ಪೇಟೆ ಕುಸಿದಾಗ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವುದೇ ಜಾಣತನ!

ಮಾರುಕಟ್ಟೆ ಕುಸಿದಾಗ ಮತ್ತು ಕುಸಿತದ ಹಾದಿಯಲ್ಲಿದ್ದಾಗ ಷೇರುಗಳಲ್ಲಿ ಹೂಡಿಕೆ ಮಾಡುವ ಬದಲು ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವುದು ಉತ್ತಮ. ಮ್ಯೂಚುವಲ್ ಫಂಡ್ ಗಳ ಯೂನಿಟ್ ದರಗಳು ಕುಸಿದಿರುತ್ತವೆ. ಮಾರುಕಟ್ಟೆ ಏರಿದಾಗ ಗರಿಷ್ಠ ಲಾಭ ದಕ್ಕುತ್ತದೆ!

ಷೇರು ಪೇಟೆ ಕುಸಿತದ ಹಾದಿಯಲ್ಲಿದೆ. ಕುಸಿತ ಯಾವಾಗ ನಿಲ್ಲುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಹೀಗಾಗಿ ಅಸ್ಥಿರ ಮಾರುಕಟ್ಟೆಯಲ್ಲಿ ಷೇರುಗಳ ಖರೀದಿ ಮಾಡುವುದರಿಂದ ನಷ್ಟಕ್ಕೀಡಾಗುವ ಸಾಧ್ಯತೆ ಹೆಚ್ಚು. ಹಾಗಂತ ಮಾರುಕಟ್ಟೆ ಕುಸಿಯುವ ಹೊತ್ತಿನಲ್ಲಿ ಯಾವುದೇ ಹೂಡಿಕೆ ಮಾಡಲೇಬಾರದು ಎಂದೇನಿಲ್ಲ. ಪೇಟೆ ಕುಸಿದಾಗ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವುದು ಉತ್ತಮ.

ನಿಮಗೆ ತಿಳಿದಿರುವಂತೆ ಮ್ಯೂಚುವಲ್ ಫಂಡ್ ಹೂಡಿಕೆ ಅತ್ಯಂತ ಸುರಕ್ಷಿತ ಮತ್ತು ಸುಲಭ ಹೂಡಿಕೆ ವಿಧಾನ. ಮಾರುಕಟ್ಟೆ ಕುಸಿದಾಗ ಹೂಡಿಕೆದಾರರಿಗೆ ಆಗುವ ಅನುಕೂಲ ಎಂದರೆ ಫಂಡ್ ಗಳ ಯೂನಿಟ್ ದರಗಳು ಕುಸಿದಿರುತ್ತವೆ. ಅಂದರೆ, ಹೂಡಿಕೆದಾರರಿಗೆ ಕಡಮೆ ದರದಲ್ಲಿ ಹೆಚ್ಚಿನ ಯೂನಿಟ್ ಗಳನ್ನು ಖರೀದಿಸಲು ಸಾಧ್ಯವಾಗುತ್ತದೆ.

ಉದಾಹರಣೆಗೆ ಎಸ್ಬಿಐ ಇನ್ಫ್ರಾಸ್ಟ್ರಕ್ಚರ್ ಗ್ರೋಥ್ ಫಂಡ್ ಯೂನಿಟ್ ದರ ಈಗ ₹16.16ಕ್ಕೆ ಇಳಿದಿದೆ. ಈ ಫಂಡ್ ಗರಿಷ್ಠ ₹17.73ಕ್ಕೆ ಏರಿತ್ತು. ಅಂದರೆ, ಮಾರುಕಟ್ಟೆ ಕುಸಿದಾಗ ಯೂನಿಟ್ ದರ ₹1.57 ರಷ್ಟು ಅಂದರೆ, ಸುಮಾರು ಶೇ.10ರಷ್ಟು ಕಡಮೆ ದರಕ್ಕೆ ಖರೀದಿಸಬಹುದು. 100 ಯೂನಿಟ್ ಖರೀದಿಸಬಹುದಾಗಿದ್ದ ಮೊತ್ತದಲ್ಲಿ 110 ಯೂನಿಟ್ ಖರೀದಿಸಬಹುದು.

ಮಾರುಕಟ್ಟೆ ಮತ್ತಷ್ಟು ಕುಸಿಯುತ್ತದೆ ಎಂದಿಟ್ಟುಕೊಳ್ಳಿ. ಆಗ ಯೂನಿಟ್ ದರ ಮತ್ತಷ್ಟು ಕುಸಿಯುತ್ತದೆ. ಆಗ ಹೂಡಿಕೆದಾರರು ಮತ್ತಷ್ಟು ಯೂನಿಟ್ ಖರೀದಿಸಬಹುದು. ಷೇರುಪೇಟೆ ಚೇತರಿಸಿಕೊಳ್ಳುವ ಜತೆಜತೆಗೆ ಮ್ಯೂಚುವಲ್ ಫಂಡ್ ಯೂನಿಟ್ ದರಗಳೂ ಏರುತ್ತವೆ.

ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವುದರಿಂದಾಗುವ ಅನುಕೂಲ ಎಂದರೆ ಒಂದು ವೇಳೆ ಮಾರುಕಟ್ಟೆ ಕುಸಿದರೆ, ಷೇರುಗಳು ಕುಸಿಯುವ ಪ್ರಮಾಣದಲ್ಲಿ ಯೂನಿಟ್ ದರ ಕುಸಿಯುವುದಿಲ್ಲ. ಇದರರ್ಥ ನೀವು ನೇರವಾಗಿ ಷೇರುಗಳಲ್ಲಿ ಹೂಡಿಕೆ ಮಾಡಿದಾಗ ಆಗುವ ನಷ್ಟದ ಪ್ರಮಾಣಕ್ಕೆ ಹೋಲಿಸಿದರೆ, ಮ್ಯೂಚುವಲ್ ಫಂಡ್ ಗಳಲ್ಲಿ ಮಾರುಕಟ್ಟೆ ಕುಸಿದಾಗ ಆಗುವ ನಷ್ಟದ ಪ್ರಮಾಣ ಅತ್ಯಲ್ಪ. ಆದರೆ, ಮಾರುಕಟ್ಟೆ ಏರಿದಾಗ ಯೂನಿಟ್ ದರಗಳು ಷೇರುಗಳಷ್ಟೇ ಪ್ರಮಾಣದಲ್ಲಿ ಏರುತ್ತವೆ.

