ಸತತ ನಾಲ್ಕನೇ ದಿನ ಏರುಹಾದಿಯಲ್ಲಿ ಪೇಟೆ, ಆಕ್ಸಿಸ್ ಬ್ಯಾಂಕ್ ಶೇ.5 ಜಿಗಿತ

ಆಮದು ಸುಂಕ ಹೇರುವ ವಿಷಯದಲ್ಲಿ ಚೀನಾ ಮೃಧು ಧೋರಣೆ ತಳೆದ ಕಾರಣ ಜಾಗತಿಕ ವ್ಯಾಪಾರ ಸಮರದ ಒತ್ತಡದಿಂದ ಮುಕ್ತವಾದ ಜಾಗತಿಕ ಪೇಟೆಗಳು ಏರುಹಾದಿಯಲ್ಲಿ ಸಾಗಿವೆ. ದೇಶೀಯ ಪೇಟೆ ಸತತ ನಾಲ್ಕನೇ ದಿವೂ ಏರುಹಾದಿಯಲ್ಲಿದೆ. ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಜಿಗಿದಿವೆ

ಜಾಗತಿಕ ವ್ಯಾಪಾರ ಸಮರದ ಒತ್ತಡ ತಗ್ಗಿದ್ದರಿಂದ ಜಾಗತಿಕ ಪೇಟೆಗಳು ಏರುದಾರಿಯಲ್ಲಿ ಸಾಗಿದವು. ಅದೇ ಹಾದಿಯಲ್ಲಿ ದೇಶಿಯ ಪೇಟೆಯೂ ಸಾಗಿತು. ಸತತ ನಾಲ್ಕನೇ ವಹಿವಾಟು ದಿನದಲ್ಲೂ ಏರಿಕೆಯನ್ನು ಕಾಯ್ದುಕೊಂಡಿತು. ನಿಫ್ಟಿ 10400 ಮಟ್ಟವನ್ನು ದಾಟಿತು. ಮಾರ್ಚ್ 14ರ ನಂತರ ಇದೇ ಮೊದಲ ಬಾರಿಗೆ 10,400ರ ಮಟ್ಟ ದಾಟಿದೆ. ದಿನದ ವಹಿವಾಟಿನಲ್ಲಿ 150 ಅಂಶದಷ್ಟು ಏರಿದ್ದ ಸೆನ್ಸೆಕ್ಸ್ ಅಂತ್ಯಕ್ಕೆ 91.71 ಅಂಶ ಏರಿ 33,880ಕ್ಕೆ ವಹಿವಾಟು ಅಂತ್ಯಗೊಳಿಸಿತು. ನಿಫ್ಟಿ 23 ಅಂಶ ಏರಿ 10,402ಕ್ಕೆ ಸ್ಥಿರಗೊಂಡಿತು.

ನಿಷ್ಕ್ರಿಯ ಸಾಲದ ಪ್ರಮಾಣ ಗಣನೀಯವಾಗಿ ಹೆಚ್ಚಿರುವ ಹಿನ್ನೆಲೆಯಲ್ಲಿ ಶಿಖಾ ಶರ್ಮಾ ಅವರನ್ನು ನಾಲ್ಕನೇ ಅವಧಿಗೆ ಮುಂದುವರಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಆಕ್ಸಿಸ್ ಆಡಳಿತ ಮಂಡಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿತ್ತು. ಈಗ ಖುದ್ದು ಶಿಖಾ ಶರ್ಮಾ ಅವರೇ ತಾವು ಅವಧಿಗೆ ಮುನ್ನ ಹುದ್ದೆ ತೊರೆಯುವುದಾಗಿ ಆಡಳಿತ ಮಂಡಳಿಗೆ ತಿಳಿಸಿದ್ದಾರೆ. ಹೀಗಾಗಿ ಆಕ್ಸಿಸ್ ಬ್ಯಾಂಕ್ ಶೇ.5.17ರಷ್ಟು ಏರಿತು.

