ಪಿಎನ್‌ಬಿ ಹಗರಣ; ಸಂಸತ್ ಮುಂದೆ ಧರಣಿ ಮಾಡಲಿದ್ದಾರೆ ಬ್ಯಾಂಕ್ ಸಿಬ್ಬಂದಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ ತಪ್ಪಿತಸ್ಥ ಉನ್ನತ ಅಧಿಕಾರಿಗಳನ್ನು ರಕ್ಷಿಸಿ, ಕೆಳಹಂತದ ಸಿಬ್ಬಂದಿ ಮೇಲೆ ತಪ್ಪು ಹೊರೆಸುವ ಪ್ರಯತ್ನದ ವಿರುದ್ಧ ಬ್ಯಾಂಕ್ ಉದ್ಯೋಗಿ ಸಂಘಟನೆಗಳ ಒಕ್ಕೂಟ ದನಿ ಎತ್ತಿದೆ. ತಮ್ಮ ದನಿಯನ್ನು ಆಳುವವರಿಗೆ ಮುಟ್ಟಿಸಲು ಮಾ.೨೧ರಂದು ಸಂಸತ್ ಮುಂದೆ ಧರಣಿ ನಡೆಸಲಿದೆ

ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ₹12800 ಕೋಟಿ ಹಗರಣ ನಡೆಸಿ, ದೇಶ ಬಿಟ್ಟು ಓಡಿ ಹೋಗಿರುವ ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿಯನ್ನು ವಾಪಸ್‌ ಕರೆಸಬೇಕು ಮತ್ತು ಹಗರಣದ ಬಗ್ಗೆ ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸುವಂತೆ ಆಗ್ರಹಿಸಲು ಯುನೈಟೆಟ್ ಫೋರಮ್ ಆಫ್ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ (ಯುಎಫ್ ಬಿಯು) ಸಂಸತ್ ಭವನದ ಮುಂದೆ ಮಾರ್ಚ್ 21ರಂದು ಧರಣಿ ನಡೆಸಲಿದೆ.

‘ಜನರ ಹಣವನ್ನು ಜನರ ಕಲ್ಯಾಣಕ್ಕೆ ಬಳಸಬೇಕು, ಖಾಸಗಿ ಕಾರ್ಪೋರೆಟ್‌ಗಳು ಲೂಟಿ ಮಾಡುವುದಕ್ಕಲ್ಲ’ ಎಂಬ ಘೋಷಣೆಯೊಂದಿಗೆ ಯುಎಫ್‌ಬಿಯು ಹೋರಾಟ ನಡೆಸಲಿದೆ. ಸಂಸತ್ ಭವನದ ಮುಂದೆ ನಡೆಯುವ ಧರಣಿಗೆ ಎಲ್ಲಾ ಒಂಭತ್ತು ಸಂಘಟನೆಗಳು ಬೆಂಬಲ ನೀಡಿವೆ. ಹಗರಣದಲ್ಲಿ ನೇರವಾಗಿ ಭಾಗಿಯಾದವರು ಮತ್ತು ಹಗರಣಕ್ಕೆ ಜವಾಬ್ದಾರರಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಡಲಿದೆ.

ಈ ಹಗರಣದಲ್ಲಿ ಭಾಗಿಯಾಗಿರುವ ಬ್ಯಾಂಕ್ ನ ಉನ್ನತ ಹುದ್ದೆಯಲ್ಲಿ ಇರುವವರನ್ನು ರಕ್ಷಿಸಲು ಕೆಳಮಟ್ಟದ ಸಿಬ್ಬಂದಿಯನ್ನು ಬಲಿಪಶು ಮಾಡಬಾರದು. ತನಿಖೆ ವ್ಯಾಪ್ತಿಯಿಂದ ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು ಹೊರಗಿಡಬಾರದು ಮತ್ತು ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಯಬೇಕು ಎಂಬುದು ಪ್ರಮುಖ ಬೇಡಿಕೆಗಳಾಗಿವೆ.

