ಕಚ್ಚಾ ತೈಲ ಏರಿಕೆ, ಪೆಟ್ರೊಲಿಯಂ ಕಂಪನಿಗಳ ಷೇರು ಕುಸಿತ, ನಿಫ್ಟಿ ಮೆಟಲ್ ಜಿಗಿತ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ನಾಲ್ಕು ವರ್ಷದ ಗರಿಷ್ಠ ಮಟ್ಟಕ್ಕೆ ಏರಿದ ಪರಿಣಾಮ ಪೆಟ್ರೋಲಿಯಂ ವಿತರಣಾ ಕಂಪನಿಗಳ ಷೇರುಗಳು ತ್ವರಿತವಾಗಿ ಕುಸಿದಿವೆ. ದಿನದ ವಹಿವಾಟನಲ್ಲಿ ನಿಫ್ಟಿ ಮೆಟಲ್ ನಿಫ್ಟಿ ಐಟಿ ಏರುಹಾದಿಯಲ್ಲಿ ಸಾಗಿವೆ. ಮತ್ತೆ ಬ್ಯಾಂಕುಗಳು ತೀವ್ರ ಕುಸಿದಿವೆ

ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ನಾಲ್ಕು ವರ್ಷದಷ್ಟು ಗರಿಷ್ಠಮಟ್ಟಕ್ಕೇ ಏರಿದ್ದರ ನಡುವೆಯೂ ಷೇರು ಪೇಟೆ ಸತತ ಐದನೇ ದಿನವೂ ಏರು ಹಾದಿಯನ್ನು ಕಾಯ್ದುಕೊಂಡಿತು. ದಿನವಿಡೀ ಏರಿಳಿತದ ವಹಿವಾಟು ನಡೆಸಿದ ಸೆನ್ಸೆಕ್ಸ್ ದಿನದ ಆರಂಭದಲ್ಲಿ ಕುಸಿದು ನಂತರ ಏರಿಳಿಯಿತು. ದಿನದ ಅಂತ್ಯಕ್ಕೆ 60 ಅಂಶ ಏರಿಕೆಯೊಂದಿಗೆ 33940ಕ್ಕೆ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 14.90 ಅಂಶ ಏರಿಕೆಯೊಂದಿಗೆ 10400ರ ಮಟ್ಟ ಕಾಯ್ದುಕೊಂಡಿತು.

2018ನೇ ಸಾಲಿನ ಕನಿಷ್ಠ ಮಟ್ಟದಿಂದ ಶೇ.4ರಷ್ಟು ಏರಿರುವ ಮಾರುಕಟ್ಟೆ ಸದ್ಯಕ್ಕೆ ಸ್ಥಿರಗೊಳ್ಳುವ ಹಾದಿಯಲ್ಲಿದೆ. ನಿತ್ಯವೂ ಏರುಹಾದಿಯಲ್ಲೇ ಸಾಗಿದ್ದರೂ ಒಟ್ಟಾರೆ ಏರಿಕೆ ಪ್ರಮಾಣ ಅತ್ಯಲ್ಪವಾಗಿದೆ. ಇದು ಮಾರುಕಟ್ಟೆ ಸ್ಥಿರವಾಗುತ್ತಿರುವ ಸೂಚನೆ. ಕಾರ್ಪೊರೆಟ್‌ಗಳ ನಾಲ್ಕನೇ ತ್ರೈಮಾಸಿಕ ಫಲಿತಾಂಶ ಪ್ರಕಟವಾದ ನಂತರ ಷೇರುಪೇಟೆ ಮತ್ತೊಂದು ಸುತ್ತು ಏರಬಹುದು.

ಅಪನಗದೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆಯಿಂದಾದ ಅಡೆ-ತಡೆಗಳನ್ನು ಬಹುತೇಕ ಕಾರ್ಪೊರೆಟ್‌ಗಳು ದಾಟಿ ಬಂದಿವೆ. ಮೂರನೇ ತ್ರೈಮಾಸಿಕಕ್ಕಿಂತ ನಾಲ್ಕನೇ ತ್ರೈಮಾಸಿಕದಲ್ಲಿ ಉತ್ತಮ ಫಲಿತಾಂಶ ಬರಲಿದೆ ಎಂಬ ಅಂದಾಜು ಮಾರುಕಟ್ಟೆ ತಜ್ಞರದು.

