ಆರ್‌ಬಿಐ ಬಡ್ಡಿ ದರ ನಿಗದಿಯತ್ತ ಪೇಟೆ ದೃಷ್ಟಿ, ಕುಸಿದ ಬ್ಯಾಂಕಿಂಗ್ ಷೇರುಗಳು

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಕೊಂಚ ಇಳಿಯುತ್ತಿದ್ದು, ಡಾಲರ್ ವಿರುದ್ಧ ರುಪಾಯಿ ಚೇತರಿಸಿಕೊಳ್ಳುತ್ತಿದೆ. ಆರ್‌ಬಿಐ ಬಡ್ಡಿದರ ಏರಿಸುವುದೋ, ಯಥಾಸ್ಥಿತಿ ಕಾಯ್ದುಕೊಳ್ಳುವುದೋ ಎಂಬ ಗೊಂದಲದಿಂದ ಬ್ಯಾಂಕುಗಳ ಷೇರುಗಳು ಕುಸಿದಿದ್ದು, ವಿಸ್ತೃತ ಮಾರುಕಟ್ಟೆ ಇಳಿಜಾರಿಗೆ ಸರಿದಿದೆ

ಕಚ್ಚಾ ತೈಲ ದರ ಇಳಿಜಾರಿಗೆ ಸರಿದಿದೆ. ವಾರದ ಆರಂಭದ ವಹಿವಾಟಿನಲ್ಲಿ ಬ್ರೆಂಟ್ ಕ್ರೂಡ್ ಶೇ.1.20 ಮತ್ತು ಡಬ್ಲ್ಯೂಟಿಐ ಕ್ರೂಡ್ 0.62ರಷ್ಟು ಕುಸಿದಿವೆ. ಬ್ರೆಂಟ್ 75 ಡಾಲರ್ ಮತ್ತು ಡಬ್ಲ್ಯೂಟಿಐ ಕ್ರೂಡ್ 65 ಡಾಲರ್ ಆಜುಬಾಜಿನಲ್ಲಿ ವಹಿವಾಟಾಗುತ್ತಿದೆ. ಮೇ ತಿಂಗಳ ಗರಿಷ್ಠ ದರಕ್ಕೆ ಹೋಲಿಸಿದರೆ ಶೇ.6-9ರಷ್ಟು ಇಳಿದಿದೆ. ಇದು ಡಾಲರ್ ವಿರುದ್ಧ ರುಪಾಯಿ ಚೇತರಿಸಿಕೊಳ್ಳಲು ನೆರವಾಗಿದೆ. ದಿನದ ವಹಿವಾಟಿನಲ್ಲಿ ರುಪಾಯಿ 10 ಪೈಸೆ ಏರಿದೆ.

ಈ ವಿದ್ಯಮಾನಗಳು ದೇಶೀಯ ಪೇಟೆ ಏರುಹಾದಿಯಲ್ಲಿ ಸಾಗಲು ನೆರವಾಗಬೇಕಿತ್ತು. ಆರಂಭದ ವಹಿವಾಟಿನಲ್ಲಿ ಸೆನ್ಸೆಕ್ಸ್ 300 ಅಂಶ ಮತ್ತು ನಿಫ್ಟಿ 100 ಏರಿದ್ದವು. ಆದರೆ, ಆರ್‌ಬಿಐ ಹಣಕಾಸು ನೀತಿ ಪರಾಮರ್ಶೆ ಮಾಡಲಿದ್ದು, ಬಡ್ಡಿದರ ಏರಿಸುತ್ತದೋ ಅಥವಾ ಯಥಾಸ್ಥಿತಿ ಕಾಯ್ದುಕೊಳ್ಳತ್ತದೋ ಎಂಬ ಗೊಂದಲದ ನಡುವೆ ಬಹುತೇಕ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ಷೇರುಗಳು ಇಳಿಜಾರಿಗೆ ಸರಿದವು. ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ 500 ಅಂಶದಷ್ಟು ಏರಿಳಿತ ಕಂಡಿತು. ದಿನದ ಆರಂಭದಲ್ಲಿ 300 ಅಂಶ ಜಿಗಿದ ಸೆನ್ಸೆಕ್ಸ್ 35,555.55ಕ್ಕೆ ಏರಿತ್ತು. ಆದರೆ, ನಿಫ್ಟಿ ಬ್ಯಾಂಕ್, ನಿಫ್ಟಿ ಪಿಎಸ್ಯು ಬ್ಯಾಂಕ್ ಮತ್ತು ನಿಫ್ಟಿ ಪ್ರೈವೆಟ್ ಬ್ಯಾಂಕ್, ನಿಫ್ಟಿ ಫಿನ್ ಸರ್ವೀಸ್ ಸೂಚ್ಯಂಕಗಳ ಕುಸಿತದಿಂದಾಗಿ ಸೆನ್ಸೆಕ್ಸ್ 215 ಇಳಿಯಿತು.

