ತೈಲ ಏರಿಕೆ ಬಿಸಿ; 14 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿದ ಸಗಟುದರ ಹಣದುಬ್ಬರ

ದೇಶೀ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡಿಸೇಲ್ ದರ ಗರಿಷ್ಠ ಮಟ್ಟಕ್ಕೆ ಏರಿದ ಪರಿಣಾಮ ಸಗಟುದರ ಹಣದುಬ್ಬರವು 14 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿದೆ. ಬರುವ ದಿನಗಳಲ್ಲಿ ಹಣದುಬ್ಬರ ಏರುವ ನಿರೀಕ್ಷೆ ಇದೆ. ಷೇರುಪೇಟೆ ಇಳಿಜಾರಿಗೆ ಸರಿದಿದ್ದರೆ, ಚಿನಿವಾರ ಪೇಟೆಯಲ್ಲಿ ಚಿನ್ನ 250 ರುಪಾಯಿ ಏರಿಕೆ ಕಂಡಿದೆ

ಸಗಟು ದರ ಹಣದುಬ್ಬರ ಮೇ ತಿಂಗಳಲ್ಲಿ ಶೇ.4.43ಗೆ ಏರಿದೆ. ಇದು 14 ತಿಂಗಳಲ್ಲೇ ಗರಿಷ್ಠ ಪ್ರಮಾಣದ ಹಣದುಬ್ಬರವಾಗಿದೆ. ಮಾರ್ಚ್ 2017ರಲ್ಲಿ ಶೇ.5.11ಕ್ಕೆ ಏರಿತ್ತು.

ಪೆಟ್ರೋಲ್ ಮತ್ತು ಡಿಸೇಲ್ ದರ ಗರಿಷ್ಟ ಮಟ್ಟಕ್ಕೆ ಏರಿರುವ ಪರಿಣಾಮ ಹಣದುಬ್ಬರ ನಿಯಂತ್ರಣ ಮೀರಿದೆ. ಏಪ್ರಿಲ್ ತಿಂಗಳಲ್ಲಿ ಶೇ.3.18ರಷ್ಟು ಇತ್ತು. ಕಳೆದ ವರ್ಷ ಮೇ ತಿಂಗಳಲ್ಲಿ ಶೇ.2.26ಇತ್ತು. ಏಪ್ರಿಲ್ ತಿಂಗಳಲ್ಲಿ ಶೇ.0.86 ಆಹಾರ ಪದಾರ್ಥಗಳ ಹಣದುಬ್ಬರ ಮೇ ತಿಂಗಳಲ್ಲಿ ಶೇ.1.60ಕ್ಕೆ ಏರಿದೆ.

ತರಕಾರಿಗಳ ಹಣದುಬ್ಬರ ಏಪ್ರಿಲ್‌ನಲ್ಲಿ ಶೇ.-89 ಇದ್ದದ್ದು ಮೇ ತಿಂಗಳಲ್ಲಿ ಶೇ.2.51ಕ್ಕೆ ಏರಿದೆ. ಏಪ್ರಿಲ್‌ನಲ್ಲಿ ಶೇ.7.85 ಇದ್ದ ಹಣದುಬ್ಬರವು ಮೇ ತಿಂಗಳಲ್ಲಿ ಶೇ11.22ಕ್ಕೆ ಜಿಗಿದಿದೆ. ಆಲೂಗಡ್ಡೆ ಶೇ.67.94ರಿಂದ 89.93ಕ್ಕೆ, ಹಣ್ಣು ಶೇ.15.42ರಿಂದ 21.13ಕ್ಕೆ ಏರಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಗರಿಷ್ಠ ಪ್ರಮಾಣದಲ್ಲಿ ಏರಿದ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲೂ ಪೆಟ್ರೋಲ್ ಮತ್ತು ಡಿಸೇಲ್ ದರ ತೀವ್ರವಾಗಿ ಏರಿದೆ. ಈ ಹಿನ್ನೆಲೆಯಲ್ಲಿ, ಆರ್‌ಬಿಐ ಪ್ರಸಕ್ತ ವಿತ್ತೀಯ ವರ್ಷದ ಹಣದುಬ್ಬರ ಮಿತಿ ಅಂದಾಜನ್ನು ಕೊಂಚ ಹಿಗ್ಗಿಸಿದ್ದು, ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ವೇಳೆ ಶೇ.0.25 ರಷ್ಟು ಬಡ್ಡಿ ದರವನ್ನು ಏರಿಸಿದೆ.

