ಟ್ರಂಪ್ ನೆರಳಲ್ಲಿದ್ದರೂ ತನ್ನತನ ಬಿಟ್ಟುಕೊಡದ ಚತುರಮತಿ ಇವಾಂಕ

ಅತ್ತ ಡೆಮಾಕ್ರಾಟ್ ಇತ್ತ ರಿಪಬ್ಲಿಕ್ ನಡುವೆ ಜೀಕುತ್ತಿದ್ದ ಇವಾಂಕ ವ್ಯಾಪಾರದಲ್ಲಷ್ಟೇ ಅಲ್ಲ ರಾಜಕೀಯದಲ್ಲೂ ಚತುರಮತಿ. ಸೌಂದರ್ಯವನ್ನೇ ಬಂಡವಾಳ ಮಾಡಿಕೊಂಡ, ತನ್ನ ಹೆಸರನ್ನೇ ಬ್ರಾಂಡ್ ಮಾಡಿಕೊಂಡು ಕಿರಿ ವಯಸ್ಸಿನಲ್ಲೇ ಹಿರಿದನ್ನು ಸಾಧಿಸಿದಾಕೆ. ಆದರೆ ವಿವಾದಗಳಿಗೇನೂ ಕೊರತೆ ಇಲ್ಲ!

ಈಕೆ ಚೆಲುವೆ. ಬುದ್ದಿವಂತೆ. ಎದ್ದರೂ ಸುದ್ದಿ, ಬಿದ್ದರೂ ಸುದ್ದಿ. ಈಕೆ ಮಾಡುವ ಟ್ವೀಟ್‌ಗಳು ಅಂತಾರಾಷ್ಟ್ರೀಯ ಪತ್ರಿಕೆಗಳಿಗೆ ಆಹಾರ. ಇವಳ ಹೆಸರೇ ಸರಕುಗಳ ಮಾರಾಟಕ್ಕೆ ಸಾಧನ. ತನ್ನ ಹೆಸರನ್ನೇ ದೊಡ್ಡ ಬ್ರಾಂಡ್ ಮಾಡಿಕೊಂಡಿರುವಾಕೆ. ಇವಳ ಸರಕುಗಳಿಗೆ ಇವಳೇ ಮಾಡೆಲ್. ಬಟ್ಟೆ, ಬ್ಯಾಗು, ಟೋಪಿ, ಗಡಿಯಾರ, ಫರ್ಫ್ಯೂಮ್ ಎಲ್ಲವನ್ನೂ ತನ್ನ ಹೆಸರಿನಲ್ಲಿ ಮಾರುತ್ತಾಳೆ. ಫ್ಯಾಶನ್ ಡಿಸೈನರ್ ಕೂಡ. ಜನಪ್ರಿಯ ರಿಯಾಲಿಟಿ ಶೋಗೆ ತೀರ್ಪುಗಾರಳು. ಬೆಸ್ಟ್ ಸೆಲ್ಲರ್ ಲೇಖಕಿಯೂ ಹೌದು. ಈಕೆ ಇವಾಂಕ ಟ್ರಂಪ್!

ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಜಾಗತಿಕ ಉದ್ಯಮಿಗಳ ಶೃಂಗಸಭೆಯಲ್ಲಿ ಅಮೆರಿಕ ನಿಯೋಗದ ನೇತೃತ್ವ ವಹಿಸಿರುವ ಇವಾಂಕ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಅನ್ನೋ ಕಾರಣಕ್ಕಷ್ಟೇ ಈ ಗೌರವ ಪಡೆದಿಲ್ಲ. ಸ್ವತಃ ಆಕೆ ಉದ್ಯಮಿಯೂ ಹೌದು.

ತನ್ನದೇ ಹೆಸರಿನ ಬ್ರಾಂಡಿನಲ್ಲಿ ಟೀನೇಜು ಕನ್ಯೆಯರ ಮೆಚ್ಚಿನ ಉಡುಪುಗಳು, ಬ್ಯಾಗುಗಳು, ಆಭರಣಗಳು, ಪಾದರಕ್ಷೆಗಳನ್ನು ಮಾರಾಟ ಮಾಡುತ್ತಾಳೆ. ಇವಾಂಕ ಟ್ರಂಪ್ ಡಾಟ್ ಕಾಮ್ ಮೂಲಕ ಆನ್ಲೈನ್ ವಹಿವಾಟು ಇದೆ. ಫೋರ್ಬ್ಸ್ ಜಗತ್ತಿನ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಾಕೆ. ಸೆಲಬ್ರಿಟಿ ನೆಟ್ ವರ್ತ್ ವರದಿ ಪ್ರಕಾರ ಈಕೆಯ ಸಂಪತ್ತು 300 ಮಿಲಿಯನ್ ಡಾಲರ್. ಅಂದರೆ 1,950 ಕೋಟಿ ರುಪಾಯಿ.

