ಆರ್‌ಬಿಐ ಬಾಂಡ್ ಮರುಖರೀದಿ ಘೋಷಣೆ, ಬ್ಯಾಂಕಿಂಗ್ ವಲಯದ ಷೇರುಗಳ ಜಿಗಿತ

ಜಾಗತಿಕ ಮಾರುಕಟ್ಟೆಗಳ ಏರಿಳಿತದ ನಡುವೆಯೂ ದೇಶೀಯ ಪೇಟೆ ಶುಭಾರಂಭ ಮಾಡಿದೆ. ನಿಫ್ಟಿ, ಸೆನ್ಸೆಕ್ಸ್ ನಿರ್ಣಾಯಕ ಮಟ್ಟ ದಾಟಿವೆ. ಸತತ ಕುಸಿದು ಈಗ ಏರುಹಾದಿಯಲ್ಲಿರುವ ಪಿಸಿ ಜುವೆಲ್ಲರ್ ಶೇ.38ರಷ್ಟು ಜಿಗಿದಿದೆ. ವಿಸ್ತೃತ ಮಾರುಕಟ್ಟೆ ಬಹುತೇಕ ಸೂಚ್ಯಂಕಗಳು ಏರಿಹಾದಿಯಲ್ಲಿವೆ

ಜಾಗತಿಕ ಮಾರುಕಟ್ಟೆಗಳ ಏರಿಳಿತದ ನಡುವೆಯೂ ದೇಶೀಯ ಮಾರುಕಟ್ಟೆ ಏರುಹಾದಿಯಲ್ಲಿ ಸಾಗಿ ಶುಭಾರಂಭ ಮಾಡಿದೆ. ಆಟೋ, ಬ್ಯಾಂಕಿಂಗ್, ಎನರ್ಜಿ ಮತ್ತು ಮೆಟಲ್ ವಲಯದ ಷೇರುಗಳು ಜಿಗಿದಿವೆ. ದಿನದ ವಹಿವಾಟಿನಲ್ಲಿ 300 ಅಂಶಕ್ಕಿಂತ ಹೆಚ್ಚು ಏರಿದ ಸೆನ್ಸೆಕ್ಸ್ 35,000 ಮಟ್ಟವನ್ನು ದಾಟಿದೆ. ನಿಫ್ಟಿ ಸಹ ನಿರ್ಣಾಯಕ ಮಟ್ಟ 10,700 ದಾಟಿದೆ. ದಿನದ ಉತ್ತರಾರ್ಧದ ವಹಿವಾಟಿನಲ್ಲಿ ಆಟೋ, ಬ್ಯಾಂಕಿಂಗ್ ವಲಯದ ಷೇರುಗಳಿಗೆ ತೀವ್ರ ಬೇಡಿಕೆ ಬಂತು.

ದಿನದ ಅಚ್ಚರಿಯ ಬೆಳವಣಿಗೆಯಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ 10,000 ಕೋಟಿ ಮೌಲ್ಯದ ಬಾಂಡ್‌ಗಳನ್ನು ಮರುಖರೀದಿ ಮಾಡುವುದಾಗಿ ಘೋಷಿಸಿತು. ಇದರಿಂದಾಗಿ ಬ್ಯಾಂಕಿಂಗ್ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಷೇರುಗಳು ಜಿಗಿದವು. ನಿಫ್ಟಿ ಪಿಎಸ್‌ಯು ಬ್ಯಾಂಕ್ ಸೂಚ್ಯಂಕ ಶೇ.2ರಷ್ಟು ಏರಿತು. ಇಂಡಿಯನ್ ಬ್ಯಾಂಕ್ ಶೇ.4ರಷ್ಟು ಏರಿತು. ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಅಲಹಾಬಾದ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ ಶೇ.2-3ರಷ್ಟು, ಎಸ್ಬಿಐ, ಯೂನಿಯನ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಆಂಧ್ರ ಬ್ಯಾಂಕ್ ಶೇ.1-2ರಷ್ಟು ಏರಿದವು.

