ಒಂಬತ್ತನೇ ದಿನವೂ ಏರಿಕೆ ಕಾಯ್ದುಕೊಂಡ ಪೇಟೆ, ಕಾಮತ್ ಹೋಟೆಲ್ಸ್ ಶೇ.16 ಜಿಗಿತ

ಜಾಗತಿಕ ಷೇರುಪೇಟೆಗಳು ಇಳಿಜಾರಿನಲ್ಲಿ ಸಾಗಿದರೂ ದೇಶೀಯ ಷೇರುಪೇಟೆ ಸತತ ಒಂಬತ್ತನೇ ದಿನವೂ ಏರುಹಾದಿಯಲ್ಲಿ ಸಾಗಿದೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು ಖರೀದಿಯಲ್ಲಿ ತೊಡಗಿರುವುದು ಇದಕ್ಕೆ ಕಾರಣ. ದಿನವಿಡೀ ಹೊಟೇಲ್ ವಲಯದ ಷೇರುಗಳು ಗರಿಷ್ಠ ಪ್ರಮಾಣದಲ್ಲಿ ಜಿಗಿದವು

ಸತತ ಒಂಬತ್ತು ದಿನವೂ ಷೇರುಪೇಟೆ ಏರುಹಾದಿಯಲ್ಲಿ ಸಾಗಿತು. ಆ ಮೂಲಕ, ಮೂರು ವರ್ಷಗಳಲ್ಲೇ ಅತಿ ಸುಧೀರ್ಘ ಏರುಹಾದಿಯನ್ನು ಕ್ರಮಿಸಿ ದಾಖಲೆ ಮಾಡಿತು. ಮೆಟಲ್, ಎಫ್ಎಸಿಜಿ, ಆಯಿಲ್ ಮತ್ತು ಗ್ಯಾಸ್ ಮತ್ತು ಆಯ್ದ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಷೇರುಗಳು ಸೆನ್ಸೆಕ್ಸ್ ಏರುಹಾದಿಯಲ್ಲಿ ವಹಿವಾಟು ಅಂತ್ಯಗೊಳಿಸಲು ನೆರವಾದವು. ದಿನವಿಡೀ ಏರಿಳಿತ ವಹಿವಾಟು ನಡೆಯಿತು. ಒಂದು ಹಂತದಲ್ಲಿ 100 ಅಂಶ ಏರಿಳಿದು ಅಂತ್ಯಕ್ಕೆ 89 ಅಂಶ ಏರಿಕೆಯೊಂದಿಗೆ ವಹಿವಾಟು ಅಂತ್ಯಗೊಂಡಿತು. ಸೆನ್ಸೆಕ್ಸ್ 34,395 ನಿಫ್ಟಿ 10,548 ಕ್ಕೆ ವಹಿವಾಟು ಅಂತ್ಯಗೊಳಿಸಿದವು. ಒಂಬತ್ತು ವಹಿವಾಟು ದಿನಗಳಲ್ಲಿ ಸೆನ್ಸೆಕ್ಸ್ ಶೇ.4ರಷ್ಟು ಏರಿಕೆ ದಾಖಲಿಸಿತು.

