ಸರ್ವಕಾಲಿಕ ದಾಖಲೆ ಮಾಡಿದ ನಿಫ್ಟಿ, ಸೆನ್ಸೆಕ್ಸ್, ಬಜೆಟ್ ಮೇಲೆ ಈಗ ಪೇಟೆ ಕಣ್ಣು

ಹೊಸ ವರ್ಷದ ಎರಡನೇ ವಾರ ಪೇಟೆ ಮಟ್ಟಿಗೆ ಆಶಾದಾಯಕವಾಗಿತ್ತು. ನಿಫ್ಟಿ, ಸೆನ್ಸೆಕ್ಸ್ ಸೇರಿದಂತೆ ಬಹುತೇಕೆ ಸೂಚ್ಯಂಕಗಳು ಸರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿವೆ. ಪೇಟೆ ದೃಷ್ಟಿ ಈಗ ಬಜೆಟ್ ಮೇಲೆ ನೆಟ್ಟಿದೆ. ಯಾವ ಹಂತದಲ್ಲಿ ಪೇಟೆ ಕುಸಿಯುತ್ತದೋ ಹೇಳಲಾಗದು. ಹೂಡಿಕೆ ಮುನ್ನ ಎಚ್ಚರಿಕೆ ಅಗತ್ಯ

ಸತತ ಏರುಹಾದಿಯಲ್ಲಿ ಸಾಗಿರುವ ಷೇರುಪೇಟೆ ಮತ್ತೊಂದು ಸರ್ವಕಾಲಿಕ ದಾಖಲೆಯೊಂದಿಗೆ ವಹಿವಾಟು ಮುಗಿಸಿದೆ. ಈ ವಾರದಲ್ಲಿ ಸೆನ್ಸೆಕ್ಸ್ 438 ಅಂಶ ಏರಿದ್ದರೆ ನಿಫ್ಟಿ 122.40 ಅಂಶ ಏರಿದೆ. ಬಜೆಟ್ ಸಮೀಪಿಸುತ್ತಿರುವಂತೆ ಹೊಸ-ಹೊಸ ದಾಖಲೆ ಮಟ್ಟಕ್ಕೆ ಸೂಚ್ಯಂಕಗಳು ಏರುತ್ತಿವೆ.

ಶುಕ್ರವಾರ ದಿನದ ವಹಿವಾಟಿನಲ್ಲಿ 34638.42 ಅಂಶಕ್ಕೆ ಏರಿದ್ದ ಸೆನ್ಸೆಕ್ಸ್ ಮತ್ತೊಂದು ದಾಖಲೆ ಮಾಡಿತ್ತು. ದಿನದ ಅಂತ್ಯಕ್ಕೆ 88 ಅಂಶ ಏರಿಕೆಯೊಂದಿಗೆ 34,592 ಅಂಶಕ್ಕೆ ಸ್ಥಿರಗೊಂಡಿತು. ನಿಫ್ಟಿ 10,690.40 ಅಂಶಕ್ಕೇರಿ, ದಿನದ ಅಂತ್ಯಕ್ಕೆ 10,681.25ಕ್ಕೆಸ್ಥಿರಗೊಂಡಿದೆ. ದಿನವಿಡೀ ಏರಿಳಿತ ಕಂಡುಬಂತು. ಕಾರ್ಪೊರೆಟ್ ಕಂಪನಿಗಳ ತ್ರೈಮಾಸಿಕ ಗಳಿಕೆ ಉತ್ತಮವಾಗಿರುವ ನಿರೀಕ್ಷೆಯಲ್ಲಿ ಖರೀದಿ ಒತ್ತಡ ಹೆಚ್ಚಿದೆ.

ಕರ್ನಾಟಕ ಬ್ಯಾಂಕ್ ಲಾಭ ಶೇ.27.6ರಷ್ಟು ಹೆಚ್ಚಿದೆ. ಮೂರನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭ ₹87.4 ಕೋಟಿಗೆ ಏರಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ₹68.5 ಕೋಟಿ ನಿವ್ವಳ ಲಾಭ ಗಳಿಸಿತ್ತು. ಬಡ್ಡಿಮೂಲದ ಆದಾಯ ಶೇ.20ರಷ್ಟು ಏರಿದೆ. ಒಟ್ಟು ನಿಷ್ಕ್ರಿಯ ಸಾಲದ ಪ್ರಮಾಣ ಶೇ.3.97ಕ್ಕೆ ತಗ್ಗಿದೆ. ಕಳೆದ ವರ್ಷ ಈ ಪ್ರಮಾಣ ಶೇ.4.13ರಷ್ಟಿತ್ತು.

ಮೋತಿಲಾಲ್ ಓಸ್ವಾಲ್ ಖರೀದಿ ಗುರಿ 537ಕ್ಕೆ ನಿಗದಿ ಮಾಡಿದ ಹಿನ್ನೆಲೆಯಲ್ಲಿ ಕೆಇಐ ಇಂಡಸ್ಟ್ರೀಸ್ ಷೇರು ಶೇ.10ರಷ್ಟು ಏರಿತು. ಕೊಚಿನ್ ಪೋರ್ಟ್‌ನಿಂದ 88.51 ಕೋಟಿ ಮೊತ್ತದ ಕಾಮಗಾರಿ ಗುತ್ತಿಗೆ ಪಡೆದ ಡ್ರೆಡ್ಜಿಂಗ್ ಕಾರ್ಪೋರೇಷನ್ ಶೇ.4ರಷ್ಟು ಏರಿದೆ. ಅಮಾಲ್ಗಮೇಟೆಡ್ ಪ್ಲಾಂಟೇಷನ್ ಪ್ರೈವೇಟ್ ಲಿಮಿಟೆಡ್‌ನ ಶೇ.41ರಷ್ಟು ಪಾಲನ್ನು ಮಾರಾಟ ಮಾಡುವುದಾಗಿ ಸುದ್ದಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಟಾಟಾ ಗ್ಲೋಬಲ್ ಬೆವರೇಜ್ ಷೇರು ಶೇ.4ರಷ್ಟು ಏರಿತು. ಮೂರನೇ ತ್ರೈಮಾಸಿಕದಲ್ಲಿ ಶೇ.37ರಷ್ಟು ಲಾಭ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ 3ಐ ಇನ್ಫೊಟೆಕ್ ಶೇ.1ರಷ್ಟು ಏರಿತು.

