ವಿದೇಶಿ ನೇರ ಬಂಡವಾಳ ಹೂಡಿಕೆಗೆ ತೆರೆದ ಬಾಗಿಲನ್ನು ಮತ್ತಷ್ಟು ಹಿಗ್ಗಿಸಿದ ಕೇಂದ್ರ ಸರ್ಕಾರ

ಏಕ ಬ್ರಾಂಡಿನ ಚಿಲ್ಲರೆ ವ್ಯಾಪಾರ ವಲಯ ಮತ್ತು ನಿರ್ಮಾಣ ಅಭಿವೃದ್ಧಿ ವಲಯಕ್ಕೆ ಶೇ.100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಕೇಂದ್ರ ಅನುಮೋದನೆ ನೀಡಿದೆ. ಅಪನಗದೀಕರಣ ಮತ್ತು ಜಿಎಸ್‌ಟಿ ಜಾರಿಯಿಂದ ಕುಸಿದಿರುವ ಆರ್ಥಿಕತೆಗೆ ಇದರಿಂದ ಚೇತರಿಕೆ ನಿರೀಕ್ಷಿಸಲಾಗಿದೆ

ವಿದೇಶಿ ನೇರ ಬಂಡವಾಳ ಹೂಡಿಕೆಗೆ ಇದ್ದ ನಿರ್ಬಂಧಗಳನ್ನು ಮತ್ತಷ್ಟು ಸಡಿಲಿಸಿರುವ ಕೇಂದ್ರ ಸರ್ಕಾರ, ವಿದೇಶಿ ಹೂಡಿಕೆಗೆ ತೆರೆದಿದ್ದ ಭಾಗಿಲನ್ನು ಮತ್ತಷ್ಟು ವಿಸ್ತರಿಸಿದೆ. ಇನ್ನು ಮುಂದೆ ಏಕ ಬ್ರಾಂಡಿನ ಚಿಲ್ಲರೆ ವ್ಯಾಪಾರ ವಲಯ ಮತ್ತು ನಿರ್ಮಾಣ ಅಭಿವೃದ್ಧಿ ವಲಯಕ್ಕೆ ಶೇ.100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮೋದನೆ ನೀಡಿದೆ. ಅಂದರೆ, ಈ ವಲಯದಲ್ಲಿ ಹೂಡಿಕೆ ಮಾಡಲು ಇನ್ನು ಮುಂದೆ ಕೇಂದ್ರ ಸರ್ಕಾರದ ಅನುಮತಿ ಪಡೆಯುವ ಅಗತ್ಯ ಇಲ್ಲ.

ಏರ್ ಇಂಡಿಯಾದಲ್ಲಿ ವಿದೇಶಿ ಏರ್‌ಲೈನ್ ಗಳು ಶೇ.49ರಷ್ಟು ಹೂಡಿಕೆ ಮಾಡಲು ಅವಕಾಶ ನೀಡಲಾಗಿದೆ. ಪ್ರಾಥಮಿಕ ಮಾರುಕಟ್ಟೆ ಮೂಲಕವೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ವಿದೇಶಿ ಖಾತೆ ಹೂಡಿಕೆದಾರರು (ಎಫ್ ಪಿಐ) ಪವರ್ ಎಕ್ಸ್ ಚೆಂಜ್‌ಗಳಲ್ಲಿ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಜತೆಗೆ ವಿದೇಶಿ ನೇರ ಬಂಡವಾಳ ಹೂಡಿಕೆ ನೀತಿಯಲ್ಲಿ ವೈದ್ಯಕೀಯ ಉಪಕರಣಗಳ ವ್ಯಾಖ್ಯಾನಕ್ಕೆ ತಿದ್ದುಪಡಿ ಮಾಡಲಾಗಿದೆ.

