ವಾರವಿಡೀ ಏರಿದ ಷೇರುಪೇಟೆ; ಸೆನ್ಸೆಕ್ಸ್ 1.7% ಏರಿಕೆ, ಐಟಿ ಸೂಚ್ಯಂಕ 5% ಜಿಗಿತ

ಸಂಭವನೀಯ ಜಾಗತಿಕ ವ್ಯಾಪಾರ ಸಮರದ ಒತ್ತಡ ತಗ್ಗಿದ್ದರ ಜತೆಗೆ ದೇಶೀಯ ಹೂಡಿಕೆದಾರರು ಸಕ್ರಿಯರಾದ ಕಾರಣ ಸತತ ಏಳು ದಿನವೂ ಷೇರುಪೇಟೆ ಏರಿದೆ. ತಗ್ಗಿರುವ ಹಣದುಬ್ಬರ, ಹಿಗ್ಗಿರುವ ಕೈಗಾರಿಕಾ ಉತ್ಪನ್ನ ಸೂಚ್ಯಂಕವು ಮುಂದಿನ ವಾರ ಮತ್ತಷ್ಟು ಏರಿಕೆಯ ಮುನ್ಸೂಚನೆ ನೀಡಿದೆ

ಶುಕ್ರವಾರವೂ ಷೇರು ಪೇಟೆ ಏರಿಕೆಯೊಂದಿಗೆ ವಹಿವಾಟು ಅಂತ್ಯಗೊಳಿಸಿದ್ದು, ಸತತ ಏಳು ವಹಿವಾಟು ದಿನಗಳೂ ಏರುಹಾದಿ ಕಾಯ್ದುಕೊಂಡಂತಾಗಿದೆ. ಪೇಟೆಯಲ್ಲೀಗ ಗೂಳಿ ಹಿಡಿತ ನಿಚ್ಛಳವಾಗಿದೆ. ವಾರವಿಡೀ ಮೇಲುಗೈ ಸಾಧಿಸಿದ್ದು ಐಟಿ ಸೂಚ್ಯಂಕ. ಇನ್ಫೊಸಿಸ್, ಟಿಸಿಎಸ್, ವಿಪ್ರೊ ಕಂಪನಿಗಳ ಉತ್ತಮ ಫಲಿತಾಂಶ ನಿರೀಕ್ಷೆಯಲ್ಲಿ ಖರೀದಿ ನಡೆಯಿತು. ಜೊತೆಗೆ ಮಿಡ್ ಕ್ಯಾಪ್ ಐಟಿ ಕಂಪನಿಗಳ ಮೇಲೆ ಮ್ಯುಚುವಲ್ ಫಂಡ್ ಗಳ ಹೂಡಿಕೆ ಹೆಚ್ಚುತ್ತಿದೆ. ಹೀಗಾಗಿ, ವಾರಂತ್ಯದ ವೇಳೆಗೆ ನಿಫ್ಟಿ ಐಟಿ ಸೂಚ್ಯಂಕ ಶೇ.5.5ರಷ್ಟು ಏರಿತು. ವಾರದಲ್ಲಿ ಸೆನ್ಸೆಕ್ಸ್ ಶೇ.1.7, ನಿಫ್ಟಿ ಶೇ.1.4ರಷ್ಟು ಏರಿದೆ.

