ಒಂದೇ ದಶಕದಲ್ಲಿ ಸಾವಿರಾರು ಕೋಟಿಯ ಒಡೆಯರಾದ ಫ್ಲಿಪ್‌ಕಾರ್ಟ್ ಸೃಷ್ಟಿಕರ್ತರು!

ಭಾರತದ ಇ-ಕಾರ್ಮಸ್ ದೈತ್ಯ ಕಂಪನಿಯಾಗಿ ಉದಯಿಸಿರುವ ಫ್ಲಿಪ್‌ಕಾರ್ಟ್ ಅನ್ನು ಚಿಲ್ಲರೆ ದೈತ್ಯ ವಾಲ್ಮಾರ್ಟ್ ತನ್ನ ತೆಕ್ಕೆಗೆ ಪಡೆದಿದೆ. ಇದರಿಂದ ಫ್ಲಿಪ್‌ಕಾರ್ಟ್ ಮಾರುಕಟ್ಟೆ ಮೌಲ್ಯ 21 ಬಿಲಿಯನ್ ಡಾಲರ್! ತಲಾ ಶೇ.5ರಷ್ಟು ಪಾಲು ಹೊಂದಿರುವ ಸಚಿನ್, ಬಿನ್ನಿ ಬಿಲಿಯನೇರ್‌ಗಳಾಗಿದ್ದಾರೆ! 

ಜಗತ್ತಿನ ಅತಿ ಶ್ರೀಮಂತರ ಪಟ್ಟಿಗೆ ಭಾರತದ ಇಬ್ಬರ ಹೆಸರು ಸೇರ್ಪಡೆಯಾಗಿದೆ. ಈ ಇಬ್ಬರು ಸಾವಿರಾರು ಕೋಟ್ಯಾಧಿಪತಿಗಳಾಗಿ ರೂಪುಗೊಂಡಿದ್ದು ಕೇವಲ ಒಂದು ದಶಕದಲ್ಲಿ. ಪುಸ್ತಕಗಳನ್ನು ಮಾರಾಟ ಮಾಡುವ ಉದ್ದೇಶದಿಂದ ರೂಪುಕೊಂಡ ಫ್ಲಿಪ್‌ಕಾರ್ಟ್ ಸಂಸ್ಥಾಪಕರಾದ ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಈಗ 7,370 ಕೋಟಿ ರುಪಾಯಿ ಮೌಲ್ಯದ ಸಂಪತ್ತಿನ ಒಡೆಯರಾಗಿದ್ದಾರೆ.

ಭಾರತದ ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ಅನ್ನು ವಾಲ್ಮಾರ್ಟ್ ಖರೀದಿಸಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಶೇ.77ರಷ್ಟು ಪಾಲನ್ನು ತನ್ನದಾಗಿಸಿಕೊಂಡಿದೆ. ಇದಕ್ಕಾಗಿ ವಾಲ್ಮಾರ್ಟ್ ನೀಡಿರುವ ಮೊತ್ತ 16 ಬಿಲಿಯನ್ ಡಾಲರ್. ಅಂದರೆ, 1,07,200 ಕೋಟಿ ರುಪಾಯಿ. ಈ ವಹಿವಾಟಿನಿಂದಾಗಿ ಫ್ಲಿಪ್‌ಕಾರ್ಟ್‌ ಮಾರುಕಟ್ಟೆ ಮೌಲ್ಯ 136500 ಕೋಟಿಗೆ ಏರಿದೆ.

ವಿಶೇಷ ಎಂದರೆ, ಫ್ಲಿಪ್‌ಕಾರ್ಟ್‌ ಸ್ಥಾಪಿಸುವ ಮುಂಚೆ ಸಚಿನ್ ಮತ್ತು ಬಿನ್ನಿ ಅಮೆಜಾನ್ ಡಾಟ್ಕಾಮ್‌ನಲ್ಲಿ ಉದ್ಯೋಗಿಗಳಾಗಿದ್ದರು. ಅಮೆಜಾನ್ ತೊರೆದು ಬೆಂಗಳೂರಿನ ಕೊರಮಂಗಲದ ಪುಟ್ಟಮನೆಯೊಂದರಲ್ಲಿ ಫ್ಲಿಪ್‌ಕಾರ್ಟ್‌ ಸ್ಥಾಪಿಸಿದರು. ಆರಂಭದಲ್ಲಿ ಅವರ ಉದ್ದೇಶ ಪುಸ್ತಕಗಳನ್ನು ಆನ್‌ಲೈನ್ ಮೂಲಕ ಮಾರಾಟ ಮಾಡುವುದಾಗಿತ್ತು. ಆರಂಭದಲ್ಲಿ ಅದು ಯಶಸ್ವಿಯಾಯಿತು. ಹಾಗೆಯೇ ವಿವಿಧ ಸರಕುಗಳ ಮಾರಾಟ ವಿಸ್ತರಿಸುತ್ತ ಬಂದು ಗೃಹೋಪಯೋಗಿ ವಸ್ತುಗಳೆಲ್ಲವನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಿ ಯಶಸ್ವಿಯಾದರು. ಅವರಿಗೆ ಅತಿ ಹೆಚ್ಚು ವಹಿವಾಟು ಮತ್ತು ಯಶಸ್ಸು ತಂದಿದ್ದು ಸ್ಮಾರ್ಟ್‌ಫೋನ್‌ಗಳು.