ಪ್ರಧಾನಿ ನರೇಂದ್ರಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ವಿದೇಶಿ ನೇರ ಬಂಡವಾಳ ಮುಕ್ತವಾಗಿ ಹರಿದು ಬರಲು ಅನುವು ಮಾಡಿಕೊಡುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದಾಗಿ ವಿದೇಶಿ ನೇರ ಬಂಡವಾಳ ಹೂಡಿಕೆ ಹರಿವು ಹೆಚ್ಚಿ ಹೂಡಿಕೆ, ಆದಾಯ ಮತ್ತು ಉದ್ಯೋಗ ಸೃಷ್ಟಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ವಿದೇಶಿ ನೇರ ಬಂಡವಾಳ ಹೂಡಿಕೆಯು ದೇಶದ ಆರ್ಥಿಕತೆ ಚೇತರಿಕೆ ಪಡೆಯಲು ಸಾಲವಲ್ಲದ ರೂಪದಲ್ಲಿ ಬಂಡವಾಳ ಪಡೆಯುವ ಮಾರ್ಗವಾಗಿದೆ. ಇದರೊಂದಿಗೆ ಕೇಂದ್ರ ಸರ್ಕಾರ ಬಹುತೇಕ ವಲಯಗಳಲ್ಲಿ ಶೇ.100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುವು ಮಾಡಿಕೊಟ್ಟಂತಾಗಿದೆ. ಇತ್ತೀಚೆಗೆ ಕೇಂದ್ರವು ರಕ್ಷಣೆ, ನಿರ್ಮಾಣ, ವಿಮೆ, ಪಿಂಚಣಿ, ಇತರೆ ಹಣಕಾಸು ಸೇವೆ, ಪ್ರಸಾರ ಮತ್ತು ನಾಗರಿಕ ವಿಮಾನ ಯಾನ, ಔಷಧೋದ್ಯಮದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡಿತ್ತು.

ಕೇಂದ್ರದ ಈ ಕ್ರಮಗಳಿಂದಾಗಿ 2013-14ರಲ್ಲಿ 36.05 ಬಿಲಿಯನ್ ಡಾಲರ್ ಇದ್ದ ವಿದೇಶಿ ನೇರ ಬಂಡವಾಳ ಹೂಡಿಕೆಯು 2014-15ರಲ್ಲಿ 45.15 ಬಿಲಿಯನ್ ಡಾಲರ್ ಗೆ ಏರಿತ್ತು. 2015-16ರಲ್ಲಿ 55.46 ಬಿಲಿಯನ್ ಮತ್ತು 2016-17ರಲ್ಲಿ 60.08 ಬಿಲಿಯನ್ ಡಾಲರ್ ಗೆ ಏರಿದೆ. ಇದುವರೆಗೆ ಏಕಬ್ರಾಂಡಿನ ಚಿಲ್ಲರೆ ವ್ಯಾಪಾರ ನಡೆಸಲು ಶೇ.49ಕ್ಕಿಂತ ಹೆಚ್ಚಿನ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಕೇಂದ್ರ ಸರ್ಕಾರದ ಅನುಮೋದನೆ ಪಡೆಯಬೇಕಿತ್ತು. ಇನ್ನು ಮುಂದೆ ಕೇಂದ್ರ ಸರ್ಕಾರದ ಅನುಮೋದಿನೆ ಪಡೆಯದೇ ಶೇ.100 ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ ಮಾಡಬಹುದಾಗಿದೆ.

ಏಕ ಬ್ರಾಂಡಿನ ಚಿಲ್ಲರೆ ವ್ಯಾಪಾರ ನಡೆಸಲು ಇನ್ನು ಮಂದೆ ಭಾರತದಲ್ಲೇ ಶೇ.30ರಷ್ಟು ಖರೀದಿ ಮಾಡಬೇಕೆಂಬ ನಿರ್ಬಂಧ ಮೊದಲ ಐದು ವರ್ಷ ಇರುವುದಿಲ್ಲ. ಐದು ವರ್ಷಗಳ ನಂತರ ಸ್ಥಳೀಯರಿಂದಲೇ ಶೇ.30ರಷ್ಟು ಖರೀದಿ ಮಾಡಬೇಕೆಂಬ ನಿಯಮ ಅನ್ವಯ ಆಗಲಿದೆ. ಅನಿವಾಸಿ ಸಂಸ್ಥೆ ಅಥವಾ ಸಂಸ್ಥೆಗಳು ಭಾರತದಲ್ಲಿ ಏಕ ಬ್ರಾಂಡಿನ ಉತ್ಪನ್ನವನ್ನು ಚಿಲ್ಲರೆ ಮಾರಾಟ ಮಾಡಲು ಅವಕಾಶ ನೀಡಲಾಗುತ್ತದೆ. ಬ್ರಾಂಡ್ ಮಾಲೀಕರು ನೇರವಾಗಿ ಮಾರಾಟ ಮಾಡಬಹುದು ಅಥವಾ ಕಾನೂನು ನಿಯಮಗಳಿಗೆ ಒಳಪಟ್ಟು ಅವರ ಪರವಾಗಿ ಬೇರೆಯವರು ವ್ಯಾಪಾರ ಮಾಡಲು ಅವಕಾಶ ನೀಡಲಾಗಿದೆ.

