ಭಾರತದ ಆರ್ಥಿಕತೆಯನ್ನು ಹದಗೆಡಿಸಲಿದೆ ಅಮೆರಿಕ-ಇರಾನ್ ಜಿದ್ದಾಜಿದ್ದಿ!

ಈಗಾಗಲೇ ಸತತವಾಗಿ ಏರುತ್ತಿರುವ ಕಚ್ಚಾತೈಲ ಬೆಲೆಯ ಬಿಸಿ ಭಾರತದ ಆರ್ಥಿಕತೆ ಮೇಲಾಗುತ್ತಿದೆ. ಈಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಪರಮಾಣು ಒಪ್ಪಂದದಿಂದ ಹೊರಬರುವುದಾಗಿ ಘೋಷಿಸಿದ್ದಾರೆ. ಇದರಿಂದಾಗಿ ಕಚ್ಚಾತೈಲ ಬೆಲೆ ತೀವ್ರವಾಗಿ ಏರುವ ಭೀತಿ ಆರಂಭವಾಗಿದೆ

ಇರಾನ್ ಪರಮಾಣು ಒಪ್ಪಂದಿಂದ ಹೊರಬರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಮೇ 12ಕ್ಕೆ ಮುಗಿಯಲಿದ್ದ ಇರಾನ್ ಪರಮಾಣು ಒಪ್ಪಂದವನ್ನು ವಿಸ್ತರಿಸುವ ನಿಟ್ಟಿನಲ್ಲಿ ನಡೆದ ಪ್ರಯತ್ನಗಳಿಗೆ ಇರಾನ್ ಅಧ್ಯಕ್ಷ ಹಸನ್ ರೊಹಾನಿ ಪೂರಕವಾಗಿ ಸ್ಪಂದಿಸಿಲ್ಲ ಎಂಬುದು ಅಮೆರಿಕ ಆರೋಪ. ಇರಾನ್ ಪರಮಾಣು ಒಪ್ಪಂದದಿಂದ ಅಮೆರಿಕ ಹೊರಗುಳಿಯುವುದೆಂದರೆ ಈ ಹಿಂದೆ ಇರಾನ್ ಮೇಲೆ ಹೇರಿದ್ದ ಆರ್ಥಿಕ ನಿರ್ಬಂಧಗಳು ಪೂರ್ಣ ಪ್ರಮಾಣದಲ್ಲಿ ಮುಂದುವರಿಯುತ್ತವೆ.

ಪೆಟ್ರೋಲಿಯಂ ರಫ್ತು ದೇಶಗಳ ಸಂಘಟನೆ (ಒಪೆಕ್) ಸದಸ್ಯ ರಾಷ್ಟ್ರವಾಗಿರುವ ಇರಾನ್, ಅತಿ ಹೆಚ್ಚು ಕಚ್ಚಾತೈಲ ರಫ್ತು ಮಾಡುವ ದೇಶಗಳ ಪೈಕಿ ಮೂರನೇ ಸ್ಥಾನದಲ್ಲಿದೆ. ನಿರ್ಬಂಧ ಹೇರಿದ ನಂತರ ಇರಾನ್ ಕಚ್ಚಾತೈಲ ಉತ್ಪಾದನೆಯು ಪ್ರತಿನಿತ್ಯ 5 ದಶಲಕ್ಷ ಬ್ಯಾರಲ್‌ನಿಂದ (ಬಿಬಿಪಿಡಿ) 3 ದಶಲಕ್ಷ ಬಿಬಿಪಿಡಿಗೆ ಇಳಿಯಲಿದೆ. ಅಂದರೆ, ಇರಾನ್ ಕಚ್ಚಾತೈಲ ಉತ್ಪಾದನೆ ಶೇ.40ರಷ್ಟು ಕುಗ್ಗಲಿದೆ. ಅಮೆರಿಕ, ಚೀನಾ ನಂತರ ಅತಿ ಹೆಚ್ಚು ಕಚ್ಚಾತೈಲ ಆಮದು ಮಾಡಿಕೊಳ್ಳುವ ರಾಷ್ಟ್ರವೆಂದರೆ ಭಾರತ. ಭಾರತಕ್ಕೆ ಇರಾನ್‌ನಿಂದ ಹೆಚ್ಚಿನ ಕಚ್ಚಾತೈಲ ಆಮದಾಗುವುದರಿಂದ ಈ ಬೆಳವಣಿಗೆ ನೇರ ಪರಿಣಾಮ ಬೀರುತ್ತದೆ.