“ಈ ಹಗರಣಕ್ಕೆಲ್ಲ ಬ್ಯಾಂಕ್ ನ ಕೆಳಹಂತದ ಸಿಬ್ಬಂದಿಯೇ ಕಾರಣ ಎಂಬಂತೆ ಅವರನ್ನು ಬಲಿಪಶು ಮಾಡದಂತೆ ನೋಡಿಕೊಳ್ಳಬೇಕು. ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿಯನ್ನು ಭಾರತಕ್ಕೆ ವಾಪಸ್‌ ಕರೆತರಬೇಕು, ಇಬ್ಬರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ನಾವು ವಿತ್ತ ಸಚಿವರಿಗೂ ಪತ್ರ ಬರೆಯಲಾಗಿದೆ,” ಎಂದು ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್ (ಎಐಬಿಇಎ) ಪ್ರಧಾನ ಕಾರ್ಯದರ್ಶಿ ಸಿ ಎಚ್ ವೆಂಕಟಾಚಲಂ ಹೇಳಿದ್ದಾರೆ.

“ಈ ಹಗರಣ ಮುಂದಿಟ್ಟುಕೊಂಡು ಸಾರ್ವಜನಿಕ ವಲಯದ ಬ್ಯಾಂಕುಗಳೆಲ್ಲವೂ ಸರಿಯಿಲ್ಲ ಎಂಬಂತೆ ಬಿಂಬಿಸುವ ಪ್ರಯತ್ನ ನಡೆದಿದೆ. ಆದ್ದರಿಂದ ಸಾಮಾನ್ಯ ಜನರಲ್ಲಿ, ಮುಖ್ಯವಾಗಿ ಗ್ರಾಹಕರಲ್ಲಿ ವಿಶ್ವಾಸ ಮೂಡಿಸಲು ಎಲ್ಲಾ ಭಾಗೀದಾರರು ಸಭೆ ನಡೆಸಬೇಕು, ತಪ್ಪು ಕಲ್ಪನೆಯನ್ನು ದೂರ ಮಾಡಬೇಕು,” ಎಂದೂ ವೆಂಕಟಾಚಲಂ ಸಲಹೆ ಮಾಡಿದ್ದಾರೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳ ತಪ್ಪು ಅಭಿಪ್ರಾಯ ಮೂಡಿರುವ ಹಿನ್ನೆಲೆಯಲ್ಲಿ ಮಾರ್ಚ್ 15ರಂದು ಕರೆದಿರುವ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರವನ್ನು ಹಿಂದಕ್ಕೆ ಪಡೆಯಲಾಗಿದೆ.

ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ತಮ್ಮ ಬ್ಯಾಂಕ್ ಒಪ್ಪಂದ ಪತ್ರ ಪಡೆದು ಬೇರೆ ಬೇರೆ ಬ್ಯಾಂಕುಗಳಿಂದ ಸಾಲ ಪಡೆದು ವಂಚಿಸಿದ್ದಾರೆಂದು ಜನವರಿಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಆಡಳಿತ ಮಂಡಳಿಯು ಷೇರು ವಿನಿಮಯ ಕೇಂದ್ರಕ್ಕೆ ಮಾಹಿತಿ ನೀಡಿತ್ತು. ವಂಚನೆಯಾಗಿರುವ ಮೊತ್ತ ₹11400 ಕೋಟಿ ಎಂದು ತಿಳಿಸಿತ್ತು. ನಂತರದ ಬೆಳವಣಿಗೆಯಲ್ಲಿ ಈ ಮೊತ್ತ ₹12800 ಕೋಟಿಗೆ ಏರಿದೆ.

