ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶಕ್ಕೆ ತೀವ್ರ ಏರಿಳಿದ ಷೇರುಪೇಟೆ

ಕರ್ನಾಟಕ ವಿಧಾನಸಭಾ ಚುನಾವಣಾ ಆರಂಭಿಕ ಫಲಿತಾಂಶಗಳು ಬಿಜೆಪಿಗೆ ಬಹುಮತ ನೀಡುವ ಮುನ್ಸೂಚನೆ ನೀಡಿದ ಹಿನ್ನೆಲೆಯಲ್ಲಿ ಷೇರುಪೇಟೆಯಲ್ಲಿ ಉತ್ಸಾಹ ಮೂಡಿತ್ತು. ಒಂದು ಹಂತದಲ್ಲಿ 400 ಅಂಶದಷ್ಟು ಏರಿದ್ದ ಸೆನ್ಸೆಕ್ಸ್, ವಾಸ್ತವಿಕ ಫಲಿತಾಂಶ ಬಂದ ನಂತರ ಏರಿದ್ದಷ್ಟೇ ತ್ವರಿತವಾಗಿ ಕುಸಿಯಿತು!

ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಇಡೀ ದಿನ ಷೇರುಪೇಟೆ ಏರಿಳಿತಕ್ಕೆ ಕಾರಣವಾಯಿತು. ಆರಂಭಿಕ ಫಲಿತಾಂಶಗಳು ರಾಜ್ಯದಲ್ಲಿ ಬಿಜೆಪಿ ಬಹುಮತ ಪಡೆಯುವ ಮುನ್ಸೂಚನೆ ನೀಡಿದ ಹಿನ್ನೆಲೆಯಲ್ಲಿ ಪೇಟೆಯಲ್ಲಿ ಉತ್ಸಾಹ ಮೂಡಿತ್ತು. ಹೀಗಾಗಿ ದಿನದ ಆರಂಭದ ವಹಿವಾಟಿನಲ್ಲೇ ಸೆನ್ಸೆಕ್ಸ್ 450 ಅಂಶಗಳಷ್ಟು ಜಿಗಿಯಿತು. ನಿಫ್ಟಿ 120 ಅಂಶಗಳಷ್ಟು ಏರಿತು.

ಹೊತ್ತೇರಿದಂತೆ ಚುನಾವಣಾ ಫಲಿತಾಂಶಗಳು ಹೆಚ್ಚೆಚ್ಚು ಷ್ಪಷ್ಟವಾಗುತ್ತಿದ್ದಂತೆ ತ್ವರಿತವಾಗಿ ಏರಿದ್ದ ಸೂಚ್ಯಂಕಗಳು ಕುಸಿಯಲಾರಂಭಿಸಿದವು. ಕರ್ನಾಟಕದಲ್ಲಿ ಬಿಜೆಪಿಗೆ ಬಹುಮತ ಬರುವುದಿಲ್ಲ ಎಂಬುದು ಸ್ಪಷ್ಟವಾದ ನಂತರ ಸೂಚ್ಯಂಕಗಳು ಕುಸಿದವು ಒಂದು ಹಂತದಲ್ಲಿ 450 ಅಂಶ ಏರಿದ ಸೆನ್ಸೆಕ್ಸ್ ದಿನದ ಅಂತ್ಯಕ್ಕೆ 12 ಅಂಶದಷ್ಟು ಕುಸಿದು ವಹಿವಾಟು ಮುಗಿಸಿತು. 10929ಗೆ ಏರಿದ್ದ ನಿಫ್ಟಿ ದಿನದ ಅಂತ್ಯಕ್ಕೆ 10801ಕ್ಕೆ ಕುಸಿಯಿತು. 35993 ಅಂಶ ಏರಿದ್ದ ಸೆನ್ಸೆಕ್ಸ್ 35543ಕ್ಕೆ ಕುಸಿಯಿತು.

