80 ಡಾಲರ್ ಗಡಿ ದಾಟಿದ ಕಚ್ಚಾತೈಲ; ಷೇರುಪೇಟೆ ಕುಸಿತ, ಏರಲಿದೆ ಪೆಟ್ರೋಲ್ ದರ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ (ಬ್ರೆಂಟ್ ಕ್ರೂಡ್) ದಿನದ ವಹಿವಾಟಿನಲ್ಲಿ 80 ಡಾಲರ್ ಗಡಿ ದಾಟಿದೆ. ಶೇ.80ರಷ್ಟು ಆಮದು ತೈಲದ ಮೇಲೆ ಅಲವಂಬಿತವಾಗಿರುವ ಭಾರತಕ್ಕೆ ಇದು ಭಾರಿ ಹೊರೆಯಾಗಲಿದೆ. ಅದರ ಪರಿಣಾಮ ಷೇರುಪೇಟೆ ಮೇಲಾಗಿದ್ದು, ಬಹುತೇಕ ಸೂಚ್ಯಂಕ ಕುಸಿದಿವೆ!

ಕರ್ನಾಟಕ ರಾಜ್ಯದಲ್ಲಿನ ರಾಜಕೀಯ ಅಸ್ಥಿರತೆ ಹಿನ್ನೆಲೆಯಲ್ಲಿ ಎರಡು ದಿನ ಇಳಿಜಾರಿನಲ್ಲಿದ್ದ ಷೇರುಪೇಟೆ, ಗುರುವಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ 80 ಡಾಲರ್ ಗಡಿ ದಾಟಿದ ಕಾರಣ ಇನ್ನಷ್ಟು ಕುಸಿದಿದೆ. ಕಚ್ಚಾತೈಲ 80 ಡಾಲರ್ ಗಡಿ ದಾಟಿದರೆ, ಶೇ.80ರಷ್ಟು ಕಚ್ಚಾತೈಲ ಆಮದಿನ ಮೇಲೆ ಅವಲಂಬಿತವಾಗಿರುವ ಭಾರತದ ಬೊಕ್ಕಸದ ಮೇಲೆ ಭಾರಿ ಹೊರೆ ಬೀಳಲಿದೆ.

ಈ ಕಾರಣದಿಂದಾಗಿ ಚಾಲ್ತಿ ಖಾತೆ ಕೊರತೆ (ಸಿಎಡಿ) ಪ್ರಮಾಣ ಹಿಗ್ಗಲಿದೆ. ಇದು ಇಡೀ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಈ ಬೆಳವಣಿಗೆಗೆ ಷೇರುಪೇಟೆ ತ್ವರಿತವಾಗಿ ಸ್ಪಂದಿಸಿದ್ದು, ಬಹುತೇಕ ಸೂಚ್ಯಂಕಗಳು ಇಳಿಜಾರಿಗೆ ಸರಿದಿವೆ. 238.76 ಅಂಶ ಕುಸಿದ ಸೆನ್ಸೆಕ್ಸ್ 35,149ಕ್ಕೆ, 58.40 ಅಂಶ ಕುಸಿದ ನಿಫ್ಟಿ, 10,682ಕ್ಕೆ ವಹಿವಾಟು ಮುಗಿಸಿದವು.

ಈ ನಡುವೆ, ತೀವ್ರ ಕುಸಿದಿದ್ದ ರಿಲಯನ್ಸ್ ಕಮ್ಯುನಿಕೇಷನ್ಸ್ ಎರಿಕ್ಸನ್ ಜೊತೆಗೆ ವಹಿವಾಟು ವಿಲೇವಾರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಸಿರುವ ಸುದ್ದಿ ಹಿನ್ನೆಲೆಯಲ್ಲಿ ಶೇ.65ರಷ್ಟು ಜಿಗಿದಿದೆ. ಅಲ್ಲದೆ, ಅನಿಲ್ ಅಂಬಾನಿ ನೇತೃತ್ವದ ಕಂಪನಿಗಳ ಷೇರುಗಳು ಜಿಗಿದವು.