ಫೆಬ್ರವರಿ ತಿಂಗಳ ಅಂಕಿ-ಅಂಶಗಳ ಪ್ರಕಾರ, ಸರಾಸರಿ 5 ಲಕ್ಷ ಬ್ಯಾರೆಲ್ ಪ್ರತಿನಿತ್ಯ ಕಚ್ಚಾತೈಲವನ್ನು ಇರಾನ್‌ನಿಂದ ರಫ್ತು ಮಾಡಿಕೊಳ್ಳಲಾಗುತ್ತಿದೆ. ಇದು ಭಾರತದ ನಿತ್ಯದ ಆಮದು 4,930,000 ಬ್ಯಾರೆಲ್‌ಗೆ ಹೋಲಿಸಿದರೆ ಆಜುಬಾಜು ಶೇ.10ರಷ್ಟಾಗುತ್ತದೆ. ಇರಾನ್ ಉತ್ಪಾದನೆ ತಗ್ಗಿಸಿದರೆ, ಅದಕ್ಕೆ ಪೂರಕವಾಗಿ ಭಾರತ ಬೇರೆ ರಾಷ್ಟ್ರಗಳಿಂದ ರಫ್ತು ಮಾಡಿಕೊಳ್ಳಬೇಕಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಏರಿಳಿತ ಏನೇ ಇದ್ದರೂ ಭಾರತ ಇರಾನ್‌ನಿಂದ ಆಮದು ಮಾಡಿಕೊಳ್ಳುವ ಕಚ್ಚಾತೈಲಕ್ಕೆ ಪೂರ್ವನಿಗದಿತ ದರವನ್ನೇ ಪಾವತಿಸುತ್ತದೆ. ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಬೇಕಾದರೆ ಈಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರವನ್ನೇ ನೀಡಬೇಕಾಗುತ್ತದೆ.

ಶೇ.80ರಷ್ಚು ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಭಾರತಕ್ಕೆ ಈ ಬೆಳವಣಿಗೆ ಆಘಾತಕಾರಿ. ಈಗಾಗಲೇ ಏರುಹಾದಿಯಲ್ಲಿರುವ ಕಚ್ಚಾತೈಲ ಬೆಲೆಯಿಂದಾಗಿ ಬೊಕ್ಕಸಕ್ಕೆ ಹೊರೆಯಾಗುತ್ತಿದೆ. ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಸರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿವೆ. ಇರಾನ್ ಮೇಲೆ ಆರ್ಥಿಕ ನಿರ್ಬಂಧ ಹೇರುವುದರಿಂದ ಜಾಗತಿಕ ಕಚ್ಚಾತೈಲ ಬೆಲೆ ಮತ್ತಷ್ಟು ಏರುತ್ತದೆ. ಅದರ ಪರಿಣಾಮ ನೇರವಾಗಿ ದೇಶೀಯ ಮಾರುಕಟ್ಟೆ ಮೇಲಾಗುತ್ತದೆ. ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಏರುತ್ತದೆ. ಈ ಏರಿಕೆಯಿಂದಾಗಿ ಸಾರಿಗೆ ಸೇರಿದಂತೆ ಪೂರಕ ಸೇವೆಗಳ ದರ ಏರುತ್ತದೆ.

