ಮಿನಿಮಮ್ ಬ್ಯಾಲೆನ್ಸ್ ಪೆನಾಲ್ಟಿಯನ್ನು ಶೇ.75ರಷ್ಟು ತಗ್ಗಿಸಿದ ಎಸ್‌ಬಿಐ

ತನ್ನ ಒಂದು ತ್ರೈಮಾಸಿಕದ ಲಾಭಕ್ಕಿಂತಲೂ ಮಿನಿಮಮ್ ಬ್ಯಾಲೆನ್ಸ್ ಪೆನಾಲ್ಟಿಯಿಂದಲೇ ಹೆಚ್ಚು ಆದಾಯ ಗಳಿಸಿದ್ದ ಮಾಹಿತಿ ಹೊರಬಿದ್ದ ನಂತರ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈಗ ಪೆನಾಲ್ಟಿಯನ್ನು ಶೇ.75ರಷ್ಟು ತಗ್ಗಿಸಿದೆ. ಏಪ್ರಿಲ್ 1ರಿಂದ ಇದು ಜಾರಿ ಆಗಲಿದೆ

ದೇಶದ ಅತಿದೊಡ್ಡ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಕನಿಷ್ಠ ಬಾಕಿ ದಂಡಶುಲ್ಕವನ್ನು (ಮಿನಿಮಮ್ ಬ್ಯಾಲೆನ್ಸ್ ಪೆನಾಲ್ಟಿ) ಶೇ.75ರಷ್ಟು ತಗ್ಗಿಸಿದೆ. ಪರಿಷ್ಕೃತ ದರವು 2018ರ ಏ.1ರಿಂದ ಜಾರಿಯಾಗಲಿದೆ. ಎಸ್‌ಬಿಐ ದಂಡಶುಲ್ಕವನ್ನು ತಗ್ಗಿಸಿರುವುದು ಸುಮಾರು 25 ಕೋಟಿ ಗ್ರಾಹಕರಿಗೆ ಅನುಕೂಲವಾಗಲಿದೆ.

ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ಬಾಕಿಯನ್ನು ಕಡ್ಡಾಯವಾಗಿ ಉಳಿಸಲೇಬೇಕು. ಕನಿಷ್ಠ ಬಾಕಿ ಉಳಿಸದ ಗ್ರಾಹಕರಿಗೆ ದಂಡಶುಲ್ಕ ವಿಧಿಸಲಾಗುತ್ತದೆ. ಪ್ರತಿಯೊಂದು ಬ್ಯಾಂಕುಗಳೂ ದಂಡ ಶುಲ್ಕ ವಿಧಿಸುತ್ತವೆ. ಖಾಸಗಿ ಬ್ಯಾಂಕುಗಳಲ್ಲಿ ದಂಡ ಶುಲ್ಕ ಪ್ರಮಾಣ ಹೆಚ್ಚಿದೆ.

ಮೆಟ್ರೊ ಮತ್ತು ನಗರ ಪ್ರದೇಶಗಳಲ್ಲಿ ಕನಿಷ್ಠ ಬಾಕಿ ಉಳಿಸದ ಖಾತೆದಾರರಿಗೆ ಇದುವರೆಗೆ ಪ್ರತಿ ತಿಂಗಳಿಗೆ ವಿಧಿಸುತ್ತಿದ್ದ ಶುಲ್ಕವನ್ನು 50 ರುಪಾಯಿಯಿಂದ 15 ರುಪಾಯಿಗೆ ತಗ್ಗಿಸಲಾಗಿದೆ. ಅರೆನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ 40 ರುಪಾಯಿಯಿಂದ 12 ರುಪಾಯಿಗೆ ಇಳಿಸಲಾಗಿದೆ. ಈ ದಂಡ ಶುಲ್ಕದ ಮೇಲೆ ಜಿಎಸ್ಟಿ ತೆರಿಗೆಯನ್ನು ಹಾಕಲಾಗುತ್ತದೆ.

ಎಂಟು ತಿಂಗಳ ಅವಧಿಯಲ್ಲಿ ಎಸ್‌ಬಿಐ ಕನಿಷ್ಠ ಬಾಕಿ ದಂಡಶುಲ್ಕವಾಗಿ 1,771 ಕೋಟಿ ವಸೂಲು ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಈ ಮೊತ್ತವು ಜುಲೈ-ಸೆಪ್ಟೆಂಬರ್ ತ್ರೈಮಾಸಿಕದ ನಿವ್ವಳ ಲಾಭ 1,581 ಕೋಟಿ ರುಪಾಯಿಗಿಂತ ಹೆಚ್ಚಿತ್ತು. ಏಪ್ರಿಲ್-ಸೆಪ್ಟೆಂಬರ್ ನಡುವೆ ಗಳಿಸಿದ ನಿವ್ವಳ ಲಾಭ ಅರ್ಧಕ್ಕಿತಲೂ ಹೆಚ್ಚಿತ್ತು. ಈ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.

