ಕಿಮ್-ಟ್ರಂಪ್ ಭೇಟಿ ಫಲಪ್ರದ; ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿದ ಪೇಟೆ

ಸಿಂಗಪುರದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್, ಉ.ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಭೇಟಿ ಫಲಪ್ರದವಾದ ಪರಿಣಾಮ ಜಾಗತಿಕ ಪೇಟೆಗಳು ಏರುಹಾದಿಯಲ್ಲಿ ಸಾಗಿವೆ. ಬಡ್ಡಿದರ ಏರಿಕೆ, ಉತ್ತಮ ಮುಂಗಾರಿನಿಂದ ಏರುದಾರಿಯಲ್ಲಿದ್ದ ಪೇಟೆ ನಾಲ್ಕುತಿಂಗಳ ಗರಿಷ್ಠ ಮಟ್ಟಕ್ಕೇರಿದೆ

ಜಾಗತಿಕ ಆತಂಕಕ್ಕೆ ಕಾರಣವಾಗಿದ್ದ ಉತ್ತರ ಕೊರಿಯಾ ಅಣ್ವಸ್ತ್ರ ಉತ್ಪಾದನೆ ತಡೆಗಟ್ಟುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿಂಗಪುರ ಭೇಟಿ ಫಲಪ್ರದವಾಗಿರುವ ಹಿನ್ನೆಲೆಯಲ್ಲಿ ಜಾಗತಿಕ ಪೇಟೆಗಳು ಏರುಹಾದಿಯಲ್ಲಿ ಸಾಗಿದವು. ದೇಶೀಯ ಪೇಟೆಯೂ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸೆನ್ಸೆಕ್ಸ್, ನಿಫ್ಟಿ ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿವೆ. ಡೊನಾಲ್ಡ್ ಟ್ರಂಪ್- ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಮಾತುಕತೆಯು ಜಾಗತಿಕ ಅಣ್ವಸ್ತ್ರ ಆತಂಕವನ್ನು ಬಹುಮಟ್ಟಿಗೆ ತಗ್ಗಿಸಿದೆ. ಖುದ್ದು ಟ್ರಂಪ್ ಅವರು ಅಣ್ವಸ್ತ್ರ ತಗ್ಗಿಸುವ ನಿಟ್ಟಿನಲ್ಲಿ ಇದೊಂದು ದಿಟ್ಟ ಹೆಜ್ಜೆ ಎಂದು ಹೇಳಿರುವುದು ಮಾರುಕಟ್ಟೆಗಳು ಜಿಗಿಯಲು ಕಾರಣವಾಗಿದೆ.

ಸೆನ್ಸೆಕ್ಸ್ 209 ಅಂಶ ಏರಿ, 35,692ಕ್ಕೆ ವಹಿವಾಟು ಮುಗಿಸಿತು. ಆದರೆ, ದಿನದ ವಹಿವಾಟಿನಲ್ಲಿ 35,743 ಅಂಶಕ್ಕೇರಿತ್ತು. ನಿಫ್ಟಿ 56 ಅಂಶ ಏರಿ 10,842ಕ್ಕೆ ವಹಿವಾಟು ಅಂತ್ಯಗೊಳಿಸಿತು. ದಿನದ ವಹಿವಾಟಿನಲ್ಲಿ ನಿರ್ಣಾಯಕ ಮಟ್ಟವಾದ 10,850ರ ಮಟ್ಟ ದಾಟಿ ವಹಿವಾಟು ನಡೆಸಿತ್ತು.

