ಚೀನಾ ವ್ಯಾಪಾರ ಸಮರ ಸಿದ್ಧತೆಗೆ ತಲ್ಲಣಗೊಂಡ ಜಾಗತಿಕ ಷೇರುಪೇಟೆಗಳು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಮದು ಸುಂಕ ಹೇರುವ ನಿರ್ಧಾರಕ್ಕೆ ಪ್ರತಿಯಾಗಿ ಚೀನಾ ಕೂಡ ಅಮೆರಿಕದ 50 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳ ಮೇಲೆ ಸುಂಕ ಹೇರುವುದಾಗಿ ಪ್ರಕಟಿಸಿದೆ. ತತ್ಪರಿಣಾಮ ಜಾಗತಿಕ ಷೇರುಪೇಟೆಗಳು ತಲ್ಲಣಗೊಂಡಿವೆ. ದೇಶೀಯ ಪೇಟೆ ತ್ವರಿತ ಕುಸಿದಿದೆ

ಸತತ ಎರಡು ದಿನದ ಏರು ಹಾದಿಯನ್ನು ದಿನದ ಆರಂಭದಲ್ಲಿ ಕಾಯ್ದುಕೊಂಡಿದ್ದ ಷೇರುಪೇಟೆ ಚೀನಾ ವ್ಯಾಪಾರ ಸಮರ ಸಿದ್ಧತೆ ಪ್ರಕಟವಾಗುತ್ತಿದ್ದಂತೆ ತೀವ್ರವಾಗಿ ಕುಸಿಯಿತು. ದಿನದ ಆರಂಭದಲ್ಲಿ 200 ಅಂಶದಷ್ಟು ಏರಿದ್ದ ಸೆನ್ಸೆಕ್ಸ್ 351.56 ಅಂಶ ಕುಸಿದು 33,019ಕ್ಕೆ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 116ಅಂಶ ಕುಸಿದು 10128ಕ್ಕೆ ಇಳಿದಿದೆ. ದಿನದ ಆರಂಭದಲ್ಲಿ ಐಟಿ ಸೂಚ್ಯಂಕ ಹೊರತಾಗಿ ಬಹುತೇಕ ಎಲ್ಲಾ ಸೂಚ್ಯಂಕಗಳು ಏರುಹಾದಿಯಲ್ಲಿ ಸಾಗಿದ್ದವು. ಚೀನಾ ವ್ಯಾಪಾರ ಸಮರ ಸಿದ್ಧತೆ ಪ್ರಕಟವಾಗುತ್ತಿದ್ದಂತೆ ತೀವ್ರ ಮಾರಾಟ ಒತ್ತಡ ಕಂಡು ಬಂತು. ಹೀಗಾಗಿ ಖರೀದಿಸುವರೇ ಇಲ್ಲದೇ ತ್ವರಿತವಾಗಿ ಪೇಟೆ ಕುಸಿಯಿತು.

ಅಮೆರಿಕ- ಚೀನಾ ನಡುವಿನ ವ್ಯಾಪಾರ ಸಮರವು ಜಾಗತಿಕ ವ್ಯಾಪಾರ ಸಮರವಾಗಿ ವಿಸ್ತರಿಸಿಕೊಳ್ಳುವುದಕ್ಕೆ ಹೆಚ್ಚಿನ ಸಮಯ ಬೇಕಿಲ್ಲ. ಹೀಗಾಗಿ ಬುಧವಾರದ ಕುಸಿತವು ಜಾಗತಿಕ ಷೇರುಪೇಟೆಗಳು ಮತ್ತೊಂದು ಸುತ್ತು ಇಳಿಜಾರಿನಲ್ಲಿ ಸಾಗಲು ಮುನ್ಸೂಚನೆಯಾಗಿದೆ. ಬರುವ ದಿನಗಳಲ್ಲಿ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ.