ಐಸಿಐಸಿಐ ಬ್ಯಾಂಕ್ ಸಿಇಒ ಚಂದಾ ಕೊಚ್ಚಾರ್ ಅವರು ಹುದ್ದೆ ತೊರೆಯುವ ನಿರೀಕ್ಷೆಯಲ್ಲಿ ಐಸಿಐಸಿಐ ಬ್ಯಾಂಕ್ ಷೇರು ಶೇ.3ರಷ್ಟು ಏರಿತು. 4.47 ಕೋಟಿಯಷ್ಟು ಷೇರುಗಳು ವಹಿವಾಟಾದವು. ಐಸಿಐಸಿಐ ಬ್ಯಾಂಕ್ ಆರಂಭದಲ್ಲಿ ವಿಡಿಯೋಕಾನ್ ಕಂಪನಿಗೆ ಸಾಲ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಂತ್ರ ತನಿಖೆ ನಡೆಸಲು ಆಡಳಿತ ಮಂಡಳಿ ನಿರಾಕರಿಸಿದೆ. ಆದರೆ, ಬ್ಯಾಂಕಿನ ಕೆಲವು ಸ್ವತಂತ್ರ ನಿರ್ದೇಶಕರು ಸ್ವತಂತ್ರ ತನಿಖೆಯ ಪರ ಇದ್ದಾರೆ. ಸಾರ್ವಜನಿಕ ವಲಯದಲ್ಲೂ ಸ್ವತಂತ್ರ ತನಿಖೆಗೆ ಒತ್ತಾಯ ಕೇಳಿಬಂದಿದೆ. ಹೀಗಾಗಿ ಚಂದಾ ಕೊಚ್ಚಾರ್ ತಮ್ಮ ಹುದ್ದೆ ತೊರೆಯುವ ಸಾಧ್ಯತೆ ಇದೆ.

ಖಾಸಗಿ ವಲಯದ ಬ್ಯಾಂಕ್ ಗಳ ಪೈಕಿ ಫೆಡರಲ್ ಬ್ಯಾಂಕ್, ಐಡಿಎಫ್ಸಿ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಕೊಟಕ್ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್ ಶೇ.0.50-1.50ರಷ್ಟು ಕುಸಿದವು. ಯೆಸ್ ಬ್ಯಾಂಕ್, ಆರ್ಬಿಎಲ್ ಬ್ಯಾಂಕ್ ಶೇ.1ರಷ್ಟು ಏರಿದವು. ಸಾರ್ವಜನಿಕ ವಲಯದ ಓರಿಯಂಟಲ್ ಬ್ಯಾಂಕ್, ಎಸ್ಬಿಐ, ಇಂಡಿಯನ್ ಬ್ಯಾಂಕ್, ಐಡಿಬಿಐ ಬ್ಯಾಂಕ್, ಕೆನರಾ ಬ್ಯಾಂಕ್, ಅಲಹಾಬಾದ್ ಬ್ಯಾಂಕ್, ಶೇ.1-2ರಷ್ಟು ಏರಿದವು. ಯೂನಿಯನ್ ಬ್ಯಾಂಕ್, ಆಂಧ್ರ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಸಿಂಡಿಕೇಟ್ ಬ್ಯಾಂಕ್, ಪಿಎನ್ಬಿ ಶೇ.1ರಷ್ಟು ಕುಸಿದವು.

ಜಾಗತಿಕ ವ್ಯಾಪಾರ ಸಮರದ ಒತ್ತಡ ತಗ್ಗಿಸಿದ ಚೀನಾದ ನಿಲುವಿನಿಂದ ಮೆಟಲ್ ವಲಯದ ಷೇರುಗಳು ಜಿಗಿದವು. ನಿಫ್ಟಿ ಮೆಟಲ್ ಸೂಚ್ಯಂಕ ಶೇ.2ರಷ್ಟು ಏರಿತು. ಹಿಂಡಾಲ್ಕೊ, ಎನ್ಎಂಡಿಸಿ, ನಾಲ್ಕೊ, ಟಾಟಾ ಸ್ಟೀಲ್, ವೆಲ್ಸ್ಪನ್ ಕಾರ್ಪ್, ಕೋಲ್ ಇಂಡಿಯಾ, ಎಪಿಎಲ್ ಅಪಲೊ ಶೇ.2-4ರಷ್ಟು ಜಿಗಿದವು. ಹಿಂದ್ ಕಾಪರ್, ಸೇಲ್, ಎಂಒಐಎಲ್, ವೇದಾಂತ, ಜೆಎಸ್ಪಿಎಲ್, ಜೆಎಸ್ ಡಬ್ಲ್ಯೂ ಸ್ಟೀಲ್ ಶೇ.1-2ರಷ್ಟು ಏರಿದವು.

