ಮಿಧಾನಿ, ಐಸಿಐಸಿಐ ಸೆಕ್ಯುರಿಟೀಸ್ ನೀರಸ ಲಿಸ್ಟಿಂಗ್, ಏರುಹಾದಿಯಲ್ಲಿ ಪೇಟೆ 

ಷೇರುಪೇಟೆಗೆ ಸಾಲು ಸಾಲು ಐಪಿಒಗಳು ದಾಳಿ ಇಟ್ಟಿವೆ. ಹೂಡಿಕೆದಾರರಿಗೆ ಐಪಿಒಗಳ ಬಗ್ಗೆ ನಿರಾಸಕ್ತಿ ಮೂಡಿದೆ. ಇತ್ತೀಚೆಗೆ ಎಚ್ಎಎಲ್ ಮತ್ತು ಭಾರತ್ ಡೈನಾಮಿಕ್ಸ್ ನೀರಸ ಲಿಸ್ಟಿಂಗ್ ಆಗಿದ್ದವು. ಬುಧವಾರ ಲಿಸ್ಟಾದ ಮಿಧಾನಿ ಮತ್ತು ಐಸಿಐಸಿಐ ಸೆಕ್ಯುರಿಟೀಸ್ ಸಹ ಅದೇ ಹಾದಿಯಲ್ಲಿ ಸಾಗಿವೆ!

ಬುಧವಾರ ಐಸಿಐಸಿಐ ಸೆಕ್ಯೂರಿಟೀಸ್ ಮತ್ತು ಮಿಶ್ರಧಾತು ನಿಗಮ (ಮಿಧಾನಿ) ನ್ಯಾಷನಲ್ ಸ್ಟಾಕ್ ಎಕ್ಸ್ಚೆಂಚ್ ನಲ್ಲಿ ನೀರಸವಾಗಿ ಲಿಸ್ಟಾದವು. ಒಟ್ಟು ಮೌಲ್ಯ ಮತ್ತು ದರ ನಿಗದಿ ಕುರಿತಂತೆ ತಪ್ಪು ಮಾಹಿತಿ ನೀಡಿದ ವಿವಾದದೊಂದಿಗೆ ಮಾರುಕಟ್ಟೆ ಪ್ರವೇಶಿಸಿದ ಐಸಿಐಸಿಐ ಸೆಕ್ಯುರಿಟೀಸ್ ಬಗ್ಗೆ ಸಣ್ಣ ಹೂಡಿಕೆದಾರರು ಹೆಚ್ಚಿನ ಆಸಕ್ತಿ ತೋರಿಸಿರಲಿಲ್ಲ. ದರವೂ ಮಿತಿ ಮೀರಿ ನಿಗದಿ ಮಾಡಲಾಗಿತ್ತು ಎಂಬುದು ಅದಕ್ಕೆ ಕಾರಣವಾಗಿತ್ತು. ಹೀಗಾಗಿ ಶೇ.13ರಷ್ಟು ರಿಯಾಯ್ತಿಯೊಂದಿಗೆ ಲಿಸ್ಟಾಗಿದೆ. ಐಪಿಒ ದರ 530 ರುಪಾಯಿ ನಿಗದಿ ಮಾಡಲಾಗಿತ್ತು. ಹೂಡಿಕೆದಾರರು ನಿರಾಸಕ್ತಿಯಿಂದಾಗಿ 453 ರುಪಾಯಿಗೆ ಲಿಸ್ಟಾಗಿದೆ.

ಮಿಶ್ರಧಾತು ನಿಗಮ (ಮಿಧಾನಿ) ಸಹ ಶೇ.3ರಷ್ಟು ರಿಯಾಯ್ತಿಯೊಂದಿಗೆ ಲಿಸ್ಟಾಗಿದೆ. 90 ರುಪಾಯಿ ಐಪಿಒ ದರ ನಿಗದಿ ಮಾಡಲಾಗಿತ್ತು. 87 ರುಪಾಯಿಗೆ ಲಿಸ್ಟಾಗಿದೆ. ಇತ್ತೀಚೆಗೆ ಎಚ್ಎಎಲ್ ಮತ್ತು ಭಾರತ್ ಡೈನಾಮಿಕ್ಸ್ ಸಹ ರಿಯಾಯ್ತಿದರದಲ್ಲಿ ಲಿಸ್ಟಾಗಿದ್ದವು. ಮಿಧಾನಿ, ಎಚ್ಎಎಲ್ ಮತ್ತು ಭಾರತ್ ಡೈನಾಮಿಕ್ಸ್ ಸಾರ್ವಜನಿಕ ವಲಯದ ಕಂಪನಿಗಳಾಗಿವೆ.

