ಸತತ ಎರಡನೇ ದಿನವೂ ಷೇರುಪೇಟೆಯನ್ನು ಕಾಡಿದ ಕರ್ನಾಟಕ ರಾಜಕೀಯ ಅಸ್ಥಿರತೆ!

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷವೂ ಬಹುಮತ ಪಡೆಯದ ಹಿನ್ನೆಲೆಯಲ್ಲಿ ಉದ್ಭವಿಸಿರುವ ರಾಜಕೀಯ ಅಸ್ಥಿರತೆಯು ಸತತ ಎರಡನೇ ದಿನವೂ ಷೇರುಪೇಟೆಯನ್ನು ಕಾಡಿತು. 300 ಅಂಶ ಕುಸಿದ ಸೆನ್ಸೆಕ್ಸ್, ರುಪಾಯಿ ಚೇತರಿಕೆಯಿಂದಾಗಿ ಕೊಂಚ ಸುಧಾರಿಸಿತು

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಗಳೂ ಬಹುಮತ ಪಡೆಯದ ಹಿನ್ನೆಲೆಯಲ್ಲಿ ಉದ್ಭವಿಸಿರುವ ರಾಜಕೀಯ ಅಸ್ಥಿರತೆಯು ಷೇರುಪೇಟೆಯನ್ನು ಸತತ ಎರಡನೇ ದಿನವೂ ಕಾಡಿತು. ಬುಧವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 300 ಅಂಶ ಕುಸಿಯಿತು. ಬಹುತೇಕ ಸೂಚ್ಯಂಕಗಳು ಇಳಿಜಾರಿಗೆ ಸರಿದವು. ಡಾಲರ್ ವಿರುದ್ಧ ತೀವ್ರ ಕುಸಿದಿದ್ಧ ರುಪಾಯಿ ಮತ್ತಷ್ಟು ಕುಸಿಯುವುದನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಮಧ್ಯ ಪ್ರವೇಶದಿಂದಾಗಿ ಪೇಟೆಯಲ್ಲಿ ಕೊಂಚ ಚೇತರಿಕೆ ಬಂತು.

68 ರುಪಾಯಿ ಗಡಿದಾಟಿದ ನಂತರ ಮತ್ತಷ್ಟು ಕುಸಿಯುವ ಅಪಾಯ ಅರಿತ ಭಾರತೀಯ ರಿಸರ್ವ್ ಬ್ಯಾಂಕ್ ಡಾಲರ್ ಮಾರಾಟಕ್ಕೆ ಮುಂದಾಯಿತು. ಬುಧವಾರ ಆರಂಭದ ವಹಿವಾಟಿನಲ್ಲಿ ಡಾಲರ್ ವಿರುದ್ಧ 68.13ಕ್ಕೆ ಕುಸಿದ ರುಪಾಯಿ ಆರ್‌ಬಿಐ ಮಧ್ಯಪ್ರವೇಶದಿಂದಾಗಿ ಕೊಂಚ ಚೇತರಿಸಿಕೊಂಡು 31 ಪೈಸೆಯಷ್ಟು ಏರಿಕೆ ಕಂಡಿತು. ದಿನದ ವಹಿವಾಟನ್ನು 67.79ಕ್ಕೆ ಅಂತ್ಯಗೊಳಿಸಿತು.

ಕರ್ನಾಟಕದಲ್ಲಿ ರಾಜಕೀಯ ಅಸ್ಥಿರತೆಯು ಷೇರುಪೇಟೆಯನ್ನು ಇಳಿಜಾರಿಗೆ ಕೊಂಡೊಯ್ದರೆ, ಜತೆಜತೆಗೆ ರುಪಾಯಿ ಸಹ ಡಾಲರ್ ವಿರುದ್ಧ ಕುಸಿಯಿತು. ಉತ್ತರ ಪ್ರಾಚ್ಯದಲ್ಲಿನ ಜಾಗತಿಕ ರಾಜ್ಯಕೀಯ ಒತ್ತಡದಿಂದಾಗಿ ಡಾಲರ್ ಖರೀದಿ ತೀವ್ರವಾಗಿದೆ. ಇದು ಉದಯಿಸುತ್ತಿರುವ ಮಾರುಕಟ್ಟೆಗಳ ಕರೆನ್ಸಿಗಳ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ಡಾಲರ್ ವಿರುದ್ಧ ಅಪಮೌಲ್ಯಗೊಳ್ಳುತ್ತಿವೆ.