ಬಜೆಟ್ ಪೂರ್ವದಲ್ಲಿ ಸತತ ಏರಿದ್ದ ಮಾರುಕಟ್ಟೆ ಸರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿತ್ತು. ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ, ಕಚ್ಚಾ ತೈಲ ಏರಿಕೆ, ಜಾಗತಿಕ ವ್ಯಾಪಾರ ಸಮರ ಮತ್ತಿತರ ಕಾರಣಗಳಿಂದಾಗಿ ಶೇ.10ರಷ್ಟು ಕುಸಿದಿತ್ತು. ಜಾಗತಿಕ ವ್ಯಾಪಾರ ಸಮರದ ಒತ್ತಡ ತಗ್ಗಿದ್ದರಿಂದ ಮತ್ತೆ ಚೇತರಿಕೆ ಹಾದಿಯಲ್ಲಿದೆ. ಉತ್ತಮ ಫಲಿತಾಂಶದ ಜತೆಗೆ ಉತ್ತಮ ಮುಂಗಾರು ಮಳೆ ಆಗಲಿದೆ ಎಂಬ ಹವಾಮಾನ ಇಲಾಖೆ ಭವಿಷ್ಯವೂ ಮಾರುಕಟ್ಟೆ ಚೇತರಿಕೆಗೆ ಕಾರಣವಾಗಿದೆ.

ದಿನದ ವಹಿವಾಟಿನಲ್ಲಿ ವಿಸ್ತೃತ ಮಾರುಕಟ್ಟೆ ಸೂಚ್ಯಂಕಗಳ ಪೈಕಿ ಕೆಲವು ಏರಿದ್ದರೆ ಕೆಲವು ಕುಸಿದಿವೆ. ನಿಫ್ಟಿ ಐಟಿ ಶೇ.1.60ರಷ್ಟು ಏರಿದೆ. ನಿಫ್ಟಿ ಐಟಿ ಶೇ.1.50, ನಿಫ್ಟಿ ಎಂಎನ್ಸಿ ಶೇ.1.04, ನಿಫ್ಟಿ ಆಟೋ ಶೇ.0.50ರಷ್ಟು ಏರಿವೆ. ನಿಫ್ಟಿ ಪಿಎಸ್ ಯು ಬ್ಯಾಂಕ್ ಗರಿಷ್ಠ ಅಂದರೆ ಶೇ.2.33ರಷ್ಟು ಕುಸಿದಿದೆ. ಸಿಂಡಿಕೇಟ್ ಬ್ಯಾಂಕ್, ಐಡಿಬಿಐ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಪಿಎನ್ಬಿ ಶೇ.3ರಷ್ಟು ಕುಸಿದವು. ಎಸ್ಬಿಐ, ಕೆನರಾ ಬ್ಯಾಂಕ್, ಆಂಧ್ರ ಬ್ಯಾಂಕ್, ಯೂನಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಒರಿಯಂಟಲ್ ಬ್ಯಾಂಕ್ ಅಲಹಾಬಾದ್ ಬ್ಯಾಂಕ್ ಶೇ.1-2.50ರಷ್ಟು ಕುಸಿದವು.