ಮುಖ್ಯ ವಿಷಯ ಎಂದರೆ, ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಆಯ್ಕೆ ಆಗುವ ಮುನ್ನವೇ ಆಕೆಯ ಸಂಪತ್ತು ಈ ಪ್ರಮಾಣದಲ್ಲಿ ಇತ್ತು. ಅಪ್ಪ ಅಮೆರಿಕ ಅಧ್ಯಕ್ಷರಾದ ನಂತರ ಆಕೆಯ ವ್ಯಾಪಾರಕ್ಕೆ ಅನುಕೂಲವೇನೂ ಆಗಿಲ್ಲ. ಡೊನಾಲ್ಡ್ ಟ್ರಂಪ್ ಆಗಾಗ್ಗೆ ಮಹಿಳೆಯ ಬಗ್ಗೆ ನೀಡುವ ಅಗೌರವಯುತ ಹೇಳಿಕೆಗಳಿಂದಾಗಿ ಇವಾಂಕ ಬ್ರಾಂಡ್ ಸರಕುಗಳ ಬೇಡಿಕೆ ಕುಸಿದಿದೆಯಂತೆ.

ಮಹಿಳೆಯರ ಬಗ್ಗೆ ಟ್ರಂಪ್ ಅತ್ಯಂತ ತುಚ್ಛವಾಗಿ ಮಾತನಾಡಿದಾಗ ಇವಾಂಕ ಅಪ್ಪನ ಪರ ನಿಂತಿದ್ದಳು. ಆಗ ಇವಾಂಕ ಬ್ರಾಂಡ್ ಸರಕುಗಳನ್ನು ಬಹಿಷ್ಕರಿಸಲು ಆನ್‌ಲೈನ್ ಆಂದೋಲನವೇ ನಡೆದಿತ್ತು. ಆಗ ಖುದ್ದು ಡೊನಾಲ್ಡ್ ಟ್ರಂಪ್, “ನನ್ನ ಮಗಳನ್ನು ಕೆಲವರು ತಪ್ಪಾಗಿ ಅಂದಾಜಿಸುತ್ತಿದ್ದಾರೆ, ಆಕೆ ಯಾವಾಗಲೂ ಸರಿಯೇ,” ಎಂದು ಹೇಳಿದ್ದರು.

ಮ್ಯಾನ್‌ಹಟನ್‌ನಲ್ಲಿ ಇವಾಂಕ ಹುಟ್ಟಿದ್ದು 1981ರಲ್ಲಿ. ಡೊನಾಲ್ಡ್ ಟ್ರಂಪ್ ಮೊದಲನೇ ಪತ್ನಿ ಇವಾನ ಈಕೆಯ ತಾಯಿ. 14ನೇ ವಯಸ್ಸಿಗೆ ಫ್ಯಾಷನ್ ಲೋಕಕ್ಕೆ ಕಾಲಿಟ್ಟ ಈಕೆ ಕ್ಯಾಟ್‌ವಾಕ್ ಮಾಡುತ್ತಲೇ ಕ್ಯಾಟ್‌ವಾಕ್ ಕನ್ಯೆಯರನ್ನು ಸುಂದರಗೊಳಿಸುವ ಉಡುಪುಗಳ ವಿನ್ಯಾಸ ಆರಂಭಿಸಿದಳು. ಸತತ ಹತ್ತು ವರ್ಷಗಳ ಕಾಲ ಸಲೆಬ್ರಿಟಿ ಅಪ್ರೆಂಟಿಸ್ ಕಾರ್ಯಕ್ರಮದಲ್ಲಿ ತೀರ್ಪುಗಾರಳಾಗಿ ಕೆಲಸ ಮಾಡಿದಳು. ಡೊನಾಲ್ಡ್ ಟ್ರಂಪ್ ಮೂಲತಃ ರಿಯಲ್ ಎಸ್ಟೇಟ್ ದಿಗ್ಗಜ. ಟ್ರಂಪ್ ಆರ್ಗನೈಸೇಷನನ್‌ನಲ್ಲಿ ಈಕೆ ಉಪಾಧ್ಯಕ್ಷೆ. ಇವೆಲ್ಲದರ ಜೊತೆಗೆ ತನ್ನದೇ ಬ್ರಾಂಡಿನ ತನ್ನದೇ ವಿನ್ಯಾಸದ ಉಡುಪುಗಳ ವಹಿವಾಟು.

