ಪಿಎಫ್ ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಳ್ಳಲು ಷೇರು ಮಾರಿದ ಇಪಿಎಫ್ಒ

ಹಣಕಾಸು ಮಾರುಕಟ್ಟೆಯಲ್ಲಿ ಬಹುತೇಕ ಬಡ್ಡಿದರಗಳು ಶೇ.7.5ಕ್ಕಿಂತ ಕೆಳಕ್ಕೆ ಇಳಿದಿವೆ. ಆ ಲೆಕ್ಕಕ್ಕೆ ನೋಡಿದರೆ, ಪಿಎಫ್ ಬಡ್ಡಿದರವೂ ಇಳಿಯಬೇಕಿತ್ತು. ಆದರೆ, ಮುಂದಿನ ವರ್ಷ ಚುನಾವಣೆ ಎದುರಿಸಲಿರುವ ಕೇಂದ್ರ ಸರ್ಕಾರ ಸದ್ಯಕ್ಕೆ ಇಪಿಎಫ್ ಮೇಲಿನ ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಳ್ಳಲಿದೆ

ಪ್ರಸಕ್ತ ಸಾಲಿನಲ್ಲಿ ಭವಿಷ್ಯನಿಧಿ (ಪಿಎಫ್) ಮೇಲಿನ ಬಡ್ಡಿದರವನ್ನು ಶೇ.8.65ರಷ್ಟು ಕಾಯ್ದುಕೊಳ್ಳಲು ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ) ನಿರ್ಧರಿಸಿದೆ. ಸದ್ಯಕ್ಕೆ ಹಣಕಾಸು ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಬಡ್ಡಿ ಗಳಿಸುತ್ತಿರುವ ಯೋಜನೆ ಎಂದರೆ ಪಿಎಫ್ ಮಾತ್ರ‍!

ಪಿಪಿಎಫ್ ಮತ್ತು ಜಿಪಿಎಫ್ ಸಹ ಶೇ.7.6ರಷ್ಟು ಬಡ್ಡಿ ನೀಡುತ್ತಿವೆ. ಬ್ಯಾಂಕುಗಳ ಠೇವಣಿಗಳ ಮೇಲಿನ ಬಡ್ಡಿದರವೂ ಶೇ.7.5ಕ್ಕಿಂತಲೂ ಕೆಳಕ್ಕೆ ಇಳಿದಿದೆ. ಆದರೆ, ಇಪಿಎಎಫ್ಒ ಪಿಎಫ್ ಮೇಲಿನ ಬಡ್ಡಿದರವನ್ನು ಮಾತ್ರ ಕಳೆದ ವರ್ಷ ನೀಡಿದಷ್ಟೇ ಅಂದರೆ, ಶೇ.8.65ರಷ್ಟು ನೀಡಲು ನಿರ್ಧರಿಸಿದೆ.

ಹಣಕಾಸು ಇಲಾಖೆಯು ಬಡ್ಡಿದರ ಕಡಿತ ಮಾಡಲು ಸೂಚಿಸಿದ್ದರೂ, ಕಾರ್ಮಿಕ ಇಲಾಖೆಯು ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಳ್ಳುವ ಪ್ರಸ್ತಾಪ ಸಲ್ಲಿಸಿದೆ. 2019ರಲ್ಲಿ ಸಾರ್ವತ್ರಿಕ ಚುನಾವಣೆ ಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದೆ.

ಆದರೆ, ಇಪಿಎಫ್ಒ ವಿವಿಧ ಬಾಂಡುಗಳಲ್ಲಿ ಹೂಡಿರುವ ಠೇವಣಿಗಳಿಂದ ಬಂದಿರುವ ಗಳಿಕೆಯಿಂದ ಶೇ.8.65ರಷ್ಟು ಬಡ್ಡಿ ನೀಡಲು ಸಾಧ್ಯವಿಲ್ಲ. ಹೀಗಾಗಿ ಷೇರುಪೇಟೆಯಲ್ಲಿ ಹೂಡಿಕೆ ಮಾಡಿದ್ದರಿಂದ ಬಂದಿರುವ ಲಾಭವನ್ನು ನಗದೀಕರಿಸಲು ಮುಂದಾಗಿದೆ.