ನಾಗರಿಕ ವಿಮಾನ ಯಾನ ವಲಯದಲ್ಲಿ ಸರ್ಕಾರದ ಅನುಮತಿ ಪಡೆದು ಭಾರತೀಯ ವಿಮಾನ ಯಾನ ಕಂಪನಿಗಳಲ್ಲಿ ಪೂರ್ಣ ಪಾವತಿಸಿದ ಬಂಡವಾಳದ ಮೂಲಕ ಶೇ.49ರಷ್ಟು ಹೂಡಿಕೆ ಮಾಡಬಹುದಿತ್ತು. ಆದರೆ, ಏರ್ ಇಂಡಿಯಾದಲ್ಲಿ ಹೂಡಿಕೆ ಮಾಡಲು ನಿರ್ಬಂಧಿಸಲಾಗಿತ್ತು. ಹೀಗಾಗಿ ಏರ್ ಇಂಡಿಯಾದಲ್ಲಿ ಹೂಡಿಕೆ ಮಾಡಲು ಇದ್ದ ನಿರ್ಬಂಧವನ್ನು ಈಗ ತೆಗೆದುಹಾಕಲಾಗಿದೆ. ವಿದೇಶಿ ಏರ್‌ಲೈನ್‌ಗಳು ಪೂರ್ಣ ಪಾವತಿಸಿದ ಬಂಡವಾಳದ ಮೂಲಕ ಶೇ.49ರಷ್ಟು ಏರ್ ಇಂಡಿಯಾದಲ್ಲೂ ಹೂಡಿಕೆ ಮಾಡಬಹುದಾಗಿದೆ. ಆದರೆ, ಹೂಡಿಕೆ ಮಿತಿ ಶೇ.49ಕ್ಕಿಂತ ಮೀರುವಂತಿಲ್ಲ. ಕಂಪನಿ ನಿಯಂತ್ರಿಸುವ ಅಧಿಕಾರ ಮತ್ತು ಮಾಲಿಕತ್ವ ಏರ್ ಇಂಡಿಯಾಗೆ ಮೀಸಲಿರಬೇಕು ಎಂಬ ಷರತ್ತು ವಿಧಿಸಲಾಗಿದೆ.

ನಿರ್ಮಾಣ ಅಭಿವೃದ್ಧಿ ವಲಯದಡಿ ಟೌನ್ ಷಿಪ್, ವಸತಿ ಯೋಜನೆ ಮೂಲಭೂತ ಸೌಲಭ್ಯ ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ ಬ್ರೋಕಿಂಗ್ ಸರ್ವೀಸ್ ನಲ್ಲಿ ಶೇ.100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ ಮಾಡಲು ಅವಕಾಶ ನೀಡಲಾಗಿದೆ. ಪ್ರಸ್ತುತ ಪವರ್ ಎಕ್ಸ್ ಚೆಂಜ್ ಗಳಲ್ಲಿ ಶೇ.49ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಇದೆ. ಆದರೆ, ಎಫ್ಐಐ ಮತ್ತು ಎಫ್ ಪಿಐ ಗಳು ದ್ವಿತೀಯ ಮಾರುಕಟ್ಟೆಯಲ್ಲಿ ಮಾತ್ರ ಪಾಲು ಖರೀದಿಗೆ ಅವಕಾಶ ನೀಡಲಾಗಿತ್ತು. ಈಗ ಪ್ರಾಥಮಿಕ ಮಾರುಕಟ್ಟೆಯ ಮೂಲಕವೇ ಹೂಡಿಕೆ ಮಾಡಲು ಅವಕಾಶ ಒದಗಿಸಲಾಗಿದೆ.

