ರಿಲಯನ್ಸ್ ಜಿಯೋ ತಂತ್ರಕ್ಕೆ ಏರ್ಟೆಲ್, ಐಡಿಯಾ ತೀವ್ರ ಕುಸಿತ; ಸೆನ್ಸೆಕ್ಸ್ ಜಿಗಿತ

ವಿಸ್ತೃತ ಮಾರುಕಟ್ಟೆ ಬಹುತೇಕ ಸೂಚ್ಯಂಕ ಏರುಹಾದಿಯಲ್ಲಿ ವಹಿವಾಟು ಅಂತ್ಯಗೊಳಿಸಿವೆ. ರಿಲಯನ್ಸ್ ಜಿಯೋ ಹೊಸ ಪ್ಲಾನ್ ಘೋಷಣೆಯಿಂದಾಗಿ ಏರ್ಟೆಲ್, ಐಡಿಯಾ ಷೇರುಗಳು ಕುಸಿದವು. ಬ್ಯಾಂಕಿಂಗ್ ವಲಯದಲ್ಲಿ ಮತ್ತೆ ಚೇತರಿಕೆ ಕಂಡುಬಂದಿದ್ದು, ನಿಫ್ಟಿ ನಿರ್ಣಾಯಕ ಮಟ್ಟ 10,800ರ ಗಡಿ ದಾಟಿದೆ

ರಿಲಯನ್ಸ್ ಜಿಯೋ ಪೋಸ್ಟ್ ಪೇಯ್ಡ್ ಪ್ಲಾನ್ ₹199 ಇದೇ ಮೇ 15ರಿಂದ ಜಾರಿಗೆ ಬರಲಿದೆ ಎಂಬ ಸುದ್ದಿಯಿಂದ ಷೇರುಪೇಟೆಯಲ್ಲಿ ಟೆಲಿಕಾಂ ವಲಯದ ಷೇರುಗಳು ತತ್ತರಿಸಿವೆ. 199 ರುಪಾಯಿಗೆ 25 ಜಿಬಿ ಡೇಟಾ ಜೊತೆಗೆ ಉಳಿದ ಎಲ್ಲ ಸೇವೆಗಳೂ ಉಚಿತವಾಗಿರುತ್ತವೆ. ಪೋಸ್ಟ್ ಪೇಯ್ಡ್ ಸ್ಕೀಮ್‌ನಲ್ಲಿ ಅತಿ ಕಡಿಮೆ ದರದ ಪ್ಲಾನ್ ಇದಾಗಿದೆ. ಹೀಗಾಗಿ, ಹಾಲಿ ಇರುವ ಗ್ರಾಹಕರು ರಿಲಯನ್ಸ್ ಜಿಯೋಗೆ ಮೊಬೈಲ್ ಪೋರ್ಟ್ ಮಾಡಿಕೊಳ್ಳುವ ಆತಂಕ ಉಳಿದ ಮೊಬೈಲ್ ಕಂಪನಿಗಳದ್ದು.

ಈ ಬೆಳವಣಿಗೆಗೆ ಮಾರುಕಟ್ಟೆ ತೀಕ್ಷ್ಣ ವಾಗಿ ಪ್ರತಿಕ್ರಿಯಿಸಿದೆ. ಐಡಿಯಾ ಸೆಲ್ಯುಲಾರ್ ಶೇ.12ರಷ್ಟು ಕುಸಿದು, 51.40ಕ್ಕೆ ಇಳಿದಿದೆ. ಭಾರತಿ ಏರ್ಟೆಲ್ ಶೇ.6.20ರಷ್ಟು ಕುಸಿದರೆ, ರಿಲಯನ್ಸ್ ಕಮ್ಯುನಿಕೇಶನ್ಸ್ ಶೇ.2ರಷ್ಟು ಕುಸಿದಿದೆ. ರಿಲಯನ್ಸ್ ಜಿಯೋ ಮಾರುಕಟ್ಟೆ ಬಂದ ನಂತರ ಏರ್ಟೆಲ್, ಐಡಿಯಾ ಮತ್ತು ರಿಲಯನ್ಸ್ ಕಮ್ಯುನಿಕೇಶನ್ಸ್ ತೀವ್ರ ಕುಸಿದಿವೆ. ರಿಲಯನ್ಸ್ ಕಮ್ಯುನಿಕೇಶನ್ಸ್ ತೀವ್ರ ಸಾಲದ ಹೊರೆಯಿಂದ ನಲುಗುತ್ತಿದೆ. ಏರ್ಟೆಲ್ ಮತ್ತು ಐಡಿಯಾ ಕಂಪನಿಗಳ ಆದಾಯ ಮತ್ತು ಲಾಭದ ಪ್ರಮಾಣ ಗಣನೀಯವಾಗಿ ಕುಸಿದಿದೆ. ಲಾಭದಲ್ಲಿರುತ್ತಿದ್ದ ಈ ಕಂಪನಿಗಳು ಈಗ ನಷ್ಟದ ಹಾದಿಗೆ ಬಂದಿವೆ.

