ಮುಂದಿನ ವರ್ಷ ದೇಶದ ಜಿಡಿಪಿ 7.3%ಗೆ ಏರಲಿದೆ ಎಂದಿದೆ ವಿಶ್ವಬ್ಯಾಂಕ್ ವರದಿ

2018ರ ಜಾಗತಿಕ ಆರ್ಥಿಕ ನಿರೀಕ್ಷೆ (ಜಿಇಪಿ) ವರದಿ ಪ್ರಕಾರ ಭಾರತದ ಆರ್ಥಿಕತೆ ಉದಯಿಸುತ್ತಿರುವ ಮಾರುಕಟ್ಟೆ ರಾಷ್ಟ್ರಗಳಿಂತಲೂ ಹೆಚ್ಚಿನ ಅಭಿವೃದ್ಧಿ ದಾಖಲಿಸಲಿದೆ. ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ.5.7ರಷ್ಟಿದ್ದ ಜಿಡಿಪಿ ದ್ವಿತೀಯ ತ್ರೈಮಾಸಿಕದಲ್ಲಿ ಶೇ.6.3ಕ್ಕೆ ಜಿಗಿದಿದೆ

“ಭಾರತದ ಆರ್ಥಿಕ ಅಭಿವೃದ್ಧಿಯ ಬಗ್ಗೆ ಆಶಾದಾಯಕವಾಗಿದೆ. ಪ್ರಸಕ್ತ ವಿತ್ತೀಯ ವರ್ಷದಲ್ಲಿ ಶೇ.6.7ರಷ್ಟು ಅಭಿವೃದ್ಧಿ ದಾಖಲಿಸಿಲಿದೆ,” ಎಂದು ವಿಶ್ವಬ್ಯಾಂಕ್ ತಿಳಿಸಿದೆ. 2018-19ನೇ ಸಾಲಿನಲ್ಲಿ ಭಾರತದ ಜಿಡಿಪಿ ಶೇ.7.3ಕ್ಕೇರಲಿದೆ. ಮುಂದಿನ ಎರಡು ವರ್ಷ ಶೇ.7.5ಕ್ಕೆ ಜಿಗಿಯಲಿದೆ ಎಂದು ಅಂದಾಜಿಸಿದೆ.

ವಿಶ್ವಬ್ಯಾಂಕ್ ಪ್ರಕಟಿಸಿರುವ 2018ರ ಜಾಗತಿಕ ಆರ್ಥಿಕ ನಿರೀಕ್ಷೆ (ಜಿಇಪಿ) ವರದಿಯಲ್ಲಿ ಭಾರತದ ಆರ್ಥಿಕತೆಯು ಉದಯಿಸುತ್ತಿರುವ ಮಾರುಕಟ್ಟೆ ರಾಷ್ಟ್ರಗಳಿಂತಲೂ ಹೆಚ್ಚಿನ ಅಭಿವೃದ್ಧಿ ದಾಖಲಿಸಲಿದೆ ಎಂದು ತಿಳಿಸಿದೆ. ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ.5.7ರಷ್ಟಿದ್ದ ಜಿಡಿಪಿ ದ್ವಿತೀಯ ತ್ರೈಮಾಸಿಕದಲ್ಲಿ ಶೇ.6.3ಕ್ಕೆ ಜಿಗಿದಿತ್ತು. 2017ನೇ ಸಾಲಿನಲ್ಲಿ ಅಪನಗದೀಕರಣ ಮತ್ತು ಜಿಎಸ್ಟಿ ಜಾರಿಯಿಂದ ಆರ್ಥಿಕತೆ ಹಿನ್ನಡೆಯಾದರೂ ಒಟ್ಟಾರೆ ಭಾರತದ ಜಿಡಿಪಿ ಶೇ.6.7ಕ್ಕೇರಲಿದೆ ಎಂದು ವರದಿಯಲ್ಲಿ ವಿವರಿಸಿದೆ.

ಭಾರತವು ಮುಂದಿನ ದಶಕದಲ್ಲಿ ಉದಯಿಸುತ್ತಿರುವ ಮಾರುಕಟ್ಟೆ ರಾಷ್ಟ್ರಗಳ ಪೈಕಿ ಅತಿ ಹೆಚ್ಚಿನ ಅಭಿವೃದ್ಧಿ ದಾಖಲಿಸಲಿದೆ. ಹೀಗಾಗಿ ನಾವು ಅಲ್ಪಕಾಲೀನ ಅಂಕಿಸಂಖ್ಯೆಗಳಿಗೆ ಗಮನ ಹರಿಸಿಲ್ಲ. ಭಾರತದ ಆರ್ಥಿಕತೆಯನ್ನು ನಾವು ವಿಸ್ತೃತವಾಗಿ ನೋಡುತ್ತೇವೆ, ಭಾರತದ ಚಿತ್ರವು ಬೃಹತ್ತಾಗಿ ಅಭಿವೃದ್ಧಿಯಾಗುವ ಸಾಮರ್ಥ್ಯ ಇರುವುದನ್ನು ವಿಶದಪಡಿಸುತ್ತಿದೆ ಎಂದು ಜಿಇಪಿ ವರದಿ ಸಿದ್ದಪಡಿಸಿರುವ ವಿಶ್ವಬ್ಯಾಂಕ್ ಅಭಿವೃದ್ಧಿ ನಿರೀಕ್ಷೆ ಸಮೂಹದ ನಿರ್ದೇಶಕ ಅಯ್ಯನ್ ಕೋಸ್ ಹೇಳಿದ್ದಾರೆ.