ಆರಂಭದಲ್ಲಿ ಏರಿಳಿದ ಸೆನ್ಸೆಕ್ಸ್ 120 ಅಂಶ ಏರಿಕೆಯೊಂದಿಗೆ ವಹಿವಾಟು ನಡೆಸುತ್ತಿದೆ. 33450ರ ಮಟ್ಟಕ್ಕೆ ಸಮೀಪಿಸಿದೆ. 25 ಅಂಶ ಏರಿಕೆಯೊಂದಿಗೆ ನಿಫ್ಟಿ 10270 ಮಟ್ಟ ಕಾಯ್ದುಕೊಂಡಿದೆ. ನಿಫ್ಟಿ ರಿಯಾಲ್ಟಿ ಶೇ.2.22ರಷ್ಟು ಜಿಗಿದಿದೆ. ಯೂನಿಟೆಕ್ ಶೇ.20ರಷ್ಟು ಏರಿದೆ.ಇಂಡಿಯಾ ಬುಲ್ಸ್ ರಿಯಲ್ ಎಸ್ಟೇಟ್, ಪ್ರೆಸ್ಟೀಸ್ ಎಸ್ಟೇಜ್, ಶೋಭಾ, ಡೆಲ್ಟಾ ಕಾರ್ಪ್, ಡಿಎಲ್ಎಫ್ ಶೇ.2ರಿಂದ 4ರಷ್ಟು ಏರಿವೆ.

ಮಾರ್ಚ್ ತಿಂಗಳಲ್ಲಿ ಉತ್ತಮ ಮಾರಾಟವಾದ ಕಾರಣ ನಿಫ್ಟಿ ಆಟೋ ಸೂಚ್ಯಂಕ ಸತತ ಮೂರನೇ ದಿನವೂ ಏರುಹಾದಿಯಲ್ಲಿದೆ. ಟಾಟಾ ಮೋಟಾರ್ಸ್ ಶೇ.6ರಷ್ಟು ಏರಿದೆ. ಐಷರ್ ಮೋಟಾರ್ಸ್, ಬೋಷ್, ಮಹಿಂದ್ರಾ ಅಂಡ್ ಮಹಿಂದ್ರಾ, ಅಶೋಕ್ ಲೇಲ್ಯಾಂಡ್, ಮಾರುತಿ ಸುಜುಕಿ, ಮದರ್ಸನ್ ಸುಮಿ, ಭಾರತ್ ಫೋರ್ಜ್, ಹಿರೋಕಾರ್ಪ್ ಶೇ.1ರಿಂದ 4ರಷ್ಟು ಜಿಗಿದಿವೆ.

ದಿನದ ವಹಿವಾಟಿನಲ್ಲಿ ಮೆಟಲ್ ಷೇರುಗಳಿಗೂ ಹೊಳಪು ಬಂದಿದೆ. ನಿಫ್ಟಿ ಮೆಟಲ್ ಶೇ.1ರಷ್ಟು ಏರಿದೆ. ಮುಖ್ಯವಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಲುಮಿನಿಯಂ ದರ ಏರುತ್ತಿರುವುದರಿಂದ ನ್ಯಾಷನಲ್ ಅಲುಮಿನಿಯಂ ಕಂಪನಿ ಶೇ.4ರಷ್ಟು ಏರಿದೆ. ದೇಶೀಯವಾಗಿ ಶೇ.80ರಷ್ಟು ಅಲುಮಿನಿಯಂ ಅನ್ನು ನ್ಯಾಷನಲ್ ಅಲುಮಿನಿಯಂ ಕಂಪನಿ ಪೂರೈಸುತ್ತಿದೆ. ಜಿಂದಾಲ್ ಸ್ಟೈನ್ಲೆಸ್, ಎಂಒಐಎಲ್, ವೆಲ್ಸ್ಪನ್ ಕಾರ್ಪ್, ವೇದಾಂತ, ಜೆಎಸ್ಪಿಎಲ್, ಟಾಟಾ ಸ್ಟೀಲ್, ಎಪಿಎಲ್ ಅಪೊಲೋ ಶೇ.1ರಿಂದ 3ರಷ್ಟು ಏರಿವೆ.

