ಕಳೆದ ಹತ್ತು ವರ್ಷಗಳಲ್ಲಿ ಏರಿಕೆಯೇ ಆಗಿಲ್ಲ ಮುಖೇಶ್ ಅಂಬಾನಿ ಸಂಬಳ!

ಭಾರತದ ಅತಿ ಶ್ರೀಮಂತ ವ್ಯಕ್ತಿಯಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಒಡೆಯ ಮುಖೇಶ್ ಅಂಬಾನಿ ಅವರ ಸಂಬಳ ಕಳೆದ ಹತ್ತು ವರ್ಷಗಳಲ್ಲಿ ಏರಿಕೆಯೇ ಆಗಿಲ್ಲ. 2008-09ರಲ್ಲಿ ಅವರು ಕೈಗೊಂಡ ಮಹತ್ವದ ನಿರ್ಧಾರವೇ ಇದಕ್ಕೆ ಮೂಲ ಕಾರಣ. ಅಷ್ಟಕ್ಕೂ ಅವರ ಸಂಬಳ ಎಷ್ಟು, ಆದಾಯ ಎಷ್ಟು?

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಸಂಬಳ ಕಳೆದ ಹತ್ತು ವರ್ಷಗಳಲ್ಲಿ ಏರಿಕೆಯೇ ಆಗಿಲ್ಲ. 2009ರಲ್ಲಿ ತಮ್ಮ ಸಂಬಳ ಏರಿಕೆ ಮಾಡಿಕೊಳ್ಳದಿರಲು ಖುದ್ದು ಮುಖೇಶ್ ಅಂಬಾನಿ ಅವರೇ ನಿರ್ಧರಿಸಿದ್ದರು. ಅಲ್ಲದೆ, ಕಂಪನಿಗಳ ಮೇಲ್ಮಟ್ಟದ ಹುದ್ದೆಯಲ್ಲಿರುವವರು ಮಿತಿಮೀರಿ ಸಂಬಳ ಪಡೆಯಬಾರದು ಎಂಬುದು ಅವರ ನಿಲವು.

ಅಷ್ಟಕ್ಕೂ ಅವರು 2009ರಲ್ಲಿ ಪಡೆಯುತ್ತಿದ್ದ ಸಂಬಳ ವಾರ್ಷಿಕ 15 ಕೋಟಿ ರುಪಾಯಿ. ಈ ಹತ್ತು ವರ್ಷಗಳಲ್ಲಿ ಅವರು 150 ಕೋಟಿ ಸಂಬಳ ಪಡೆದಿದ್ದಾರೆ. ಆದರೆ, ಕಂಪನಿ ನೀಡುವ ಸಂಬಳ ಅವರಿಗೆ ಲೆಕ್ಕಕ್ಕೇ ಇಲ್ಲ. ಅವರು ಕಂಪನಿಯಿಂದ ಪಡೆಯುವ ಲಾಭಾಂಶಕ್ಕೆ ಹೋಲಿಸಿದರೆ ಅವರ ಸಂಬಳ ಕೇವಲ ಶೇ.1ರಷ್ಟು ಮಾತ್ರ.

ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಶೇ.47.4ರಷ್ಟು ಷೇರುಗಳನ್ನು ಮುಖೇಶ್ ಹೊಂದಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಕಂಪನಿ 31,616 ಕೋಟಿ ರುಪಾಯಿ ಲಾಭಾಂಶ ಘೋಷಿಸಿದೆ. ಈ ಪೈಕಿ, ಮುಖೇಶ್ ಅಂಬಾನಿ ಅವರ ಪಾಲು 14,553 ಕೋಟಿ. ಅಂದರೆ, ಅವರು ಪಡೆದಿರುವ ವೇತನದ ಹೆಚ್ಚೂಕಡಿಮೆ ನೂರು ಪಟ್ಟು ಲಾಭಾಂಶ ಪಡೆದಿದ್ದಾರೆ.

2008ರ ಆರ್ಥಿಕ ಹಿಂಜರಿತದ ನಂತರ ವಿವಿಧ ಕಂಪನಿಗಳ ಸಿಇಒ, ಸಿಒಒ, ಸಿಎಫ್ಒ ಮತ್ತಿತರ ಮೇಲ್ಮಟ್ಟದ ಹುದ್ದೆಯಲ್ಲಿರುವವರು ಭಾರಿ ಪ್ರಮಾಣದ ಸಂಬಳ ಪಡೆಯುತ್ತಿರುವ ಬಗ್ಗೆ ಆಕ್ಷೇಪ, ಅಸಮಾಧಾನ ವ್ಯಕ್ತವಾಗಿತ್ತು. ಆ ಬಗ್ಗೆ ವ್ಯಾಪಕವಾದ ಚರ್ಚೆಯೂ ಆಗಿತ್ತು. ಆ ಹೊತ್ತಿನಲ್ಲಿ ಮುಖೇಶ್ ಅಂಬಾನಿ ತಮ್ಮ ವೇತನ ಏರಿಕೆ ಮಾಡಿಕೊಳ್ಳದಿರಲು ನಿರ್ಧರಿಸಿದರು.