ಇಪಿಎಫ್ಒ 2015ರಲ್ಲಿ ಹೂಡಿಕೆ ಮಾಡಿದ್ದ ಷೇರುಗಳ ಮೌಲ್ಯ ಹೆಚ್ಚಿದೆ. ಅಲ್ಲದೆ, ಈ ಷೇರುಗಳಿಂದ ವಾರ್ಷಿಕ ಲಾಭಾಂಶವೂ ಬಂದಿದೆ. ಈಗ ಹೂಡಿಕೆ ಮಾಡಿರುವ ಪೈಕಿ ₹1,050 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ. ಇದರಿಂದ 2017-18ನೇ ಸಾಲಿನಲ್ಲೂ ಪಿಎಫ್ ಸದಸ್ಯರಿಗೆ ಶೇ.8.65ರಷ್ಟು ಬಡ್ಡಿ ನೀಡಲು ಸಾಧ್ಯವಾಗಲಿದೆ.

2015ರಲ್ಲಿ ಮಾಡಿದ ಹೂಡಿಕೆಗೆ ಬಂದ ಲಾಭಾಂಶ ಮತ್ತು ಷೇರುಗಳ ಮಾರಾಟದಿಂದ ₹1053.75 ಕೋಟಿ ಸಂಸ್ಥೆಗೆ ಬಂದಿದೆ ಎಂದು ಇಪಿಎಫ್ಒ ಹೂಡಿಕೆ ಸಮಿತಿ ಸದಸ್ಯ ಪ್ರಭಾಕರ್ ಬಿ ತಿಳಿಸಿರುವುದಾಗಿ ‘ಮಿಂಟ್’ ವರದಿ ಮಾಡಿದೆ.

ಈ ವರ್ಷ ಇಪಿಎಫ್ಒ ಶೇ.85ರಷ್ಟನ್ನು ಡೆಟ್ ಮಾರ್ಕೆಟ್‌ನಲ್ಲಿ ಮತ್ತು ಶೇ.15ರಷ್ಟನ್ನು ಈಕ್ವಿಟಿಯಲ್ಲಿ ಹೂಡಿಕೆ ಮಾಡಿದೆ. 2016-17ರಲ್ಲಿ ಶೇ.90ರಷ್ಟು ಡೆಟ್ ಮಾರ್ಕೆಟ್ ಮತ್ತು ಶೇ.10ರಷ್ಟು ಈಕ್ವಿಟಿಯಲ್ಲಿ ಹೂಡಿಕೆ ಮಾಡಿತ್ತು. ಡೆಟ್ ಮಾರ್ಕೆಟ್ ಹೂಡಿಕೆ ಎಂದರೆ ಸಾಲಪತ್ರಗಳು, ಸರ್ಕಾರಿ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಈ ಹೂಡಿಕೆಯ ಮೇಲಿನ ಗಳಿಕೆಯು ಶೇ.6.5ರಿಂದ 7.5ರಷ್ಟು ಇದೆ. ಆದರೆ, ಈಕ್ವಿಟಿ ಅಂದರೆ, ಷೇರುಗಳ ಮೇಲಿನ ಹೂಡಿಕೆಗೆ ಗಳಿಕೆ ಹೆಚ್ಚಿದೆ. ಜನವರಿ ಅಂತ್ಯದೊಳಗೆ ಶೇ.16ರಷ್ಟು ಲಾಭ ನಿರೀಕ್ಷಿಸಲಾಗಿದೆ. 2015ರ ಆಗಸ್ಟ್‌ನಿಂದ ಇಪಿಎಫ್ಒ ಈಕ್ವಿಟಿಯಲ್ಲಿ ಹೂಡಿಕೆ ಮಾಡುತ್ತಿದೆ. ಇದುವರೆಗೆ ₹44,000 ಕೋಟಿ ಹೂಡಿಕೆ ಮಾಡಿದೆ. ಸುಮಾರು ಐದು ಕೋಟಿ ಕಾರ್ಮಿಕ ಸದಸ್ಯರ ₹11 ಲಕ್ಷ ಕೋಟಿಯನ್ನು ಇಪಿಎಫ್ಒ ನಿರ್ವಹಿಸುತ್ತಿದೆ.