ಈಗಾಗಲೇ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಚಿಲ್ಲರೆ ದರ ಹಣದುಬ್ಬರವೂ ಶೇ.4.87ಕ್ಕೆ ಏರಿದ್ದು, ನಾಲ್ಕು ತಿಂಗಳ ಗರಿಷ್ಟ ಮಟ್ಟಕ್ಕೆ ಮುಟ್ಟಿದೆ. ಏಪ್ರಿಲ್ ತಿಂಗಳಲ್ಲಿ ಪ್ರತಿ ಬ್ಯಾರೆಲ್‌ಗೆ 64 ರುಪಾಯಿ ಇದ್ದ ಕಚ್ಚಾ ತೈಲ 80 ಡಾಲರರ್‌ಗೆ ಏರಿ ಈಗ 75 ಡಾಲರ್ ಆಜುಬಾಜು ವಹಿವಾಟಾಗುತ್ತಿದೆ.

ಈ ನಡುವೆ, ಹಣದುಬ್ಬರ ಏರಿಕೆಗೆ ಷೇರುಪೇಟೆ ವ್ಯತಿರಿಕ್ತವಾಗಿ ಸ್ಪಂದಿಸಿದೆ. ಸೆನ್ಸೆಕ್ಸ್ 140 ಅಂಶ, ನಿಫ್ಟಿ 49 ಅಂಶ ಕುಸಿದಿವೆ. ಅತ್ತ ಅಮೆರಿಕದಲ್ಲಿ ಫೆಡರಲ್ ರಿಸರ್ವ್ ಬಡ್ಡಿದರ ಏರಿಸುವ ನಿರ್ಧಾರದಿಂದ ದೇಶೀ ಪೇಟೆ ದಿನದ ಆರಂಭದಲ್ಲೇ ಇಳಿಜಾರಿನಲ್ಲಿತ್ತು.

ಇದನ್ನೂ ಓದಿ : ಶೇ.5 ಸಮೀಪಿಸಿದ ಮೇ ತಿಂಗಳ ಹಣದುಬ್ಬರ; ಕೈಗಾರಿಕಾ ಉತ್ಪನ್ನ ಚೇತರಿಕೆ

ಅಮೆರಿಕ ಬಡ್ಡಿದರ ಏರಿಸಿದರೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತದ ಷೇರುಮಾರುಕಟ್ಟೆಯಲ್ಲಿನ ಹೂಡಿಕೆಯನ್ನು ವಾಪಸು ಪಡೆಯುತ್ತಾರೆ. ಹೀಗಾಗಿ, ಪೇಟೆ ಇಳಿಜಾರಿಗೆ ಸರಿಯುವ ಸಾಧ್ಯತೆ ಹೆಚ್ಚಿರುತ್ತದೆ. ಈ ನಡುವೆ, ರುಪಾಯಿ ಡಾಲರ್ ವಿರುದ್ಧ ಕೊಂಚ ಇಳಿದಿದೆ. ದಿನದ ವಹಿವಾಟಿನಲ್ಲಿ 67.73ಕ್ಕೆ ಕುಸಿದು, 67.65ಕ್ಕೆ ಸ್ಥಿರಗೊಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರಿದೆ. ಡಬ್ಲ್ಯೂಟಿಐ ಕ್ರೂಡ್ ಶೇ.0.47ರಷ್ಟು ಏರಿದ್ದು 65 ಡಾಲರ್ ಸಮೀಪಿಸಿದೆ. ಬ್ರೆಂಟ್ ಕ್ರೂಡ್ ದರ ತಟಸ್ಥವಾಗಿದೆ.

ದೇಶೀಯ ಚಿನಿವಾರ ಪೇಟೆಯಲ್ಲಿ ಚಿನ್ನದ ದರ ಜಿಗಿದಿದೆ. ದಿನದ ವಹಿವಾಟಿನಲ್ಲಿ 250 ರುಪಾಯಿ ಏರಿತ್ತು. ದಿನದ ಅಂತ್ಯಕ್ಕೆ 222 ಏರಿಕೆಯೊಂದಿಗೆ 31,365 ರುಪಾಯಿಗೆ ಸ್ಥಿರವಾಗಿದೆ. ಬರುವ ದಿನಗಳಲ್ಲಿ ಮತ್ತಷ್ಟು ಏರುವ ನಿರೀಕ್ಷೆ ಇದೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More