ವಿಸ್ತೃತ ಮಾರುಕಟ್ಟೆಯಲ್ಲಿ ನಿಫ್ಟಿ ಐಟಿ, ನಿಫ್ಟಿ ಎನರ್ಜಿ, ನಿಫ್ಟಿ ಮೆಟಲ್ ಹೊರತು ಪಡಿಸಿ ಉಳಿದೆಲ್ಲ ಸೂಚ್ಯಂಕಗಳು ಇಳಿಜಾರಿಗೆ ಸರಿದರು. ನಿಫ್ಟಿ ರಿಯಾಲ್ಟಿ ಗರಿಷ್ಠ ಅಂದರೆ ಶೇ.3.33ರಷ್ಟು ಕುಸಿಯಿತು. ನಿಫ್ಟಿ ಇನ್ಫ್ರಾ ಶೇ.1.70ರಷ್ಟು ಕುಸಿದರೆ ಫ್ಟಿ ಬ್ಯಾಂಕ್, ನಿಫ್ಟಿ ಪಿಎಸ್ಯು ಬ್ಯಾಂಕ್ ಮತ್ತು ನಿಫ್ಟಿ ಪ್ರೈವೆಟ್ ಬ್ಯಾಂಕ್, ನಿಫ್ಟಿ ಫಿನ್ ಸರ್ವೀಸ್ ಸೂಚ್ಯಂಕಗಳು ಶೇ.1.50ರಷ್ಟು ಕುಸಿದವು.

ಬ್ಯಾಂಕ್ ಆಫ್ ಬರೋಡ, ಐಡಿಎಫ್ಸಿ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್ ಶೇ.3-4ರಷ್ಟು ಕುಸಿದವು. ಫೆಡರಲ್ ಬ್ಯಾಂಕ್, ಎಸ್ಬಿಐ, ಕೊಟಕ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್ ಶೇ.1-3ರಷ್ಟು ಇಳಿದವು. ಐಡಿಬಿಐ ಬ್ಯಾಂಕ್, ಆಂಧ್ರ ಬ್ಯಾಂಕ್, ಓರಿಯಂಟಲ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಸಿಂಡಿಕೇಟ್ ಬ್ಯಾಂಕ್, ಅಲಹಾಬಾದ್ ಬ್ಯಾಂಕ್, ಕೆನರಾ ಬ್ಯಾಂಕ್, ಶೇ.2-4ರಷ್ಟು ಕುಸಿದವು. ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್ ಶೇ.5ರಷ್ಟು ಕುಸಿದಿದೆ. ಇಡಿಲ್ವಿಸ್ ಶೇ.4, ಮ್ಯಾಕ್ಸ್ ಫೈನಾನ್ಷಿಯಲ್, ರೂರಲ್ ಎಲೆಕ್ಟ್ರಿಫಿಕೇಷನ್ ಕಂಪನಿ, ಬಜಾಬ್ ಫಿನ್ ಸರ್ವಿಸ್, ಐಐಎಫ್ಎಲ್ ಹೊಲ್ಡಿಂಗ್ಸ್, ಜನರಲ್ ಇನ್ಸುರೆನ್ಸ್ ಕಂಪನಿ, ಸುಂದರಂ ಫೈನಾನ್ಸ್, ಶ್ರೀರಾಮ ಟ್ರಾನ್ಸ್ಪೋರ್ಟ್ ಫೈನಾನ್ಸ್ ಶೇ.1-3ರಷ್ಟು ಇಳಿದಿವೆ.