ಸಿರಿಯಾ ಬಿಕ್ಕಟ್ಟಿನಿಂದಾಗಿ ಅಂತಾರಾಷ್ಟ್ರೀಯ ತೈಲ ಬೆಲೆ ಏರಿಕೆ ಕಂಡರೂ ದೇಶೀಯ ಪೇಟೆ ಅದನ್ನು ಮೀರಿ ಏರುಹಾದಿಯಲ್ಲಿ ಸಾಗಿತು. ಫೆಬ್ರವರಿಯಲ್ಲಿ ಕೈಗಾರಿಕಾ ಉತ್ಪನ್ನ ಪ್ರಮಾಣ ಹೆಚ್ಚಿರುವುದು ಮತ್ತು ಮಾರ್ಚ್ ತಿಂಗಳ ಚಿಲ್ಲರೆದರ ಹಣದುಬ್ಬರ ಐದು ತಿಂಗಳ ಕನಿಷ್ಠ ಮಟ್ಟಕ್ಕೆ ತಗ್ಗಿದ್ದು ಏರಿಕೆಗೆ ಕಾರಣವಾಯಿತು. ಅಲ್ಲದೇ ಇನ್ಫೊಸಿಸ್ ಫಲಿತಾಂಶದ ನಿರೀಕ್ಷೆಯೂ ಏರುಹಾದಿಗೆ ಒತ್ತಾಸೆಯಾಗಿತ್ತು. ಹೀಗಾಗಿ ಒಂದು ಹಂತದಲ್ಲಿ 150 ಅಂಶ ಏರಿದ್ದ ಸೆನ್ಸೆಕ್ಸ್ 91.52 ಅಂಶ ಏರಿಕೆಯೊಂದಿಗೆ 34,192.65ಕ್ಕೆ ಸ್ಥಿರಗೊಂಡಿತು. 34,200 ಮಟ್ಟ ಕಾಯ್ದುಕೊಳ್ಳಲಾಗಿಲ್ಲ. ನಿಫ್ಟಿ 21.90 ಅಂಶ ಏರಿ 10,480.60ಕ್ಕೆ ಸ್ಥಿರಗೊಂಡಿತು. ದಿನದ ವಹಿವಾಟಿನಲ್ಲಿ 10,500ರ ಗಡಿ ದಾಟಿದ್ದರು ಅದನ್ನು ದಿನದ ವಹಿವಾಟು ಅಂತ್ಯವಾಗುವವರೆಗೂ ಕಾಯ್ದುಕೊಳ್ಳಲಾಗಿಲ್ಲ.

ದಿನದ ವಹಿವಾಟಿನಲ್ಲಿ ನಿಫ್ಟಿ ಮೆಟಲ್, ನಿಫ್ಟಿ ಮಿಡ್ ಕ್ಯಾಪ್ ಲಿಕ್ವಿಡ್ 15, ನಿಫ್ಟಿ ಮಿಡ್ ಕ್ಯಾಪ್ 50 ಸೂಚ್ಯಂಕಗಳು ಶೇ.1ರಷ್ಟು ಏರಿದವು. ನಿಫ್ಟಿ ಐಟಿ, ನಿಫ್ಟಿ ಮಿಡ್ ಕ್ಯಾಪ್ 100, ನಿಫ್ಟಿ ಫಾರ್ಮ, ನಿಫ್ಟಿ ರಿಯಾಲ್ಟಿ, ನಿಫ್ಟಿ ಎನರ್ಜಿ, ನಿಫ್ಟಿ ಮೆಡಿಯಾ ನಿಫ್ಟಿ ಸರ್ವೀಸ್ ಸೆಕ್ಟರ್ ಶೇ.0.30-0.70ರಷ್ಟು ಏರಿದವು. ಲಾಭನಗದೀಕರಣ ಹೆಚ್ಚಿದ್ದರಿಂದಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳ ಸೂಚ್ಯಂಕ ಶೇ.0.50ರಷ್ಟು ಕುಸಿಯಿತು. ನಿಫ್ಟಿ ಎಫ್ಎಂಸಿಜಿ, ನಿಫ್ಟಿ ಸಿಪಿಎಸ್ಇ, ನಿಫ್ಟಿ ಪಿಎಸ್ಇ ಶೇ.0.20-0.40ರಷ್ಟು ಇಳಿದವು.

ಎಸ್ಬಿಐ, ಆಂಧ್ರ ಬ್ಯಾಂಕ್, ಅಲಹಾಬಾದ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಶೇ.1ರಷ್ಟು ಇಳಿದವು. ಕೆನರಾ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಐಡಿಬಿಐ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ ಶೇ.1-2ರಷ್ಟು ಏರಿದವು. ಖಾಸಗಿ ಬ್ಯಾಂಕುಗಳ ಪೈಕಿ ಆಕ್ಸಿಸ್ ಬ್ಯಾಂಕ್, ಯೆಸ್ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್ ಎಚ್ಡಿಎಫ್ಸಿ ಶೇ.0.25-1ರಷ್ಟು ಕುಸಿದವು. ಕೊಟಕ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆರ್ಬಿಎಲ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್ ಕೊಂಚ ಏರಿದವು.

