ಕಾಫೀಡೇ ಮತ್ತಷ್ಟು ಜಿಗಿತ, ಟೆಲಿಕಾಂ ವಲಯದ ಷೇರುಗಳಿಗೆ ಭಾರಿ ಬೇಡಿಕೆ

ದೂರ ಸಂಪರ್ಕ ಆಯೋಗವು ಟ್ರಾಯ್ ಶಿಫಾರಸುಗಳನ್ನು ಅನುಮೋದಿಸಿರುವ ಹಿನ್ನೆಲೆಯಲ್ಲಿ ಭಾರತಿ ಏರ್ಟೆಲ್, ಐಡಿಯಾ, ರಿಲಯನ್ಸ್ ಕಮ್ಯುನಿಕೇಶನ್, ರಿಲಯನ್ಸ್ ಇಂಡಸ್ಟ್ರೀಸ್ ಷೇರು ಏರು ಹಾದಿಯಲ್ಲಿ ಸಾಗಿವೆ. ನಿಫ್ಟಿ, ಸೆನ್ಸೆಕ್ಸ್ ಹೊಸ ದಾಖಲೆಯೊಂದಿಗೆ ವಹಿವಾಟು ಆರಂಭಿಸಿವೆ. ಕಾಫೀಡೇ ಮತ್ತೆ ಜಿಗಿದಿದೆ

ಬುಧವಾರ ವಹಿವಾಟು ಆರಂಭದಲ್ಲೇ ಸೆನ್ಸೆಕ್ಸ್ 34500 ದಾಟಿ ಹೊಸ ಸರ್ವಕಾಲಿಕ ದಾಖಲೆ ಬರೆಯಿತು. ನಿಫ್ಟಿ 10650 ಅಂಶಗಳನ್ನು ಮುಟ್ಟಿತು. ನಂತರ ವಹಿವಾಟು ನಿಧಾನಗತಿಯಲ್ಲಿತ್ತು. ಸೆನ್ಸೆಕ್ಸ್ 50 ಅಂಶಗಳ ಏರಿಳಿತದ ನಡುವೆ ಜೀಕುತ್ತಿದ್ದರೆ, ನಿಫ್ಟಿ 15 ಅಂಶಗಳ ಏರಿಳಿತದೊಂದಿಗೆ ವಹಿವಾಟಾಗುತ್ತಿದೆ. ಷೇರುಪೇಟೆಯ ಸತತ ಏರುಹಾದಿ ಮುಂದುವರೆದಿದೆ.

ದೂರ ಸಂಪರ್ಕ ಆಯೋಗವು ಭಾರತೀಯ ದೂರ ಸಂಪರ್ಕ ಪ್ರಾಧಿಕಾರ (ಟ್ರಾಯ್) ಶಿಫಾರಸುಗಳನ್ನು ಅನುಮೋದಿಸಿರುವ ಹಿನ್ನೆಲೆಯಲ್ಲಿ ಆ ವಲಯದ ಷೇರುಗಳಿಗೆ ಭಾರಿ ಬೇಡಿಕೆ ಬಂದಿದೆ. ಭಾರತಿ ಏರ್ಟೆಲ್, ಐಡಿಯಾ, ರಿಲಯನ್ಸ್ ಕಮ್ಯುನಿಕೇಶನ್, ಜಿಯೋ ಮಾಲೀಕತ್ವ ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್ ಏರು ಹಾದಿಯಲ್ಲಿ ಸಾಗಿವೆ.

ತರಂಗಾಂತರಗಳ ಬಳಕೆಗೆ ವಿಧಿಸಿದ್ದ ನಿರ್ಬಂಧ ಸಡಿಲಿಕೆ, ಖರೀದಿಸಿದ ತರಾಂಗತರಗಳಿಗೆ ಮಾಡಬೇಕಾದ ಪಾವತಿ ಅವಧಿ 12 ವರ್ಷಗಳಿಂದ 16 ವರ್ಷಗಳಿಗೆ ವಿಸ್ತರಣೆ ಮತ್ತು ಸಕಾಲದಲ್ಲಿ ಪಾವತಿ ಮಾಡದೇ ಇದ್ದಾಗ ಹಾಕುವ ದಂಡ ಮತ್ತು ಸಾಲದ ಮೇಲಿನ ಬಡ್ಡಿ ದರ ಶೇ.12ಕ್ಕೆ ತಗ್ಗಿಸಿರುವುದರಿಂದ ದೂರ ಸಂಪರ್ಕ ವಲಯಕ್ಕೆ ದೀರ್ಘಕಾಲದಲ್ಲಿ ಭಾರಿ ಲಾಭ ಆಗಲಿದೆ. ಆ ಹಿನ್ನೆಲೆಯಲ್ಲಿ ಹೂಡಿಕೆದಾರರು ಖರೀದಿಗೆ ಇಳಿದಿದ್ದಾರೆ.