ನಿಫ್ಟಿ ಎಫ್ಎಂಸಿಜಿ ಶೇ.1.28ರಷ್ಟು ಕುಸಿಯಿತು. ನಿಫ್ಟಿ ಎನರ್ಜಿ, ನಿಫ್ಟಿ ಗ್ರೋತ್ ಸೆಕ್ಟರ್, ನಿಫ್ಟಿ ಮಿಡಿಯಾ, ನಿಫ್ಟಿ ಪ್ರೈವೆಟ್ ಬ್ಯಾಂಕ್, ನಿಫ್ಟಿ ಕಮಾಡಿಟೀಸ್, ನಿಫ್ಟಿ ಇನ್ಫ್ರಾ ಶೇ.0.50-1ರಷ್ಟು ಕುಸಿದವು. ವಾರವಿಡೀ ಕುಸಿದಿದ್ದ ಅಲಹಾಬಾದ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಪಿಎನ್ಬಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಐಡಿಬಿಐ ಆಂಧ್ರ ಬ್ಯಾಂಕ್ ಶೇ.0.50ರಿಂದ 1ರಷ್ಟು ಏರಿದವು. ಬ್ಯಾಂಕ್ ಆಫ್ ಬರೋಡ, ಸೆಂಟ್ರಲ್ ಬ್ಯಾಂಕ್, ಎಸ್ಬಿಐ ಶೇ.1ರಷ್ಟು ಕುಸಿದವು.

ನಾಲ್ಕನೇ ತ್ರೈಮಾಸಿಕದಲ್ಲಿ ಉತ್ತಮ ಫಲಿತಾಂಶ ಪ್ರಕಟಿಸಿದ್ದ ಬಹುತೇಕ ಎಫ್ಎಂಸಿಜಿ ಕಂಪನಿಗಳು ವಾರದ ಆರಂಭದಲ್ಲಿ ಏರಿದ್ದವು. ಕಚ್ಚಾತೈಲ ಏರಿಕೆಯಿಂದ ಹಣದುಬ್ಬರ ಏರುವ ಸಾಧ್ಯತೆ ಹಿನ್ನೆಲೆಯಲ್ಲಿ ಗುರುವಾರದ ವಹಿವಾಟಿನಲ್ಲಿ ಕುಸಿದವು. ಐಟಿಸಿ ಶೇ.2.50ರಷ್ಟು ಇಳಿಯಿತು. ಪ್ರಾಕ್ಟರ್ ಅಂಡ್ ಗ್ಯಾಂಬಲ್, ಬ್ರಿಟಾನಿಯಾ, ಗೋದ್ರೇಜ್ ಕನ್ಸುಮರ್, ಡಾಬರ್, ಗೋದ್ರೇಜ್ ಇಂಡಸ್ಟ್ರೀಸ್, ಇಮಾಮಿ, ಜುಬಿಲಿಯಂಟ್ ಫುಡ್ಸ್, ಹಿಂದೂಸ್ತಾನ್ ಯೂನಿಲಿವರ್ ಶೇ.1-2ರಷ್ಟು ಕುಸಿದವು. ಟಾಟಾ ಗ್ಲೋಬಲ್ ಬೇವರೆಜಸ್ ಶೇ.3ರಷ್ಟು ಜಿಗಿಯಿತು.

ದಿನವಿಡಿ ಸಾರ್ವಜನಿಕ ಉದ್ಯಮ ಸೂಚ್ಯಂಕ ನಿಫ್ಟಿ ಸಿಪಿಎಸ್ಇ ಶೇ.1ರಷ್ಟು ಏರಿತು. ಬಿಇಎಲ್, ಕೋಲ್ ಇಂಡಿಯಾ ಶೇ.3ರಷ್ಟು ಜಿಗಿದವು. ಆಯಿಲ್ ಇಂಡಿಯಾ, ಒಎನ್ಜಿಸಿ, ಎಂಜಿನಿಯರ್ಸ್ ಇಂಡಿಯಾ, ಆರ್ಇಸಿ, ಪಿಎಫ್ಸಿ ಶೇ.1-3ರಷ್ಟು ಏರಿದವು.

