ನಿಷ್ಕ್ರಿಯ ಸಾಲ ತ್ವರಿತ ಇತ್ಯರ್ಥಕ್ಕೆ ಮಾರ್ಗಸೂಚಿ ರೂಪಿಸಿದ ಆರ್‌ಬಿಐ

ಬ್ಯಾಂಕಿಂಗ್ ವಲಯಕ್ಕೆ ಮಾರಕವಾಗಿರುವ ನಿಷ್ಕ್ರಿಯ ಸಾಲ ಮತ್ತು ಒತ್ತಡದಲ್ಲಿರುವ ಸಾಲದ ಕಾಲಮಿತಿ ಇತ್ಯರ್ಥಕ್ಕೆ ಹೊಸ ಮಾರ್ಗಸೂಚಿಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ರೂಪಿಸಿದೆ. ಬ್ಯಾಂಕುಗಳು ಆಗಾಗ್ಗೆ ಹೊರಡಿಸಿರುವ ಸಾಲ ಮರುಹೊಂದಾಣಿಕೆ ಯೋಜನೆಗಳನ್ನೆಲ್ಲ ರದ್ದು ಮಾಡಿದೆ

ನಿಷ್ಕ್ರಿಯ ಸಾಲಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಹೊಸ ಮಾರ್ಗಸೂಚಿ ರೂಪಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್, 180 ದಿನಗಳ ಕಾಲಮಿತಿ ವಿಧಿಸಿದೆ. ಫೆ.23ರಿಂದ ಪ್ರತಿವಾರವೂ ಬ್ಯಾಂಕುಗಳು ಸಾಲ ಪಾವತಿಸದ ಸುಸ್ತಿದಾರರು, ಕಂಪನಿಗಳನ್ನು ಗುರುತಿಸಿ ರಿಸರ್ವ್ ಬ್ಯಾಂಕ್‌ನ ಸಾಲ ದಾಖಲಾತಿಯಲ್ಲಿ ನಮೂದಿಸಲು ಸೂಚಿಸಿದೆ. 2,000 ಕೋಟಿ ರು. ಮೀರಿದ ಸಾಲ ಸುಸ್ತಿಯಾದ ನಂತರ 180 ದಿನಗಳಲ್ಲಿ ಇತ್ಯರ್ಥಕ್ಕೆ ಯೋಜನೆ ರೂಪಿಸಬೇಕು; ಈ ಅವಧಿಯೊಳಗೆ ಇತ್ಯರ್ಥಪಡಿಸದೆ ಹೋದರೆ ಅಂತಹ ಸಾಲಗಳನ್ನು ಮುಂದಿನ ಹದಿನೈದು ದಿನಗಳಲ್ಲಿ ದಿವಾಳಿ ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎಂದು ಸೂಚಿಸಿದೆ.

ಇದುವರೆಗಿನ ಮಾರ್ಗಸೂಚಿಗಳನ್ನು ವಾಪಸು ಪಡೆದಿರುವ ರಿಸರ್ವ್ ಬ್ಯಾಂಕ್, ಜೆಎಲ್‌ಎಫ್ (ಜಾಯಿಂಟ್ ಲೆಂಡರ್ಸ್ ಫೋರಮ್) ಸೇರಿದಂತೆ ಎಲ್ಲ ಇತ್ಯರ್ಥ ಮಾರ್ಗಗಳನ್ನು ಸ್ಥಗಿತಗೊಳಿಸಿದೆ.