ಜಿಇಪಿ ವರದಿ ಪ್ರಕಾರ, ಹಲವು ವಲಯಗಳಲ್ಲಿ ಭಾರತದ ಭವಿಷ್ಯ ಉಜ್ವಲವಾಗಿದೆ. ಖಾಸಗಿ ಬಳಕೆ ಮತ್ತು ಸೇವೆಯು ಆರ್ಥಿಕ ಚಟುವಟಿಕೆಗೆ ಬೆಂಬಲ ನೀಡಲಿದೆ. ಕಾರ್ಪೊರೇಟ್ ವಲಯವು ಜಿಎಸ್‌ಟಿ ತೆರಿಗೆ ವ್ಯವಸ್ಥೆಗೆ ಹೊಂದಿಕೊಂಡ ಕೂಡಲೇ ಖಾಸಗಿ ಹೂಡಿಕೆಯು ಪುನಶ್ಚೇತನಗೊಳ್ಳಲಿದೆ. ಇದರಿಂದ ಮಧ್ಯಮಾವಧಿ ಆರ್ಥಿಕ ಚಟುವಟಿಕೆಗೆ ನೆರವಾಗಲಿದೆ. ಏಕರೂಪ ತೆರಿಗೆ ಜಾರಿಯಿಂದಾಗಿ ಬಹುಹಂತದ ತೆರಿಗೆ ಹೊರೆ ತಗ್ಗಲಿದ್ದು, ಅನೌಪಚಾರಿಕ ವಲಯವು ಔಪಚಾರಿಕ ತೆರಿಗೆ ವ್ಯಾಪ್ತಿಗೆ ಬರುವುದರಿಂದ ತೆರಿಗೆ ವ್ಯಾಪ್ತಿ ವಿಸ್ತರಿಸಿ ವಿತ್ತೀಯ ಸುಸ್ಥಿರತೆ ಸಾಧ್ಯವಾಗಲಿದೆ ಎಂದು ತಿಳಿಸಿದೆ.

ಸರ್ಕಾರ ಇತ್ತೀಚೆಗೆ ಪ್ರಕಟಿಸಿದ ಬ್ಯಾಂಕುಗಳ ಬಂಡವಾಳ ಮರುಪೂರಣ ಯೋಜನೆಯಿಂದ ಬ್ಯಾಂಕಿಂಗ್ ವಲಯದಲ್ಲಿ ನಿಷ್ಕ್ರಿಯ ಸಾಲದ ಒತ್ತಡ ತಗ್ಗಿ, ಖಾಸಗಿ ವಲಯಕ್ಕೆ ಹೆಚ್ಚಿನ ಸಾಲ ನೀಡಲು ಮತ್ತು ಬಂಡವಾಳ ಹೂಡಿಕೆ ಹೆಚ್ಚಿಸಲು ನೆರವಾಗಬಹುದು. ಜಾಗತಿಕ ವಹಿವಾಟು ಚೇತರಿಕೆಯಿಂದಾಗಿ ರಫ್ತು ಪ್ರಮಾಣ ವೃದ್ಧಿಸಲಿದೆ ಎಂದು ವಿವರಿಸಿದೆ.

ಇದನ್ನೂ ಓದಿ : ಆರ್ಥಿಕಾಭಿವೃದ್ಧಿ ಕುಸಿತ ಖಚಿತ, ಜಿಡಿಪಿ ಶೇ.6.5ರಷ್ಟು ಮಾತ್ರ; ಸಿಎಸ್ಒ ಅಂದಾಜು

ಚೀನಾದ ಆರ್ಥಿಕತೆಗೆ ತುಲನೆ ಮಾಡಿದರೂ ವಿಶ್ವಬ್ಯಾಂಕ್ ಮಾಡಿರುವ ಅಂದಾಜು ಉತ್ತಮವಾಗಿಯೇ ಇದೆ. 2017ರಲ್ಲಿ ನೆರೆಯ ಚೀನಾ ಶೇ.6.8ರಷ್ಟು ಅಭಿವೃದ್ಧಿ ದಾಖಲಿಸುವ ನಿರೀಕ್ಷೆ ಇದೆ. ಭಾರತಕ್ಕಿಂತ ಕೇವಲ ಒಂದಂಶ ಹೆಚ್ಚಿದೆ. ಆದರೆ, 2018ರಲ್ಲಿ ಚೀನಾದ ಜಿಡಿಪಿ ಶೇ.6.4ಕ್ಕೆ ನಂತರ ಎರಡು ವರ್ಷಗಳು ಶೇ.6.3ಕ್ಕೆ ತಗ್ಗಲಿದೆ ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ.

ಆದರೆ, ಪ್ರಮುಖ ಅಬಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳ ಪೈಕಿ ಭಾರತದ ಸಾಧನೆ ವಿಶ್ವಬ್ಯಾಂಕ್ ಜೂನ್ 2017ರಲ್ಲಿ ಅಂದಾಜಿಸಿದ್ದಕ್ಕಿಂತಲೂ ಕೆಳಮಟ್ಟದಲ್ಲಿದೆ. ಈಗ ಶೇ.6.7ರಷ್ಟು ಮತ್ತು 2018ರಲ್ಲಿ ಶೇ.7.3ರಷ್ಟು ಎಂದು ಅಂದಾಜಿಸುವ ಮೂಲಕ ವಿಶ್ವಬ್ಯಾಂಕ್ ಭಾರತದ ಆರ್ಥಿಕ ಅಭಿವೃದ್ಧಿ ಅಂದಾಜನ್ನು ಶೇ.0.5 ಮತ್ತು ಶೇ.0.2ರಷ್ಟು ತಗ್ಗಿಸಿದೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More