ತಲಾ ಶೇ.5ರಷ್ಟು ಪಾಲಿನ ಪೈಕಿ ಸಚಿನ್ ಬನ್ಸಾಲ್ ಪೂರ್ಣಪ್ರಮಾಣದಲ್ಲಿ ತಮ್ಮ ಪಾಲನ್ನು ವಾಲ್ಮಾರ್ಟ್‌ಗೆ ಮಾರಾಟ ಮಾಡಲಿದ್ದರೆ, ಬಿನ್ನಿ ತಮ್ಮ ಪಾಲಿನ ಅಲ್ಪ ಭಾಗವನ್ನು ಮಾರಾಟ ಮಾಡುತ್ತಿದ್ದಾರೆ.

ಸಚಿನ್ ಮತ್ತು ಬಿನ್ನಿ ಬನ್ಸಾಲ್ ಅವರು, ತಾವು ಜತ್ತಿನ ಬಿಲಿಯನೇರ್ (ಅತಿ ಶ್ರೀಮಂತರು) ಪಟ್ಟಿಗೆ ಸೇರಿದ್ದ ಖುಷಿ ತುಂಬಾ ದಿನ ಇರಲಿಕ್ಕಿಲ್ಲ. ಏಕೆಂದರೆ, ಭಾರತದ ಕಾನೂನು ಪ್ರಕಾರ ಕಂಪನಿಗಳ ಷೇರುಗಳನ್ನು ಮಾರಾಟ ಮಾಡಿದ್ದರಿಂದ ಬಂದ ಲಾಭಕ್ಕೆ ಶೇ.20ರಷ್ಟು ಬಂಡವಾಳ ಲಾಭ ತೆರಿಗೆ (ಸಿಜಿಟಿ) ಪಾವತಿಸಬೇಕು.

ಸಚಿನ್, ಬಿನ್ನಿ ಹೆಗ್ಗಳಿಕೆ ಎಂದರೆ, ಅಮೆಜಾನ್‌ನಲ್ಲಿ ಉದ್ಯೋಗ ತೊರೆದು ಹೊಸ ಸಂಸ್ಥೆ ಕಟ್ಟಿ ಬೆಳೆಸಿದ ನಂತರ ಅಮೆಜಾನ್ ಡಾಟ್ಕಾಮ್ ನಡುವೆ ಸ್ಪರ್ಧೆ ಏರ್ಪಟ್ಟಿತು. ಎಷ್ಟೇ ಪ್ರಯತ್ನಪಟ್ಟರೂ ಅಮೆಜಾನ್ ಡಾಟ್ಕಾಮ್ ಫ್ಲಿಪ್‌ಕಾರ್ಟ್‌ ಅನ್ನು ಮಣಿಸಿ ಅಗ್ರಸ್ಥಾನಕ್ಕೆ ಏರಲು ಸಾಧ್ಯವಾಗಲಿಲ್ಲ. ಸತತ ನಷ್ಟದ ನಡುವೆಯೂ ಅಮೆಜಾನ್ 33,000 ಕೋಟಿ ರುಪಾಯಿ ಬಂಡವಾಳ ಹೂಡಿದೆ.

ಒಂದು ಹಂತದಲ್ಲಿ ಅಮೆಜಾನ್ ಡಾಟ್ಕಾಮ್ ಒಡೆಯ ಜೆಫ್ ಬಿಜೊಸ್ ಅವರೂ ಫ್ಲಿಪ್‌ಕಾರ್ಟ್‌ ಖರೀದಿ ಮಾಡಲು ಆಸಕ್ತಿ ತೋರಿಸಿದ್ದರು. ಅವರು ಫ್ಲಿಪ್‌ಕಾರ್ಟ್‌ಗೆ ಕಟ್ಟಿದ ಮೌಲ್ಯ ಕಡಮೆ ಇತ್ತು. ಹೀಗಾಗಿ ವ್ಯವಹಾರ ಕುದುರಿರಲಿಲ್ಲ. ವಾಲ್ಮಾರ್ಟ್ ಖರೀದಿಸಲು ಮುಂದೆ ಬಂದಾಗಲೂ ಅಮೆಜಾನ್ ಮತ್ತೆ ಖರೀದಿ ಮಾಡುವುದಾಗಿ ಹೇಳಿತ್ತು. ಮಾರುಕಟ್ಟೆ ತಜ್ಞರ ಪ್ರಕಾರ, ಫ್ಲಿಪ್‌ಕಾರ್ಟ್‌-ವಾಲ್ಮಾರ್ಟ್ ವ್ಯವಹಾರ ಕುದುರುವುದನ್ನು ಹಾಳುಮಾಡುವ ಸಲುವಾಗಿಯೇ ಅಮೆಜಾನ್ ತಾನೂ ಖರೀದಿ ಮಾಡುವುದಾಗಿ ಹೇಳಿಕೊಂಡಿತ್ತು.