ಆರ್‌ಬಿಐ ಹೊಸ ಮಾರ್ಗಸೂಚಿಯಿಂದಾಗಿ ಬ್ಯಾಂಕುಗಳು ನಿಷ್ಕ್ರಿಯ ಸಾಲ ಮರುಹೊಂದಾಣಿಕೆ ಮಾಡುವುದು, ಸಾಲ ಅವಧಿ ವಿಸ್ತರಣೆ ಮಾಡಲು ಅವಕಾಶ ನೀಡುವ ವಿವಿಧ ನಿಯಮಗಳೆಲ್ಲವೂ ರದ್ದಾಗಿವೆ. ರಿವೈಟಲೈಸಿಂಗ್ ಡಿಸ್ಟ್ರೆಸ್ ಅಸೆಟ್, ಕಾರ್ಪೊರೆಟ್ ಡೆಟ್ ರಿಸ್ಟ್ರಕ್ಚರ್ ಸ್ಕೀಮ್, ಪ್ಲೆಕ್ಸಿಬಲ್ ಸ್ಟ್ರಕ್ಚರಿಂಗ್ ಆಫ್ ಎಕ್ಸಿಸ್ಟಿಂಗ್ ಲಾಂಗ್ ಟರ್ಮ್ ಪ್ರಾಜೆಕ್ಟ್ ಲೋನ್, ಸ್ಟ್ರಾಟೆಜಿಕ್ ಡೆಟ್ ರಿಸ್ಟ್ರಕ್ಚರಿಂಗ್ ಸ್ಕೀಮ್ (ಎಸ್ಡಿಆರ್), ಸ್ಕೀಮ್ ಫಾರ್ ಸಸ್ಟೈನಬಲ್ ಸ್ಟ್ರಕ್ಚರಿಂಗ್ ಆಫ್ ಸ್ಟ್ರೆಸ್ಡ್ ಅಸೆಟ್ (ಎಸ್4ಎ) ಎಲ್ಲವನ್ನೂ ತಕ್ಷಣದಿಂದಲೇ ಹಿಂದಕ್ಕೆ ಪಡೆಯಲಾಗಿದೆ. ಹಾಗಾಗಿ, ಹೊಸ ಮಾರ್ಗಸೂಚಿ ಪ್ರಕಾರವೇ ಇತ್ಯರ್ಥಪಡಿಸಬೇಕಾಗುತ್ತದೆ.

ದಿವಾಳಿ ಸಂಹಿತೆ (2016) ಕಾಯ್ದೆ ಜಾರಿಗೆ ಬಂದಿರುವುದರಿಂದ ಒತ್ತಡದ ಸಾಲದ ಇತ್ಯರ್ಥಕ್ಕೆ ಹಾಲಿ ಇದ್ದ ಮಾರ್ಗಸೂಚಿಗಳನ್ನು ಸರಳೀಕರಿಸಿ ಸಮನ್ವಯಗೊಳಿಸುವ ಸಲುವಾಗಿ ನೂತನ ಮಾರ್ಗಸೂಚಿ ರೂಪಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.

ಕಳೆದ ವರ್ಷ ಆರ್‌ಬಿಐ ಎರಡು ಹಂತದಲ್ಲಿ 40 ನಿಷ್ಕ್ರಿಯ ಸಾಲದ ಖಾತೆಗಳಿಂದ ₹2.5 ಲಕ್ಷ ಕೋಟಿಯನ್ನು ಒತ್ತಡ ಸಾಲವೆಂದು ಗುರುತಿಸಿದ್ದು, ದಿವಾಳಿ ನ್ಯಾಯಾಲಯಕ್ಕೆ ವರ್ಗಾಯಿಸಲಿದೆ. ಆದರೆ, ಹೊಸ ಮಾರ್ಗಸೂಚಿ ಪ್ರಕಾರ, ಕಾಲಮಿತಿಯೊಳಗೆ ಸಾಲ ಇತ್ಯರ್ಥಕ್ಕೆ ಬ್ಯಾಂಕುಗಳಿಗೆ ಕಾಲಾವಕಾಶ ನೀಡಿದೆ. ಈ ಕಾಲಾವಧಿಯಲ್ಲಿ ಬ್ಯಾಂಕುಗಳು ಇತ್ಯರ್ಥಪಡಿಸಿಕೊಳ್ಳದೆ ಇದ್ದರೆ ದಿವಾಳಿ ನ್ಯಾಯಾಲಯಕ್ಕೆ ವರ್ಗಾಯಿಸಲಾಗುತ್ತದೆ. ಈಗಾಗಲೇ ದಿವಾಳಿ ನ್ಯಾಯಾಲಯಕ್ಕೆ ವರ್ಗಾಯಿಸಿರುವ ಪ್ರಕರಣಗಳಿಗೆ ಈ ಕಾಲಮಿತಿ ಅನ್ವಯ ಆಗುವುದಿಲ್ಲ ಎಂದೂ ಆರ್‌ಬಿಐ ಸ್ಪಷ್ಟಪಡಿಸಿದೆ.

2015ರ ಅಂತ್ಯದಲ್ಲಿ ಆಸ್ತಿ ಗುಣಮಟ್ಟ ಪರಾಮರ್ಶೆ ನಡೆಸಿದಾಗ ಎಲ್ಲ ಬ್ಯಾಂಕುಗಳು ಒಟ್ಟು ₹8.5 ಲಕ್ಷ ಕೋಟಿಯಷ್ಟು ಒತ್ತಡದ ಸಾಲವನ್ನು ತಮ್ಮ ಬ್ಯಾಲೆನ್ಸ್ ಶೀಟ್‌ನಲ್ಲಿ ಹೊಂದಿರುವುದು ಪತ್ತೆಯಾಗಿತ್ತು.

