ಫ್ಲಿಪ್‌ಕಾರ್ಟ್‌ನ ₹110 ಕೋಟಿ ತೆರಿಗೆ ತಗಾದೆ ಮೇಲ್ಮನವಿ ತಿರಸ್ಕರಿಸಿದ ನ್ಯಾಯಾಧಿಕರಣ

ಆದಾಯ ತೆರಿಗೆ ಇಲಾಖೆ ₹110 ಕೋಟಿ ತೆರಿಗೆ ಕಟ್ಟುವಂತೆ ನೀಡಿದ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಫ್ಲಿಪ್‌ಕಾರ್ಟ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ತೆರಿಗೆ ನ್ಯಾಯಾಧಿಕರಣ ತಿರಸ್ಕರಿಸಿದೆ. ಲೆಕ್ಕಾಚಾರದಲ್ಲಿ ಜಾಣ್ಮೆ ತೋರಿಸಿ ತೆರಿಗೆ ವಂಚಿಸುತ್ತಿದ್ದ ಇ-ಕಾರ್ಮಸ್ ಕಂಪನಿಗಳಿಗೆ ಈಗ ಸಂಕಷ್ಟ ಎದುರಾಗಿದೆ

ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ ತೆರಿಗೆ ಸಂಕಷ್ಟಕ್ಕೆ ಸಿಲುಕಿದೆ. ₹110 ಕೋಟಿ ತೆರಿಗೆ ಪಾವತಿಸಬೇಕೆಂಬ ಆದಾಯ ತೆರಿಗೆ ಇಲಾಖೆ ಆದೇಶಕ್ಕೆ ತಡೆ ನೀಡಬೇಕೆಂದು ಕೋರಿ ಫ್ಲಿಪ್‌ಕಾರ್ಟ್‌ ಸಲ್ಲಿಸಿದ್ದ ಮನವಿಯನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣ (ಐಟಿಎಟಿ) ತಿರಸ್ಕರಿಸಿದೆ. ತಕ್ಷಣವೇ ₹55 ಕೋಟಿ ಪಾವತಿಸುವಂತೆ ಮತ್ತು ಉಳಿದ ₹55 ಕೋಟಿಗೆ ಫೆ.28ರೊಳಗೆ ಬ್ಯಾಂಕ್ ಗ್ಯಾರಂಟಿ ನೀಡುವಂತೆಯೂ ಫ್ಲಿಪ್‌ಕಾರ್ಟ್‌ಗೆ ಸೂಚಿಸಿದೆ.

ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣ ನೀಡಿರುವ ಈ ಆದೇಶವು ಅಮೆಜಾನ್ ಸೇರಿದಂತೆ ಹಲವು ಇ-ಕಾಮರ್ಸ್ ಕಂಪನಿಗಳ ಮೇಲೂ ಪರಿಣಾಮ ಬೀರಲಿದೆ. ಈ ಕಂಪನಿಗಳಿಗೂ ತೆರಿಗೆ ಇಲಾಖೆ ತೆರಿಗೆ ಪಾವತಿಸಲು ಸೂಚಿಸಿದೆ.

ಈಗ ತಗಾದೆ ಇರುವುದು 2015-16 ಸಾಲಿನ ತೆರಿಗೆ ಪಾವತಿಗೆ ಸಂಬಂಧಿಸಿದ್ದು. ಅದರ ಹಿಂದಿನ ವರ್ಷಗಳಿಗೂ ತೆರಿಗೆ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ. ಫ್ಲಿಪ್‌ಕಾರ್ಟ್‌ ತೆರಿಗೆ ತಗಾದೆ ವಿಚಾರಣೆಯು ನ್ಯಾಯಾಧಿಕರಣದಲ್ಲಿ ಫೆ.28ರ ನಂತರ ಮುಂದುವರಿಯಲಿದೆ.

ಪ್ರಸ್ತುತ ಕಂಪನಿಗಳು ಗ್ರಾಹಕರಿಗೆ ನೀಡುವ ರಿಯಾಯ್ತಿ ಮತ್ತು ಮಾರುಕಟ್ಟೆ ವೆಚ್ಚವನ್ನು ಆದಾಯ ವೆಚ್ಚವೆಂದು, ಕಂಪನಿಯ ನಿರ್ಮಾಣ ಚಟುವಟಿಕೆಗಳಿಗೆ ವಿನಿಯೋಗಿಸುವ ಮೊತ್ತವನ್ನು ಬಂಡವಾಳ ವೆಚ್ಚ ಎಂದೂ ವರ್ಗೀಕರಿಸುತ್ತಿವೆ. ಒಂದು ವೇಳೆ, ಗ್ರಾಹಕರಿಗೆ ನೀಡುವ ರಿಯಾಯ್ತಿಗಳನ್ನು ಬಂಡವಾಳ ವೆಚ್ಚವೆಂದು ವರ್ಗೀಕರಿಸಿದರೆ, ಈಗ ನಷ್ಟದಲ್ಲಿರುವುದಾಗಿ ಘೋಷಿಸಿಕೊಂಡಿರುವ ಫ್ಲಿಪ್‌ಕಾರ್ಟ್‌ ಲಾಭದ ಸಂಸ್ಥೆಯಾಗುತ್ತದೆ ಹಾಗೂ ದೇಶೀಯ ತೆರಿಗೆಗಳನ್ನು ಪಾವತಿಸಬೇಕಾಗುತ್ತದೆ.

