ವಿಡಿಯೋಕಾನ್ ಸಾಲ ಹಗರಣ; ಚಂದಾಗೆ ಗರಿಷ್ಠ ₹25 ಕೋಟಿ ದಂಡ?

ವಿಡಿಯೋಕಾನ್ ಸಂಸ್ಥೆಗೆ ಸಾಲ ನೀಡಿದ ಪ್ರಕರಣದಲ್ಲಿ ಸಕಾಲದಲ್ಲಿ ಮಾಹಿತಿ ನೀಡದ ಆರೋಪ ಚಂದಾ ಮೇಲಿದೆ. ತನಿಖೆ ನಡೆಸುತ್ತಿರುವ ಸೆಕ್ಯೂರಿಟೀಸ್ ಅಂಡ್ ಎಕ್ಸ್ಚೆಂಜ್ ಬೋರ್ಡ್ ಆಪ್ ಇಂಡಿಯಾ (ಸೆಬಿ) ಚಂದಾ ತಪ್ಪಿತಸ್ಥೆ ಎಂದು ಕಂಡು ಬಂದರೆ ಗರಿಷ್ಠ ₹25 ಕೋಟಿ ದಂಡ ವಿಧಿಸುವ ಅಧಿಕಾರ ಹೊಂದಿದೆ

ವಿಡಿಯೋಕಾನ್ ಸಂಸ್ಥೆಗೆ 3250 ಕೋಟಿ ರುಪಾಯಿ ಸಾಲ ನೀಡಿದ ಪ್ರಕರಣದಲ್ಲಿ ಸ್ವಜನ ಪಕ್ಷಪಾತ ಮತ್ತು ಸಂಘರ್ಷ ಹಿತಾಸಕ್ತಿ ಎದುರಿಸುತ್ತಿರುವ ಐಸಿಐಸಿಐ ಸಿಇಒ ಚಂದಾ ಕೊಚ್ಚಾರ್ ಅವರ ವಿರುದ್ಧ ಮಾಹಿತಿ ನೀಡದ ಆರೋಪ ಕುರಿತಂತೆ ಸೆಕ್ಯೂರಿಟೀಸ್ ಅಂಡ್ ಎಕ್ಸ್ಚೆಂಜ್ ಬೋರ್ಡ್ ಆಪ್ ಇಂಡಿಯಾ (ಸೆಬಿ) ತನಿಖೆ ನಡೆಸುತ್ತಿದೆ. ಈ ತನಿಖೆಯಲ್ಲಿ ಚಂದಾ ಕೊಚ್ಚಾರ್ ತಪ್ಪಿತಸ್ಥೆ ಎಂದು ಸಾಬೀತಾದರೆ ಸೆಬಿ ಗರಿಷ್ಠ 25 ಕೋಟಿ ರುಪಾಯಿ ದಂಡ ವಿಧಿಸುವ ಸಾಧ್ಯತೆ ಇದೆ.

ಮಿಂಟ್ ವರದಿ ಪ್ರಕಾರ, ಒಂದು ವೇಳೆ ಚಂದಾ ಕೊಚ್ಚಾರ್ ತಪ್ಪಿತಸ್ಥೆ ಎಂದು ಸಾಬೀತಾದರೂ ಐಸಿಐಸಿಐ ಬ್ಯಾಂಕ್ ಸಿಇಒ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಕೋರುವಂತಿಲ್ಲ. ಸೆಬಿಗೆ ದಂಡ ವಿಧಿಸುವ ಅಧಿಕಾರ ಇದೆ. ಆದರೆ ಹುದ್ದೆಗೆ ರಾಜಿನಾಮೆ ನೀಡುವಂತೆ ಆದೇಶಿಸುವ ಅಧಿಕಾರ ಇಲ್ಲ.