ಅದಕ್ಕೆ ಭಾರತದ ರುಪಾಯಿಯೂ ಹೊರತಾಗಿಲ್ಲ. ಆರ್‌ಬಿಐಯ ಸಕಾಲಿಕ ಕ್ರಮದಿಂದಾಗಿ ರುಪಾಯಿ 68ರ ಗಡಿಯಿಂದೀಚೆಗೆ ತನ್ನ ವಹಿವಾಟು ಅಂತ್ಯಗೊಳಿಸಿದೆ. ಆದರೆ, ಡಾಲರ್ ಮೇಲಿನ ಬೇಡಿಕೆ ಮತ್ತು ರುಪಾಯಿ ಮೇಲಿನ ಒತ್ತಡವು ಮಾಸಾಂತ್ಯಕ್ಕೆ ರುಪಾಯಿ 70 ರ ಗಡಿದಾಟುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

ದಿನದ ಆರಂಭದಲ್ಲೇ ಕರ್ನಾಟಕದ ರಾಜಕೀಯ ಅಸ್ಥಿರತೆಯಿಂದಾಗಿ ಸೆನ್ಸೆಕ್ಸ್ 300 ಅಂಶದಷ್ಟು ಕುಸಿಯಿತು. ಸೂಚ್ಯಂಕ ದೈತ್ಯ ಕಂಪನಿಗಳಾದ ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್, ಎಚ್ಡಿಎಫ್ಸಿ ಸಮೂಹದ ಷೇರುಗಳು ಕುಸಿದವು. ತ್ವರಿತ ಬಿಕರಿಯಾಗುವ ಗ್ರಾಹಕ ಸರಕುಗಳ ಕಂಪನಿಗಳ ಸೂಚ್ಯಂಕ ಏರುಹಾದಿಯಲ್ಲಿ ಸಾಗಿ ಪೇಟೆ ಕುಸಿಯುವುದನ್ನು ತಡೆಯಿತು. ಐಟಿಸಿ ಮತ್ತು ಹಿಂದೂಸ್ತಾನ್ ಯೂನಿಲಿವರ್ ಏರಿದವು.

ದಿನದ ಅಂತ್ಯಕ್ಕೆ 156 ಅಂಶ ಕುಸಿತದೊಂದಿಗೆ ಸೆನ್ಸೆಕ್ಸ್ 35387.88ಕ್ಕೆ, 60.80 ಅಂಶ ಕುಸಿತದೊಂದಿಗೆ ನಿಫ್ಟಿ 10741ಕ್ಕೆ ವಹಿವಾಟು ಅಂತ್ಯಗೊಳಿಸಿದವು. ನಿಫ್ಟಿ ಪಿಎಸ್ಯು ಬ್ಯಾಂಕ್ ಗರಿಷ್ಠ ಅಂದರೆ ಶೇ.3.05ರಷ್ಟು ಕುಸಿಯಿತು. ನಿಫ್ಟಿ ಎನರ್ಜಿ, ನಿಫ್ಟಿ ಬ್ಯಾಂಕ್, ನಿಫ್ಟಿ ಫೈನಾನ್ಷಿಯಲ್, ನಿಪ್ಟಿ ಕಮಾಡಿಟೀಸ್, ನಿಪ್ಟಿ ಪ್ರೈವೆಟ್ ಬ್ಯಾಂಕ್ ಶೇ.1-2ರಷ್ಟು ಕುಸಿದವು. ನಿಫ್ಟಿ ರಿಯಾಲ್ಟಿ ಶೇ.2, ನಿಫ್ಟಿ ಎಫ್ಎಂಸಿಜಿ ಶೇ.1.80ರಷ್ಟು ಏರಿದವು. ನಿಫ್ಟಿ ಎಂಎನ್ಸಿ, ನಿಫ್ಟಿ ಗ್ರೋತ್ ಸೆಕ್ಟರ್, ನಿಫ್ಟಿ ಮಿಡಿಯಾ, ನಿಫ್ಟಿ ಐಟಿ ಶೇ.0.50-1ರಷ್ಟು ಏರಿದವು.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗರಿಷ್ಠ ಪ್ರಮಾಣದಲ್ಲಿ ನಷ್ಟ ಘೋಷಣೆ ಮಾಡಿದ್ದು ಮತ್ತು ಅಲಹಾಬಾದ್ ಬ್ಯಾಂಕ್ ಎಂಡಿ ಮತ್ತು ಸಿಇಒ ಉಷಾ ಅನಂತಕೃಷ್ಣನ್ ಅವರ ಅಧಿಕಾರ ಮೊಟಕುಗೊಳಿಸಿದ ನಂತರದ ಬೆಳವಣಿಗೆಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳ ಷೇರುಗಳ ಮಾರಾಟ ಒತ್ತಡ ತೀವ್ರವಾಗಿತ್ತು. ಎಲ್ಲಾ ಷೇರುಗಳು ಇಳಿಜಾರಿಗೆ ಸರಿದವು. ಸಿಂಡಿಕೇಟ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಶೇ.12ರಷ್ಟು ಕುಸಿದವು. ಬ್ಯಾಂಕ್ ಆಫ್ ಬರೋಡ, ಅಲಹಾಬಾದ್ ಬ್ಯಾಂಕ್, ಒರಿಯಂಟಲ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಎಸ್ಬಿಐ ಶೇ.2-6ರಷ್ಟು ಕುಸಿದವು. ಯೂನಿಯನ್ ಬ್ಯಾಂಕ್, ಆಂಧ್ರಬ್ಯಾಂಕ್, ಕೆನರಾ ಬ್ಯಾಂಕ್, ಐಡಿಬಿಐ ಬ್ಯಾಂಕ್, ಶೇ.1-2ರಷ್ಟು ಕುಸಿದಿವೆ.