ಕೇಂದ್ರದಲ್ಲಿ ಆಡಳಿತದಲ್ಲಿರುವ ಪಕ್ಷವು ಪ್ರಮುಖ ರಾಜ್ಯಗಳಲ್ಲಿ ಅಧಿಕಾರ ಗ್ರಹಿಸಿದಾಗ ಕೇಂದ್ರದ ಆರ್ಥಿಕ ನೀತಿ ಮತ್ತು ಸುಧಾರಣಾ ಕ್ರಮಗಳಿಗೆ ಜನರ ಬೆಂಬಲ ವ್ಯಕ್ತವಾಗಿದೆ ಎಂಬ ಕಾರಣಕ್ಕೆ ಷೇರುಪೇಟೆ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ. ಬೇರೆ ಪಕ್ಷ ಅಧಿಕಾರ ಗ್ರಹಿಸಿದರೆ, ಬರುವ ದಿನಗಳಲ್ಲಿ ಆಡಳಿತ ನೀತಿ ಮತ್ತು ಸುಧಾರಣಾ ಕ್ರಮಗಳಿಗೆ ಅಡ್ಡಿ ಆಗಬಹುದೇನೋ ಎಂಬ ಕಾರಣಕ್ಕೆ ಪೇಟೆಯು ವ್ಯತಿರಿಕ್ತವಾಗಿ ಪ್ರತಿಕ್ರಿಯಿಸುತ್ತದೆ.

ಮತ್ತೊಂದು ಬೆಳವಣಿಗೆಯಲ್ಲಿ ಡಾಲರ್ ವಿರುದ್ಧ ತೀವ್ರವಾಗಿ ಕುಸಿದ ರುಪಾಯಿ 68ರ ಗಡಿದಾಟಿದೆ. ದಿನದ ವಹಿವಾಟಿನ ಅಂತ್ಯಕ್ಕೆ ಶೇ.0.87ರಷ್ಟು ಅಂದರೆ 59 ಪೈಸೆ ಇಳಿದು 68.11ಕ್ಕೆ ಕುಸಿಯಿತು. ಇತ್ತೀಚಿನ ದಿನಗಳಲ್ಲಿ ರುಪಾಯಿ ಒಂದೇ ದಿನ 59 ಪೈಸೆ ಕುಸಿದಿರುವುದು ಇದೇ ಮೊದಲು. ಒಂದು ಹಂತದಲ್ಲಿ 68.14ಕ್ಕೆ ಕುಸಿದಿತ್ತು. ನಾವು ಈಗಾಗಲೇ ಅಂದಾಜಿಸಿದಂತೆಯೇ ರುಪಾಯಿ 68ರ ಗಡಿ ದಾಟಿ ಸಾಗಿದೆ. ರುಪಾಯಿ ಕುಸಿತದ ತೀವ್ರತೆ ಗಮನಿಸಿದರೆ ಮೇ ಅಂತ್ಯದೊಳಗೆ 70ರ ಗಡಿದಾಟುವ ನಿರೀಕ್ಷೆ ಇದೆ.

ಡಾಲರ್ ವಿರುದ್ಧ ರುಪಾಯಿ ಕುಸಿದಿರುವ ಹಿನ್ನೆಲೆಯಲ್ಲಿ ಐಟಿ ಸೂಚ್ಯಂಕ ಶೇ.0.50ರಷ್ಟು ಏರಿದೆ. ಟಿಸಿಎಸ್ ಶೇ.1.50ರಷ್ಟು ಜಿಗಿದಿದೆ. ಮೈಂಡ್ ಟ್ರೀ, ಟೆಕ್ ಮಹಿಂದ್ರ, ಇನ್ಫೊಸಿಸ್ ಶೇ0.50-1ರಷ್ಟು ಏರಿವೆ.

ದಿನದ ವಹಿವಾಟಿನಲ್ಲಿ ನಿಫ್ಟಿ ಪಿಎಸ್ಯು ಬ್ಯಾಂಕ್, ನಿಫ್ಟಿ ರಿಯಾಲ್ಟಿಸೂಚ್ಯಂಕಗಳು ಶೇ.1-2.50ರಷ್ಟು ಕುಸಿದವು ನಿಪ್ಟಿ ಮಿಡ್ ಕ್ಯಾಪ್, ನಿಪ್ಟಿ ಆಟೋ, ನಿಪ್ಟಿ ಮಿಡಿಯಾ, ನಿಫ್ಟಿ ಫಾರ್ಮ ಸೂಚ್ಯಂಕ ಶೇ.0.50-1ರಷ್ಟು ಕುಸಿದಿವೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ 13700 ಕೋಟಿ ಹಗರಣದ ಆರೋಪ ನೀರವ್ ಮೋದಿ ವಿರುದ್ಧ ಸಲ್ಲಿಸಲಾದ ಆರೋಪ ಪಟ್ಟಿಯಲ್ಲಿ ಎಂಡಿ ಮತ್ತು ಸಿಇಒ ಉಷಾ ಅನಂತಸುಬ್ರಮಣಿಯನ್ ಮತ್ತಿತಬ್ಬರು ಎಕ್ಸಿಕ್ಯುಟಿವ್ ಡೈರೆಕ್ಟರ್‌ಗಳನ್ನು ಹೆಸರಿಸಿರುವುದರಿಂದ ಅಲಹಾಬಾದ್ ಬ್ಯಾಂಕ್ ಷೇರು ಶೇ.9ರಷ್ಟು ಕುಸಿದಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಸ್ಬಿಐ, ಬ್ಯಾಂಕ್ ಆಫ್ ಬರೋಡ, ಸಿಂಡಿಕೇಟ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ ಶೇ.2-3ರಷ್ಟು ಕುಸಿದಿವೆ.

