ಜಿಎಸ್ಟಿ ವ್ಯವಸ್ಥೆ ತೆರಿಗೆ ಸ್ನೇಹಿ ವ್ಯವಸ್ಥೆ ಅಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದ್ದೇಕೆ?

“ಸರಕು ಮತ್ತು ಸೇವಾ ತೆರಿಗೆ ಜಾರಿಗೆ ತಂದು 220 ದಿನಗಳು ಕಳೆದಿವೆ. ಆದರೆ, ಹೊಸ ತೆರಿಗೆ ಸುಧಾರಣೆ ವ್ಯವಸ್ಥೆಯಿಂದ ತೆರಿಗೆದಾರರಿಗೆ ಅನುಕೂಲಕ್ಕಿಂತ ಅನನಕೂಲವೇ ಹೆಚ್ಚಾಗುತ್ತಿದೆ. ತೆರಿಗೆ ವಿವರ ಸಲ್ಲಿಕೆ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ,” ಬಾಂಬೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ

ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯು ಬಳಕೆಸ್ನೇಹಿಯಾಗಿಲ್ಲ ಎಂದು ಟೀಕಿಸಿರುವ ಬಾಂಬೆ ಹೈಕೋರ್ಟ್, ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ತರಲು ಮಧ್ಯರಾತ್ರಿ ಸಂಸತ್ ಅಧಿವೇಶನ ಕರೆದ ಪ್ರಸ್ತುತತೆಯನ್ನು ಪ್ರಶ್ನಿಸಿದೆ. ತೆರಿಗೆ ವಿವರ ಸಲ್ಲಿಸುವವರು, ವಿವಿಧ ತೊಂದರೆಗಳಿಂದ ಹತಾಶರಾಗುತ್ತಿದ್ದಾರೆ. ಜಿಎಸ್‌ಟಿ ಜಾರಿಗೆ ತರುವ ಹೊಣೆ ಹೊತ್ತಿರುವವರು ತ್ವರಿತವಾಗಿ ವ್ಯವಸ್ಥೆಯಲ್ಲಿ ತೊಂದರೆಗಳನ್ನು ನಿವಾರಿಸಬೇಕು ಎಂದು ಸೂಚಿಸಿದೆ.

ಹೊಸ ತೆರಿಗೆ ವ್ಯವಸ್ಥೆಯು ತೆರಿಗೆ ಸ್ನೇಹಿಯಾಗಿಲ್ಲ ಎಂಬುದನ್ನು ಗಮಿಸಿದ ಹೈಕೋರ್ಟ್, “ಹೊಸ ತೆರಿಗೆ ಜಾರಿಗೆ ತರುವ ಹೊಣೆ ಹೊತ್ತವರು ಕನಿಷ್ಠ ಪಕ್ಷ ಎಚ್ಚೆತ್ತುಕೊಂಡು ವ್ಯವಸ್ಥೆಯನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಾರೆಂದು ನಾವು ಆಶಿಸುತ್ತೇವೆ ಮತ್ತು ನಂಬುತ್ತೇವೆ,” ಎಂದು ಹೈಕೋರ್ಟ್ ಹೇಳಿದೆ.

“ತೆರಿಗೆ ವಿವರ ಸಲ್ಲಿಕೆಯ ಹೊಸ ವ್ಯವಸ್ಥೆಯಲ್ಲಿನ ಲೋಪಗಳನ್ನು ನಿವಾರಿಸಲು ಹೆಚ್ಚಿನ ಗಮನಕೊಡಬೇಕಿದೆ. ಎಲ್ಲಾ ಬೆಳವಣಿಗೆಗಳು ತೃಪ್ತಿದಾಯಕವಾಗಿವೆ ಎಂದು ನಮಗನಿಸುತ್ತಿಲ್ಲ. ತೆರಿಗೆದಾರರು ಜಿಎಸ್ಟಿಎನ್ ಪೊರ್ಟಲ್ ಅನ್ನು ಸುಲಭವಾಗಿ ಬಳಸಿಕೊಳ್ಳಲು ಸಾಧ್ಯವಾಗದೇ ಇದ್ದರೆ, ಸಂಸತ್ತಿನ ವಿಶೇಷ ಅಧಿವೇಶನದಿಂದಾಗಲೀ, ಸರಕು ಮತ್ತು ಸೇವಾ ತೆರಿಗೆ ಮಂಡಳಿ ವಿಶೇಷ ಸಭೆಯಿಂದಾಗಲೀ ಯಾವ ಪುರುಷಾರ್ಥವನ್ನು ಸಾಧಿಸಲಾಗುವುದಿಲ್ಲ,” ಎಂದು ಹೈಕೋರ್ಟ್ ಹೇಳಿದೆ.