ಜಾಗತಿಕ ಮಾರುಕಟ್ಟೆಗಳು ಏರುಹಾದಿಯಲ್ಲಿ ಸಾಗಿದ ಹಿನ್ನೆಲೆಯಲ್ಲಿ ವಿಸ್ತೃತ ಮಾರುಕಟ್ಟೆಯ ಬಹುತೇಕ ಸೂಚ್ಯಂಕಗಳು ಏರುಹಾದಿಯಲ್ಲಿ ಸಾಗಿವೆ. ನಿಫ್ಟಿ ಫಾರ್ಮ ಗರಿಷ್ಠ ಅಂದರೆ, ಶೇ.2.60ರಷ್ಟು, ನಿಫ್ಟಿ ಪಿಎಸ್‌ಯು ಶೇ.2.33ರಷ್ಟು ಏರಿದವು. ನಿಪ್ಟಿ ಮಿಡ್ಕ್ಯಾಪ್, ನಿಫ್ಟಿ ಗ್ರೋತ್, ನಿಫ್ಟಿ ಎಫ್ಎಂಸಿಜಿ, ನಿಫ್ಟಿ ಎಂಎನ್ಸಿ, ನಿಫ್ಟಿ ಎನರ್ಜಿ, ನಿಫ್ಟಿ ಕ್ವಾಲಿಟಿ, ನಿಫ್ಟಿ ಐಟಿ, ನಿಫ್ಟಿ ಫೈನಾನ್ಷಿಯಲ್ ಸರ್ವೀಸ್ ಸೂಚ್ಯಂಕಗಳು ಶೇ.0.50ರಿಂದ 1ರಷ್ಟು ಏರಿದವು.

ಫಾರ್ಮ ವಲಯದ ಎಲ್ಲ ಕಂಪನಿಗಳ ಷೇರುಗಳು ಜಿಗಿದವು. ಲುಪಿನ್ ಶೇ.6ರಷ್ಟು ಏರಿತು. ಡಾ.ರೆಡ್ಡಿ ಲ್ಯಾಬ್, ಗ್ಲೆನ್ ಮಾರ್ಕ್ ಫಾರ್ಮಾ, ಡಿವಿಸ್ ಲ್ಯಾಬರೆಟರೀಸ್, ಅರವಿಂದೋ ಫಾರ್ಮ, ಕ್ಯಾಡಿಲಾ ಹೆಲ್ತ್, ಬಯೋಕಾನ್, ಪಿರಮಲ್ ಎಂಟರ್ಪ್ರೈಸಸ್, ಸಿಪ್ಲಾ, ಸನ್ಫಾರ್ಮ ಶೇ.1-5ರಷ್ಟು ಏರಿದವು.

ಸೂಚ್ಯಂಕ ದೈತ್ಯ ಎಸ್ಬಿಐ ಸೇರಿದಂತೆ ಬಹುತೇಕ ಪಿಎಸ್‌ಯು ಬ್ಯಾಂಕುಗಳು ಏರಿದವು. ಓರಿಯಂಟಲ್ ಬ್ಯಾಂಕ್, ಎಸ್ಬಿಐ ಶೇ.4ರಷ್ಟು ಏರಿದರೆ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶೇ.1-3ರಷ್ಟು ಏರಿದವು.

ದಿನದ ವಹಿವಾಟಿನಲ್ಲಿ ಬಿಜಿಆರ್ ಎನರ್ಜಿ, ಸಾಂಘ್ಪಿ ಫೋರ್ಜಿಂಗ್, ಸೋಮಿ ಕನ್ವೆಯರ್, ಗ್ಲೋಬಲ್ ಆಫ್ಶೋರ್, ಗ್ರೇಟೆಕ್ಸ್ ಇಂಡಸ್ಟ್ರೀಸ್ ಶೇ.20ರಷ್ಟು ಜಿಗಿದಿವೆ. ಎಸ್ಟಿಸಿ ಇಂಡಿಯಾ, ಜಿನಸ್ ಪೇಪರ್, ರೊಲ್ಟಾ, ಎಂಎಂಟಿಸಿ, ಡ್ರೆಡ್ಜಿಂಗ್ ಕಾರ್ಪ್, ಎಚ್ಸಿಎಲ್ ಇನ್ಫೊಸಿಸ್ಟಮ್, ಡಿಸಿಎಂ ಶ್ರೀರಾಮ್, ಎನ್ಎಸಿಎಲ್ ಇಂಡಸ್ಟ್ರೀಸ್, ಎನ್ಬಿಆರ್ ಬೇರಿಂಗ್ಸ್, ಮೋರ್ಪೆನ್ ಲ್ಯಾಬ್, ವಿಕಾಸ್ ಎಕೊಟೆಕ್, ಜಿಂದಾಲ್ ಫೋಟೋ ಶೇ.10-15ರಷ್ಟು ಏರಿವೆ.