ಸಾಧಾರಣ ಮಳೆಯ ನಿರೀಕ್ಷೆ ಮತ್ತು ಕೇಂದ್ರ ಸರ್ಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ವಲಯಕ್ಕೆ ಹೆಚ್ಚಿನ ವಿನಿಯೋಜನೆ ಮಾಡಲಿರುವ ಹಿನ್ನೆಲೆಯಲ್ಲಿ ಪ್ರಸಕ್ತ ವಿತ್ತೀಯ ವರ್ಷದಲ್ಲಿ ಜಿಡಿಪಿ ಶೇ.7.6ರಷ್ಟಾಗಲಿದೆ ಎಂದು ಗೋಲ್ಡ್ಮನ್ ಸ್ಯಾಕ್ ಅಂದಾಜಿಸಿದೆ. ಇದೇ ಅಭಿಪ್ರಾಯ ವ್ಯಕ್ತಪಡಿಸಿರುವ ದಲ್ಲಾಳಿ ಸಂಸ್ಥೆ ಸಿಎಲ್ಎಸ್ಎ ಸಾಧಾರಣ ಮಳೆ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ವಿನಿಯೋಜನೆಯಿಂದ ಮಹಿಂದ್ರಾ ಅಂಡ್ ಮಹಿಂದ್ರಾ ಕಂಪನಿಗೆ ಅನುಕೂಲವಾಗಲಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಮಹಿಂದ್ರಾ ಅಂಡ್ ಮಹಿಂದ್ರಾ ಶೇ.1ರಷ್ಟು ಏರಿತು. ಸಾಧಾರಣ ಮಳೆಯಿಂದಾಗಿ ಎಫ್ಎಂಸಿಜಿ, ಕನ್ಸಂಫ್ಶನ್ ವಲಯದ ಆಯ್ದ ಷೇರುಗಳ ಖರೀದಿ ನಡೆಯುತ್ತಿದೆ ಎಂದು ಆಲ್ಟ್ಮೌಂಟ್ ಕ್ಯಾಪಿಟಲ್ ಮುಖ್ಯಸ್ಥ ಕ್ರಿಶ್ ಸುಬ್ರಮಣ್ಯಂ ಹೇಳಿದ್ದಾರೆ.

ಪವರ್ ಗ್ರಿಡ್, ಎಚ್ಯುಎಲ್, ಟೈಟಾನ್, ಐಸಿಐಸಿಐ ಬ್ಯಾಂಕ್, ಭಾರತಿ ಏರ್ಟೆಲ್ ಶೇ.1.5-3ರಷ್ಟು ಏರಿದವು. ಗೋಲ್ಡ್ ಮನ್ ಸ್ಯಾಕ್ ಮತ್ತು ಸಿಎಲ್ಎಸ್ಎ ನೆಸ್ಲೆ ಇಂಡಿಯಾದ ಗರಿಷ್ಠ ಗುರಿ ಏರಿಸಿದ್ದರಿಂದ ಆ ಷೇರು ಶೇ.3ರಷ್ಟು ಏರಿತು. ಸಾಧಾರಣ ಫಲಿತಾಂಶ ಪ್ರಕಟಿಸಿ ವರ್ಷವಿಡೀ ಲಾಭಾಂಶ ಗುರಿ ತಗ್ಗಿಸಿದ ಕಾರಣ ಸತತ ಇಳಿಜಾರಿನಲ್ಲಿರುವ ಇನ್ಫೊಸಿಸ್ ಶೇ.0.70ರಷ್ಟು ಕುಸಿಯಿತು. ಆಕ್ಸಿಸ್ ಬ್ಯಾಂಕ್, ವಿಪ್ರೊ ಮತ್ತು ಸನ್ ಫಾರ್ಮ ಸಹ ಕುಸಿದವು.

ನಿಫ್ಟಿ ಪಿಎಸ್‌ಯು ಬ್ಯಾಂಕ್ ಸೂಚ್ಯಂಕ ಶೇ.0.65ರಷ್ಟು ಕುಸಿಯಿತು. ಕೆನರಾ ಬ್ಯಾಂಕ್, ಐಡಿಬಿಐ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಪಿಎನ್ಬಿ, ಓರಿಯಂಟಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಸಿಂಡಿಕೇಟ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಅಲಹಾಬಾದ್ ಬ್ಯಾಂಕ್, ಎಸ್‌ಬಿಐ ಶೇ.0.50ರಿಂದ ಶೇ.3ರಷ್ಟು ಕುಸಿದವು. ನಿಫ್ಟಿ ಐಟಿ ಶೇ.0.35ರಷ್ಟು ಕುಸಿಯಿತು. ವಿಪ್ರೊ, ಟಿಸಿಎಸ್, ಒರಾಕಲ್ ಫಿನ್ ಸರ್ವಿಸ್, ಕೆಪಿಐಟಿ ಟೆಕ್ನಾಲಜೀಸ್, ಇನ್ಫಿಬೀಮ್, ಟೆಕ್ ಮಹಿಂದ್ರ, ಟಾಟಾ ಇಲಾಕ್ಸಿ ಕುಸಿದವು.

