ಜನವರಿ ತಿಂಗಳಲ್ಲೂ ಶೇಕಡ ಐದರ ಗಡಿ ದಾಟಿದ ಗ್ರಾಹಕ ದರ ಹಣದುಬ್ಬರ

ಡಿಸೆಂಬರ್ ತಿಂಗಳಲ್ಲಿ ಶೇ.5.21ರಷ್ಟಿದ್ದ ಚಿಲ್ಲರೆ ಹಣದುಬ್ಬರ ಜನವರಿ ತಿಂಗಳಲ್ಲಿ ಕೊಂಚ ತಗ್ಗಿದೆ. ಆದರೆ, ಶೇ.5ರ ಗಡಿ ದಾಟಿರುವುದು ಆತಂಕಕ್ಕೆ ಎಡೆಮಾಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಮಧ್ಯಂತರ ಅವಧಿಗೆ ಶೇ.4ರ ಹಣದುಬ್ಬರ ಕಾಯ್ದುಕೊಳ್ಳುವ ಗುರಿಗಿಂತ ಹಣದುಬ್ಬರ ಬಹಳಷ್ಟು ಮೇಲೇರಿದೆ

ಜನವರಿ ತಿಂಗಳ ಚಿಲ್ಲರೆ (ಗ್ರಾಹಕ ದರ) ಹಣದುಬ್ಬರ ಕೊಂಚ ತಗ್ಗಿದೆ. ಡಿಸೆಂಬರ್ ತಿಂಗಳಲ್ಲಿ ಶೇ.5.21ಕ್ಕೇರಿ 17 ತಿಂಗಳ ಗರಿಷ್ಠ ಮಟ್ಟ ಮುಟ್ಟಿದ್ದಕ್ಕೆ ಹೋಲಿಸಿದರೆ, ಜನವರಿಯಲ್ಲಿ ಶೇ.5.07ರಷ್ಟಕ್ಕೆ ತಗ್ಗಿದೆ. ಆದರೆ, ಶೇ.5 ಗಡಿ ದಾಟಿದೆ ಎಂಬುದು ಆತಂಕಕ್ಕೆ ಎಡೆ ಮಾಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಮಧ್ಯಂತರ ಹಣದುಬ್ಬರ ಗುರಿ ಶೇ.4ರಷ್ಟಿದೆ. ಆ ನಿಗದಿತ ಗುರಿಗಿಂತ ಎತ್ತರಕ್ಕೇರಿದೆ.

ರಾಯಿಟರ್ಸ್ ನಡೆಸಿದ ಸಮೀಕ್ಷೆ ಪ್ರಕಾರ, ಹಣದುಬ್ಬರ ಶೇ.5.14ರಷ್ಟಾಗಲಿದೆ ಎಂದು ಅಂದಾಜಿಸಲಾಗಿತ್ತು. ಸೋಮವಾರ ಸಾಂಖ್ಯಿಕ ಸಚಿವಾಲಯ ಹಣದುಬ್ಬರ ಅಂಕಿ-ಅಂಶ ಬಿಡುಗಡೆ ಮಾಡಿ ಶೇ.5.07ರಷ್ಟು ಎಂದು ತಿಳಿಸಿದೆ.

ಆರ್‌ಬಿಐ ಕಳೆದ ವಾರ ನಡೆಸಿದ ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ ರೆಪೋ ದರ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರ್ಧಾರ ಕೈಗೊಂಡಿದೆ. ಹಣದುಬ್ಬರ ಏರುವ ಸಾಧ್ಯತೆ ಹಿನ್ನೆಲೆಯಲ್ಲೇ ಈ ಹಿಂದಿನ ಮೂರು ಸಭೆಗಳಲ್ಲೂ ರೆಪೋ ದರ ಯಥಾಸ್ಥಿತಿ ನಿರ್ಧಾರ ಕೈಗೊಳ್ಳಲಾಗಿದೆ.