ಎಸ್ಐಪಿ ಮೂಲಕ ಹೂಡಿಕೆ ಮಾಡುವವರು ಮಾರುಕಟ್ಟೆ ಏಳು-ಬೀಳುಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಹೂಡಿಕೆ ಮುಂದುವರೆಸುತ್ತಾರೆ. ಸ್ವಲ್ಪ ಜಾಣತನ ಉಪಯೋಗಿಸಿದರೆ, ಎಸ್ಐಪಿ ಹೂಡಿಕೆದಾರರೂ ಮಾರುಕಟ್ಟೆ ಕುಸಿದಾಗ ಅಗತ್ಯ ಮೀರಿದ ನಗದು ಖಾತೆಯಲ್ಲಿದ್ದರೆ, ಈಗಾಗಲೇ ಎಸ್ಐಪಿಯಲ್ಲಿ ಹೂಡಿಕೆ ಮಾಡುತ್ತಿರುವ ಮೂಚುವಲ್ ಫಂಡ್ ಗಳ ಯೂನಿಟ್ ಗಳನ್ನು ಬಲ್ಕ್ ಆಗಿ ಖರೀದಿಸಬಹುದು. ಇದರಿಂದ ಹೆಚ್ಚಿನ ಲಾಭ ಸಾಧ್ಯ.

ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವುದರಿಂದ ಒಂದೇ ಅನನುಕೂಲ ಎಂದರೆ ಷೇರು ಖರೀದಿ ಮತ್ತು ಮಾರಾಟ ಮಾಡುವಾಗ ಆಗುವ ವೆಚ್ಚಕ್ಕೆ ಹೋಲಿಸಿದರೆ, ಮ್ಯೂಚುವಲ್ ಫಂಡ್ ಯೂನಿಟ್ ಖರೀದಿ ಮತ್ತು ಮಾರಾಟ ಮಾಡುವ ವೆಚ್ಚ ಕೊಂಚ ಹೆಚ್ಚಿರುತ್ತದೆ. ಹೀಗಾಗಿ ದೀರ್ಘಕಾಲದ ಹೂಡಿಕೆ ಮಾಡಿದರೆ, ಬರುವ ಗಳಿಕೆಯೂ ಹೆಚ್ಚುವುದರಿಂದ ವೆಚ್ಚ ಹೆಚ್ಚಿದರೂ ತಲೆ ಕೆಡಿಸಿಕೊಳ್ಳುವ ಅಗತ್ಯ ಇರುವುದಿಲ್ಲ.

ತುಂಬಾ ರಿಸ್ಕ್ ತೆಗೆದುಕೊಳ್ಳದ, ಆದರೆ ಜಾಣತನದಿಂದ ಹೂಡಿಕೆ ಮಾಡುವವರು, ನೇರ ಷೇರು ಖರೀದಿ ಮಾಡುವ ಬದಲು ಮಾರುಕಟ್ಟೆ ಕುಸಿದಾಗಲೆಲ್ಲ ಮ್ಯೂಚುವಲ್ ಫಂಡ್ ಗಳ ಯೂನಿಟ್ ಖರೀದಿಸುತ್ತಾರೆ. ಮಾರುಕಟ್ಟೆ ಏರಿದಾಗ ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಾರೆ. ಇಲ್ಲಿ ವಹಿವಾಟು ವೆಚ್ಚ ಹೆಚ್ಚಿದ್ದರೂ ರಿಸ್ಕ್ ಹೆಚ್ಚಿರುವುದಿಲ್ಲ.

ಇದನ್ನೂ ಓದಿ : ಶೇ.80ರಷ್ಟು ಲಾಭ ಕೊಟ್ಟ ಮ್ಯೂಚುವಲ್ ಫಂಡ್ ಯಾವುವು ನಿಮಗೆ ಗೊತ್ತಾ?

ನೀವು ತಕ್ಷಣಕ್ಕೆ ಹೂಡಿಕೆ ಮಾಡಬಹುದಾದ ಫಂಡ್ ಗಳು

ಲಾರ್ಜ್ ಕ್ಯಾಪ್

  • ಐಡಿಎಫ್ಸಿ ಫೋಕಸ್ಡ್ ಈಕ್ವಿಟಿ ಫಂಡ್- ಯೂನಿಟ್ ದರ ₹39.22
  • ಕೊಟಕ್ ಸಲೆಕ್ಟ್ ಫೋಕಸ್ ಫಂಡ್- ಯೂನಿಟ್ ದರ ₹32.61

ಮಿಡ್ ಅಂಡ್ ಸ್ಮಾಲ್ ಕ್ಯಾಪ್

  • ಎಲ್ಅಂಡ್ ಟಿ ಎಮರ್ಜಿಂಗ್ ಬ್ಯೂಸಿನೆಸ್ ಫಂಡ್- ಯೂನಿಟ್ ದರ ₹27.87
  • ರಿಲಯನ್ಸ್ ಸ್ಮಾಲ್ ಕ್ಯಾಪ್ ಫಂಡ್- ಯೂನಿಟ್ ದರ ₹46.19
ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More