ಇಂಡಿಯಾ ಬುಲ್ಸ್ ರಿಯಲ್ಎಸ್ಟೇಟ್ ಶೇ.6ರಷ್ಟು ಕುಸಿದಿದೆ. ಒಬೆರಾಯ್ ರಿಯಾಲ್ಟಿ, ಬ್ರಿಗೇಡ್ ಎಂಟರ್ಪ್ರೈಸಸ್, ಪ್ರಿಸ್ಟೀಜ್ ಎಸ್ಟೇಟ್, ಗೋದ್ರೇಜ್ ಪ್ರಾಪರ್ಟೀಸ್, ಡಿಎಲ್ಎಫ್, ಎಚ್ಡಿಐಎಲ್, ಯೂನಿಟೆಕ್ ಶೇ.1-3ರಷ್ಟು ಕುಸಿದಿವೆ.

ಇದನ್ನೂ ಓದಿ : ಪೇಟೆ ಕುಸಿದಾಗ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವುದೇ ಜಾಣತನ!

ನಿಫ್ಟಿ ಆಟೋ ಸೂಚ್ಯಂಕ ಶೇ.0.77ರಷ್ಟು ಇಳಿದಿದೆ. ಟಾಟಾ ಮೋಟಾರ್ಸ್ ಶೇ.5.24ರಷ್ಟು ಕುಸಿದಿದೆ. ಅಶೋಕ್ ಲೇಲ್ಯಾಂಡ್, ಮದರ್ಸನ್ ಸುಮಿ, ಭಾರತ್ ಫೋರ್ಜ್, ಅಮರರಾಜಾ ಬ್ಯಾಟರೀಸ್, ಎಕ್ಸೈಡ್ ಇಂಡಸ್ಟ್ರೀಸ್, ಶೇ.1.-3ರಷ್ಟು ಇಳಿದವು. ಐಷರ್ ಮೋಟಾರ್ ಶೇ.1ರಷ್ಟು ಏರಿದೆ.

ದಿನದ ವಹಿವಾಟಿನಲ್ಲಿ ಆಕಾಶ್ ಇನ್ಫ್ರಾ ಪ್ರಾಜೆಕ್ಟ್, ಮಂದಾನಾ ರಿಟೇಲ್ಸ್ ಶೇ.20ರಷ್ಟು ಜಿಗಿದಿವೆ. ಡಾ.ಲಾಲ್ ಪೆತ್ಲಾಬ್, ಡಿಪಿ ವೈರ್ಸ್, ಎಂಫಾಸಿಸ್, ಶಾಂತಿ ಓವರ್ಸೀಸ್, ವಿ ಮಾರ್ಟ್ ರೀಟೇಲ್ಸ್, ಶೇ.10ರಷ್ಟು ಏರಿವೆ. ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ 200 ರುಪಾಯಿ ಕುಸಿದಿದೆ. ಕಚ್ಚಾ ತೈಲ ಶೇ.2.18ರಷ್ಟು ಏರಿದೆ.

ಪ್ರಧಾನಿ ನರೇಂದ್ರ ಮೋದಿ ಮುಂದಿರುವ ಅತಿದೊಡ್ಡ ಸವಾಲು ಯಾವುದು ಗೊತ್ತೇ?
ಎರಡೇ ವರ್ಷದಲ್ಲಿ ಇಪ್ಪತ್ತು ಕೋಟಿ ಗ್ರಾಹಕರನ್ನು ಪಡೆದ ರಿಲಯನ್ಸ್ ಜಿಯೋ
ನಿಫ್ಟಿ ಕಂಪನಿಗಳಲ್ಲಿ 588 ಲೈಂಗಿಕ ಕಿರುಕುಳ ಪ್ರಕರಣ; ಐಟಿಯಲ್ಲೇ ಹೆಚ್ಚು‍!
Editor’s Pick More