ಬ್ಯಾಂಕುಗಳು ಸಾಲ ಸುಸ್ತಿಯಾದ ತಕ್ಷಣದಿಂದಲೇ ಒತ್ತಡದ ಸಾಲ ಖಾತೆಯನ್ನು ಗುರುತಿಸಬೇಕು. ಇದಕ್ಕಾಗಿ ವಿಶೇಷ ನಮೂದಿತ ಖಾತೆಗಳೆಂದು ವರ್ಗೀಕರಿಸಬೇಕು. ಇವುಗಳನ್ನು 1-30 ದಿನ, 31-60 ದಿನ ಹಾಗೂ 61-90 ದಿನ ಎಂದು ಉಪ ವರ್ಗೀಕರಣ ಮಾಡಬೇಕು ಎಂದು ಆರ್‌ಬಿಐ ಮಾರ್ಗಸೂಚಿಯಲ್ಲಿ ತಿಳಿಸಿದೆ.

₹5 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಸಾಲವು ಸುಸ್ತಿಯಾದಾಗ ಸೆಂಟ್ರಲ್ ರೆಪಾಟಿಟರಿ ಆಫ್ ಇನ್ಫರ್ಮೆಷನ್ ಆನ್ ಲಾರ್ಜ್ ಕ್ರೆಡಿಟ್ಸ್‌ಗೆ (ಸಿಆರ್‌ಐಎಲ್‌ಸಿ) ಬ್ಯಾಂಕುಗಳು ಖಾತೆ ಮತ್ತು ವಿಶೇಷ ನಮೂದಿತ ವರ್ಗೀಕರಣದ ಮಾಹಿತಿಯನ್ನು ನೀಡಬೇಕು.

ಇದನ್ನೂ ಓದಿ : ಆರ್‌ಬಿಐ ಬಡ್ಡಿದರ ಇಳಿಸದಿದ್ದರೂ 2016ಕ್ಕೂ ಹಿಂದಿನ ಮನೆಸಾಲದ ಬಡ್ಡಿದರ ತಗ್ಗಲಿದೆ!

ಇನ್ನು ಮುಂದೆ, ಏ.1ರಿಂದ ಪ್ರತಿ ತಿಂಗಳೂ ಸಿಆರ್‌ಐಎಲ್‌ಸಿಗೆ ಮಾಹಿತಿಯನ್ನು ಬ್ಯಾಂಕುಗಳು ಸಲ್ಲಿಸಬೇಕು. ಜೊತೆಗೆ, ಪ್ರತಿ ಶುಕ್ರವಾರ ಸುಸ್ತಿದಾರರ ಸಾಲದ ಮೊತ್ತವನ್ನು ಸಿಆರ್‌ಐಎಲ್‌ಸಿಗೆ ಸಲ್ಲಿಸಬೇಕು. ಮೊದಲ ವಾರದ ವರದಿಯನ್ನು ಫೆ.23ರಂದು ಸಲ್ಲಿಸಬೇಕು.

ವಂಚನೆ ಮಾಡಿದವರು, ಹಣ ದುರ್ಬಳಕೆ ಮಾಡಿಕೊಂಡವರು, ಇಚ್ಛಾವರ್ತಿ ಸುಸ್ತಿದಾರರು ನೂತನ ಮಾರ್ಗಸೂಚಿಗಳ ಪ್ರಕಾರ ಸಾಲ ಇತ್ಯರ್ಥಕ್ಕೆ ಅರ್ಹರಾಗಿರುವುದಿಲ್ಲ. ಒಂದು ವೇಳೆ, ಅಂತಹ ಹಾಲಿ ಪ್ರವರ್ತಕರನ್ನು ಬದಲಾಯಿಸಿ ಹೊಸ ಪ್ರವರ್ತಕರು ಬಂದಿದ್ದರೆ, ಅಂತಹ ಪ್ರಕರಣಗಳಲ್ಲಿ ಷರತ್ತುಬದ್ಧವಾಗಿ ಇತ್ಯರ್ಥ ಪಡಿಸಬಹುದು ಎಂದು ಆರ್‌ಬಿಐ ಮಾರ್ಗಸೂಚಿಯಲ್ಲಿ ತಿಳಿಸಿದೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More