ಇದನ್ನೂ ಓದಿ : ಅಂತೂ ಸಿಂಗಪುರ ಸೇರಿದ ಕಿಮ್-ಟ್ರಂಪ್; ಉಳಿದಿರುವುದು ಒಪ್ಪಂದದ ಕುತೂಹಲ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಏರಿಕೆಯ ಬಿಸಿ ತಣಿಯುತ್ತಿದೆ. ದಿನದ ವಹಿವಾಟಿನಲ್ಲಿ ಬ್ರೆಂಟ್ ಕ್ರೂಡ್ ಶೇ.0.50ರಷ್ಟು, ಡಬ್ಲ್ಯೂಟಿಐ ಕ್ರೂಡ್ ಶೇ.0.25ರಷ್ಟು ಇಳಿದಿವೆ. ಬ್ರೆಂಟ್ 76 ಡಾಲರ್ ಮತ್ತು ಡಬ್ಲ್ಯುಟಿಐ 66 ಡಾಲರ್ ಆಜುಬಾಜಿನಲ್ಲಿ ವಹಿವಾಟು ನಡೆಸುತ್ತಿವೆ. ನಾಲ್ಕು ವರ್ಷದ ಗರಿಷ್ಠ ಮಟ್ಟ ಮುಟ್ಟಿದ ನಂತರ ಎರಡು ವಾರಗಳಿಂದ ಕಚ್ಚಾ ತೈಲ ಇಳಿಜಾರಿನಲ್ಲಿದೆ. ಈ ಅವಧಿಯಲ್ಲಿ ಇಂಧನ ಬೇಡಿಕೆ ಸಹಜವಾಗಿಯೇ ತಗ್ಗುವುದರಿಂದ ದರವೂ ತಗ್ಗಿದೆ. ಆದರೆ, ಬರುವ ದಿನಗಳಲ್ಲಿ ಮತ್ತಷ್ಟು ತ್ವರಿತವಾಗಿ ಏರಲಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ಚಿನಿವಾರ ಪೇಟೆಯಲ್ಲಿ ಸತತ ಏರುಹಾದಿಯಲ್ಲಿದ್ದ ಚಿನ್ನ ಕೊಂಚ ಇಳಿದಿದೆ. ದಿನದ ವಹಿವಾಟಿನಲ್ಲಿ 50 ರುಪಾಯಿ ಕುಸಿದು, 31,170 ಆಜುಬಾಜಿನಲ್ಲಿ ವಹಿವಾಟಾಗಿದೆ. ಚಿನ್ನ ವರ್ಷಾಂತ್ಯದ ವೇಳೆಗೆ 34,000 ದಾಟಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜಿಸುತ್ತಿದ್ದಾರೆ. ತೈಲ ಬೆಲೆ ಏರಿಕೆ ಮತ್ತು ಅದರಿಂದಾಗಿ ಡಾಲರ್ ಮೌಲ್ಯ ಏರಿಕೆಯು ಚಿನ್ನದ ದರ ಏರಿಕೆಗೆ ಕಾರಣವಾಗಲಿದೆ ಎನ್ನುತ್ತಾರೆ ತಜ್ಞರು. ಒಂದು ವೇಳೆ ತೈಲ ದರ ಕುಸಿದು, ಡಾಲರ್ ಮೌಲ್ಯ ತಗ್ಗಿದರೆ ಚಿನ್ನವೂ ಈಗಿನ ಮಟ್ಟದಲ್ಲೇ ವಹಿವಾಟು ನಡೆಯಲಿದೆ.

ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
ಪ್ರಧಾನಿ ನರೇಂದ್ರ ಮೋದಿ ಮುಂದಿರುವ ಅತಿದೊಡ್ಡ ಸವಾಲು ಯಾವುದು ಗೊತ್ತೇ?
Editor’s Pick More