ಇದನ್ನೂ ಓದಿ : ನಿಷ್ಕ್ರಿಯ ಸಾಲ ತ್ವರಿತ ಇತ್ಯರ್ಥಕ್ಕೆ ಮಾರ್ಗಸೂಚಿ ರೂಪಿಸಿದ ಆರ್‌ಬಿಐ

ಪಿಎಫ್ ಸದಸ್ಯರಿಗೆ ಹೆಚ್ಚಿನ ಬಡ್ಡಿದರ ನೀಡಬೇಕಾದರೆ, ಹೂಡಿಕೆ ವಿಧಾನಗಳನ್ನು ಮಾರ್ಪಡಿಸಿಕೊಳ್ಳಬೇಕು, ಷೇರುಪೇಟೆಯಲ್ಲಿ ಹೂಡಿಕೆ ಪ್ರಮಾಣವನ್ನು ಶೇ.25ಕ್ಕಿಂತ ಹೆಚ್ಚಿಸಬೇಕು ಎಂಬ ವಾದ ಇದೆ. ಈ ಬಗ್ಗೆ ಸರ್ಕಾರ ಕೂಡ ಪರಿಶೀಲನೆ ನಡೆಸುತ್ತಿದೆ. ಷೇರುಪೇಟೆಯಲ್ಲಿ ಹೂಡಿಕೆ ಮಾಡುವ ಆಯ್ಕೆಯನ್ನು ಪಿಎಫ್ ಸದಸ್ಯರಿಗೆ ನೀಡುವ ಪ್ರಸ್ತಾಪವು ಇಪಿಎಫ್ಒ ಮುಂದೆ ಇದೆ. ಆದರೆ, ಷೇರು ಮಾರುಕಟ್ಟೆಯಲ್ಲಿನ ಅನಿಶ್ಚಿತತೆಯಿಂದ ನಷ್ಟ ಆಗಬಹುದೆಂಬ ಆತಂಕದಿಂದ ಕಾರ್ಮಿಕ ಸಂಘಟನೆಗಳು ಆರಂಭದಲ್ಲಿ ವಿರೋಧಿಸಿದ್ದವು.

ಆದರೆ, ಇಫಿಎಫ್ಒ ಹೂಡಿಕೆಯನ್ನು ಪರಿಣಿತ, ವೃತ್ತಿಪರ ಫಂಡ್ ಮ್ಯಾನೇಜರ್‌ಗಳು ನಿರ್ವಹಿಸುತ್ತಾರೆ. ಹೀಗಾಗಿ, ಷೇರುಪೇಟೆಯಲ್ಲಿನ ಹೂಡಿಕೆಯಿಂದ ನಷ್ಟವಾಗುತ್ತದೆಂಬ ಆತಂಕ ಬೇಡ ಎಂದು ಮನವರಿಕೆ ಮಾಡಿಕೊಡಲಾಗಿದೆ. ಆದರೆ, ಈಗಲೂ ಶೇ.25ರಷ್ಟು ಹೂಡಿಕೆ ಮಾಡುವುದಕ್ಕೆ ಕಾರ್ಮಿಕ ಸಂಘಟನೆಗಳ ಸಹಮತ ಇಲ್ಲ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More