ಕಚ್ಚಾತೈಲ ದರ ಏರಿಕೆಯಿಂದಾಗುವ ಪರಿಣಾಮ ವಿಸ್ತೃತವಾಗಿರುತ್ತದೆ. ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರ ಏರುತ್ತದೆ. ಅದಕ್ಕೆ ಪೂರಕವಾಗಿ, ಪೆಟ್ರೋಲಿಯಂ ಉತ್ಪನ್ನಗಳನ್ನಾಧರಿಸಿದ ಸರಕು ಮತ್ತು ಸೇವೆಗಳ ದರವೂ ಏರುತ್ತದೆ. ಗ್ರಾಹಕರ ಸಾರಿಗೆ ವೆಚ್ಚವೂ ಹೆಚ್ಚುತ್ತದೆ. ಇದು ಹಣದುಬ್ಬರದ ಮೇಲೆ ಪರಿಣಾಮ ಬೀರುವುದರಿಂದ ಬರುವ ದಿನಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರವನ್ನು ಏರಿಸುವ ಸಾಧ್ಯತೆ ಇದೆ.

ಇದನ್ನೂ ಓದಿ : ಚುನಾವಣೆ ಮುಗಿಯುತ್ತಿದ್ದಂತೆ ಪೆಟ್ರೋಲ್, ಡಿಸೇಲ್ ದರ ಏರಿಸಿದ ಮೋದಿ ಸರ್ಕಾರ!

ತಕ್ಷಣಕ್ಕೆ ಚಾಲ್ತಿ ಖಾತೆ ಕೊರತೆ ಎದುರಾದರೆ, ದೀರ್ಘಕಾಲದಲ್ಲಿ ವಿದೇಶಿ ಮೀಸಲು ನಿಧಿಯು ಕರಗುತ್ತ ಬಂದು, ಅದು ನಮ್ಮ ಆಮದು ಸಾಮರ್ಥ್ಯದ ಮೇಲೂ ಪರಿಣಾಮ ಬೀರುತ್ತದೆ. ಈ ಎಲ್ಲ ಕಾರಣಗಳಿಗಾಗಿ ಮಾರುಕಟ್ಟೆ ವ್ಯತಿರಿಕ್ತವಾಗಿ ಸ್ಪಂದಿಸಿದೆ. ಬರುವ ದಿನಗಳಲ್ಲಿ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಚಿನಿವಾರಪೇಟೆಯಲ್ಲಿ ಚಿನ್ನದ ಬೆಲೆ 102 ರುಪಾಯಿ ಕುಸಿದು, 30,895 ರುಪಾಯಿ ಆಜುಬಾಜಿನಲ್ಲಿ ವಹಿವಾಟಾಗಿದೆ. ಡಾಲರ್ ವಿರುದ್ಧ ರುಪಾಯಿ 67.70ರ ಆಜುಬಾಜಿನಲ್ಲಿ ವಹಿವಾಟಾಗಿದ್ದು, ಸದ್ಯಕ್ಕೆ 80ರ ಗಡಿಯಿಂದ ಕೆಳಕ್ಕಿಳಿದು ಸ್ಥಿರವಾಗುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಮಧ್ಯಪ್ರವೇಶದಿಂದಾಗಿ ರುಪಾಯಿಯ ಮತ್ತಷ್ಟು ಕುಸಿತ ತಡೆಯಲಾಗಿದೆ. ಆದರೆ, ಕಚ್ಚಾತೈಲ ಏರಿಕೆಯಿಂದಾಗಿ ಬರುವ ದಿನಗಳಲ್ಲಿ ಡಾಲರ್ ವಿರುದ್ಧ ರುಪಾಯಿ ಮತ್ತೆ ಕುಸಿಯುವ ಸಾಧ್ಯತೆ ಇದೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More