ಷೆಪಿಯನ್ ಸ್ಕೂಲ್, ನಂತರ ರೊಸ್ಮೆರಿ ಸ್ಕೂಲ್‌ನಲ್ಲಿ ಓದಿದ ಇವಾಂಕ, 14ನೇ ವರ್ಷದಲ್ಲೇ ರೂಪದರ್ಶಿಯಾದಾಕೆ. 1997ರಲ್ಲೇ ಸೆವೆಂಟೀನ್ ಮ್ಯಾಗಜಿನ್ ಮುಖಪುಟದಲ್ಲಿ ರಾರಾಜಿಸಿದ್ದಳು. ಎಲೈಟ್ ಮಾಡೆಲ್ ಮ್ಯಾನೇಜ್ಮೆಂಟ್ ಜೊತೆ ಒಪ್ಪಂದ ಮಾಡಿಕೊಂಡು ಅಂತಾರಾಷ್ಟ್ರೀಯ ಮಟ್ಟದ ವರ್ಸಸ್, ಥೆರಿ ಮುಗ್ಲೆರ್, ಮಾರ್ಕ್ ಬೋವರ್ ಮತ್ತಿತರ ಫ್ಯಾಷನ್ ಷೋಗಳಲ್ಲಿ ಕ್ಯಾಟ್‌ವಾಕ್ ಮಾಡಿದಾಕೆ. 16ನೇ ವಯಸ್ಸಿಲ್ಲೇ ಮಿಸ್ ಟೀನ್ ಯುಎಸ್ಎ ಕಾರ್ಯಕ್ರಮದ ಸಹನಿರೂಪಕಿಯಾಗಿದ್ದಳು. ಪೆನ್ಸಿಲ್ವೇನಿಯಾ ಯೂನಿವರ್ಸಿಟಿಯ ವಾರ್ಟನ್ ಸ್ಕೂಲ್‌ನಲ್ಲಿ ಪದವಿ ಮುಗಿಸಿದ ನಂತರ ಕುಟುಂಬದ ವಹಿವಾಟಿನಲ್ಲಿ ತೊಡಗಿಕೊಂಡಳು.

ದಿ ಟ್ರಂಪ್ ಕಾರ್ಡ್: ‘ಪ್ಲೇಯಿಂಗ್ ಟು ವಿನ್ ಇನ್ ವರ್ಕ್ ಅಂಡ್ ಲೈಫ್’ ಪುಸ್ತಕವನ್ನು 2009ರಲ್ಲಿ ಪ್ರಕಟಿಸಿದಳು. ಅದು ಅಮೆರಿಕದ ಬೆಸ್ಟ್ ಸೆಲ್ಲರ್ ಕೃತಿಯಾಯಿತು. ಈಕೆಯ ವ್ಯವಹಾರ ಚತುರತೆ ತನ್ನ ಬ್ರಾಂಡ್ ಸರಕುಗಳ ಮಾರಾಟಕ್ಕೆ ಮಾತ್ರ ಸೀಮಿತವಾಗಿಲ್ಲ. ರಾಜಕೀಯ ಚದುರಂಗದಾಟದಲ್ಲೂ ಈಕೆ ಚತುರೆ. ಅತ್ತ ಡೆಮಾಕ್ರಾಟ್ ಇತ್ತ ರಿಪಬ್ಲಿಕ್ ನಡುವೆ ಜೀಕುತ್ತಲೇ ಇದ್ದ ಇವಾಂಕ, 2007ರ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಗೆ ಬೆಂಬಲ ನೀಡಿದ್ದಳು. ಹಿಲರಿ ಪುತ್ರಿ ಚೆಲ್ಸಿಯಾ ಕ್ಲಿಂಟನ್‌ ಈಕೆಯ ಗೆಳತಿ.