ವಿಡಿಯೋ ಕಾನ್ ಸಂಸ್ಥೆಗೆ 3250 ಕೋಟಿ ರುಪಾಯಿ ಸಾಲ ನೀಡಿದ ಪ್ರಕರಣದಲ್ಲಿ ಕೊಟ್ಟುಕೊಳ್ಳುವಿಕೆ ನಡೆದಿದೆ ಎಂಬ ಆರೋಪವೂ ಇದೆ. ವೇಣುಗೋಪಾಲ್ ದೂತ್ ಅವರು ಚಂದಾ ಕೊಚ್ಚಾರ್ ಪತಿ ದೀಪಕ್ ಕೊಚ್ಚಾರ್ ಅವರ ನ್ಯುಪವರ್ ಕಂಪನಿಗೆ 67 ಕೋಟಿ ರುಪಾಯಿ ಸಾಲ ನೀಡಿ, ನಂತರ ಷೇರು ಖರೀದಿಸಿದ್ದು, ವಿವಿಧ ವಹಿವಾಟುಗಳ ನಂತರ ಆ ಷೇರುಗಳನ್ನು ದೀಪಕ್ ಕೊಚ್ಚಾರ್ ನಿರ್ವಹಿಸುತ್ತಿದ್ದ ಟ್ರಸ್ಟ್ ಗೆ ಕೇವಲ 9 ಲಕ್ಷ ರುಪಾಯಿಗೆ ವಾಪಾಸು ಮಾರಾಟ ಮಾಡಿದ್ದರು. ಅದಾದ ನಂತರ ವಿಡಿಯೋಕಾನ್ ಸಂಸ್ಥೆಯು ಪಡೆದಿದ್ದ 3250 ಕೋಟಿ ರುಪಾಯಿ ಪೈಕಿ 2850 ಕೋಟಿ ರುಪಾಯಿಗಳನ್ನು ಐಸಿಐಸಿಐ ಬ್ಯಾಂಕ್ ನಿಷ್ಕ್ರಿಯ ಸಾಲ ಎಂದು ಘೋಷಿಸಿತ್ತು.

ಇಡೀ ವಹಿವಾಟಿನಲ್ಲಿ ಸ್ವಜನ ಪಕ್ಷಪಾತ ಮತ್ತು ಹಿತಾಸಕ್ತಿ ಸಂಘರ್ಷ ಇರುವ ಬಗ್ಗೆ ವಿವಿಧ ವಲಯದಿಂದ ಆರೋಪಗಳು ಕೇಳಿ ಬಂದಿದ್ದವು. ಈ ನಡುವೆ ಶಿಳ್ಳೆಗಾರರೊಬ್ಬರು ನೀಡಿದ ದೂರನ್ನು ಆಧರಿಸಿ ಸೆಬಿ ತನಿಖೆ ನಡೆಸುತ್ತಿದೆ. ಬೃಹತ್ ಪ್ರಮಾಣದ ಸಾಲ ನೀಡಿದಾಗ ಮತ್ತು ನೀಡಿದ ಸಾಲ ನಿಷ್ಕ್ರಿಯ ಸಾಲ ಎಂದು ಘೋಷಿಸಿದಾಗ ಅದಕ್ಕೆ ಪೂರಕವಾಗಿ ನಡೆದಿರುವ ಎಲ್ಲಾ ವಹಿವಾಟುಗಳನ್ನು ನ್ಯಾಯೋಚಿತ ಮಾಹಿತಿ ಹಂಚಿಕೆ ನಿಯಮದಡಿ ಸೆಬಿ ಗಮನಕ್ಕೆ ತರಬೇಕಿತ್ತು. ಆದರೆ, ಚಂದಾ ಕೊಚ್ಚಾರ್ ಮತ್ತು ಐಸಿಐಸಿಐ ಬ್ಯಾಂಕ್ ಆಡಳಿತ ಮಂಡಳಿ ಸೆಬಿ ಗಮನಕ್ಕೆ ತಂದಿಲ್ಲದ ಆರೋಪ ಎದುರಿಸುತ್ತಿವೆ.

