ಡಿಸೆಂಬರ್ ತಿಂಗಳ ಹಣದುಬ್ಬರ ಶೇ.5.2ಕ್ಕೆ ಏರಿಕೆ, ಐಐಪಿ ಶೇ.8.4ಕ್ಕೆ ಜಿಗಿತ

ಡಿಸೆಂಬರ್ ತಿಂಗಳ ಹಣದುಬ್ಬರ ನಿರೀಕ್ಷೆ ಮೀರಿ ಶೇ.5ರ ಗಡಿ ದಾಟಿದೆ. ಇದೇ ವೇಳೆ, ನವೆಂಬರ್ ತಿಂಗಳ ಕೈಗಾರಿಕಾ ಉತ್ಪನ್ನ ಸೂಚ್ಯಂಕ (ಐಐಪಿ) ಶೇ.8.4ಕ್ಕೆ ಏರಿದೆ. ಹಣದುಬ್ಬರ ಏರಿಕೆಯಿಂದಾಗಿ ಬಡ್ಡಿದರ ಕಡಿತ ಮಾಡುವ ಸಾಧ್ಯತೆ ಕುಗ್ಗಿದೆ. ಹೀಗಾಗಿ ಬಡ್ಡಿದರ ಇಳಿಯುತ್ತದೆಂದು ನಿರೀಕ್ಷಿಸುವಂತಿಲ್ಲ

ಹಣದುಬ್ಬರ ಏರುಹಾದಿಯಲ್ಲೇ ಸಾಗಿದೆ. ಡಿಸೆಂಬರ್ ತಿಂಗಳ ಗ್ರಾಹಕರ ದರ ಸೂಚ್ಯಂಕ (ಸಿಪಿಐ) ಅಂದರೆ, ಚಿಲ್ಲರೆ ಹಣದುಬ್ಬರ ಶೇ.5.2ಕ್ಕೆ ಏರಿದೆ. ನವೆಂಬರ್ ತಿಂಗಳು ಶೇ.4.88ಕ್ಕೇರಿತ್ತು. ಗ್ರಾಹಕ ದರ ಸೂಚ್ಯಂಕ ಬಳಸಿ ಚಿಲ್ಲರೆ ಹಣದುಬ್ಬರ ಅಳೆಯಲಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ಹಣದುಬ್ಬರದ ಮೇಲೆ ನಿಗಾ ಇಟ್ಟಿರುತ್ತದೆ.

ಚಿಲ್ಲರೆ ಹಣದುಬ್ಬರಕ್ಕೆ ಪ್ರಾಮುಖ್ಯತೆ ಏಕೆಂದರೆ, ಆರ್‌ಬಿಐ ಬಡ್ಡಿದರ ನಿರ್ಧರಿಸುವಾಗ ಚಿಲ್ಲರೆ ದರ ಹಣದುಬ್ಬರ ಪ್ರಮಾಣವನ್ನು ಗಣನೀಯವಾಗಿ ಪರಿಗಣಿಸುತ್ತದೆ. ಶೇ.4ರಷ್ಟು ಹಣದುಬ್ಬರ ಕಾಯ್ದುಕೊಳ್ಳುವ ಹೊಣೆ ರಿಸರ್ವ್ ಬ್ಯಾಂಕ್ ಮೇಲಿದೆ.

ಕಳೆದ ಬಾರಿ ಹಣಕಾಸು ನೀತಿ ಪರಾಮರ್ಶೆ ವೇಳೆ ಹಣದುಬ್ಬರ ನಿರೀಕ್ಷೆ ಮೀರಿದ್ದರಿಂದ ಬಡ್ಡಿದರ ಕಡಿತ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡಿತ್ತು. ಈಗ ಹಣದುಬ್ಬರ ಶೇ.5.2ಕ್ಕೇರಿದೆ. ಫೆಬ್ರವರಿಯಲ್ಲಿ ನಡೆಯುವ ಹಣಕಾಸು ಪರಾಮರ್ಶೆ ವೇಳೆ ಬಡ್ಡಿದರ ತಗ್ಗಿಸುವ ಸಾಧ್ಯತೆ ತೀರಾ ಕಡಮೆ. ಯಥಾಸ್ಥಿತಿ ಕಾಯ್ದುಕೊಳ್ಳಬಹುದು ಅಥವಾ 25 ಅಂಶ ಅಂದರೆ, ಶೇ.0.25ರಷ್ಟು ಬಡ್ಡಿ ಏರಿಸಲೂಬಹುದು.

