಾಲಿ ಇರುವ ಕಾನೂನುಗಳ ಪ್ರಕಾರ ಅದು ಕಾನೂನುಬಾಹಿರವೇನೂ ಅಲ್ಲ.

ಬಿಟ್ ಕಾಯಿನ್ ಅಧಿಕೃತ ವಹಿವಾಟು ಸಾಧ್ಯಾಸಾಧ್ಯತೆ ಕುರಿತು ಅಧ್ಯಯನ ಮಾಡಲು ಹಣಕಾಸು ಸಚಿವಾಲಯ ಭಾರತೀಯ ರಿಸರ್ವ್ ಬ್ಯಾಂಕ್ ಗೆ ಸೂಚಿಸಿತ್ತು. ವರದಿ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಆದರೆ ಬಿಟ್ ಕಾಯಿನ್ ಬದಲಿಗೆ ಪರ್ಯಾಯ ವರ್ಚುವಲ್ ಕರೆನ್ಸಿ ರೂಪಿಸುವ ಬಗ್ಗೆ ಚಿಂತಿಸಲಾಗುತ್ತಿದೆ.

2017ರಲ್ಲಿ ಹನ್ನೊಂದು ತಿಂಗಳಲ್ಲಿ ಶೇ.900ರಷ್ಟು ಏರಿಕೆ ಕಂಡಿರುವ ಬಿಟ್ ಕಾಯಿನ್ ಭಾರಿ ಲಾಭ ತಂದುಕೊಟ್ಟಿದೆ. ಬೇರೆಲ್ಲ ಹೂಡಿಕೆ ಪ್ರಕಾರಗಳಿಗೆ ಹೋಲಿಸಿದರೆ ಅತಿ ತ್ವರಿತಗತಿಯಲ್ಲಿ ಭಾರಿ ಲಾಭ ತಂದುಕೊಟ್ಟಿರುವುದು ಬಿಟ್ ಕಾಯಿನ್ ಮಾತ್ರ. ಬಿಟ್ ಕಾಯಿನ್ ತ್ವರಿತ ಏರಿಕೆ ಮುಂದಿನ ವರ್ಷವೂ ಮುಂದುವರಿಯಲಿದೆ ಎಂಬುದು ಮಾರುಕಟ್ಟೆ ತಜ್ಞರ ಅಂದಾಜು.

ಜನವರಿ ಆರಂಭದಲ್ಲಿ 1,000 ಡಾಲರ್ ಇದ್ದ ಬಿಟ್ ಕಾಯಿನ್ ಈಗ 10,000 ಡಾಲರ್ ಮುಟ್ಟಿದೆ. ಶತಕೋಟ್ಯಾಧಿಪತಿ ಮೈಕ್ ನೊವಾಗ್ರಾಟ್ಜ್ ಪ್ರಕಾರ, “ಬಿಟ್ ಕಾಯಿನ್ ಮುಂದಿನ ವರ್ಷಾಂತ್ಯಕ್ಕೆ 40,000 ಡಾಲರ್ ದಾಟುವ ನಿರೀಕ್ಷೆ ಇದೆ.” ಆದರೆ, ಈ ಹೂಡಿಕೆಯಲ್ಲಿ ಹೆಚ್ಚಿನ ರಿಸ್ಕ್ ಇರುವುದನ್ನು ಒಪ್ಪಿಕೊಳ್ಳುವ ಮೈಕ್, “ಸಣ್ಣ ಹೂಡಿಕೆದಾರರು ತಮ್ಮ ಹೂಡಿಕೆಯ ಶೇ.1ರಿಂದ 3ರಷ್ಟುಮಾತ್ರ ಬಿಟ್ ಕಾಯಿನ್‌ನಲ್ಲಿ ಹೂಡಿಕೆ ಮಾಡಬೇಕು ಎಂದೂ ಸಲಹೆ ಮಾಡಿದ್ದಾರೆ.

ಭಾರತದಲ್ಲಿ ಕಾಯಿನ್ಸೆಕ್ಯೂರ್, ಝೆಬ್ ಪೇ, ಯುನೋಕಾಯಿನ್ ಮತ್ತು ಬಿಟ್ಕ್ಸೋಕ್ಸೋ ಬಿಟ್ ಕಾಯಿನ್ ವಿನಿಮಯ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ. ಇತ್ತೀಚೆಗೆ ಭಾರತದಲ್ಲೂ ಬಿಟ್ ಕಾಯಿನ್ ಮೇಲೆ ಹೂಡಿಕೆ ಮಾಡುವ ಬಗ್ಗೆ ಆಸಕ್ತಿ ಹೆಚ್ಚುತ್ತಿದೆ. ಭಾರತದಲ್ಲಿ ನಿತ್ಯ 1,000 ಬಿಟ್ ಕಾಯಿನ್ ವಹಿವಾಟಾಗುತ್ತಿದೆ.