ಆಗ ಮುಖೇಶ್ ಪಡೆಯುತ್ತಿದ್ದ ವೇತನ ವರ್ಷಕ್ಕೆ 15 ಕೋಟಿ ರುಪಾಯಿ, ಈಗಲೂ ಅವರ ವೇತನ 15 ಕೋಟಿ ರುಪಾಯಿ. ಆದರೆ, ಕಳೆದ ಹತ್ತು ವರ್ಷಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಆದಾಯ ದುಪ್ಪಟ್ಟಾಗಿದೆ. ಬಹಳ ವರ್ಷಗಳ ಕಾಲ ದೇಶದ ಅತಿ ಹೆಚ್ಚು ಮಾರುಕಟ್ಟೆ ಬಂಡವಾಳ ಹೊಂದಿದ ಕಂಪನಿ ಎಂಬ ಹೆಗ್ಗಳಿಕೆ ಪಡೆದಿದ್ದ ರಿಲಯನ್ಸ್, ಇತ್ತೀಚೆಗೆ ಆ ಸ್ಥಾನವನ್ನು ಟಾಟಾ ಕನ್ಸಲ್ಟೆನ್ಸಿ ಸರ್ವಿಸ್‌ಗೆ ಬಿಟ್ಟುಕೊಟ್ಟು, ಎರಡನೇ ಸ್ಥಾನದಲ್ಲಿದೆ. ಟಿಸಿಎಸ್ 100 ಬಿಲಿಯನ್ ಡಾಲರ್ ಕಂಪನಿ ಎಂಬ ಹೆಗ್ಗಳಿಕೆ ಪಡೆದಿದೆ.

ಇದನ್ನೂ ಓದಿ : ಭಾರತದ ಮೊದಲ 100 ಬಿಲಿಯನ್ ಡಾಲರ್ ಕಂಪನಿ ಎನಿಸಿ ಇತಿಹಾಸ ಸೃಷ್ಟಿಸಿದ ಟಿಸಿಎಸ್

ರಿಲಯನ್ಸ್ ಸಹ 100 ಬಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳ ಹೊಂದಿರುವ ಕಂಪನಿಯಾಗುವತ್ತ ದಾಪುಗಾಲು ಹಾಕಿದೆ. ಡಾಲರ್ ವಿರುದ್ಧ ರುಪಾಯಿ ಅಪಮೌಲ್ಯ ಹೆಚ್ಚಿರುವುದರಿಂದ ಅದು ಸಾಧ್ಯವಾಗಿಲ್ಲ. ರುಪಾಯಿ ಮೌಲ್ಯ ಸುಧಾರಿಸಿದರೆ ತ್ವರಿತವಾಗಿ 100 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿರುವ ಕಂಪನಿಯಾಗಿ ಹೊರಹೊಮ್ಮಲಿದೆ.

ಅದೇನೇ ಇರಲಿ, ಒಂದು ಕ್ಷಣ ಯೋಚಿಸಿ, ಒಬ್ಬ ಸಾಮಾನ್ಯ ನೌಕರ ಹತ್ತು ವರ್ಷ ಸಂಬಳ ಏರಿಕೆಯೇ ಇಲ್ಲದೆ ಜೀವನ ಮಾಡಬೇಕಾಗಿ ಬಂದರೆ ಹೇಗಿರುತ್ತದೆ? ಹೋಲಿಕೆಯೇ ಸರಿಯಲ್ಲವೇನೋ ಅಲ್ಲವೇ?

ಪ್ರಧಾನಿ ನರೇಂದ್ರ ಮೋದಿ ಮುಂದಿರುವ ಅತಿದೊಡ್ಡ ಸವಾಲು ಯಾವುದು ಗೊತ್ತೇ?
ಎರಡೇ ವರ್ಷದಲ್ಲಿ ಇಪ್ಪತ್ತು ಕೋಟಿ ಗ್ರಾಹಕರನ್ನು ಪಡೆದ ರಿಲಯನ್ಸ್ ಜಿಯೋ
ನಿಫ್ಟಿ ಕಂಪನಿಗಳಲ್ಲಿ 588 ಲೈಂಗಿಕ ಕಿರುಕುಳ ಪ್ರಕರಣ; ಐಟಿಯಲ್ಲೇ ಹೆಚ್ಚು‍!
Editor’s Pick More