ರಿಲಯನ್ಸ್ ಜಿಯೋ ಇದುವರೆಗೂ ಪ್ರಿಪೇಯ್ಡ್ ವಲಯದಲ್ಲಿ ಮಾತ್ರ ದರ ಸಮರಕ್ಕೆ ಇಳಿದಿತ್ತು. ಈಗ ಪೋಸ್ಟ್ ಪೇಯ್ಡ್ ವಲಯಕ್ಕೂ ದರ ಸಮರ ವಿಸ್ತರಿಸಿದೆ. ಇದು ಬರುವ ದಿನಗಳಲ್ಲಿ ಉಳಿದ ಕಂಪನಿಗಳ ಆದಾಯ ಮತ್ತು ಲಾಭದ ಪ್ರಮಾಣವನ್ನು ಗಣನೀಯವಾಗಿ ಕುಗ್ಗಿಸುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಪೇಟೆಯಲ್ಲಿ ಈ ಷೇರುಗಳ ಮಾರಾಟ ಒತ್ತಡ ಹೆಚ್ಚಾಗಿತ್ತು. ಐಡಿಯಾ ವೊಡಾಫೋನ್ ಜೊತೆ ವಿಲೀನ ಪ್ರಕ್ರಿಯೆ ಪ್ರಾರಂಭವಾಗಬೇಕಿದೆ. ಅದಾದ ನಂತರ ಅತಿದೊಡ್ಡ ಮೊಬೈಲ್ ಕಂಪನಿಯಾಗಿ ಹೊರಹೊಮ್ಮಲಿದೆ. ಆದರೆ, ರಿಲಯನ್ಸ್ ಜಿಯೋ ವಿಸ್ತರಣೆ ಮತ್ತು ಹೊಸ ಯೋಜನೆಗಳು ಐಡಿಯಾ ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿದೆ.

ಬರುವ ದಿನಗಳಲ್ಲಿ ಟೆಲಿಕಾಂ ವಲಯದ ಷೇರುಗಳು ಮುಖ್ಯವಾಗಿ, ಮೊಬೈಲ್ ಸೇವೆ ಒದಗಿಸುತ್ತಿರುವ ಕಂಪನಿಗಳ ಷೇರುಗಳು ಕುಸಿಯಲಿವೆ. ರಿಲಯನ್ಸ್ ಜಿಯೋ ಮೊಬೈಲ್ ಸೇವೆ ಒದಗಿಸುತ್ತಿರುವ ರಿಲಯನ್ಸ್ ಇಂಡಸ್ಟ್ರೀಸ್ ಷೇರು ಏರುಹಾದಿಯಲ್ಲಿ ಸಾಗಲಿದೆ ಎಂಬುದು ಮಾರುಕಟ್ಟೆ ತಜ್ಞರ ಅಂದಾಜು.