2015-16ನೇ ಸಾಲಿನಲ್ಲಿ ₹408 ಕೋಟಿ ಲಾಭ ಮಾಡಿದೆಯೆಂದು, ಅದಕ್ಕೆ ₹110 ಕೋಟಿ ತೆರಿಗೆ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ಫ್ಲಿಪ್‌ಕಾರ್ಟ್‌ಗೆ ನೋಟಿಸ್ ಜಾರಿ ಮಾಡಿತ್ತು. ಆದರೆ, ಆ ವರ್ಷ ಫ್ಲಿಪ್‌ಕಾರ್ಟ್‌ ₹796 ಕೋಟಿ ನಷ್ಟವಾಗಿದೆ ಎಂದು ಘೋಷಿಸಿಕೊಂಡಿತ್ತು. ತೆರಿಗೆ ನೋಟಿಸ್ ಜಾರಿ ಮಾಡಿದ್ದನ್ನು ಪ್ರಶ್ನಿಸಿ ಫ್ಲಿಪ್‌ಕಾರ್ಟ್‌ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣದಲ್ಲಿ ಅರ್ಜಿ ಸಲ್ಲಿಸಿತ್ತು. ಒಂದು ವೇಳೆ, ತೆರಿಗೆ ಪಾವತಿಸಿದರೆ ಕಂಪನಿಯ ಆರ್ಥಿಕ ಸ್ಥಿತಿ ಅಧೋಗತಿಗೆ ಇಳಿಯಲಿದೆ ಎಂದು ಕೋರಿತ್ತು. ಮೇಲ್ನೋಟಕ್ಕೆ ಯಾವುದೇ ಆರ್ಥಿಕ ದುಸ್ಥಿತಿ ಫ್ಲಿಪ್‌ಕಾರ್ಟ್‌ಗೆ ಇಲ್ಲ ಎಂಬ ಕಾರಣಕ್ಕೆ ನ್ಯಾಯಾಧಿಕರಣವು ಮನವಿಯನ್ನು ತಿರಸ್ಕರಿಸಿ, ತೆರಿಗೆ ಪಾವತಿಸುವಂತೆ ಆದೇಶಿಸಿದೆ.

ಇ-ಕಾಮರ್ಸ್ ಕಂಪನಿಗಳು ಗ್ರಾಹಕರಿಗೆ ಭಾರಿ ರಿಯಾಯ್ತಿ ನೀಡುತ್ತವೆ ಮತ್ತು ಮಾರುಕಟ್ಟೆ ವಿಸ್ತರಣೆಗಾಗಿ ಭಾರಿ ವೆಚ್ಚ ಮಾಡುತ್ತವೆ. ಫ್ಲಿಪ್‌ಕಾರ್ಟ್‌, ಅಮೆಜಾನ್ ಇತರ ಕಂಪನಿಗಳು ಈ ವೆಚ್ಚಗಳೆಲ್ಲವನ್ನೂ ತಮ್ಮ ಆದಾಯದಿಂದ ಕಳೆದು ಕಂಪನಿಗೆ ನಷ್ಟವಾಗಿದೆ ಎಂದು ಘೋಷಿಸಿಕೊಳ್ಳುತ್ತವೆ. ನಷ್ಟವೆಂದು ಘೋಷಿಸಿಕೊಳ್ಳುವುದರಿಂದ ತೆರಿಗೆ ಪಾವತಿಸುವ ಹೊಣೆ ಇರುವುದಿಲ್ಲ.

ಗ್ರಾಹಕರಿಗೆ ನೀಡುವ ರಿಯಾಯ್ತಿಗಳು, ಮಾರುಕಟ್ಟೆ ವಿಸ್ತರಣೆಗಾಗಿ ಮಾಡುವ ಜಾಹಿರಾತು ಸೇರಿದಂತೆ ಎಲ್ಲ ವಿಧದ ವೆಚ್ಚಗಳೂ ಬಂಡವಾಳ ವೆಚ್ಚವಾಗಿರುತ್ತವೆಯೇ ಹೊರತು ಆದಾಯ ವೆಚ್ಚವಾಗಿರುವುದಿಲ್ಲ. ಈ ವೆಚ್ಚಗಳನ್ನು ಆದಾಯ ವೆಚ್ಚಗಳೆಂದು ಘೋಷಿಸಿಕೊಂಡು ತೆರಿಗೆ ವಂಚಿಸುವುದು ಸರಿಯಲ್ಲ ಎಂಬುದು ತೆರಿಗೆ ಇಲಾಖೆಯ ವಾದ.

ಇದನ್ನೂ ಓದಿ : ಜಿಎಸ್ಟಿ ವ್ಯವಸ್ಥೆ ತೆರಿಗೆ ಸ್ನೇಹಿ ವ್ಯವಸ್ಥೆ ಅಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದ್ದೇಕೆ?

ಅಂತಿಮ ತೀರ್ಪು ಆದಾಯ ತೆರಿಗೆ ಇಲಾಖೆ ಪರವಾಗಿ ಬಂದರೆ, ಇ-ಕಾಮರ್ಸ್ ಕಂಪನಿಗಳು ನೀಡುತ್ತಿರುವ ಭಾರಿ ರಿಯಾಯ್ತಿಗಳಿಗೆ ಕಡಿವಾಣ ಬೀಳುವ ಸಾಧ್ಯತೆ ಇದೆ. ಸದ್ಯ ಫ್ಲಿಪ್‌ಕಾರ್ಟ್‌ ಅಲ್ಲದೆ ಅಮೆಜಾನ್, ಸ್ನ್ಯಾಪ್‌ಡೀಲ್‌ ಮತ್ತಿತರ ಕಂಪನಿಗಳೂ ಇಂತಹ ತೆರಿಗೆ ತಗಾದೆಯನ್ನು ಎದುರಿಸುತ್ತಿವೆ. ಇ-ಕಾಮರ್ಸ್ ಕಂಪನಿಗಳು ಪೂರ್ವನ್ವಯವಾಗಿ ತೆರಿಗೆ ಪಾವತಿಸಬೇಕಾಗುತ್ತದೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More