ಈ ಬೆಲೆ ಏರಿಕೆ ವಿಷವೃತ್ತ ವಿಸ್ತಾರವಾದಂತೆ ಜೀವನವಶ್ಯಕ ವಸ್ತುಗಳ ಬೆಲೆಗಳು ಏರುತ್ತವೆ. ಈ ಬೆಲೆ ಏರಿಕೆ ನೇರವಾಗಿ ಗ್ರಾಹಕರನ್ನು ತಟ್ಟುವಂಥದ್ದು. ಇದರ ಪರಿಣಾಮ ಪರೋಕ್ಷವಾಗಿ ಇಡೀ ದೇಶದ ಆರ್ಥಿಕತೆ ಮೇಲೂ ಆಗುತ್ತದೆ. ಬೆಲೆ ಏರಿಕೆ ಆದಂತೆಲ್ಲ ಹಣದುಬ್ಬರ ಏರುತ್ತದೆ. ಹಣದುಬ್ಬರ ಏರಿದಂತೆ ಬಡ್ಡಿದರವೂ ಜಿಗಿಯುತ್ತದೆ. ನಂತರ ಬಡ್ಡಿದರ ಏರಿಕೆಯಿಂದಾಗಿ ಸಾಲದ ಮೇಲಿನ ಬೇಡಿಕೆ ತಗ್ಗುವುದರಿಂದ ಇಡೀ ಆರ್ಥಿಕತೆಯ ಚಲನಶೀಲತೆ ನಿಧಾನಗತಿಗೆ ಸರಿಯುತ್ತದೆ. ಅದರ ವಿಸ್ತೃತ ರೂಪವೇ ಆರ್ಥಿಕ ಹಿಂಜರಿಕೆ. ಒಂದು ಸುತ್ತಿನ ಆರ್ಥಿಕ ಹಿಂಜರಿತವು ನಮ್ಮ ಜಿಡಿಪಿಯ ಮೇಲೆ ನೇರ ಪರಿಮಾಣ ಬೀರುತ್ತದೆ. ಶೇ.1ರಷ್ಟು ಜಿಡಿಪಿ ತಗ್ಗಿದರೂ ನಾವು ಆ ಹಿಂಜರಿತದಿಂದ ಚೇತರಿಸಿಕೊಳ್ಳಲು ನಾಲ್ಕೈದು ತ್ರೈಮಾಸಿಕಗಳೇ ಬೇಕಾಗುತ್ತದೆ.

ಬೆಲೆ ಏರಿಕೆ ಒಂದು ಕಡೆ ಜನರ ಜೀವನದ ಮೇಲೆ ಪರಿಣಾಮ ಬೀರಿದರೆ, ಕಚ್ಚಾತೈಲ ಬೆಲೆ ಏರಿಕೆಯಿಂದಾಗಿ ದೇಶದ ವಿದೇಶಿ ವಿನಿಮಯ ಮೀಸಲು ಕರಗುತ್ತ ಬರುತ್ತದೆ. ವಿದೇಶಿ ವಿನಿಮಯ ಮೀಸಲು ತಗ್ಗಿದರೆ ಅದು ಆರ್ಥಿಕತೆಯ ಬಿಕ್ಕಟ್ಟಿಗೂ ಕಾರಣವಾಗುತ್ತದೆ.

ಈಗ ಭಾರತದ ಮುಂದೆ ಎರಡು ಸವಾಲುಗಳಿವೆ. ಕಚ್ಚಾತೈಲ ಬೆಲೆ ಏರಿಕೆಯಿಂದಾಗುವ ಹೊರೆಯನ್ನು ನಿಭಾಯಿಸುವುದು ಒಂದಾದರೆ, ಕಚ್ಚಾತೈಲ ಖರೀದಿ ಮಾಡಲು ಬಳಸುವ ಡಾಲರ್ ವಿರುದ್ಧ ರುಪಾಯಿ ತೀವ್ರವಾಗಿ ಅಪಮೌಲ್ಯಗೊಳ್ಳುತ್ತಿುರವುದು ಮತ್ತೊಂದು ಸವಾಲು. ಈ ಎರಡೂ ನಮ್ಮ ಆರ್ಥಿಕತೆ ಮೇಲೆ ತೀವ್ರ ಪರಿಣಾಮ ಬೀರುತ್ತವೆ.

