ಏಪ್ರಿಲ್ ತಿಂಗಳ ಸಗಟು ದರ ಹಣದುಬ್ಬರ 3.8%, ಚಿಲ್ಲರೆ ಹಣದುಬ್ಬರ 4.58% ಏರಿಕೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ತೈಲ ಬೆಲೆ ಏರಿಕೆಗೆ ಅನುಗುಣವಾಗಿ ದೇಶೀಯ ಮಾರುಕಟ್ಟೆಯಲ್ಲೂ ಪೆಟ್ರೋಲಿಯಂ ಉತ್ಪನ್ನಗಳ ದರ ನಿಗದಿ ಮಾಡುತ್ತಿರುವುದರಿಂದ ಇಂಧನ ದರ ತೀವ್ರ ಏರಿದೆ. ಜೊತೆಗೆ ಆಹಾರ ಉತ್ಪನ್ನಗಳ ದರವೂ ಜಿಗಿದಿದ್ದು, ಏಪ್ರಿಲ್ ತಿಂಗಳ ಸಗಟು, ಚಿಲ್ಲರೆ ಹಣದಬ್ಬರ ಏರಿದೆ

ಚಿಲ್ಲರೆ ದರ ಹಣದುಬ್ಬರವು ಏಪ್ರಿಲ್ ತಿಂಗಳಲ್ಲಿ 4.58ಕ್ಕೆ ಏರಿದೆ. ಆಹಾರ ಧಾನ್ಯ ಮತ್ತು ಪ್ರಾಥಮಿಕ ಉತ್ಪನ್ನಗಳ ಬೆಲೆ ಇಳಿದಿದ್ದರಿಂದಾಗಿ ಮಾರ್ಚ್ ತಿಂಗಳಲ್ಲಿ ಶೇ.4.28ಕ್ಕೆ ತಗ್ಗಿತ್ತು. ಹಿಂದಿನ ಮೂರು ತಿಂಗಳೂ ಇಳಿಜಾರಿನಲ್ಲಿದ್ದ ಚಿಲ್ಲರೆ ಹಣದುಬ್ಬರವು ಏಪ್ರಿಲ್ ತಿಂಗಳಲ್ಲಿ ಜಿಗಿದಿದೆ.

ಏಪ್ರಿಲ್ ತಿಂಗಳ ಸಗಟು ದರ ಹಣದುಬ್ಬರ ಶೇ.3.8ಕ್ಕೆ ಏರಿದೆ. ಇದು ಕಳೆದ ನಾಲ್ಕು ತಿಂಗಳಲ್ಲೇ ಗರಿಷ್ಠ ಮಟ್ಟವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರುತ್ತಿರುವ ತೈಲ ಬೆಲೆಗೆ ಅನುಗುಣವಾಗಿ ದೇಶೀಯ ಮಾರುಕಟ್ಟೆಯಲ್ಲೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರುತ್ತಿರುವುದರಿಂದಾಗಿ ಸಗಟು ದರ ಹಣದುಬ್ಬರ ಏರಿದೆ.

ಸಗಟು ದರ ಹಣದುಬ್ಬರ ಮಾರ್ಚ್ ತಿಂಗಳಲ್ಲಿ ಶೇ.2.47 ಗೆ ಇಳಿದಿತ್ತು. ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಶೇ.3.85 ಇತ್ತು. ಸಗಟುದರ ಆಹಾರ ಸೂಚ್ಯಂಕ ಹಣದುಬ್ಬರವು ಮಾರ್ಚ್ ತಿಂಗಳಲ್ಲಿ ಇಳಿಜಾರಿನಲ್ಲಿ ಅಂದರೆ ಶೇ.-0.07 ರಷ್ಟಿತ್ತು. ಏಪ್ರಿಲ್ ತಿಂಗಳಲ್ಲಿ ಇದು ಶೇ.0.67ರಷ್ಟು ಏರಿದೆ ಎಂದು ವಾಣಿಜ್ಯ ಸಚಿವಾಲಯ ಸೋಮವಾರ ತಿಳಿಸಿದೆ. ಆಹಾರ ಸೂಚ್ಯಂಕವು ಆಹಾರ ಉತ್ಪನ್ನಗಳು, ಪ್ರಾಥಮಿಕ ಉತ್ಪನ್ನಗಳನ್ನು ಒಳಗೊಂಡಿರುತ್ತದೆ.

ಇಂಧನ ಮತ್ತು ವಿದ್ಯುತ್ ಸಗಟುದರ ಹಣದುಬ್ಬರ ಶೇ.7.85ರಷ್ಟು ಏರಿದ್ದರೆ, ಉತ್ಪಾದನೆಯಾದ ಸರಕುಗಳ ಹಣದುಬ್ಬರ ಶೇ.3.11ರಷ್ಟು ಏರಿದೆ. ಮಾರ್ಚ್ ತಿಂಗಳಲ್ಲಿ ಈ ಕ್ರಮವಾಗಿ ಶೇ.4.7 ಮತ್ತು ಶೇ.3.02ರಷ್ಟಿತ್ತು. ಆಲೂಗಡ್ಡೆ ಶೇ.43.25ರಿಂದ ಶೇ.67.94ರಷ್ಟು ಏರಿದ್ದರೆ, ಹಣ್ಣುಗಳು ಮಾರ್ಚ್ ತಿಂಗಳಲ್ಲಿ ಶೇ.9.26ರಿಂದ ಏಪ್ರಿಲ್ ನಲ್ಲಿ ಶೇ.19.47ಕ್ಕೆ ಏರಿದೆ.

