ಶೇಕಡ 5ಕ್ಕೇರಿದ ಚಿಲ್ಲರೆ ದರ ಹಣದುಬ್ಬರ, ತಗ್ಗಿದ ಕೈಗಾರಿಕಾ ಉತ್ಪನ್ನ

ಒಂದು ಕಡೆ ಚಿಲ್ಲರೆ ಹಣದುಬ್ಬರ ಐದು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿದ್ದರೆ, ಮತ್ತೊಂದೆಡೆ ಕೈಗಾರಿಕಾ ಉತ್ಪನ್ನವು ಶೇ.3.2ಕ್ಕೆ ಇಳಿದಿದೆ. ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿತ, ಕಚ್ಚಾ ತೈಲ ದರ ಏರಿಕೆಯಿಂದ ಆರ್ಥಿಕತೆ ಸಂಕಷ್ಟ ಎದುರಿಸುತ್ತಿರುವಾಗ ಈ ಅಂಕಿ-ಅಂಶಗಳು ಮತ್ತಷ್ಟು ಆತಂಕ ಮೂಡಿಸಿವೆ

ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿಯುತ್ತಿರುವ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರುತ್ತಿರುವ ಹೊತ್ತಿನಲ್ಲಿ ಭಾರತದ ಆರ್ಥಿಕತೆಗೆ ಪೂರಕವಲ್ಲದ ಅಂಕಿ-ಅಂಶಗಳು ಹೊರಬಿದ್ದಿವೆ. ಜೂನ್ ತಿಂಗಳ ಚಿಲ್ಲರೆ ದರ ಹಣದುಬ್ಬರವು ಶೇ.5ಕ್ಕೆ ಏರಿದೆ. ಇದು ಕಳೆದ ಐದು ತಿಂಗಳ ಗರಿಷ್ಠ ಹಣದುಬ್ಬರ. ಮೇ ತಿಂಗಳ ಕೈಗಾರಿಕಾ ಉತ್ಪನ್ನವು ಶೇ.3.2ಕ್ಕೆ ಕುಗ್ಗಿದೆ.

ಮೇ ತಿಂಗಳಲ್ಲಿ ಶೇ.4.87ರಷ್ಟಿದ್ದ ಚಿಲ್ಲರೆ ದರ ಹಣದುಬ್ಬರವು ಶೇ.5ನ್ನು ಮುಟ್ಟಿದೆ. ಕಳೆದ ಕೆಲವು ತಿಂಗಳಿಂದ ಚಿಲ್ಲರೆ ದರ ಹಣದುಬ್ಬರವು ಏರುಹಾದಿಯಲ್ಲೇ ಇದೆ. ಅದಕ್ಕೆ ಮುಖ್ಯ ಕಾರಣ, ಕಚ್ಚಾ ತೈಲ ದರ ಏರಿಕೆ. ಇದು ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೇಲ್ ದರ ಏರಿಕೆಗೆ ಕಾರಣವಾಗಿದೆ. ಪೆಟ್ರೋಲ್ ಮತ್ತು ಡಿಸೇಲ್ ಆಧಾರಿತ ಉದ್ಯಮಗಳ ಸರಕು ಸೇವೆಗಳ ದರವೂ ಏರುಹಾದಿಯಲ್ಲಿದೆ. ಹೀಗಾಗಿ, ಹಣದುಬ್ಬರ ಮತ್ತಷ್ಟು ಏರುಹಾದಿಯಲ್ಲಿ ಸಾಗುವ ಸಾಧ್ಯತೆ ನಿರೀಕ್ಷಿಸಲಾಗಿದೆ.

ರಾಯಿಟರ್ಸ್ ನಡೆಸಿದ್ದ ಸಮೀಕ್ಷೆ ಪ್ರಕಾರ, ಬಹುತೇಕ ಅರ್ಥಶಾಸ್ತ್ರಜ್ಞರು ಜೂನ್ ತಿಂಗಳ ಹಣದುಬ್ಬರವು ಶೇ.5.30ರಷ್ಟಾಗಲಿದೆ ಎಂದಿದ್ದರು. ಆದರೆ, ವಾಸ್ತವಿಕ ಹಣದುಬ್ಬರ ಶೇ.5ಕ್ಕೆ ಏರಿದೆ. ಏರುತ್ತಿರುವ ತೈಲ ದರ ಮತ್ತು ಕುಸಿಯುತ್ತಿರುವ ರುಪಾಯಿ ಮೌಲ್ಯವು ಮತ್ತಷ್ಟು ಕಾಲ ಹಣದುಬ್ಬರ ಏರಿಕೆಗೆ ಕಾರಣವಾಗಲಿದೆ. ಜೂನ್ ತಿಂಗಳಲ್ಲಿ ಶೇ.5ಕ್ಕೆ ಏರಿರುವುದು ಆರ್‌ಬಿಐ ಮಧ್ಯಮಾವಧಿ ಹಣದುಬ್ಬರ ಮಿತಿ ಗುರಿಯಾದ ಶೇ.4ನ್ನು ದಾಟಿದೆ. ಸತತ ಎಂಟು ತಿಂಗಳಿಂದಲೂ ಶೇ.4 ರ ಮಿತಿ ಮೀರುತ್ತಿದೆ.