ನಿಫ್ಟಿ ಪ್ರೈವೆಟ್ ಬ್ಯಾಂಕ್ ಸೂಚ್ಯಂಕ ಶೇ.1ರಷ್ಟು ಏರಿತು. ಆಕ್ಸಿಸ್ ಬ್ಯಾಂಕ್ ಶೇ.3ರಷ್ಟು ಏರಿತು. ಆಡಳಿತ ಮಂಡಳಿ ಸಭೆಯಲ್ಲಿ ಸಿಇಒ ಚಂದಾ ಕೊಚ್ಚರ್ ಭಾಗಿಯಾಗಿರುವ ವಿಡಿಯೋಕಾನ್ ಸಾಲದ ಹಿತಾಸಕ್ತಿ ಸಂಘರ್ಷ ಕುರಿತ ವಿಷಯ ಪ್ರಸ್ತಾಪ ಆಗುವುದಿಲ್ಲ ಎಂಬ ವರದಿಯಿಂದಾಗಿ ಐಸಿಐಐಸಿ ಬ್ಯಾಂಕ್ ಶೇ.2.50ರಷ್ಟು ಏರಿತು. ಐಸಿಐಸಿಐ ಬ್ಯಾಂಕ್ ನಾಲ್ಕನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭ ಮತ್ತು ಬಡ್ಡಿ ಮೂಲದ ಆದಾಯ ತಗ್ಗುತ್ತದೆಂಬ ನಿರೀಕ್ಷೆ ಇದ್ದರೂ ಜಿಗಿದಿದೆ. ಫೆಡರಲ್ ಬ್ಯಾಂಕ್, ಕೊಟಕ್ ಬ್ಯಾಂಕ್, ಯೆಸ್ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್, ಆರ್ಬಿಎಲ್ ಬ್ಯಾಂಕ್ ಶೇ.1-2ರಷ್ಟು ಜಿಗಿದವು. ಐಡಿಎಫ್ಸಿ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಇಂಡಸ್ ಇಂಡ್ ಶೇ.1ರಷ್ಟು ಕುಸಿದವು.

ವರ್ಷವಿಡೀ ಕಳಪೆ ಸಾಧನೆ ಮಾಡಿದ್ದ ಫಾರ್ಮ ವಲಯದ ಷೇರುಗಳು ಕುಸಿದವು. ನಿಫ್ಟಿ ಫಾರ್ಮ ಸೂಚ್ಯಂಕ ಶೇ.0.50ರಷ್ಟು ಕುಸಿಯಿತು. ಮಧುಮೇಹ ಔಷಧಿ ಮಾರಾಟ ಪ್ರಮಾಣ ತಗ್ಗಿರುವ ಬಗ್ಗೆ ರೇಟಿಂಗ್ ಏಜೆನ್ಸಿ ಕ್ರೆಡಿಟ್ ಸೂಸಿ ಆತಂಕ ವ್ಯಕ್ತಪಡಿಸಿದ ಕಾರಣ ಲುಪಿನ್ ಶೇ.3 ರಷ್ಟು ಕುಸಿಯಿತು. ಬಹುತೇಕ ದಲ್ಲಾಳಿ ಸಂಸ್ಥೆಗಳು ಬರುವ ದಿನಗಳಲ್ಲಿ ಲುಪಿನ್ ಶೇ.9-10ರಷ್ಟು ಕುಗ್ಗುವ ನಿರೀಕ್ಷೆಯಿಂದಿವೆ. ಗ್ಲೆನ್ ಮಾರ್ಕ್ ಶೇ.2, ರೆಡ್ಡಿ ಲ್ಯಾಬರೆಟರೀಸ್, ಸಿಪ್ಲಾ, ಸನ್ ಫಾರ್ಮ, ಬಯೋಕಾನ್, ಕ್ಯಾಡಿಲಾ ಶೇ.1ರಷ್ಟು ಇಳಿದವು. ನಿಫ್ಟಿ ಐಟಿ ಕೊಂಚ ಕುಸಿದಿದೆ. ಟಿಸಿಎಸ್, ಟಾಟಾ ಇಲಾಕ್ಸಿ, ಟೆಕ್ ಮಹಿಂದ್ರ, ಎಚ್ಸಿಎಲ್ ಟೆಕ್ ಶೇ.1-2ರಷ್ಟು ಇಳಿದವು. ಆದರೆ, ವಿಪ್ರೊ, ಒರಾಕಲ್ ಫಿನ್ ಸರ್ವೀಸ್, ಇನ್ಫೊಸಿಸ್, ಮೈಂಡ್ ಟ್ರೀ ಶೇ.1ರಷ್ಟು ಏರಿದವು.