ಆಚೀಚೆಯ ರಾಜಕೀಯ: ಆದರೆ, 2012ರ ಅಧ್ಯಕ್ಷೀಯ ಚುನಾವಣೆಯಲ್ಲಿ ಮಿಟ್ ರಾಮ್ನೆ ಪರವಾಗಿ ಪ್ರಚಾರ ಮಾಡಿದ್ದಳು. ಅದಾದ ವರ್ಷದ ನಂತರ ತನ್ನ ಪತಿ ಜೊತೆಗೂಡಿ ಡೆಮಾಕ್ರಾಟಿಕ್ ಸೆನೆಟರ್ ಕೊರಿ ಬೂಕರ್ ಪರವಾಗಿ ದೇಣಿಗೆ ಸಂಗ್ರಹ ಮಾಡಿದ್ದಳು. 2016ರ ಅಧ್ಯಕ್ಷೀಯ ಚುನಾವಣೆಯ ಹೊತ್ತಿಗೆ ಇವಾಂಕಳದು ನಿರ್ಣಾಯಕ ಪಾತ್ರ. ಅಪ್ಪನ ವೈಟ್‌ಹೌಸ್ ಕನಸು ನನಸಾಗಿಸಲು ಜೊತೆಗಿದ್ದು ನೆರವಾದಳು. “ಒಬ್ಬ ನಾಗರಿಕಳಾಗಿ ಅಪ್ಪ ಏನು ಮಾಡಿದರೂ ನಾನು ಇಷ್ಟಪಡುತ್ತೇನೆ, ಮಗಳಾಗಿ ಸಹಜವಾಗಿಯೇ ಇದು ಮತ್ತಷ್ಟು ಸಂಕೀರ್ಣ,” ಎಂದು ಹೇಳಿಕೊಂಡಿದ್ದಳು.

ಇದನ್ನೂ ಓದಿ : ಮೊದಲ ಬಾರಿಗೆ ಭಾರತಕ್ಕೆ ಬಂದ ಇವಾಂಕ ಭಯೋತ್ಪಾದನೆ ಬಗ್ಗೆ ಹೇಳಿದ್ದೇನು?

ವಿವಾದಗಳಿಗೆ ತುಂಬಾ ಹತ್ತಿರ: ಆಕೆಯ ವ್ಯಾಪಾರ ವಹಿವಾಟಿನಲ್ಲೂ ಸಾಕಷ್ಟು ವಿವಾದಗಳಿವೆ. ಕಳೆದ ವರ್ಷ ತನ್ನ ಪಾದರಕ್ಷೆಗಳನ್ನು ಸಂಪೂರ್ಣ ನಕಲು ಮಾಡಲಾಗಿದೆ ಎಂದು ಆಕ್ವಾಝುರಾ ಕಂಪನಿ ಇವಾಂಕ ವಿರುದ್ಧ ಪ್ರಕರಣ ದಾಖಲಿಸಿತ್ತು. ಆಕೆಯ ಕಂಪನಿ ಸರಬರಾಜು ಮಾಡಿದ್ದ ಶಿರವಸ್ತ್ರಗಳು ಕಳಪೆ ಮಟ್ಟದ್ದಾಗಿವೆ ಎಂಬ ಕಾರಣಕ್ಕೆ 20,000 ಶಿರವಸ್ತ್ರಗಳನ್ನು ಮಾರುಕಟ್ಟೆಯಿಂದ ವಾಪಸು ಪಡೆಯಲಾಗಿತ್ತು.

ಇವಾಂಕಗೆ 10 ವರ್ಷ ಇದ್ದಾಗಲೇ ಡೊನಾಲ್ಡ್ ಟ್ರಂಪ್, ಆಕೆಯ ತಾಯಿ ಇವಾನಾಗೆ ವಿಚ್ಚೇದನ ನೀಡಿದ್ದರು. ಹಾಗಾಗಿ, ಎಲ್ಲರ ಜೊತೆಗಿದ್ದೂ ಏಕಾಂಗಿಯಾಗಿದ್ದ ಇವಾಂಕ ಪಾಲಿಗೆ ಪತಿ ಜರೇಡ್ ಕುಶ್ನೇರ್ ಸದಾ ಉತ್ಸಾಹ ತುಂಬುವ ಜೀವದ ಗೆಳೆಯ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಇವಾಂಕಗೆ 4.95 ದಶಲಕ್ಷ ಟ್ವಿಟರ್, 6.3 ದಶಲಕ್ಷ ಫೇಸ್‌ಬುಕ್ ಮತ್ತು 4.1 ದಶಲಕ್ಷ ಇನ್‌ಸ್ಟಾಗ್ರಾಂ ಹಿಂಬಾಲಕರಿದ್ದಾರೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More