ಇದನ್ನೂ ಓದಿ : ಟ್ರಂಪ್ ಆಡಳಿತದ ವೀಸಾ ನಿರ್ಬಂಧ ಕ್ರಮ ಅಮೆರಿಕಕ್ಕೆ ತಿರುಗುಬಾಣ ಆಗಲಿದೆಯೇ?

ಕೇಂದ್ರ ಸರ್ಕಾರ ತ್ವರಿತವಾಗಿ ವಿದೇಶಿ ನೇರಬಂಡವಾಳ ಹೂಡಿಕೆ ನಿಯಮ ನಿರ್ಬಂಧ ಸಡಿಲಿಸಿರುವುದು ಸಲೀಸು ವಹಿವಾಟಿಗೆ ಹೆಚ್ಚಿನ ಅವಕಾಶ ದಕ್ಕಲಿದೆ. ಜತೆಗೆ ವಿದೇಶಿ ನೇರ ಬಂಡವಾಳ ಹೂಡಿಕೆ ಹರವು ಹೆಚ್ಚಲಿದ್ದು, ಅಪನಗದೀಕರಣ ಮತ್ತು ಜಿಎಸ್‌ಟಿ ಜಾರಿಯಿಂದ ಕುಂಠಿತ ಗೊಂಡಿದ್ದ ಆರ್ಥಿಕ ಚಟುವಟಿಕೆ ಚೇತರಿಸಿಕೊಳ್ಳಲಿದೆ. ಜತೆಗೆ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದಿರುವ ಉದ್ಯೋಗ ಸೃಷ್ಟಿಯು ಹೆಚ್ಚಾಗಲಿದೆ ಎಂಬ ಅಂದಾಜು ಕೇಂದ್ರ ಸರ್ಕಾರದ್ದಾಗಿದೆ.

ಏಕ ಬ್ರಾಂಡ್ ಚಿಲ್ಲರೆ ವ್ಯಾಪಾರಕ್ಕೆ ಶೇ.100ರಷ್ಟು ಬಂಡವಾಳ ಹೂಡಿಕೆಗೆ ಅವಕಾಶ ನೀಡಿರುವುದರಿಂದ ಪ್ರೀಮಿಯಂ ಬ್ರಾಂಡ್ ವಿದ್ಯುನ್ಮಾನ ಉಪಕರಣಗಳು, ಉಡುಗೆ ತೊಡುಗೆ ಪರಿಕರಗಳ ಕಂಪನಿಗಳಿಗೆ ಮುಕ್ತ ಬಾಗಿಲು ತೆರೆದಂತಾಗಿದೆ. ಇದರಿಂದ ದೇಶೀಯ ಪ್ರೀಮಿಯಂ ಬ್ರಾಂಡ್ ಗಳಿಗೆ ಸ್ಪರ್ಧೆ ಎದುರಾಗಬಹುದು. ಆದರೆ, ಕೆಳ ಮತ್ತು ಮಧ್ಯಮ ವರ್ಗದ ಗ್ರಾಹಕರ ಮೇಲೆ ಅಂತಹ ಪರಿಣಾಮವೇನೂ ಬೀರದು. ಈ ಹಿಂದೆ ಯುಪಿಎ ಸರ್ಕಾರ ಏಕಬ್ರಾಂಡ್ ಚಿಲ್ಲರೆ ವ್ಯಾಪಾರ ವಲಯಕ್ಕೆ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡುಲು ಮುಂದಾಗಿದ್ದಾಗ ಪ್ರತಿ ಪಕ್ಷದಲ್ಲಿದ್ದ ಬಿಜೆಪಿ ಶತಾಯಗತಾಯ ವಿರೋಧಿಸಿತ್ತು.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More