ನಿಫ್ಟಿ ಇನ್ಫ್ರಾ, ನಿಫ್ಟಿ ವ್ಯಾಲ್ಯೂ 20, ನಿಫ್ಟಿ ರಿಯಾಲ್ಟಿ, ನಿಫ್ಟಿ ಕಮಾಡಿಟೀಸ್, ನಿಫ್ಟಿ ಬ್ಯಾಂಕ್, ನಿಫ್ಟಿ ಪಿಎಸ್ಇ, ನಿಫ್ಟಿ ಐಟಿ, ನಿಫ್ಟಿ ಮಿಡ್ಕ್ಯಾಪ್ 50, ನಿಫ್ಟಿ ಎನರ್ಜಿ, ನಿಫ್ಟಿ ಸರ್ವೀಸ್ ಸೆಕ್ಟರ್ ಶೇ.0.25ರಿಂದ 1ರಷ್ಟು ಏರಿದವು.

ದಿನದ ವಹಿವಾಟಿನಲ್ಲಿ ಒಬೆರಾಯ್ ರಿಯಾಲ್ಟಿ ಶೇ.6ರಷ್ಟು ಏರಿತು. ಐಐಎಫ್ಎಲ್ ಶೇ.5.50, ಆಕ್ಸಿಸ್ ಬ್ಯಾಂಕ್ ಶೇ.5.17, ಹಿಂಡಾಲ್ಕೊ, ನ್ಯಾಷನಲ್ ಮಿನಲರ್ ಡೆವಲಪ್ಮೆಂಟ್ ಕಾರ್ಪ್ ಶೇ.3-4ರಷ್ಟು ಏರಿವೆ. ವಾಕ್ರಂಗೀ ಶೇ.5ರಷ್ಟು ಕುಸಿದಿದೆ. ಬಜಾಜ್ ಫಿನ್ ಸರ್ವೀಸ್, ಗೋದ್ರೇಜ್ ಆಗ್ರೊವೆಟ್, ಇಂದ್ರಪ್ರಸ್ಥ ಗ್ಯಾಸ್, ಕ್ವೆಸ್ ಕಾರ್ಪ್ ಶೇ.2ರಿಂದ 4ರಷ್ಟು ಕುಸಿದವು.

ಇದನ್ನೂ ಓದಿ : ಎಲ್ಟಿಸಿಜಿ ತೆರಿಗೆ ಜಾರಿ; ಮ್ಯೂಚುವಲ್ ಫಂಡ್ ಹೂಡಿಕೆ ಮೇಲಿನ ಪರಿಣಾಮವೇನು?

ಚಿನ್ನ 60 ರುಪಾಯಿ ಏರಿ, 30,624ರಲ್ಲಿ ವಹಿವಾಟು ನಡೆಸಿದೆ. ಬೆಳ್ಳಿ 65 ರು. ಏರಿದೆ. ಕಚ್ಚಾತೈಲ ಶೇ.2ರಷ್ಟು ಜಿಗಿದಿದೆ. ಡಾಲರ್ ವಿರುದ್ಧ ರುಪಾಯಿ ಬಹುತೇಕ ಸ್ಥಿರವಾಗಿದೆ.

ಈಗ ಜಾಗತಿಕ ವ್ಯಾಪಾರ ಸಮರ ಬದಿಗೆ ಸರಿದಿದೆ. ಈಗ ಮಾರುಕಟ್ಟೆ ಮುಂದೆ ಕಾರ್ಪೊರೆಟ್‌ಗಳ ನಾಲ್ಕನೇ ತ್ರೈಮಾಸಿಕದ ಫಲಿತಾಂಶ ಇದೆ. ಈ ವಾರದಲ್ಲಿ ಟೆಕ್ ದೈತ್ಯ ಇನ್ಫೊಸಿಸ್ ಫಲಿತಾಂಶ ಪ್ರಕಟಿಸಲಿದೆ. ಅಪನಗದೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆ ಜಾರಿಯಿಂದಾಗಿದ್ದ ಆರ್ಥಿಕ ಹಿಂಜರಿತವನ್ನು ದಾಟಿರುವ ಕಂಪನಿಗಳು ನಾಲ್ಕನೇ ತ್ರೈಮಾಸಿಕ ಉತ್ತಮ ಫಲಿತಾಂಶ ನೀಡುವ ನಿರೀಕ್ಷೆ ಪೇಟೆಯಲ್ಲಿದೆ. ಹೀಗಾಗಿ, ಮಾರುಕಟ್ಟೆ ಉತ್ಸಾಹದಿಂದ ನಾಲ್ಕನೇ ತ್ರೈಮಾಸಿಕ ಫಲಿತಾಂಶ ಕಾಯುತ್ತಿದೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More