ಇದನ್ನೂ ಓದಿ : ಸಾಲ ಹಗರಣ; ಐಸಿಐಸಿಐ ಬ್ಯಾಂಕ್ ಸಿಇಒ ಹುದ್ದೆ ತೊರೆಯುವರೇ ಚಂದಾ ಕೊಚ್ಚಾರ್?

ಆರಂಭದಲ್ಲಿ ಚಂದಾ ಕೊಚ್ಚಾರ್ ಅವರನ್ನು ಸಮರ್ಥಿಸಿಕೊಂಡಿದ್ದ ಐಸಿಐಸಿಐ ಬ್ಯಾಂಕ್ ಆಡಳಿತ ಮಂಡಳಿಯು ಶಿಳ್ಳೆಗಾರರ ದೂರು ಆಧರಿಸಿ ತನಿಖೆ ಆರಂಭಿಸಿದ ನಂತರ ಐಸಿಐಸಿಐ ಬ್ಯಾಂಕ್ ಸ್ವಂತಂತ್ರ ತನಿಖೆಗೆ ಮುಂದಾಗಿದೆ. ಈ ನಡುವೆ ಚಂದಾ ಕೊಚ್ಚಾರ್ ಅವರು ರಜೆ ಮೇಲೆ ತೆರಳಿದ್ದಾರೆ. ಬ್ಯಾಂಕ್ ಆಡಳಿತ ಮಂಡಳಿ ಸೂಚನೆ ಮೇರೆಗೆ ಚಂದಾ ರಜೆ ಮೇಲೆ ತೆರಳಿದ್ದಾರೆ ಎಂಬ ವದಂತಿಗಳನ್ನು ಬ್ಯಾಂಕ್ ತಳ್ಳಿಹಾಕಿದೆ. ಚಂದಾ ಪೂರ್ವನಿರ್ಧಾರಿತ ರಜೆ ಮೇಲೆ ತೆರಳಿದ್ದಾರೆಂದು ಸ್ಪಷ್ಟನೆ ನೀಡಿದೆ.

ಸೆಬಿಯು ಐಸಿಐಸಿಐ ಬ್ಯಾಂಕ್ ಗೆ ನೀಡಿರುವ ನೋಟಿಸ್ ನಲ್ಲಿರುವ ಅಂಶಗಳನ್ನು ಗಮನಿಸಿದರೆ ಚಂದಾ ಕೊಚ್ಚಾರ್ ಅವರಿಗೆ ದಂಡ ವಿಧಿಸಬಹುದೇ ಹೊರತು ತಮ್ಮ ಹುದ್ದೆಗೆ ರಾಜಿನಾಮೆ ನೀಡುವಂತೆ ಸೂಚಿಸುವುದು ಸಾಧ್ಯವಿಲ್ಲ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆಂದು ಮಿಂಟ್ ವರದಿ ಮಾಡಿದೆ. ಈ ಪ್ರಕರಣದ ಬಗ್ಗೆ ಈಗಾಗಲೇ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದೆ. ಚಂದಾ ಕೊಚ್ಚಾರ್, ದೀಪಕ್ ಕೊಚ್ಚಾರ್ ಸೇರಿದಂತೆ ಹಿರಿಯ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಿದೆ.

ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಅಕಾಲದಲ್ಲಿ ರಾಜಿನಾಮೆ ನೀಡುತ್ತಿರುವುದೇಕೆ?
ಭಾರತೀಯ ಬ್ಯಾಂಕಿಂಗ್ ಉದ್ಯಮದಲ್ಲಿ ಮಹಿಳೆಯರ ಯುಗ ಅಂತ್ಯವಾಗುತ್ತಾ ಬಂತೆ?
ಐಸಿಐಸಿಐ ಬ್ಯಾಂಕ್‌ಗೆ ಸಂದೀಪ್ ಭಕ್ಷಿ ಹೊಸ ಸಿಒಒ; ಚಂದಾಗೆ ಬಹುತೇಕ ವಿದಾಯ!
Editor’s Pick More