ಹೊಸ ವರ್ಷದಲ್ಲಿ ಇದೇ ಮೊದಲ ಬಾರಿಗೆ ಈರುಳ್ಳಿ ಮತ್ತ ಹಾಲಿನ ಹಣದುಬ್ಬರ ಇಳಿಜಾರಿಗೆ ಸರಿದಿದೆ. ಈ ಹಿಂದೆ ಫೆಬ್ರವರಿ ಸಗಟುದರ ಹಣದುಬ್ಬರವನ್ನು ತಾತ್ಕಾಲಿಕ ಅಂದಾಜು ಶೇ.2.48ರಿಂದ ಶೇ.2.76ಕ್ಕೆ ಪರಿಷ್ಕರಿಸಿತ್ತು. ಮಾರ್ಚ್ ತಿಂಗಳ ಕೈಗಾರಿಕಾ ಉತ್ಪನ್ನ ಸೂಚ್ಯಂಕವು ಶೇ.4.4ಕ್ಕೆ ಕುಸಿದಿದ್ದು ಕಳೆದ ಐದು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ.

ಹಣುದಬ್ಬರ ಏರಿಕೆ ಮತ್ತು ಕೈಗಾರಿಕಾ ಉತ್ಪನ್ನ ಸೂಚ್ಯಂಕ ಇಳಿಕೆಯು ಬಡ್ಡಿದರ ಏರಿಕೆಗೆ ಪೂರಕ ವಾತಾವರಣ ಸೃಷ್ಟಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಹಿಂದಿನ ನಾಲ್ಕು ಹಣಕಾಸು ನೀತಿ ಪರಾಮರ್ಶೆ ಸಭೆಗಳಲ್ಲಿ ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿತ್ತು.

ಇದನ್ನೂ ಓದಿ : ಫೆಬ್ರವರಿಯಲ್ಲಿ ಶೇ.4.4ಕ್ಕೆ ತಗ್ಗಿದ ಗ್ರಾಹಕರ ದರ ಹಣದುಬ್ಬರ, ಇಳಿದ ಆಹಾರ ಪದಾರ್ಥ

ದೇಶಿಯ ಉತ್ಪನ್ನಗಳ ಹಣದುಬ್ಬರ ಇಳಿಜಾರಿನಲ್ಲಿ ಇದ್ದರೂ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿನ ಅಸ್ಥಿರತೆಯಿಂದಾಗಿ ಬರುವ ದಿನಗಳಲ್ಲಿನ ಸಂಭವನೀಯ ಹಣದುಬ್ಬರ ಏರಿಕೆ ಕಾರಣ ನೀಡಿ ಆರ್‌ಬಿಐ ಬಡ್ಡಿದರ ತಗ್ಗಿಸಿರಲಿಲ್ಲ. ಅಲ್ಲದೇ ಬಡ್ಡಿದರ ಏರಿಸುವ ಬಗ್ಗೆಯೂ ಚಿಂತನೆ ನಡೆಸಿತ್ತು.

ಈಗ ತೈಲ ಬೆಲೆ ಏರಿಕೆ ಮತ್ತು ಅಂದರಿಂದಾಗಿ ಪೂರಕ ಉತ್ಪನ್ನಗಳ ದರ ಏರಿಕೆಯಿಂದಾಗಿ ಏರುತ್ತಿರುವ ಹಣದುಬ್ಬರವು ಬಡ್ಡಿದರ ಏರಿಕೆಗೆ ಪೂರಕ ವಾತವರಣ ಸೃಷ್ಟಿಸಿದೆ. ಆದರೆ, ಜೂ.6ರಂದು ಪ್ರಸಕ್ತ ವಿತ್ತೀಯ ವರ್ಷದ ಎರಡನೇ ಹಣಕಾಸು ನೀತಿ ಪರಾಮರ್ಶೆ ನಡೆಸಲಿರುವ ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಳ್ಳುವುದೋ ಅಥವಾ ಏರಿಸುವುದೋ ಎಂಬ ಕುತೂಹಲ ಮೂಡಿದೆ.

ಪ್ರಧಾನಿ ನರೇಂದ್ರ ಮೋದಿ ಮುಂದಿರುವ ಅತಿದೊಡ್ಡ ಸವಾಲು ಯಾವುದು ಗೊತ್ತೇ?
ಎರಡೇ ವರ್ಷದಲ್ಲಿ ಇಪ್ಪತ್ತು ಕೋಟಿ ಗ್ರಾಹಕರನ್ನು ಪಡೆದ ರಿಲಯನ್ಸ್ ಜಿಯೋ
ನಿಫ್ಟಿ ಕಂಪನಿಗಳಲ್ಲಿ 588 ಲೈಂಗಿಕ ಕಿರುಕುಳ ಪ್ರಕರಣ; ಐಟಿಯಲ್ಲೇ ಹೆಚ್ಚು‍!
Editor’s Pick More