ಐಟಿ ದೈತ್ಯ ಇನ್ಫೋಸಿಸ್ ಮೂರನೇ ತ್ರೈಮಾಸಿಕದ ಫಲಿತಾಂಶ ಪೇಟೆಗೆ ಅಚ್ಚರಿ ಮೂಡಿಸಿದೆ. ನಿರೀಕ್ಷೆ ಮೀರಿ ಶೇ.38.3ರಷ್ಟು ನಿವ್ವಳ ಲಾಭ ಹೆಚ್ಚಳವಾಗಿದೆ. 5129 ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಈ ಅವಧಿಯಲ್ಲಿ 3,708 ಕೋಟಿ ನಿವ್ವಳ ಲಾಭ ಗಳಿಸಿತ್ತು. ತಜ್ಞರು 3,710 ಕೋಟಿ ನಿವ್ವಳ ಲಾಭ ನಿರೀಕ್ಷಿಸಿದ್ದರು. ಇನ್ಫೋಸಿಸ್ ಪ್ರಕಾರ, ಅಮೆರಿಕದ ಇಂಟರ್ನಲ್ ರೆವಿನ್ಯೂ ಸರ್ವೀಸ್ ಜೊತೆ ಮಾಡಿಕೊಂಡ ಒಡಂಬಡಿಕೆಯಿಂದ ತೆರಿಗೆ ಉಳಿತಾಯವಾದ ಪರಿಣಾಮ ನಿವ್ವಳ ಲಾಭ ಹೆಚ್ಚಳವಾಗಿದೆ. ಕಳೆದೆರಡು ದಿನಗಳಿಂದ ಏರುಹಾದಿಯಲ್ಲಿದ್ದ ಇನ್ಫೋಸಿಸ್ ಶುಕ್ರವಾರ ಶೇ.0.25ರಷ್ಟು ಏರಿತು.

ಇದನ್ನೂ ಓದಿ : 2018ರಲ್ಲಿ ನೀವು ಹೂಡಿಕೆ ಮಾಡಬಹುದಾದ ಹತ್ತು ಮ್ಯೂಚುವಲ್ ಫಂಡ್‌ಗಳಿವು

ವಿಸ್ತೃತ ಮಾರುಕಟ್ಟೆಯ ಬಹುತೇಕ ಸೂಚ್ಯಂಕಗಳು ಏರಿದರೆ, ಕೆಲವು ಸೂಚ್ಯಂಕಗಳು ಕುಸಿದಿವೆ. ಸತತ ಏರಿಕೆಯಾಗಿದ್ದ ನಿಫ್ಟಿ ರಿಯಾಲ್ಟಿ ಶೇ.1.46ರಷ್ಟು ಕುಸಿದಿದೆ. ನಿಫ್ಟಿ ಎಫ್ಎಂಸಿಜಿ, ನಿಫ್ಟಿ ಪಾರ್ಮ, ನಿಫ್ಟಿ ಮಿಡ್ ಕ್ಯಾಪ್ ಲಿಕ್ವಿಡ್ 15 ಮತ್ತು ನಿಫ್ಟಿ ಮಿಡ್ ಕ್ಯಾಪ್ 50 ಶೇ.0.50ರಷ್ಟು ಕುಸಿದಿವೆ. ನಿಫ್ಟಿ ಮೆಡಿಯಾ ಶೇ.1.71ರಷ್ಟು ಏರಿದೆ. ನಿಫ್ಟಿ ಎನರ್ಜಿ, ನಿಫ್ಟಿ ಎಂಎನ್ಸಿ, ನಿಫ್ಟಿ ಮೆಟಲ್ ನಿಫ್ಟಿ ಪ್ರೈವೇಟ್ ಬ್ಯಾಂಕ್, ನಿಪ್ಟಿ ಸಿಪಿಎಸ್ಇ ಶೇ.0.40ರಿಂದ ಶೇ.60ರಷ್ಟು ಕುಸಿದಿವೆ.

ದಿನದ ವಹಿವಾಟಿನಲ್ಲಿ ಎಬಿಬಿ ಇಂಡಿಯಾ ಶೇ.5.50ರಷ್ಟು ಏರಿದೆ. ಸನ್ ಟಿವಿ, ಐಸಿಐಸಿಐ ಬ್ಯಾಂಕ್, ಸೀಮೆನ್ಸ್, ಭಾರತಿ ಇನ್ಫ್ರಾಟೆಲ್ ಶೇ.2ರಿಂದ 4ರಷ್ಟು ಏರಿವೆ. ಶ್ರೀ ಸಿಮೆಂಟ್ಸ್ ಬಜಾಜ್ ಫಿನ್ ಸರ್ವೀಸ್, ಎನ್ಎಚ್‌ಪಿಸಿ, ಯುಪಿಎಲ್ ಮತ್ತು ಪವರ್ ಫೈನಾನ್ಸ್ ಕಾರ್ಪೋರೆಷನ್ ಶೇ.1ರಿಂದ 4ರಷ್ಟು ಕುಸಿದಿವೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More