ಚೀನಾ- ಅಮೆರಿಕ ನಡುವಿನ ಸಂಭವನೀಯ ವ್ಯಾಪಾರ ಸಮರದ ಒತ್ತಡ ತಗ್ಗಿದ್ದರಿಂದಾಗಿ ನಿಫ್ಟಿ ಮೆಟಲ್ ಸೂಚ್ಯಂಕ ಶೇ. 1.60ರಷ್ಟು ಏರಿದೆ. ವೇದಾಂತ ಶೇ.5ರಷ್ಟು ಏರಿದೆ. ನಾಲ್ಕೊ, ಜಿಂದಾಲ್ ಸ್ಟೈನ್ಲೆಸ್, ಹಿಂದ್ ಕಾಪರ್, ಹಿಂಡಾಲ್ಕೊ, ಜೆಎಸ್ಪಿಎಲ್, ಹಿಂದೂಸ್ತಾನ್ ಜಿಂಕ್, ಟಾಟಾ ಸ್ಟೀಲ್, ಕೋಲ್ ಇಂಡಿಯಾ ಶೇ.1-3ರಷ್ಟು ಏರಿದವು. ಐಟಿ ವಲಯದ ಟಿಸಿಎಸ್ ಇನ್ಫಿಬೀಮ್, ಎಚ್ಸಿಎಲ್ ಟೆಕ್, ಟೆಕ್ ಮಹಿಂದ್ರ, ಇನ್ಫೊಸಿಸ್, ಕೆಪಿಐಟಿ ಟೆಕ್ನಾಲಜೀಸ್, ಟಾಟಾ ಇಲಾಕ್ಸಿ, ಒರಾಕಲ್ ಫಿನ್ ಸರ್ವೀಸ್ ಶೇ.1ರಿಂದ 3ರಷ್ಟು ಏರಿದವು. ದಿನದ ವಹಿವಾಟಿನಲ್ಲಿ ಸುಪ್ರೀಂ ಇಂಡಸ್ಟ್ರೀಸ್ ಶೇ.8ರಷ್ಟು ಏರಿತು. ವೇದಾಂತ, ನ್ಯಾಷನಲ್ ಅಲುಮಿನಿಯಂ, ಎಸ್ಬಿಐ ಲೈಫ್, ಯುನೈಟೆಡ್ ಸ್ಪಿರಿಟ್ ಶೇ.3-5ರಷ್ಟು ಏರಿವೆ.

ಇದನ್ನೂ ಓದಿ : ಐಸಿಐಸಿಐ ಬ್ಯಾಂಕ್ ಸಿಇಒ ಚಂದಾ ಕೊಚ್ಚಾರ್‌ ಭವಿಷ್ಯ ನಿರ್ಧರಿಸಲಿದೆಯೇ ಆರ್‌ಬಿಐ?

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಪ್ರತಿ ಬ್ಯಾರೆಲ್ ಗೆ 70 ಡಾಲರ್ ದಾಟಿದ್ದರಿಂದಾಗಿ ತೈಲ ವಿತರಣಾ ಕಂಪನಿಗಳ ಷೇರುಗಳು ಶೇ.8ರಷ್ಟು ಕುಸಿದವು. ಆದರೆ, ತೈಲ ಸಂಸ್ಕರಣಾ ಕಂಪನಿಗಳು ಏರಿದವು. ಎಚ್ಪಿಸಿಎಲ್ ಶೇ.7.6ರಷ್ಟು ಕುಸಿದಿದೆ. ಬಿಪಿಸಿಎಲ್ ಶೇ.7.42, ಐಒಸಿ ಶೇ.6.4ರಷ್ಟು ಕುಸಿದಿದೆ. ಒಎನ್ಜಿಸಿ ಶೇ.0.89ರಷ್ಟು ಆಯಿಲ್ ಇಂಡಿಯಾ ಶೇ.1.6ರಷ್ಟು ಏರಿದವು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಏರಿದ ಪರಿಣಾಮ ಡಾಲರ್ ವಿರುದ್ಧ ರುಪಾಯಿ ತ್ವರಿತವಾಗಿ ಕುಸಿಯಿತು. ಹಿಂದಿನ ವಹಿವಾಟಿನಲ್ಲಿ 65 ರುಪಾಯಿಗಿಂತ ಕೆಳಮಟ್ಟದಲ್ಲಿ ವಹಿವಾಟು ನಡೆಸಿದ್ದು, ಬುಧವಾರ 31 ಪೈಸೆ ಕುಸಿದು 65.31ರಲ್ಲಿ ವಹಿವಾಟಾಗಿದೆ. ಡಾಲರ್ ವಿರುದ್ಧ ರುಪಾಯಿ ಕುಸಿಯುತ್ತಿದ್ದಂತೆ ಚಿನ್ನದ ಬೆಲೆಯೂ ಏರಿದೆ. ಚಿನ್ನ 400 ರುಪಾಯಿ ಏರಿ 31000 ರುಪಾಯಿ ಗಡಿದಾಟಿದೆ. ಬೆಳ್ಳಿ 440 ರುಪಾಯಿ ಏರಿ 38653ರಲ್ಲಿ ವಹಿವಾಟಾಗಿದೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More