ಮೆಟಲ್ ವಲಯದ ಷೇರುಗಳು ತ್ವರಿತವಾಗಿ ಕುಸಿದವು. ಅಮೆರಿಕವು ಕಬ್ಬಿಣ ಮತ್ತು ಅಲುಮಿನಿಯಂ ಮೇಲೆ ಸುಂಕ ಹೇರುವ ನಿರ್ಧಾರ ಪ್ರಕಟಿಸಿದ ನಂತರ ಕುಸಿತದ ಹಾದಿಯಲ್ಲೇ ಇರುವ ಮೆಟಲ್ ವಲಯದ ಷೇರುಗಳು ಚೇತರಿಸಿಕೊಳ್ಳುವ ಮುನ್ನ ಮತ್ತೆ ಕುಸಿದಿವೆ. ಜೆಎಸ್ಪಿಎಲ್ ಶೇ.4.50ರಷ್ಟು ಕುಸಿಯಿತು. ಸೇಲ್, ಹಿಂಡಾಲ್ಕೊ ಇಂಡಸ್ಟ್ರೀಸ್, ಟಾಟಾ ಸ್ಟೀಲ್, ವೇದಾಂತ, ವೆಲ್ಸ್ಪನ್ ಕಾರ್ಪ್, ಜೆಎಸ್ ಡಬ್ಲ್ಯೂ ಶೇ.3-4ರಷ್ಟು ಕುಸಿದಿವೆ. ಎನ್ಎಂಡಿಸಿ, ಹಿಂದ್ ಕಾಪರ್, ಕೋಲ್ ಇಂಡಿಯಾ, ಹಿಂದೂಸ್ತಾನ್ ಜಿಂಕ್ ಶೇ.1-2ರಷ್ಟು ಕುಸಿದಿವೆ. ಆದರೆ, ಜಾಗತಿಕ ಪೇಟೆಯಲ್ಲಿ ಅಲುಮಿನಿಯಂ ದರ ತ್ವರಿತಗತಿಯಲ್ಲಿ ಏರುತ್ತಿರುವುದರಿಂದ ನಾಲ್ಕೊ, ಎಪಿಎಲ್ ಅಪೊಲೋ ಮತ್ತು ಎಂಒಐಎಲ್ ಶೇ.1ರಿಂದ3ರಷ್ಟು ಏರಿದವು.

ನಿಫ್ಟಿ ಕಮಾಡಿಟೀಸ್ ಸೂಚ್ಯಂಕ ಶೇ.2ರಷ್ಟು ಕುಸಿಯಿತು. ಬಹುತೇಕ ಕಬ್ಬಿಣ, ಉಕ್ಕು, ಸೀಮೆಂಟ್, ಉಷ್ಣವಿದ್ಯುತ್ ಉತ್ಪಾದನಾ ಕಂಪನಿಗಳು ಕುಸಿದವು. ಶ್ರೀ ಸಿಮೆಂಟ್ಸ್, ಅಲ್ಟ್ರಾಟೆಕ್ ಸಿಮೆಂಟ್ಸ್, ಅಂಬುಜ ಸಿಮೆಂಟ್ಸ್, ಎಸಿಸಿ ಶೇ.2-3ರಷ್ಟು ಕುಸಿದಿವೆ. ಆಯಿಲ್ ಇಂಡಿಯಾ, ಇಂಡಿಯನ್ ಆಯಿಲ್ ಕಾರ್ಪೊರೆಷನ್, ಎನ್ಟಿಪಿಸಿ, ಟಾಟಾ ಪವರ್ ಕೋಲ್ ಇಂಡಿಯಾ, ಟಾಟಾ ಕೆಮಿಕಲ್ಸ್, ಒಎನ್ಜಿಸಿ, ಪಿಡಿಲೈಟ್ ಇಂಡಸ್ಟ್ರೀಸ್, ರಿಲಯನ್ಸ್ ಇಂಡಸ್ಟ್ರೀಸ್ ಶೇ.1-2ರಷ್ಟು ಕುಸಿದಿವೆ. ನಿಫ್ಟಿ ಮೆಡಿಯಾ, ನಿಫ್ಟಿ ಪಿಎಸ್ ಯು ಬ್ಯಾಂಕ್, ನಿಫ್ಟಿ ಇನ್ಫ್ರಾ, ನಿಫ್ಟಿ ಪಿಎಸ್ಇ, ನಿಫ್ಟಿ ಬ್ಯಾಂಕ್, ನಿಫ್ಟಿ ಪ್ರೈವೆಟ್ ಬ್ಯಾಂಕ್, ನಿಫ್ಟಿ ಫಿನ್ ಸರ್ವೀಸ್, ನಿಫ್ಟಿ ಮಿಡ್ ಕ್ಯಾಪ್, ನಿಫ್ಟಿ ಸರ್ವಿಸ್ ಸೆಕ್ಟರ್, ನಿಫ್ಟಿ ಸಿಪಿಎಸ್ಇ, ನಿಫ್ಟಿ ರಿಯಾಲ್ಟಿ, ನಿಫ್ಟಿ ಫಾರ್ಮ, ನಿಫ್ಟಿ ಎನರ್ಜಿ, ನಿಫ್ಟಿ ಐಟಿ ಸೂಚ್ಯಂಕಗಳು ಶೇ.1-2ರಷ್ಟು ಕುಸಿದಿವೆ.