ತೈಲ ಸಚಿವಾಲಯದ ಪೆಟ್ರೋಲಿಯಂ ಪ್ಲಾನಿಂಗ್ ಅಂಡ್ ಅನಾಲಿಸಿಸ್ ಪ್ರಕಾರ, 2016-17 ಸಾಲಿನಲ್ಲಿ ಭಾರತ 213.93 ಮಿಲಿಯನ್ ಟನ್‌ಗಳಷ್ಟು ಕಚ್ಚಾತೈಲವನ್ನು 196 ಬಿಲಿಯನ್ ಡಾಲರ್ ಅಂದರೆ 4.7 ಲಕ್ಷ ಕೋಟಿ ರುಪಾಯಿ ಪಾವತಿಸಿ ಆಮದು ಮಾಡಿಕೊಂಡಿದೆ. 2017-18ನೇ ಸಾಲಿನಲ್ಲಿ 219.15 ಮಿಲಿಯನ್ ಟನ್ ಕಚ್ಚಾತೈಲವನ್ನು 5.6ಲಕ್ಷ ಕೋಟಿ ರುಪಾಯಿ ಪಾವತಿಸಿ ಆಮದು ಮಾಡಿಕೊಂಡಿದೆ. ಹಿಂದಿನ ಸಾಲಿಗೆ ಹೋಲಿಸಿದರೆ ಕಚ್ಚಾತೈಲ ಆಮದು ಹೊರೆಯು ಶೇ.25ರಷ್ಟು ಏರಿದೆ.

ದರ ಏರಿಕೆ ಎಷ್ಟುದೊಡ್ಡ ಪ್ರಮಾಣದಲ್ಲಿ ಭಾರತದ ಮೇಲೆ ಪರಿಣಾಮ ಬೀರುತ್ತದೆ ಎಂದರೆ, ಬ್ಯಾರೆಲ್ ಗೆ 1 ಡಾಲರ್ ಏರಿದರೆ ಭಾರತದ ಮೇಲೆ 823 ಕೋಟಿ ರುಪಾಯಿ ಹೆಚ್ಚುವರಿ ಹೊರೆ ಬೀಳುತ್ತದೆ. ಹಾಗೆಯೇ, ಡಾಲರ್ ವಿರುದ್ಧ ರುಪಾಯಿ ಕುಸಿದಾಗಲೂ ಅದೇ ರೀತಿಯ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈಗ ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿಯುತ್ತಿದೆ. ಅತ್ತ ಕಚ್ಚಾತೈಲದ ಬೆಲೆಯೂ ಏರುತ್ತಿದೆ. ಡಾಲರ್-ಕಚ್ಚಾತೈಲದ ಅಡಕತ್ತರಿಯಲ್ಲಿ ಭಾರತದ ಆರ್ಥಿಕತೆ ನಲುಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಇಳಿಜಾರಿಗೆ ಸರಿಯಿತು. ಒಂದು ಹಂತದಲ್ಲಿ 29 ಡಾಲರ್ ಗೆ ಕುಸಿದಿತ್ತು. ಈಗ 2014ರಲ್ಲಿದ್ದ ದರಕ್ಕೆ ಮರಳಿದೆ. ಪ್ರತಿ ಬ್ಯಾರೆಲ್‌ಗೆ 70 ಡಾಲರ್‌ಗೆ ಏರಿದೆ. ಇತ್ತ ರುಪಾಯಿ ಸಹ ಡಾಲರ್ ವಿರುದ್ಧ 67 ದಾಟಿದ್ದು ವರ್ಷಾಂತ್ಯಕ್ಕೆ 70ರ ಗಡಿದಾಟುವ ಅಪಾಯವೂ ಇದೆ.

ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಕಚ್ಚಾತೈಲ ಬೆಲೆ ಏರಿಕೆಯಿಂದಾಗುವ ಆರ್ಥಿಕ ಹೊರೆಯನ್ನು ಅತ್ಯಂತ ಜಾಣತನದಿಂದ ನಿಭಾಯಿಸಿದ್ದರು. ಆರ್ಥಿಕ ತಜ್ಞರೂ ಆಗಿದ್ದ ಮನಮೋಹನ್ ಸಿಂಗ್ ಅವರಿಗೆ ಅಂತಹ ಪರಿಸ್ಥಿತಿ ನಿಭಾಯಿಸುವ ಜಾಣ್ಮೆ ಮತ್ತು ಅನುಭವ ಇತ್ತು. ಈಗ ಪ್ರಧಾನಿ ನರೇಂದ್ರ ಮೋದಿಗಾಗಲೀ, ವಿತ್ತ ಸಚಿವ ಅರುಣ್ ಜೇಟ್ಲಿಗಾಗಲೀ ಅಂತಹ ಅನುಭವ ಇಲ್ಲ. ಅವರಿಗೆ ಸಲಹೆ ನೀಡುತ್ತಿರುವ ಆರ್ಥಿಕ ತಜ್ಞರೂ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡುವಲ್ಲಿ ಸಫಲರಾಗಿಲ್ಲ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಕುರಿತ ನಿಲವನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಖಂಡಿಸಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ಕಚ್ಚಾತೈಲ ಬೆಲೆ ತೀವ್ರವಾಗಿ ಏರಿತ್ತು. 110 ಡಾಲರ್‌ಗೆ ಏರಿದ್ದಾಗಲೂ ನಾವು ಬೆಲೆ ಏರಿಕೆಯನ್ನು ನಿಯಂತ್ರಣದಲ್ಲಿ ಇಟ್ಟಿದ್ದೆವು. ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶೇ.67ರಷ್ಟು ಕಚ್ಚಾ ತೈಲ ಬೆಲೆ ತಗ್ಗಿದೆ. ಆದರೆ, ಈ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಶೇ110ರಷ್ಟು ಏರಿಸಿದೆ ಎಂದು ಮನಮೋಹನ್ ಸಿಂಗ್ ಆರೋಪಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರಲ್ಲಿ ಪೆಟ್ರೋಲ್ ₹75, ಡೀಸೆಲ್ ₹66; ಇದು ಸಾರ್ವಕಾಲಿಕ ಗರಿಷ್ಠ ಏರಿಕೆ

ಕೇಂದ್ರ ಸರ್ಕಾರ ಸದ್ಯಕ್ಕೆ ಕಚ್ಚಾತೈಲ ಬೆಲೆಯನ್ನಾಗಲೀ, ರುಪಾಯಿ ಕುಸಿತವನ್ನು ನಿಯಂತ್ರಿಸಲಾಗದು. ಆದರೆ, ಕೇಂದ್ರ ಸರ್ಕಾರ ಮಾಡಬಹುದಾದ ಒಂದು ಉದಾತ್ತ ಕೆಲಸ ಎಂದರೆ, ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಹೇರಿರುವ ಎಕ್ಸೈಜ್ ಸುಂಕವನ್ನು ತಗ್ಗಿಸಬಹುದು. ಪ್ರಧಾನಿ ನರೇಂದ್ರಮೋದಿ ಸರ್ಕಾರ ಕಚ್ಚಾತೈಲ ಬೆಲೆ 29 ಡಾಲರ್‌ಗೆ ಕುಸಿದಾಗ ಅದರ ಪ್ರತಿಫಲವನ್ನು ಗ್ರಾಹಕರಿಗೆ ವರ್ಗಾಹಿಸಲಿಲ್ಲ. ಅದರ ಬದಲಿಗೆ ಒಂಬತ್ತು ಬಾರಿ ಕಚ್ಚಾತೈಲದ ಮೇಲಿನ ಎಕ್ಸೈಜ್ ಸುಂಕವನ್ನು ಏರಿಸಿತು. ಇಳಿಸಿದ್ದು ಒಂದೇ ಬಾರಿ.

ಆಗ ಕಚ್ಚಾತೈಲ ಇಳಿದ ಸಂದರ್ಭದಲ್ಲಿ ಇಳಿದ ಸಂದರ್ಭದಲ್ಲಿ ಎಕ್ಸೈಜು ಸುಂಕ ಹೇರಿದ್ದ ಕೇಂದ್ರ ಸರ್ಕಾರ ಈಗ ಕಚ್ಚಾತೈಲ ತೀವ್ರವಾಗಿ ಏರಿರುವುದರಿಂದ ಜನರಿಗಾಗುವ ಹೊರೆ ತಪ್ಪಿಸಲು ಎಕ್ಸೈಜ್ ಸುಂಕವನ್ನು ತಗ್ಗಿಸಬಹುದು. ಹಾಗೆ ತಗ್ಗಿಸಿದರೆ ಮಾತ್ರ ಬೆಲೆ ಏರಿಕೆ ನಿಯಂತ್ರಣಕ್ಕೆ ಬಂದು ಹಣದುಬ್ಬರ ಏರುವುದು ತಗ್ಗುತ್ತದೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More