“ಅತ್ಯಂತ ಪ್ರಚಾರ ಪಡೆದ ಮತ್ತು ಅತ್ಯಂತ ಜನಪ್ರಿಯ ತೆರಿಗೆ ವ್ಯವಸ್ಥೆ ಎಂದು ಕೊಂಡಾಡಿದ ಸರಕು ಮತ್ತು ಸೇವಾ ತೆರಿಗೆಯನ್ನು ಜನರು ಸಂಭ್ರಮಿಸುವಂತಾಗಿಲ್ಲ, ಬದಲಿಗೆ ಅದರಿಂದ ಬರೀ ಕುಂದು-ಕೊರತೆಗಳೇ ಹೆಚ್ಚಿವೆ. ಹೀಗಾಗಿ ಇಂತಹ ಸಂಭ್ರಮಾಚರಣೆಗಳಿಗೆ ಅರ್ಥವಿಲ್ಲ,” ಎಂದು ಹೇಳಿದೆ. ‘ಅಬಿಕಾರ್ ಅಂಡ್ ಬಿಂಜೆಲ್ ಟೆಕ್ನೊವೆಲ್ಡ್’ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಫೆಬ್ರವರಿ 20ರೊಳಗೆ ಉತ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಜಿಎಸ್ಟಿಎನ್ ನೆಟ್ ವರ್ಕ್ ನಲ್ಲಿನ ಲೋಪದೋಷಗಳನ್ನು ನಿವಾರಿಸಲು ಕೈಗೊಂಡ ಪರಿಹಾರ ಕ್ರಮಗಳನ್ನು ವಿವರಿಸುವಂತೆಯೂ ಸೂಚಿಸಿದೆ.

ಇದನ್ನೂ ಓದಿ : ನಿರೀಕ್ಷಿಸಿ... ಮುಂದಿನ ದಿನಗಳಲ್ಲಿ ಸರಕು ಮತ್ತು ಸೇವಾ ತೆರಿಗೆ ಭಾರ ಮತ್ತಷ್ಟು ತಗ್ಗಲಿದೆ

ರೊಬೊಟಿಕ್ ಮತ್ತು ಆಟೋಮೆಷನ್ ಪರಿಕರ ತಯಾರಿಸುವ ‘ಅಬಿಕಾರ್ ಅಂಡ್ ಬಿಂಜೆಲ್ ಟೆಕ್ನೊವೆಲ್ಡ್’ ಕಂಪನಿಯು ಜಿಎಸ್ಟಿ ಖಾತೆ ಸಂಖ್ಯೆ ಪಡೆದಿದ್ದರೂ ಜಿಎಸ್ಟಿಎನ್ ನೆಟ್‌ವರ್ಕ್ ಮೂಲಕ ವಿವರ ಸಲ್ಲಿಸಿದಾಗ ಸ್ವೀಕರಿಸಲಿಲ್ಲ. ಜಿಎಸ್ಟಿ ಖಾತೆ ಸಂಖ್ಯೆ ಪಡೆದಿದ್ದರೂ ತೆರಿಗೆ ವಿವರ ಸಲ್ಲಿಕೆಯನ್ನು ಜಿಎಸ್ಟಿಎನ್ ಸ್ವೀಕರಿಸದಿರುವುದರಿಂದ ಸಕಾಲದಲ್ಲಿ ತೆರಿಗೆ ವಿವರ ಸಲ್ಲಿಸಿಲ್ಲ ಎಂಬ ಕಾರಣ ನೀಡಿ ದಂಡ ವಿಧಿಸಬಹುದು ಎಂಬ ಕಾರಣ ಮುಂದೊಡ್ಡಿ ಕಂಪನಿಯು ನ್ಯಾಯಾಲಯದ ಮೆಟ್ಟಿಲೇರಿದೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More