ಖಾಸಗಿ ಬ್ಯಾಂಕುಗಳ ಪೈಕಿ ಐಸಿಐಸಿಐ ಬ್ಯಾಂಕ್, ಫೆಡರಲ್ ಬ್ಯಾಂಕ್ ಶೇ.3.50ರಷ್ಟು ಕುಸಿದವು. ಎಚ್ಡಿಎಫ್ಸಿ ಬ್ಯಾಂಕ್, ಕೊಟಕ್ ಬ್ಯಾಂಕ್ ಶೇ.1ರಷ್ಟು ಇಳಿದವು. ಯೆಸ್ ಬ್ಯಾಂಕ್, ಐಡಿಎಫ್ಸಿ ಬ್ಯಾಂಕ್ ಶೇ.1ರಷ್ಟು ಏರಿದವು. ಇಂಡಿಯಾ ಬುಲ್ ರಿಯಲ್ ಎಸ್ಟೇಟ್ ಶೇ.12ರಷ್ಟು ಜಿಗಿಯಿತು. ಫಿನಿಕ್ಸ್ ಮಿಲ್ಸ್, ಡಿಎಲ್ಎಫ್, ಶೋಭಾ, ಗೋದ್ರೇಜ್ ಶೇ.1ರಷ್ಟು ಏರಿದವು.

ಇದನ್ನೂ ಓದಿ : ಎಲ್ಟಿಸಿಜಿ ತೆರಿಗೆ ಜಾರಿ; ಮ್ಯೂಚುವಲ್ ಫಂಡ್ ಹೂಡಿಕೆ ಮೇಲಿನ ಪರಿಣಾಮವೇನು?

ದಿನದ ವಹಿವಾಟಿನಲ್ಲಿ ಇಡಿಲ್ವೀಸ್ ಫಿನ್ ಸರ್ವೀಸ್ ಶೇ.5.25ರಷ್ಟು ಜಿಗಿಯಿತು. ಹಿಂದೂಸ್ತಾನ್ ಯೂನಿಲಿವರ್, ಅಬೊಟ್ ಇಂಡಿಯಾ, ಬಾಲಕೃಷ್ಣ ಇಂಡಸ್ಟ್ರೀಸ್, ಪ್ರಾಕ್ಟರ್ ಅಂಡ್ ಗ್ಯಾಂಬಲ್ ಶೇ.3ರಿಂದ 5ರಷ್ಟು ಏರಿದವು. ಸಾಲದ ಹೊರೆಯಿಂದಿ ತತ್ತರಿಸಿರುವ ರಿಲಯನ್ಸ್ ಕಮ್ಯುನಿಕೇಷನ್ ಶೇ.15ರಷ್ಟು ಕುಸಿಯಿತು. ಮೋರ್ಪೆನ್ ಲ್ಯಾಬ್, ಮಿಲ್ಟನ್ ಇಂಡಸ್ಟ್ರೀಸ್, ಅದಾನಿ ಟ್ರಾನ್ಸ್ಮಿಷನ್, ಸೆಂಚುರಿ ಪ್ಲೇಬೋರ್ಡ್, ಮಂದನಾ ರಿಟೈಲ್ಸ್, ಶಿಂಬೋಲಿ ಷುಗರ್ಸ್, ರಿಲಯನ್ಸ್ ನವಲ್, ಪ್ರಿಕೊಟ್ ಮೆರಿಡಿಯನ್ ಶೇ.6-12ರಷ್ಟು ಕುಸಿದವು.

ಚಿನಿವಾರ ಪೇಟೆಯಲ್ಲಿ ಚಿನ್ನ 210 ರುಪಾಯಿ ಕುಸಿದಿದ್ದು, 31000ದ ಮಟ್ಟದಿಂದ ಕೆಳಕ್ಕಿಳಿದು 30960ರ ಆಜುಬಾಜಿನಲ್ಲಿ ವಹಿವಾಟಾಗಿದೆ. ಕಚ್ಚಾ ತೈಲ ಕೊಂಚ ತಗ್ಗಿದೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More