ಟ್ರಂಪ್ ಆಡಳಿತ ಎಚ್1ಬಿ ವೀಸಾ ನಿರ್ಬಂಧ ಹೇರುವ ಪ್ರಸ್ತಾಪ ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನ ರಫ್ತು ಮಾಡುವ ಕಂಪನಿಗಳ ಷೇರುಗಳು ಏರಿದವು. ಟಿಸಿಎಸ್, ಟೆಕ್ ಮಹಿಂದ್ರಾ, ಒರಾಕಲ್ ಫಿನ್ ಸರ್ವೀಸ್, ಟಾಟಾ ಇಲಾಕ್ಸಿ ಏರಿದವು. ವಿಪ್ರೊ, ಇನ್ಫೊಸಿಸ್, ಎಚ್ಸಿಎಲ್ ಟೆಕ್ನಾಲಜೀಸ್ ಕೊಂಚ ಇಳಿದಿವೆ.

ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳ ಷೇರುಗಳು ಇಳಿಜಾರಿನಲ್ಲಿವೆ. ಬ್ಯಾಂಕ್ ನಿಫ್ಟಿ, ನಿಫ್ಟಿ ಪ್ರೈವೆಟ್ ಬ್ಯಾಂಕ್, ನಿಫ್ಟಿ ಫಿನ್ ಸರ್ವೀಸ್ ಸೂಚ್ಯಂಕ ಶೇ.0.25ರಷ್ಟು ಕುಸಿದಿವೆ. ವಿಸ್ತೃತ ಮಾರುಕಟ್ಟೆಯ ಸೂಚ್ಯಂಕಗಳದ್ದು ಮಿಶ್ರಫಲ. ನಿಫ್ಟಿ ಸಿಪಿಎಸ್ಇ, ನಿಫ್ಟಿ ಮೆಟಲ್, ನಿಫ್ಟಿ ರಿಯಾಲ್ಟಿ, ನಿಫ್ಟಿ ಪಿಎಸ್ಇ, ನಿಫ್ಟಿ ಫಾರ್ಮ, ನಿಫ್ಟಿ ಎಫ್ಎಂಸಿಜಿ ಶೇ.0.50ರಿಂದ ಶೇ.1ರಷ್ಟು ಏರಿವೆ. ನಿಫ್ಟಿ ಆಟೋ ಶೇ.0.30ರಷ್ಟು ಕುಸಿದಿದೆ. ಸತತ ಏರಿ ಹಿಂದಿನ ವಹಿವಾಟಿನಲ್ಲಿ ಕುಸಿದಿದ್ದ ಮಿಡ್ ಕ್ಯಾಪ್ ಶೇ.0.40ರಷ್ಟು ಏರಿದೆ. ನಿನ್ನೆ ಶೇ.20ರಷ್ಟು ಏರಿದ್ದ ಕಾಫೀಡೇ ಶೇ.6ರಷ್ಟು ಏರಿದೆ.

ಇದನ್ನೂ ಓದಿ : ಪೆಟ್ರೋಲ್, ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ ಬಂದರೆ ಶೇ.25-40ರಷ್ಟು ದರ ಇಳಿಯಲಿದೆ!

ದಿನದ ವಹಿವಾಟಿನಲ್ಲಿ ಗ್ಲೆನ್ ಮಾರ್ಕ್ ಫಾರ್ಮ, ಆಯಿಲ್ ಇಂಡಿಯಾ, ಭಾರತ್ ಹೆವಿ ಎಲೆಕ್ಟ್ರಿಕಲ್ಸ್, ಇಂಟರ್ ಗ್ಲೋಬಲ್ ಏವಿಯೇಷನ್ ಶೇ.1.50ರಿಂದ 4ರಷ್ಟು ಏರಿವೆ. ಏಷಿಯನ್ ಪೇಂಟ್ಸ್, ಸನ್ ಟಿವಿ ನೆಟ್ ವರ್ಕ್ಸ್, ಐಷರ್ ಮೋಟಾರ್ಸ್, ಎನ್ಎಚ್ಪಿಸಿ, ಬಜಾಜ್ ಫೈನಾನ್ಸ್, ಕೋಟಕ್ ಮಹಿಂದ್ರ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್ ಶೇ.1ರಿಂದ 2ರಷ್ಟು ಕುಸಿದಿವೆ.

ಈ ನಡುವೆ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮೂರುವರ್ಷದ ಗರಿಷ್ಠ ಮಟ್ಟಕ್ಕೆ ಏರಿದೆ. ಪ್ರತಿ ಬ್ಯಾರೆಲ್ ದರ ₹4050 ದಾಟಿದೆ. ಮತ್ತಷ್ಟು ಏರುವ ನಿರೀಕ್ಷೆ ಇದೆ. ಏರಿಕೆ ಮುಂದುವರೆದರೆ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೊಲ್, ಡೀಸೆಲ್ ದರ ತೀವ್ರವಾಗಿ ಏರಬಹುದು.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More