ವಿವಾದ, ಹಗರಣಗಳ ನಡುವೆಯೂ ಬುಧವಾರ ಸಾರ್ವಜನಿಕ ವಲಯದ ಬ್ಯಾಂಕು ಮತ್ತು ಖಾಸಗಿ ಬ್ಯಾಂಕುಗಳ ಖರೀದಿ ತೀವ್ರವಾಗಿದೆ. ನಿಫ್ಟಿ ಪಿಎಸ್ ಯು ಶೇ.1ರಷ್ಟು, ನಿಫ್ಟಿ ಪ್ರೈವೆಟ್ ಬ್ಯಾಂಕ್ ಸೂಚ್ಯಂಕ ಶೇ.0.50ರಷ್ಟು ಏರಿವೆ. ಓರಿಯಂಟಲ್ ಬ್ಯಾಂಕ್ ಶೇ.2ರಷ್ಟು ಏರಿದೆ. ಐಡಿಬಿಐ ಬ್ಯಾಂಕ್, ಪಿಎನ್ಬಿ, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಸ್ಬಿಐ, ಸಿಂಡಿಕೇಟ್ ಬ್ಯಾಂಕ್ ಶೇ.1ರಿಂದ 2ರಷ್ಟು ಏರಿವೆ. ಕರ್ನಾಟಕ ಬ್ಯಾಂಕ್ ಶೇ.3ರಷ್ಟು ಏರಿದೆ. ಫೆಡರಲ್ ಬ್ಯಾಂಕ್, ಯೆಸ್ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಐಡಿಎಫ್ಸಿ ಬ್ಯಾಂಕ್ ಶೇ.1ರಿಂದ 2ರಷ್ಟು ಏರಿವೆ.

ನಿಫ್ಟಿ ಐಟಿ ಸೂಚ್ಯಂಕ ಶೇ.0.50ರಷ್ಟು ಕುಸಿದಿದೆ. ಒರಾಕಲ್ ಫಿನ್ ಸರ್ವೀಸ್, ಟೆಕ್ ಮಹಿಂದ್ರಾ, ಇನ್ಫೊಸಿಸ್, ಎಚ್ಸಿಎಲ್ ಟೆಕ್, ಮೈಂಡ್ ಟ್ರೀ ಶೇ.1ರಷ್ಟು ಕುಸಿದಿವೆ.

ಇದನ್ನೂ ಓದಿ : 2018ರಲ್ಲಿ ನೀವು ಹೂಡಿಕೆ ಮಾಡಬಹುದಾದ ಹತ್ತು ಮ್ಯೂಚುವಲ್ ಫಂಡ್‌ಗಳಿವು

ದಿನದ ವಹಿವಾಟಿನಲ್ಲಿ ಕೆಐಒಸಿಎಲ್ ಶೇ.15ರಷ್ಟು ಜಿಗಿದಿದೆ. ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಶೇ.35ರಷ್ಟು ಏರಿಕೆ ದಾಖಲಿಸಿದೆ. ಮೋತಿಲಾಲ್ ಓಸ್ವಾಲ್ ಶೇ.4ರಷ್ಟು ಏರಿದೆ. ಜಿಎನ್ಎ ಆಕ್ಸಲ್ ಶೇ.8, ವಿ ಮಾರ್ಟ್ ರೀಟೇಲ್ ಶೇ. 7, ಕೆಡಿಡಿಎಲ್, ನೆಲ್ಕೊ ಲಿಮಿಟೆಡ್, ಕದ್ರಾ ಕನ್ಸ್ಟ್ರಕ್ಷನ್ , ಬಜಾಜ್ ಎಲೆಕ್ಟ್ರಿಕಲ್ಸ್ ಶೇ.5ರಷ್ಟು, ಇಂಟರ್ ಗ್ಲೋಬಲ್ ಏವಿಯೇಷನ್ ಶೇ.3, ಲಕ್ಷ್ಮಿ ಮೆಷಿನ್ಸ್ ಶೇ.2 ಏರಿ ವರ್ಷದ ಗರಿಷ್ಠ ಮಟ್ಟಕ್ಕೇರಿವೆ.

ಚಿನ್ನ 130 ರುಪಾಯಿ ಏರಿ 30680 ರುಪಾಯಿಯಲ್ಲಿ ವಹಿವಾಟಾಗುತ್ತಿದೆ. ಬೆಳ್ಳಿ 38315ರಲ್ಲಿ ಸ್ಥಿರವಾಗಿ ವಹಿವಾಟಾಗುತ್ತಿದೆ. ಕಚ್ಚಾ ತೈಲ ಶೇ.0.15ರಷ್ಟು ಇಳಿದಿದೆ. ಡಾಲರ್ ವಿರುದ್ಧ ರುಪಾಯಿ 64.95ರಲ್ಲಿ ವಹಿವಾಟಾಗುತ್ತಿದೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More