ಟಿಲಿಕಾಂ ವಲಯದ ಹೊರತಾಗಿ ವಿಸ್ತೃತ ಮಾರುಕಟ್ಟೆ ಬಹುತೇಕ ಏರುಹಾದಿಯಲ್ಲಿ ಸಾಗಿದೆ. ಸೆನ್ಸೆಕ್ಸ್ 289.52 ಅಂಶ ಏರಿದ್ದು, 35,535.79ಕ್ಕೆ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 90 ಅಂಶ ಏರಿ, 10,806ಕ್ಕೆ ವಹಿವಾಟು ಮುಗಿಸಿದೆ. ನಿಫ್ಟಿ ಮೆಟಲ್ ಶೇ.1.56ರಷ್ಟು ಏರಿದೆ. ನಿಫ್ಟಿ ಫಿನ್ ಸರ್ವೀಸ್, ನಿಫ್ಟಿ ಪ್ರೈವೆಟ್ ಬ್ಯಾಂಕ್, ನಿಫ್ಟಿ ಬ್ಯಾಂಕ್, ನಿಫ್ಟಿ ಕಮಾಡಿಟೀಸ್ ಸೂಚ್ಯಂಕಗಳು ಶೇ.1-1.50ರಷ್ಟು ಏರಿವೆ. ನಿಫ್ಟಿ ಎಫ್ಎಂಜಿಸಿ, ನಿಫ್ಟಿ ಎಂಎನ್ಸಿ, ನಿಫ್ಟಿ ಸರ್ವೀಸಸ್, ನಿಫ್ಟಿ ಪಿಎಸ್ಯು ಬ್ಯಾಂಕ್, ನಿಫ್ಟಿ ಗ್ರೋತ್ ಸೆಕ್ಟರ್, ನಿಫ್ಟಿ ಮಿಡ್ ಕ್ಯಾಪ್ 50 ನಿಫ್ಟಿ ಎನರ್ಜಿ, ನಿಫ್ಟಿ ಕ್ವಾಲಿಟಿ 30, ನಿಫ್ಟಿ ಮಿಡಿಯಾ ಸೂಚ್ಯಂಕಗಳು ಶೇ.0.50-1ರಷ್ಟು ಏರಿದವು. ನಿಫ್ಟಿ ಫಾರ್ಮ ಶೇ.1.16ರಷ್ಟು, ನಿಫ್ಟಿ ರಿಯಾಲ್ಟಿ, ನಿಫ್ಟಿ ಇನ್ಫ್ರಾ ಶೇ.0.50ರಷ್ಟು ಕುಸಿದವು.

ಜಾಗತಿಕ ದರ ಸಮರ ಒತ್ತಡ ಬಹುತೇಕ ನಿವಾರಣೆ ಆದ ಹಿನ್ನೆಲೆಯಲ್ಲಿ ಮೆಟಲ್ ವಲಯದ ಷೇರುಗಳು ಜಿಗಿದಿವೆ. ಜೆಎಸ್ಪಿಎಲ್ ಶೇ.5ರಷ್ಟು ಜಿಗಿಯಿತು. ಹಿಂದೂಸ್ತಾನ್ ಕಾಪರ್ ಶೇ.4, ವೇದಾಂತ, ಟಾಟಾ ಸ್ಟೀಲ್, ನಾಲ್ಕೊ, ಜೆಎಸ್‌ಡಬ್ಲ್ಯೂ ಸ್ಟೀಲ್, ಹಿಂದೂಸ್ತಾನ್ ಜಿಂಕ್, ಸೇಲ್, ಕೋಲ್ ಇಂಡಿಯಾ ಶೇ.1-4ರಷ್ಟು ಏರಿವೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಷೇರುಗಳಿಗೆ ಹೆಚ್ಚಿನ ಬೇಡಿಕೆ ಬಂದ ಕಾರಣ ನಿಫ್ಟಿ ಫಿನ್ ಸರ್ವಿಸ್ ಸೂಚ್ಯಂಕ ಶೇ.1.20ರಷ್ಟು ಏರಿದೆ. ಐಐಎಫ್ಎಲ್ ಹೋಲ್ಡಿಂಗ್ಸ್ ಶೇ.3.37ರಷ್ಟು ಜಿಗಿದಿದೆ. ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್, ಬಜಾಬ್ ಫಿನ್ ಸರ್ವೀಸ್, ಬಜಾಬ್ ಫೈನಾನ್ಸ್, ಇಡಿಲ್ವಿಸ್ ಫಿನ್ ಸರ್ವೀಸ್, ಐಸಿಐಸಿಐ ಪ್ರುಡೆನ್ಷಿಯಲ್ ಸರ್ವೀಸ್ ಶೇ.1-3ರಷ್ಟು ಏರಿದವು.

ಸೌತ್ ಇಂಡಿಯನ್ ಬ್ಯಾಂಕ್, ಆರ್ಬಿಎಲ್ ಬ್ಯಾಂಕ್ ಹೊರತಾಗಿ ಎಲ್ಲ ಖಾಸಗಿ ಬ್ಯಾಂಕುಗಳು ಜಿಗಿದವು. ಯೆಸ್ ಬ್ಯಾಂಕ್, ಕೊಟಕ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಶೇ.1-2ರಷ್ಟು ಏರಿದವು. ಎಚ್ಡಿಎಫ್ಸಿ, ಫೆಡರಲ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಶೇ.1ರಷ್ಟು ಏರಿವೆ. ಎಫ್ಎಂಸಿಜಿ ವಲಯದ ಗೋದ್ರೇಜ್ ಇಂಡಸ್ಟ್ರೀಸ್, ಬ್ರಿಟಾನಿಯಾ, ಯುನೈಟೆಡ್ ಬ್ರಿವರೀಸ್, ಇಮಾಮಿ, ಐಟಿಸಿ, ಕೋಲ್ಗೆಟ್ ಪಾಮಲಿವ್, ಹಿಂದೂಸ್ತಾನ್ ಯೂನಿಲಿವರ್, ಜಿಎಸ್ಕೆ ಕನ್ಸೂಮರ್ ಹೆಲ್ತ್ ಶೇ.1-2ರಷ್ಟು ಏರಿದವು.