ಇದನ್ನೂ ಓದಿ : ನವೆಂಬರ್ ಹಣದುಬ್ಬರ ತೀವ್ರ ಏರಿಕೆ, ಬಡ್ಡಿದರ ಕಡಿತ ಇನ್ನು ಮರೀಚಿಕೆ, ಐಐಪಿ ಇಳಿಕೆ

ಆಹಾರ ಧಾನ್ಯ, ಹಣ್ಣು, ತರಕಾರಿ ಬೆಲೆ ಏರಿಕೆಯಿಂದಾಗಿ ಈ ವಲಯದ ಹಣದುಬ್ಬರ ಶೇ.4.96ಕ್ಕೆ ಏರಿದೆ. ನವೆಂಬರ್‌ನಲ್ಲಿ ಇದು ಶೇ.4.42ರಷ್ಟಿತ್ತು. ಆಹಾರ ದರದಲ್ಲಿ ಏರಿಳಿತ ಹೆಚ್ಚಿದೆ. ಸೆಪ್ಟಂಬರ್‌ನಲ್ಲಿ ಇಳಿದಿದ್ದ ಮೊಟ್ಟೆ, ತರಕಾರಿ ಮತ್ತು ಹಣ್ಣುಗಳ ದರ ಏರಿದೆ. ಜುಲೈ ತಿಂಗಳಿಂದಲೂ ಏರುಹಾದಿಯಲ್ಲಿರುವ ಇಂಧನ ಹಣದುಬ್ಬರ ಡಿಸೆಂಬರ್‌ನಲ್ಲಿ ಶೇ.7.9ರಷ್ಟಿದೆ. ನವೆಂಬರ್‌ನಲ್ಲಿ ಶೇ.22.48ರಷ್ಟು ಏರಿದ್ದ ತರಕಾರಿ ದರ ಡಿಸೆಂಬರ್‌ನಲ್ಲಿ ಶೇ.29.13ರಷ್ಟು ಏರಿವೆ. ಇದೇ ವೇಳೆ, ಧಾನ್ಯಗಳ ಬೆಲೆ ಇಳಿಯುತ್ತಿದ್ದು, ಡಿಸೆಂಬರ್‌ನಲ್ಲಿ ಶೇ.23.53ರಷ್ಟು ಇಳಿದಿದೆ.

ನವೆಂಬರ್‌ನಲ್ಲಿ ಕೈಗಾರಿಕಾ ಉತ್ಪನ್ನ ಸೂಚ್ಯಂಕ (ಐಐಪಿ) ಶೇ.8.4ಕ್ಕೆಏರಿದ್ದು, 19 ತಿಂಗಳಲ್ಲೇ ಗರಿಷ್ಠ ಮಟ್ಟ ಮುಟ್ಟಿದೆ. 2016ರ ಮಾರ್ಚ್‌ನಲ್ಲಿ ಐಐಪಿ ಶೇ.9.8ರಷ್ಟು ಏರಿತ್ತು. ನಂತರ ಇಳಿಜಾರಿನಲ್ಲಿತ್ತು. ಕೈಗಾರಿಕಾ ಉತ್ಪನ್ನವು ವಾರ್ಷಿಕ ಶೇ.4.4ರಷ್ಟು ಏರುವ ಅಂದಾಜು ಮಾಡಲಾಗಿದೆ. ಪ್ರಯಾಣಿಕರು ಮತ್ತು ವಾಣಿಜ್ಯ ವಾಹನಗಳ ಉತ್ಪಾದನೆ ಮತ್ತು ನೋಂದಣಿ ನವೆಂಬರ್‌ನಲ್ಲಿ ಹೆಚ್ಚಿರುವುದರಿಂದ ಐಐಪಿ ಸೂಚ್ಯಂಕವು ಹೆಚ್ಚಳವಾಗಿದೆ ಎಂದು ಮಾರ್ಗನ್ ಸ್ಟಾನ್ಲಿ ವಿಶ್ಲೇಷಿಸಿದೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More