ಇದನ್ನೂ ಓದಿ : ಫ್ಲಿಪ್‌ಕಾರ್ಟ್ ಮೂಲಕ ಭಾರತಕ್ಕೆ ಬರಲು ‘ಚಿಲ್ಲರೆ ದೈತ್ಯ’ ವಾಲ್ಮಾರ್ಟ್ ಹವಣಿಕೆ

ಮುಂದೇನು?

  • ಭಾರತದಲ್ಲಿ ತನ್ನ ಚಿಲ್ಲರೆ ವಹಿವಾಟು ವಿಸ್ತರಿಸುವ ಉದ್ದೇಶದಿಂದ ಫ್ಲಿಪ್‌ಕಾರ್ಟ್‌ ಖರೀದಿಸಿರುವ ವಾಲ್ಮಾರ್ಟ್ 13000 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಿ ಕಂಪನಿಯನ್ನು ಮತ್ತಷ್ಟು ಪ್ರಬಲಗೊಳಿಸಲಿದೆ.
  • ಕಳೆದ 9 ವರ್ಷಗಳಿಂದ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿರುವ ಸಚಿನ್ ಬನ್ಸಾಲ್ ತಮ್ಮ ಶೇ.5ರಷ್ಟೂ ಪಾಲನ್ನು ಮಾರಿ ಕಂಪನಿಯಿಂದ ಹೊರಹೋಗುತ್ತಾರೆ.
  • ಅಲ್ಪಪಾಲನ್ನು ಮಾತ್ರ ಮಾರಾಟ ಮಾಡುವ ಬಿನ್ನಿ ಬನ್ಸಾಲ್, ಕಂಪನಿಯಲ್ಲಿ ಗ್ರೂಪ್ ಸಿಇಒ ಮತ್ತು ಎಕ್ಸಿಕ್ಯುಟಿವ್ ಚೇರ್ಮನ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
  • ವಾಲ್ಮಾರ್ಟ್ ಅಲ್ಲದೆ, ಹಾಲಿ ಪಾಲುದಾರರಾಗಿರುವ ಬಿನ್ನಿ ಬನ್ಸಾಲ್, ಟೆನ್ಸೆಂಟ್ ಹೋಲ್ಡಿಂಗ್ಸ್, ಟೈಗರ್ ಗ್ಲೋಬಲ್ ಮ್ಯಾನೇಜ್‌ಮೆಂಟ್ ಎಲ್ಎಲ್ಸಿ ಮತ್ತು ಮೈಕ್ರೋಸಾಫ್ಟ್ ಕಾರ್ಪ್ ಅಲ್ಪಪಾಲು ಹೊಂದಿರುತ್ತವೆ.
  • ದೇಶವ್ಯಾಪಿ ಇರುವ ಕಿರಾಣಿ ಅಂಗಡಿಗಳೊಂದಿಗೆ ಸಂಪರ್ಕ ಸಾಧಿಸಿ, ಅವುಗಳನ್ನು ಮೇಲ್ದರ್ಜೆಗೆ ಏರಿಸಿ, ತನ್ನ ಚಿಲ್ಲರೆ ವ್ಯಾಪಾರ ವಹಿವಾಟನ್ನು ವಿಸ್ತರಿಸಿಕೊಳ್ಳುವುದು ವಾಲ್ಮಾರ್ಟ್ ಉದ್ದೇಶ.
  • ಕಂಪನಿಯು ಮುಂಬರುವ ದಿನಗಳಲ್ಲಿ ಡಿಜಿಟಲ್ ಪೇಮೆಂಟ್, ಮೂಲಭೂತ ಸೌಲಭ್ಯಗಳಿಗಾಗಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಲಿದೆ.
  • ಐದು ವರ್ಷಗಳ ನಂತರ ಭಾರತದ ಚಿಲ್ಲರೆ ವ್ಯಾಪಾರದ ಚಿತ್ರಣವನ್ನೇ ಬದಲಿಸುವುದು ಅದರ ಗುರಿ.
ಪ್ರಧಾನಿ ನರೇಂದ್ರ ಮೋದಿ ಮುಂದಿರುವ ಅತಿದೊಡ್ಡ ಸವಾಲು ಯಾವುದು ಗೊತ್ತೇ?
ಎರಡೇ ವರ್ಷದಲ್ಲಿ ಇಪ್ಪತ್ತು ಕೋಟಿ ಗ್ರಾಹಕರನ್ನು ಪಡೆದ ರಿಲಯನ್ಸ್ ಜಿಯೋ
ನಿಫ್ಟಿ ಕಂಪನಿಗಳಲ್ಲಿ 588 ಲೈಂಗಿಕ ಕಿರುಕುಳ ಪ್ರಕರಣ; ಐಟಿಯಲ್ಲೇ ಹೆಚ್ಚು‍!
Editor’s Pick More