ಇದನ್ನೂ ಓದಿ : ಎಲ್ಟಿಸಿಜಿ ತೆರಿಗೆ ಜಾರಿ; ಮ್ಯೂಚುವಲ್ ಫಂಡ್ ಹೂಡಿಕೆ ಮೇಲಿನ ಪರಿಣಾಮವೇನು?

ಕಳೆದ ವಾರವಿಡೀ ಸುದ್ದಿಯಲ್ಲಿದ್ದ ಪಿಸಿ ಜುವೆಲ್ಲರ್ ಷೇರು ಮರುಖರೀದಿ ದರವನ್ನು 350 ರುಪಾಯಿಗೆ ನಿಗದಿ ಮಾಡಿ ಆಡಳಿತ ಮಂಡಳಿ ನಿರ್ಧಾರ ಕೈಗೊಂಡಿದೆ. ದಿನದ ಆಂರಭದಲ್ಲಿ ಶೇ.18ರಷ್ಟು ಜಿಗಿದಿದ್ದ ಷೇರು ನಂತರ ತೀವ್ರ ಮಾರಾಟ ಒತ್ತಡದಿಂದಾಗಿ ಕುಸಿಯಿತು. ದಿನದ ಅಂತ್ಯಕ್ಕೆ ಶೇ.4ರಷ್ಟು ಕುಸಿದು, 200ರ ಮಟ್ಟ ಕಾಯ್ದುಕೊಂಡಿತು. ಷೇರು ಏರಿಳಿತ ತೀವ್ರವಾಗಿದ್ದು, ಸಣ್ಣ ಹೂಡಿಕೆದಾರರು ಆತಂಕದಲ್ಲಿದ್ದಾರೆ. ದಿನದ ವಹಿವಾಟಿನಲ್ಲಿ ಕೆಲವೇ ಕೆಲವರು ಭಾರಿ ಲಾಭ ಮಾಡಿಕೊಳ್ಳುತ್ತಿದ್ದು, ಸಣ್ಣ ಹೂಡಿಕೆದಾರರು ನಷ್ಟ ಮಾಡಿಕೊಳ್ಳುತ್ತಿದ್ದಾರೆ. ಮೇ 25ರಂದು ಕಂಪನಿ ನಾಲ್ಕನೇ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿದ್ದು ನಂತರ ಷೇರು ಸ್ಥಿರವಾಗುವ ನಿರೀಕ್ಷೆ ಇದೆ.

ಚಿನಿವಾರ ಪೇಟೆಯಲ್ಲಿ ಚಿನ್ನ 190 ರುಪಾಯಿ ಏರಿದ್ದು, 31,5540ರ ಆಜುಬಾಜಿನಲ್ಲಿ ವಹಿವಾಟಾಗಿದೆ. ರುಪಾಯಿ ಕುಸಿತ ಮುಂದುವರಿದಿದ್ದು, 67ರ ಗಡಿಯಿಂದ ಇಳಿಯುವುದು ಸಾಧ್ಯವಾಗಿಲ್ಲ. ದಿನದ ಅಂತ್ಯಕ್ಕೆ 67.33ರಲ್ಲಿ ವಹಿವಾಟು ನಡೆಸಿದೆ.

ಪ್ರಧಾನಿ ನರೇಂದ್ರ ಮೋದಿ ಮುಂದಿರುವ ಅತಿದೊಡ್ಡ ಸವಾಲು ಯಾವುದು ಗೊತ್ತೇ?
ಎರಡೇ ವರ್ಷದಲ್ಲಿ ಇಪ್ಪತ್ತು ಕೋಟಿ ಗ್ರಾಹಕರನ್ನು ಪಡೆದ ರಿಲಯನ್ಸ್ ಜಿಯೋ
ನಿಫ್ಟಿ ಕಂಪನಿಗಳಲ್ಲಿ 588 ಲೈಂಗಿಕ ಕಿರುಕುಳ ಪ್ರಕರಣ; ಐಟಿಯಲ್ಲೇ ಹೆಚ್ಚು‍!
Editor’s Pick More