ಗುರುವಾರದ ಅಂಕಿ-ಅಂಶಗಳು ಆಗಸ್ಟ್ ತಿಂಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಪರಾಮರ್ಶೆ ವೇಳೆ ಬಡ್ಡಿದರ ಏರಿಸಲು ಪ್ರೇರೇಪಿಸುವ ಸಾಧ್ಯತೆ ಇದೆ. ಜೂನ್ ತಿಂಗಳ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ವೇಳೆ ಆರ್‌ಬಿಐ ಶೇ.0.25ರಷ್ಟು ರೆಪೊ ದರ ಮತ್ತು ಅಷ್ಟೇ ಪ್ರಮಾಣದಲ್ಲಿ ರಿವರ್ಸ್ ರೆಪೊ ದರ ಏರಿಸಿತ್ತು. ನಾಲ್ಕು ವರ್ಷಗಳ ನಂತರ ಮೊದಲ ಬಡ್ಡಿದರ ಏರಿಕೆ ಅದಾಗಿತ್ತು.

ಇದನ್ನೂ ಓದಿ : ಶೇ.5 ಸಮೀಪಿಸಿದ ಮೇ ತಿಂಗಳ ಹಣದುಬ್ಬರ; ಕೈಗಾರಿಕಾ ಉತ್ಪನ್ನ ಚೇತರಿಕೆ

ಈ ನಡುವೆ, ಸರ್ಕಾರ ಕೈಗಾರಿಕಾ ಉತ್ಪನ್ನ ಸೂಚ್ಯಂಕದ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಮೇ ತಿಂಗಳಲ್ಲಿ ಕೈಗಾರಿಕಾ ಉತ್ಪನ್ನವು ಶೇ.3.2ಕ್ಕೆ ಕುಸಿದಿದೆ. ಏಪ್ರಿಲ್ ತಿಂಗಳಲ್ಲಿ ಇದು ಶೇ.4.9ರಷ್ಟು ಇತ್ತು. ಬಹುತೇಕ ಅರ್ಥಶಾಸ್ತ್ರಜ್ಞರು ಕೈಗಾರಿಕಾ ಉತ್ಪನ್ನವು ಶೇ.5.2ರಷ್ಟು ಏರಲಿದೆ ಎಂದು ಅಂದಾಜಿಸಿದ್ದರು.

ಕೈಗಾರಿಕಾ ಉತ್ಪನ್ನ ಕುಸಿತವು ಒಟ್ಟಾರೆ ಆರ್ಥಿಕತೆ ಚಟುವಟಿಕೆಯು ನಿಧಾನಗತಿಗೆ ಹೊರಳಿರುವ ಸೂಚನೆಯಾಗಿದೆ. ಅದು ಚೇತರಿಸಿಕೊಳ್ಳಲು ಖಾಸಗಿ ವಲಯದ ಹೂಡಿಕೆಯ ಜೊತೆಜೊತೆಗೆ ಸಾರ್ವಜನಿಕ ವಲಯದ ಹೂಡಿಕೆಯೂ ಅತ್ಯಗತ್ಯ. ಆದರೆ, ಈಗಾಗಲೇ ವಿತ್ತೀಯ ಕೊರತೆ ಮತ್ತು ಚಾಲ್ತಿ ಖಾತೆ ಕೊರತೆ ಪ್ರಮಾಣ ಹೆಚ್ಚಿದ್ದು ಸರ್ಕಾರದಿಂದ ಹೂಡಿಕೆ ನಿರೀಕ್ಷೆ ಮಾಡುವ ಹಂತದಲ್ಲಿಲ್ಲ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More