ಭಾರಿ ಹೂಡಿಕೆ ಅಗತ್ಯ: ಒಂದು ಬಿಟ್ ಕಾಯಿನ್ ಖರೀದಿಸಲು ಈಗಿನ ಬೆಲೆಯಲ್ಲಿ ₹6,87,725 ಬೇಕಾಗುತ್ತದೆ. ಸರ್ಕಾರದ ಪ್ರಾಧಿಕಾರದ ನಿಯಂತ್ರಣ ಇಲ್ಲದೆ ಖಾಸಗಿ ವ್ಯಕ್ತಿಗಳಿಂದ ನಿಯಂತ್ರಿಸಲ್ಪಡುವ ಬಿಟ್ ಕಾಯಿನ್ ಬೆಲೆ ಹೀಗೆಯೇ ಏರುತ್ತದೆ ಎಂಬ ಖಾತರಿ ಏನಿಲ್ಲ. ಅದು ಏಕಾಏಕಿ 100 ಡಾಲರ್ ಮಟ್ಟಕ್ಕೆ ಇಳಿಯುವ ಅಪಾಯವೂ ಇದೆ. ಇದು ಅನಿಶ್ಚಿತ ಹೂಡಿಕೆ. ಯಾವಾಗ ಏನಾದರೂ ಆಗಬಹುದು.

ಬಿಟ್ ಕಾಯಿನ್ ವಹಿವಾಟಿಗೆ ನಮ್ಮ ದೇಶದಲ್ಲಿ ಅಧಿಕೃತ ಮಾನ್ಯತೆ ಇಲ್ಲ. ಅದಕ್ಕೆ ಮುಖ್ಯ ಕಾರಣ, ಬೃಹತ್ ಪ್ರಮಾಣದ ಹಣವನ್ನು ತ್ವರಿತವಾಗಿ ಮತ್ತು ಅನಾಮಧೇಯವಾಗಿ ಮಾಡಲು ಬಿಟ್ ಕಾಯಿನ್ ವಹಿವಾಟಿನಿಂದ ಸಾಧ್ಯ.

ಇದನ್ನೂ ಓದಿ : ಜಿಎಸ್ಟಿ ದರ ತಗ್ಗಿದರೂ ಸಿಮೆಂಟ್ ದರ ಇಳಿಯುವುದಿಲ್ಲ, ಏಕೆಂಬುದು ಗೊತ್ತೇ?

2009ರಲ್ಲಿ ಚಲಾವಣೆಗೆ ಬಂದಿರುವ ಬಿಟ್ ಕಾಯಿನ್, ಎನ್ಕ್ರಿಪ್ಶನ್ ಮತ್ತು ಬ್ಲಾಕ್ ಚೈನ್ ಡಾಟಾಬೇಸ್ ಬಳಸಿ ವಹಿವಾಟು ನಡೆಸುವುದರಿಂದ ಸಾಂಪ್ರದಾಯಿಕ ಕೇಂದ್ರೀಕೃತ ಪಾವತಿ ವ್ಯವಸ್ಥೆಗಿಂತಲೂ ಅತಿ ವೇಗವಾಗಿ ಪಾವತಿ ಮಾಡಲು ಸಾಧ್ಯವಾಗುತ್ತದೆ. ಇಲ್ಲಿ ಯಾರು, ಯಾರಿಗೆ ಎಷ್ಟು ಪಾವತಿ ಮಾಡಿದರು ಎಂಬುದರ ಮಾಹಿತಿ ಬಹಿರಂಗವಾಗುವುದಿಲ್ಲ.

ಕ್ಯಾಮರಾನ್ ಮತ್ತು ಟೈಲರ್ ವಿಂಕ್ಲವೋಸ್ ಒಡೆತನದ ಜೆಮಿನಿ ಎಕ್ಸ್‌ಚೇಜ್‌ನಲ್ಲಿ ಮತ್ತು ಜಿಡಾಕ್ಸ್‌ನಲ್ಲಾಗಲೀ ಇನ್ನೂ 10,000 ಡಾಲರ್ ದಾಟಿಲ್ಲ. ಬಿಟ್‌ಸ್ಟಾಂಪ್‌ನಲ್ಲಿ 9,968 ಡಾಲರ್‌ಗೆ ವಹಿವಾಟಾಗುತ್ತಿದ್ದರೆ, ಕಾಯಿನ್ ಮಾರ್ಕೆಟ್ ಡಾಟ್ ಕಾಮ್‌ನಲ್ಲಿ 1,00,500 ಡಾಲರ್ ದಾಟಿದೆ. ಜಿಂಬಾಬ್ವೆಯಲ್ಲಿ 17,875 ಡಾಲರ್‌ಗೆ ವಹಿವಾಟಾದರೆ, ದ.ಕೊರಿಯಾದಲ್ಲಿ ಈಗಾಗಲೇ 11,000 ಡಾಲರ್ ದಾಟಿದೆ. ಬಿಟ್ ಕಾಯಿನ್ ವಹಿವಾಟು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಇ ಗ್ರೂಪ್ ಇನ್ ಕಾರ್ಪೋರೇಷನ್ ಮತ್ತು ಶಿಕಾಗೋ ಬೋರ್ಡ್ ಆಪ್ಶನ್ ಎಕ್ಸ್‌ಚೇಂಜ್‌ಗಳಲ್ಲಿ ಫ್ಯೂಚರ್ ಕಾಂಟ್ರಾಕ್ಟ್‌ಗಳನ್ನು ಶೀಘ್ರ ಪ್ರಾರಂಭಿಸಲಿವೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More