ಜನವರಿಯಲ್ಲಿ ಆಹಾರ ದರಗಳು ಶೇ.4.70ರಷ್ಟು ಏರಿವೆ. ಡಿಸೆಂಬರ್‌ನಲ್ಲಿ ಏರಿಕೆ ಶೇ.4.96ರಷ್ಟಿತ್ತು. ತರಕಾರಿ ಬೆಲೆ ತಗ್ಗಿರುವುದರಿಂದ ಆಹಾರ ದರಗಳು ಕೊಂಚ ತಗ್ಗಿವೆ. ಡಿಸೆಂಬರ್‌ನಲ್ಲಿ ಶೇ.7.90ರಷ್ಟಿದ್ದ ಇಂಧನ ಮತ್ತು ವಿದ್ಯುತ್ ಹಣದುಬ್ಬರ ಶೇ.7.58ಕ್ಕೆ ತಗ್ಗಿದೆ. ಆದರೆ, ಕಳೆದ ತಿಂಗಳು ಶೇ.8.25ರಷ್ಟಿದ್ದ ವಸತಿ ಹಣದುಬ್ಬರ ಶೇ.8.33ಕ್ಕೆ ಏರಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಜನವರಿ-ಮಾರ್ಚ್ ತ್ರೈಮಾಸಿಕದ ಹಣದುಬ್ಬರವು ಶೇ.5.1ಕ್ಕೇರಬಹುದು ಎಂದು ಅಂದಾಜಿಸಿದೆ. ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದ ಅಂದಾಜು ಶೇ.4.6ರಷ್ಟಿತ್ತು. ಬಜೆಟ್ ಮಂಡಿಸಿದ ನಂತರ ಚಿಲ್ಲರೆ ಹಣದುಬ್ಬರ ಬರುವ ತಿಂಗಳುಗಳಲ್ಲಿ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಬಜೆಟ್‌ನಲ್ಲಿ ಕೆಲವು ಸರಕುಗಳ ಮೇಲೆ ಆಮದು ಸುಂಕ ಹೆಚ್ಚಿಸಿರುವುದು ಮತ್ತು ವಿತ್ತೀಯ ಕೊರತೆ ಪ್ರಮಾಣವನ್ನು ಶೇ.3.2ಕ್ಕೆ ಹಿಗ್ಗಿಸಿರುವುದು, ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ವಿನಿಯೋಜನೆ ಮಾಡಲು ಉದ್ದೇಶಿಸಿರುವುದು ಇದಕ್ಕೆ ಕಾರಣ. ಬಜೆಟ್ ಪ್ರಸ್ತಾಪಗಳು ಏಪ್ರಿಲ್‌ನಿಂದ ಜಾರಿಯಾಗಲಿವೆ. ಹೀಗಾಗಿ ಏಪ್ರಿಲ್- ಸೆಪ್ಟೆಂಬರ್ ಅವಧಿಯ ಹಣದುಬ್ಬರವನ್ನು ಶೇ.51-5.6ರ ಆಜುಬಾಜಿನಲ್ಲಿರಬಹುದು ಎಂದು ಆರ್‌ಬಿಐ ಅಂದಾಜಿಸಿದೆ.

ಇದನ್ನೂ ಓದಿ : ಡಿಸೆಂಬರ್ ತಿಂಗಳ ಹಣದುಬ್ಬರ ಶೇ.5.2ಕ್ಕೆ ಏರಿಕೆ, ಐಐಪಿ ಶೇ.8.4ಕ್ಕೆ ಜಿಗಿತ

ಕೈಗಾರಿಕಾ ಉತ್ಪನ್ನ ಡಿಸೆಂಬರ್ ತಿಂಗಳಲ್ಲಿ ಶೇ.7.1ಕ್ಕೆಏರಿದೆ. ರಾಯಿಟರ್ಸ್‌ ನಡೆಸಿದ ಸಮೀಕ್ಷೆ ಪ್ರಕಾರ, ಶೇ.6.2ಕ್ಕೇರಬಹುದು ಎಂದು ಅಂದಾಜಿಸಲಾಗಿತ್ತು. ಪ್ರಸಕ್ತ ವಿತ್ತೀಯ ವರ್ಷದಲ್ಲಿ ಭಾರತದ ಜಿಡಿಪಿ ಶೇ.6.5ಕ್ಕೆ ಏರುವ ಅಂದಾಜಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅಂದಾಜಿನ ಪ್ರಕಾರ, 2018ರಲ್ಲಿ ಶೇ.7.4 ಮತ್ತು 2019ರಲ್ಲಿ ಶೇ.7.8ರಷ್ಟು ಅಭಿೃವೃದ್ಧಿ ದಾಖಲಿಸಲಿದೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More