ಮಾರುಕಟ್ಟೆ ಕುಸಿತದ ನಡುವೆಯೂ ಕೆಐಒಸಿಎಲ್ ಶೇ.5ರಷ್ಟು ಏರಿದೆ. ಬೆಳಗಿನ ವಹಿವಾಟಿನಲ್ಲಿ ಶೇ.15ರಷ್ಟು ಏರಿಕೆ ದಾಖಲಿಸಿತ್ತು. ಜಾಗ್ವಾರ್, ಲ್ಯಾಂಡ್ ರೋವರ್ ವಾಹನಗಳ ಮಾರಾಟ ನಿರೀಕ್ಷೆ ಮೀರಿ ಏರಿರುವ ಕಾರಣ ಟಾಟಾ ಮೋಟಾರ್ಸ್ ಶೇ.4ರಷ್ಟು ಏರಿಕೆ ದಾಖಲಿಸಿದೆ. ಕಳೆದ ವಾರದ ವಹಿವಾಟಿನಲ್ಲಿ ವರ್ಷದ ಕನಿಷ್ಠ ಮಟ್ಟಕ್ಕೆ ತಲುಪಿತ್ತು. ಈಗ ಚೇತರಿಕೆ ಹಾದಿಗೆ ಸರಿದಿದೆ. ಶ್ರೀರಾಮ್ ಸಿಟಿ ಯೂನಿಯನ್, ಐಷರ್ ಮೋಟಾರ್ಸ್, ಬೋಶ್ ಶೇ.3-4ರಷ್ಟು ಏರಿವೆ. ವಿಮಾರ್ಟ್ ರಿಟೇಲ್ ಶೇ.11ರಷ್ಟು ಏರಿದೆ.

ಇದನ್ನೂ ಓದಿ : ಎಲ್ಟಿಸಿಜಿ ತೆರಿಗೆ ಜಾರಿ; ಮ್ಯೂಚುವಲ್ ಫಂಡ್ ಹೂಡಿಕೆ ಮೇಲಿನ ಪರಿಣಾಮವೇನು?

ಮಿಡ್ ಕ್ಯಾಪ್ ಸೂಚ್ಯಂಕ 225 ರಷ್ಟು ಕುಸಿದಿದೆ. ಗ್ಯಾಮನ್ ಇನ್ಫ್ರಾ, ಪಿಸಿ ಜುವೆಲ್ಲರ್, ಜಯಪ್ರಕಾಶ್ ಅಸೋಸಿಯೇಟ್ಸ್, ಎಚ್ಸಿಸಿ, ಸುನಿಲ್ ಹೈಟೆಕ್, ಎಚ್ಡಿಐಎಲ್, ಡಿಎಲ್ಎಫ್, ಯೂನಿಯನ್ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್, ಅಶೋಕ್ ಲೇಲ್ಯಾಂಡ್ ಶೇ.5ರಷ್ಟು ಕುಸಿದಿವೆ. ಎಚ್ಡಿಎಫ್ಸಿ ಬ್ಯಾಂಕ್, ಎಲ್ ಅಂಡ್ ಟಿ, ಎಚ್ಡಿಎಫ್ಸಿ, ಐಒಸಿ, ಟೈಟಾನ್ ಕಂಪನಿ, ಇನ್ಫೊಸಿಸ್, ಬಜಾಬ್ ಫಿನ್ ಸರ್ವಿಸ್, ಕೊಟಕ್ ಮಹಿಂದ್ರ ಬ್ಯಾಂಕ್, ಗ್ರಾಸಿಮ್, ಯುಪಿಎಲ್, ಯೆಸ್ ಬ್ಯಾಂಕ್ ಮತ್ತು ಎಸ್ಬಿಐ ಶೇ.4ರಷ್ಟು ಕುಸಿದವು.

ಜಾಗತಿಕ ಷೇಟೆಪೇಟೆ ಕುಸಿಯುತ್ತಿದ್ದಂತೆ ಚಿನಿವಾರ ಪೇಟೆಗೆ ಹೊಳಪು ಬಂತು. ಚಿನ್ನದ ಬೆಲೆ 150 ರುಪಾಯಿ, ಬೆಳ್ಳಿ 233 ರುಪಾಯಿ ಏರಿದವು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಶೇ.1.25ರಷ್ಟು ಕುಸಿಯಿತು. ರುಪಾಯಿ ಸಹ ಡಾಲರ್ ವಿರುದ್ಧ 14 ಪೈಸೆ ಕುಸಿದು 65.15ಕ್ಕೆ ಇಳಿಯಿತು.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More