ಕಳೆದ ಸೆಪ್ಟಂಬರ್‌ನಲ್ಲಿ ಲೆಕ್ಕಪರಿಶೋಧನೆ ಒಪ್ಪಿಕೊಂಡಿದ್ದ ‘ಪ್ರೈಸ್‌ ವಾಟರ್‌ ಹೌಸ್ ಕೂಪರ್’ ಸಂಸ್ಥೆ ಲೆಕ್ಕ ಪರಿಶೋಧನೆಯಿಂದ ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ ವಾಕ್ರಂಗೀ ಶೇ.5ರಷ್ಟು ಕುಸಿಯಿತು. ಈ ಬಗ್ಗೆ ಸೆಬಿ ಸಹ ತನಿಖೆ ನಡೆಸಲಿದೆ. ವಾಕ್ರಂಗೀ ಸಂಸ್ಥೆಯ ಚಿನಿವಾರ ಮತ್ತು ಆಭರಣ ವಹಿವಾಟಿನ ಬಗ್ಗೆ ಕಾರ್ಪೊರೆಟ್ ವ್ಯವಹಾರಗಳ ಸಚಿವಾಲಯ ಸಹ ತನ್ನ ಅನುಮಾನ ವ್ಯಕ್ತಪಡಿಸಿದೆ. ಆದರೆ, ವಾಕ್ರಂಗಿ ಆಡಳಿತ ಮಂಡಳಿ ಕಂಪನಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ನಡುವೆ, ತಮ್ಮ ಸಂಬಂಧಿಯೊಬ್ಬರಿಗೆ ಶೇ.2ರಷ್ಟು ಷೇರು ಉಡುಗೊರೆ ನೀಡಿದ್ದರಿಂದ ತೀವ್ರ ಕುಸಿದಿದ್ದ ಪಿಸಿ ಜುವೆಲ್ಲರ್ ಈಗ ಏರುಹಾದಿಯಲ್ಲಿದೆ. ಕಳೆದ ವಾರಾಂತ್ಯದಲ್ಲಿ ಸುಮಾರು 50ರಷ್ಟು ಜಿಗಿದಿದ್ದ ಷೇರು ಸೋಮವಾರದ ವಹಿವಾಟಿನಲ್ಲಿ ಶೇ.38ರಷ್ಟು ಜಿಗಿದಿದೆ. ಈ ನಡುವೆ, ಪಿಸಿ ಜುವೆಲ್ಲರ್ ಆಡಲಿತ ಮಂಡಳಿ ಮೇ 25ರಂದು ಮರುಖರೀದಿ ಕುರಿತಂತೆ ನಿರ್ಣಯಕೈಗೊಳ್ಳಬೇಕಿತ್ತು. ಆದರೆ, ಮೇ 10ರಂದೇ ಸಭೆ ಸೇರಿ ಮರುಖರೀದಿ ಕುರಿತಂತೆ ನಿರ್ಣಯ ಕೈಗೊಳ್ಳಲಿದೆ. ಹೀಗಾಗಿ ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿದೆ.

ಇದನ್ನೂ ಓದಿ : ಪೇಟೆ ಕುಸಿದಾಗ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವುದೇ ಜಾಣತನ!

ನಾಲ್ಕನೇ ತ್ರೈಮಾಸಿಕದಲ್ಲಿ ಶೇ.1.6ರಷ್ಟು ನಿವ್ವಳ ಲಾಭ ಏರಿಸಿಕೊಂಡಿರುವ ವಿಜಯಾ ಬ್ಯಾಂಕ್, ಶೇ.2ರಷ್ಟು ಜಿಗಿದಿದೆ. ಉತ್ತಮ ಫಲಿತಾಂಶ ಪ್ರಕಟಿಸಿದ ಎಕ್ಸೈಡ್ ಇಂಡಸ್ಟ್ರೀಸ್ ವರ್ಷದ ಗರಿಷ್ಠ ಮಟ್ಟಕ್ಕೇರಿತು. ಬಾಂದ್ರಾ ವಾರ್ಸೋವಾ ಸೀಲಿಂಕ್ ಯೋಜನೆ ಜಂಟಿಯಾಗಿ ಅನುಷ್ಠಾನಗೊಳಿಸಲಿರುವ ರಿಲಯನ್ಸ್ ಇನ್ಫ್ರಾ ಶೇ.6ರಷ್ಟು ಜಿಗಿಯಿತು.

ಚಿನ್ನ 170 ರುಪಾಯಿ ಏರಿ, 31,550ರ ಆಜುಬಾಜಿನಲ್ಲಿ ವಹಿವಾಟಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ 70 ಡಾಲರ್ ದಾಟಿದೆ. 2014ರ ನಂತರ ಇದೇ ಮೊದಲ ಬಾರಿಗೆ ಪ್ರತಿ ಬ್ಯಾರೆಲ್ ಗೆ 70 ಡಾಲರ್ ದಾಟಿದೆ. ಡಾಲರ್ ವಿರುದ್ಧ ರುಪಾಯಿ ಮತ್ತೆ ಕುಸಿದಿದೆ. ದಿನದ ವಹಿವಾಟಿನಲ್ಲಿ 27 ಪೈಸೆ ಕಡಿಮೆಯಾಗಿ 67.14ಕ್ಕೆ ಕುಸಿಯಿತು.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More