ಅಕ್ಟೋಬರ್ ತಿಂಗಳಲ್ಲಿ ಎಸ್‌ಬಿಐ ಕನಿಷ್ಠ ಬಾಕಿ ಉಳಿಸದ ಖಾತೆದಾರರಿಗೆ ವಿಧಿಸುತ್ತಿದ್ದ ದಂಡ ವನ್ನು ಶೇ.20-50ರಷ್ಟು ಇಳಿಸಿತ್ತು. ಈ ಮೊದಲು ಮೆಟ್ರೊ ಮತ್ತು ನಗರ ಪ್ರದೇಶದ ಗ್ರಾಹಕರಿಗೆ 40ರಿಂದ 100 ರುಪಾಯಿ ದಂಡಶುಲ್ಕ ವಿಧಿಸಲಾಗುತ್ತಿತ್ತು. ಇದನ್ನು 30-50ಕ್ಕೆ ತಗ್ಗಿಸಲಾಗಿತ್ತು. ಅರೆನಗರ ಮತ್ತು ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ವಿಧಿಸುತ್ತಿದ್ದ ದಂಡ ಶುಲ್ಕವನ್ನು 25-75 ರುಪಾಯಿಯಿಂದ 20-40 ರುಪಾಯಿಗೆ ಇಲಿಸಲಾಗಿತ್ತು.

ಆರು ವರ್ಷಗಳ ಕಾಲ ಎಸ್‌ಬಿಐ ಕನಿಷ್ಠ ಬಾಕಿ ಉಳಿಸದ ಗ್ರಾಹಕರಿಗೆ ದಂಡಶುಲ್ಕ ವಿಧಿಸಿರಲಿಲ್ಲ. 2017ರ ಏಪ್ರಿಲ್‌ನಿಂದ ಮತ್ತೆ ದಂಡ ಶುಲ್ಕ ವಿಧಿಸಲಾರಂಭಿಸಿತ್ತು. ಜನಧನ್ ಖಾತೆಗಳು, ಮೂಲ ಉಳಿತಾಯ ಬ್ಯಾಂಕ್ ಠೇವಣಿ (ಬಿಎಸ್ಬಿಡಿ) ಖಾತೆಗಳು, ಪಿಂಚಿಣಿದಾರರ ಖಾತೆಗಳು, ಕಲ್ಯಾಣಯೋಜನೆಗಳ ಫಲಾನುಭವಿಗಳ ಖಾತೆಗಳು ಹಾಗೂ ಕಿರಿಯರ ಖಾತೆಗಳಿಗೆ ಈಗಲೂ ಕನಿಷ್ಠ ಬಾಕಿ ದಂಡ ಶುಲ್ಕ ವಿಧಿಸುತ್ತಿಲ್ಲ.

"ಯಾವಾಗಲೂ ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅವರ ನಿರೀಕ್ಷೆ ಮೀರಿ ಸೇವೆ ಒದಗಿಸುವುದು ನಮ್ಮ ಗುರಿ. ಗ್ರಾಹಕರು ತಮ್ಮ ಸಾಮಾನ್ಯ ಬ್ಯಾಂಕ್ ಖಾತೆಯನ್ನು ಬಿಎಸ್ಬಿಡಿ ಖಾತೆಗೆ ವರ್ಗಾಹಿಸಿಕೊಳ್ಳಲು ಅವಕಾಶ ಇದೆ, ಈ ಖಾತೆಗಳಿಗೆ ದಂಡ ಶುಲ್ಕ ವಿಧಿಸುವುದಿಲ್ಲ,” ಎಂದು ಎಸ್‌ಬಿಐ ವ್ಯವಸ್ಥಾಪಕ ನಿರ್ದೇಶಕ ಪಿ ಕೆ ಗುಪ್ತಾ ಹೇಳಿದ್ದಾರೆ.

ಇದನ್ನೂ ಓದಿ : ಭಾರಿ ದಂಡ ಶುಲ್ಕ ವಿಧಿಸಿ ಗ್ರಾಹಕರನ್ನು ವಂಚಿಸುತ್ತಿವೆಯೇ ಬ್ಯಾಂಕುಗಳು?

ಎಸ್‌ಬಿಐ ಒಟ್ಟು 41 ಕೋಟಿ ಉಳಿತಾಯ ಖಾತೆಗಳನ್ನು ಹೊಂದಿದೆ. ಪ್ರಧಾನಮಂತ್ರಿ ಜನಧನ್ ಯೋಜನೆ ಖಾತೆಗಳು ಹಾಗೂ ಬಿಎಸ್ಬಿಬಿಡಿ, ಪಿಂಚಣಿದಾರರು, ಕಿರಿಯರ ಮತ್ತು ಕಲ್ಯಾಣ ಯೋಜನೆ ಫಲಾನುಭವಿಗಳ ಖಾತೆಗಳು 16 ಕೋಟಿ ಇದ್ದು, ಸಾಮಾನ್ಯ ಖಾತೆಗಳು 25 ಕೋಟಿ ಇವೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More