ನಿಫ್ಟಿ ಫಾರ್ಮ ಸೂಚ್ಯಂಕ ಶೇ.0.50ರಷ್ಟು ಇಳಿಯಿತು. ಸನ್ ಫಾರ್ಮ, ಸಿಪ್ಲಾ, ಕ್ಯಾಡಿಲಾ ಹೆಲ್ತ್, ಅರಬಿಂದೋ ಫಾರ್ಮ, ಗ್ಲೆನ್ ಮಾರ್ಕ್ ಫಾರ್ಮ, ಬಯೋಕಾನ್, ಪಿರಮಲ್ ಎಂಟರ್ಪೈಸಸ್ ಶೇ.0.50ರಿಂದ 1.50ರಷ್ಟು ಕುಸಿದವು. ನಿಫ್ಟಿ ರಿಯಾಲ್ಟಿ ಶೇ.1.20 ಏರಿದೆ. ಗೋದ್ರೆಜ್ ಪ್ರಾಪರ್ಟೀಸ್ ಶೇ.5.50ರಷ್ಟು ಜಿಗಿಯಿತು. ಫೀನಿಕ್ಸ್ ಮಿಲ್ಸ್, ಇಂಡಿಯಾಬುಲ್ಸ್ ರಿಯಲ್ ಎಸ್ಟೇಟ್, ಡಿಎಲ್ಎಫ್ ಶೇ.1-3ರಷ್ಟು ಏರಿದವು.

ಇದನ್ನೂ ಓದಿ : ಎಲ್ಟಿಸಿಜಿ ತೆರಿಗೆ ಜಾರಿ; ಮ್ಯೂಚುವಲ್ ಫಂಡ್ ಹೂಡಿಕೆ ಮೇಲಿನ ಪರಿಣಾಮವೇನು?

ದಿನದ ವಹಿವಾಟಿನಲ್ಲಿ ಇಂಡಿಯನ್ ಹೋಟೆಲ್ಸ್ ಶೇ.5, ಫ್ಯೂಚರ್ಸ್ ರಿಟೇಲ್ಸ್, ಯುನೈಟೆಡ್ ಬ್ರೀವರೀಸ್, ಕಂಟೈನರ್ ಕಾರ್ಪೊರೇಷನ್ ಶೇ.3ರಷ್ಟು ಏರಿದವು. ದಿನವಿಡೀ ಹೊಟೇಲ್ ವಲಯದ ಷೇರುಗಳಿಗೆ ಭಾರಿ ಬೇಡಿಕೆ ಬಂತು. ತಾಜ್ ಜಿವಿಕೆ ಶೇ.20, ರಾಯಲ್ ಆರ್ಕಿಡ್ ಶೇ.19, ಒರಿಯಂಟಲ್ ಹೋಟೆಲ್ಸ್ ಶೇ.18, ಇಐಎಚ್, ಕಾಮತ್ ಹೋಟೆಲ್ಸ್, ವೈಸ್ರಾಯ್ ಹೋಟೆಲ್ಸ್, ಅಪೊಲೋ ಸಿಂಧೂರಿ ಹೋಟೆಲ್ಸ್ ಶೇ.12ರಿಂದ17ರಷ್ಟು ಏರಿದವು. ಸಿಕೆಪಿ ಪ್ರಾಡಕ್ಟ್, ಎಲೆಕ್ಟ್ರೊಸ್ಟೀಲ್ ಕ್ಯಾಸ್ಟ್ ಶೇ.18ರಷ್ಟು ಏರಿತು.

ಡಾಲರ್ ವಿರುದ್ಧ ರುಪಾಯಿ ಕುಸಿತ ಮಂಗಳವಾರವೂ ಮುಂದುವರಿಯಿತು. ದಿನದ ವಹಿವಾಟಿನಲ್ಲಿ 20 ಪೈಸೆ ಕುಸಿದು 65.64ಕ್ಕೆ ಕುಸಿದು ಏಳು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಯಿತು.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More