ತೈಲ ಬೆಲೆ ತಣ್ಣಗಾಗುತ್ತಿರುವ ಹಿನ್ನೆಲೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್, ಇಂಡಿಯನ್ ಆಯಿಲ್ ಕಾರ್ಪೊರೆಷನ್, ರಿಲಯನ್ಸ್ ಇನ್ಫ್ರಾ, ಎಚ್ಪಿಸಿಎಲ್ ಶೇ.1ರಷ್ಟು ಏರಿದವು. ರಿಯಲ್ ಎಸ್ಟೇಟ್ ವಲಯದ ಎಲ್ಲ ಷೇರುಗಳು ಕುಸಿದಿವೆ.

ಇದನ್ನೂ ಓದಿ : ಆರ್‌ಬಿಐ ಬಡ್ಡಿದರ ಏರಿಸೋ ಸಾಧ್ಯತೆ ಹೆಚ್ಚಿದೆ, ಅದಕ್ಕೆ ಕಾರಣ ಏನು ನಿಮಗೆ ಗೊತ್ತೇ?

ಬ್ಯಾಂಕ್ ಬಡ್ಡಿದರ ಏರಿದರೆ, ಗೃಹಸಾಲದ ಬಡ್ಡಿದರವೂ ಏರುವುದರಿಂದ ಫ್ಲ್ಯಾಟ್‌ಗಳ ಬೇಡಿಕೆ ಕುಸಿಯುವ ಲೆಕ್ಕಾಚಾರ ಪೇಟೆಯದು. ಹೀಗಾಗಿ ರಿಯಾಲ್ಟಿ ವಲಯದ ಷೇರುಗಳ ಮಾರಾಟ ಒತ್ತಡ ತೀವ್ರವಾಗಿತ್ತು. ಎಚ್ಡಿಐಎಲ್ ಶೇ.7ರಷ್ಟು ಕುಸಿಯಿತು. ಇಂಡಿಯಾ ಬುಲ್ಸ್ ರಿಯಲ್ ಎಸ್ಟೇಟ್, ಪ್ರೇಸ್ಟಿಜ್ ಎಸ್ಟೇಜ್, ಫೀನಿಕ್ಸ್ ಮಿಲ್ಸ್, ಬ್ರಿಗೇಡ್ ಎಂಟರ್ಪ್ರೈಸಸ್, ಡಿಎಲ್ಎಫ್, ಯೂನಿಟೆಕ್, ಗೋದ್ರೇಜ್ ಪ್ರಾಪರ್ಟೀಸ್, ಶೋಭಾ, ಒಬೆರಾಯ್ ರಿಯಾಲ್ಟಿ ಶೇ.1-4ರಷ್ಟು ಕುಸಿದವು.

ಐಟಿ ವಲಯದ ಸೂಚ್ಯಂಕ ದೈತ ಕಂಪನಿಗಳಾದ ಇನ್ಫೊಸಿಸ್ ಶೇ.1.50 ರಷ್ಟು ಜಿಗಿಯಿತು, ಟಿಸಿಎಸ್ ಶೇ.1ರಷ್ಟು ಏರಿತು. ಐಟಿ ವಲಯದ ಉಳಿದೆಲ್ಲ ಕಂಪನಿಗಳು ಇಳಿಜಾರಿಗೆ ಸರಿದವು. ಇನ್ಫಿ ಬೀಮ್ ಶೇ.4ರಷ್ಟು ಕುಸಿಯಿತು. ಕೆಪಿಐಟಿ ಟೆಕ್ನಾಲಜೀಸ್, ಒರಾಕಲ್ ಫಿನ್ ಸರ್ವೀಸ್, ಟಾಟಾ ಎಲಾಕ್ಸಿ ಶೇ.1-3ರಷ್ಟು ಇಳಿದಿವೆ.

ಚಿನಿವಾರ ಪೇಟೆಯಲ್ಲಿ ಚಿನ್ನ 150 ರುಪಾಯಿ ಏರಿದೆ. 30,700 ರುಪಾಯಿ ಆಜುಬಾಜಿನಲ್ಲಿ ವಹಿವಾಟು ನಡೆಸಿದೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More