ಇದನ್ನೂ ಓದಿ : ಐಸಿಐಸಿಐ ಸಿಇಒ ಚಂದಾ, ಆಕ್ಸಿಸ್ ಎಂಡಿ ಶಿಖಾ ವಿಚಾರಣೆಗೆ ಮುಂದಾದ ಎಸ್ಎಫ್ಐಒ

ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ತಮ್ಮ ಬ್ಯಾಂಕ್ ಸಿಬ್ಬಂದಿ ನೆರವಿನಿಂದ ನಕಲಿ ಒಪ್ಪಂದ ಪತ್ರ ಪಡೆದು ವಿವಿಧ ಬ್ಯಾಂಕುಗಳಿಂದ ಸಾಲ ಪಡೆದು ವಂಚಿಸಿದ್ದಾರೆ. 2011ರಿಂದಲೂ ಈ ರೀತಿ ವಂಚಿಸುತ್ತಾ ಬರಲಾಗಿದೆ. ವಿದೇಶಗಳಲ್ಲಿರುವ ಶಾಖೆಗಳಲ್ಲಿ ನಡೆಯುವ ವಹಿವಾಟು ಸ್ವಿಫ್ಟ್ ವ್ಯವಸ್ಥೆಯಡಿ ನಡೆಯುತ್ತದೆ. ಕೋರ್ ಬ್ಯಾಂಕಿಂಗ್ ಸಿಸ್ಟಮ್ ಗೆ ಈ ಸಾಫ್ಟವೇರ್ ಸಂಯೋಜನೆಗೊಂಡಿಲ್ಲದ ಕಾರಣ ಹಗರಣ ಬೆಳಕಿಗೆ ಬಂದಿರಲಿಲ್ಲ ಎಂದು ಪಿಎನ್‌ಬಿ, ಸಿಬಿಐ ನೀಡಿದ ದೂರಿನಲ್ಲಿ ವಿವರಿಸಿತ್ತು. ನಂತರ ಸಿಬಿಐ ಮತ್ತು ಜಾರಿನಿರ್ದೇಶನಾಲಯ ತನಿಖೆ ನಡೆಸುತ್ತಿದ್ದು, ಪಿಎನ್‌ಬಿಯ ಹಲವು ಸಿಬ್ಬಂದಿಯನ್ನು ಬಂಧಿಸಲಾಗಿದೆ. ಮೆಹುಲ್ ಚೊಕ್ಸಿಯ ಗೀತಾಂಜಲಿ ಜೆಮ್ಸ್ ಕಂಪನಿಯ ಹಲವರನ್ನು ಬಂಧಿಸಲಾಗಿದೆ.

ಭಾರಿ ವಂಚನೆ ಪ್ರಕರಣಗಳ ತನಿಖಾ ಸಂಸ್ಥೆ (ಎಸ್ಎಫ್ಐಒ) ವಿಚಾರಣೆಗೆ ಹಾಜರಾಗುವಂತೆ ಐಸಿಐಸಿಐ ಸಿಇಒ ಚಂದಾ ಕೊಚ್ಚಾರ್ ಮತ್ತು ಆಕ್ಸಿಸ್ ಬ್ಯಾಂಕ್ ಎಂಡಿ ಶಿಖಾ ಶರ್ಮ ಅವರಿಗೆ ಸಮನ್ಸ್ ನೀಡಿದೆ. ಹಗರಣ ಹೊರಬಿದ್ದ ನಂತರ ಸತತ ಕುಸಿದಿದ್ದ ಬ್ಯಾಂಕುಗಳ ಷೇರುಗಳು ಈ ಬೆಳವಣಿಗೆ ನಂತರ ತೀವ್ರವಾಗಿ ಕುಸಿದಿವೆ. ವರ್ಷದ ಕನಿಷ್ಠ ಮಟ್ಟಕ್ಕೆ ಇಳಿದಿವೆ.

ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಅಕಾಲದಲ್ಲಿ ರಾಜಿನಾಮೆ ನೀಡುತ್ತಿರುವುದೇಕೆ?
ಭಾರತೀಯ ಬ್ಯಾಂಕಿಂಗ್ ಉದ್ಯಮದಲ್ಲಿ ಮಹಿಳೆಯರ ಯುಗ ಅಂತ್ಯವಾಗುತ್ತಾ ಬಂತೆ?
ಐಸಿಐಸಿಐ ಬ್ಯಾಂಕ್‌ಗೆ ಸಂದೀಪ್ ಭಕ್ಷಿ ಹೊಸ ಸಿಒಒ; ಚಂದಾಗೆ ಬಹುತೇಕ ವಿದಾಯ!
Editor’s Pick More