ಐಟಿ ವಲಯದ ಇನ್ಫೊಸಿಸ್, ವಿಪ್ರೊ, ಟೆಕ್ ಮಹಿಂದ್ರ, ಟಿಸಿಎಸ್ ಶೇ.1ರಿಂದ3ರಷ್ಟು ಏರಿದವು. ಎಚ್ಸಿಎಲ್ ಟೆಕ್ನಾಲಜಿ ಶೇ.2ರಷ್ಟು ಕುಸಿಯಿತು. ಇಂಬೈಬ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅನ್ನು 180 ಮಿಲಿಯನ್ ಡಾಲರ್ ಗಳಿಗೆ ಖರೀದಿಸಿದ ಕಾರಣ ರಿಲಯನ್ಸ್ ಇಂಡಸ್ಟ್ರೀಸ್ ಶೇ.1ರಷ್ಟು ಏರಿತು.

ಇದನ್ನೂ ಓದಿ : 2018ರಲ್ಲಿ ನೀವು ಹೂಡಿಕೆ ಮಾಡಬಹುದಾದ ಹತ್ತು ಮ್ಯೂಚುವಲ್ ಫಂಡ್‌ಗಳಿವು

ಬರುವ ವರ್ಷಗಳಲ್ಲಿ ಉತ್ತಮ ಫಲಿತಾಂಶದ ಅಂದಾಜಿನಲ್ಲಿ ಟೈಟಾನ್ ಕಂಪನಿ ಶೇ.1ರಷ್ಟು ಏರಿದೆ. ಜಿಎಸ್ಟಿ ಜಾರಿ ನಂತರ ಆಭರಣಗಳ ಮಾರಾಟ ಪ್ರಮಾಣ ಹೆಚ್ಚಿದ್ದು 2023ರ ವೇಳೆಗೆ ಎರಡೂವರೆ ಪಟ್ಟು ವಹಿವಾಟು ಹೆಚ್ಚಳ ಸಾಧಿಸುವ ಗುರಿ ಹಾಕಿಕೊಂಡಿದೆ. ದೀರ್ಘಕಾಲೀನ ಹೂಡಿಕೆಗೆ ಟೈಟಾನ್ ಹೆಚ್ಚು ಸೂಕ್ತ.

ದಿನದ ವಹಿವಾಟಿನಲ್ಲಿ ಅದಾನಿಪೋರ್ಟ್, ಐಷರ್ ಮೋಟಾರ್ಸ್ ವೇದಾಂತ, ಇಂಡಿಯಾಬುಲ್ಸ್ ಹೌಸಿಂಗ್, ಹಿಂಡಾಲ್ಕೊ ಶೇ.1ರಷ್ಟು ಏರಿವೆ. ವಾಕ್ರಂಗೀ, ಕೆಐಒಸಿಎಲ್, ಭಾರತ್ ಎಲೆಕ್ಟ್ರಾನಿಕ್ಸ್, ಬೋಷ್ ಶೇ.3ರಿಂದ 5ರಷ್ಟು ಕುಸಿದವು.

ಚಿನಿವಾರ ಪೇಟೆಯಲ್ಲಿ ಚಿನ್ನ 30 ರುಪಾಯಿ, ಬೆಳ್ಳಿ 170 ರುಪಾಯಿ ಏರಿದೆ. ಕಚ್ಚಾ ತೈಲ ಶೇ.0.50ರಷ್ಟು ಏರಿದೆ. ಡಾಲರ್ ವಿರುದ್ಧ ರುಪಾಯಿ 65.21ರಲ್ಲಿ ವಹಿವಾಟಾಗಿದೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More