ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಬಂಡವಾಳ ಮೌಲ್ಯ 100 ಬಿಲಿಯನ್ ಡಾಲರ್

ಉದಯಿಸುತ್ತಿರುವ ಆರ್ಥಿಕ ರಾಷ್ಟ್ರಗಳ ಪೈಕಿ ಉತ್ತಮ ಸಾಧನೆ ಮಾಡುತ್ತಿರುವ ಭಾರತದಲ್ಲಿ 100 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯದ ಕಂಪನಿಗಳು ಉದಯಿಸುತ್ತಿವೆ. ತಿಂಗಳ ಹಿಂದೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಈ ಸಾಧನೆ ಮಾಡಿತ್ತು. ಈಗ ಮುಖೇಶ್ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಸರದಿ!

ಜಾಗತಿಕ ಆರ್ಥಿಕ ರಾಜಕೀಯ ಅಸ್ಥಿರತೆಯ ನಡುವೆಯೂ ಭಾರತದ ಬಂಡವಾಳ ಪೇಟೆ ಉತ್ತಮ ಸಾಧನೆ ಮಾಡುತ್ತಿದೆ. ರುಪಾಯಿ ಕುಸಿತದ ನಡುವೆಯೂ ಉದಯಿಸುತ್ತಿರುವ ಆರ್ಥಿಕತೆ ರಾಷ್ಟ್ರಗಳ ಪೈಕಿ ಭಾರತ ಸಾಧನೆ ಅಗ್ರಮಟ್ಟದಲ್ಲಿದೆ. ಆರ್ಥಿಕತೆ ಬೆಳೆಯುತ್ತಿರುವುದರ ಜೊತೆಜೊತೆಗೆ ಭಾರತದ ಕಂಪನಿಗಳು 100 ಬಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳ ಮೌಲ್ಯದ ಕಂಪನಿಗಳಾಗಿ ಉದಯಿಸುತ್ತಿವೆ.

ಕಳೆದ ತಿಂಗಳು ಟಾಟಾ ಕನ್ಸಲ್ಟೆನ್ಸಿ ಸರ್ವಿವೀಸಸ್ (ಟಿಸಿಎಸ್) 100 ಬಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳ ಮೌಲ್ಯ ಸಾಧಿಸಿದ ಭಾರತದ ಮೊದಲ ಕಂಪನಿಯಾಗಿತ್ತು. ಗುರುವಾರ ರಿಲಯನ್ಸ್ ಇಂಡಸ್ಟ್ರೀಸ್ ಆ ಸಾಧನೆ ಮಾಡಿದೆ. ಗುರುವಾರ ಡಾಲರ್ ವಿರುದ್ಧ ರುಪಾಯಿ ಮೌಲ್ಯ 68.57ಕ್ಕೆ ಸ್ಥಿರಗೊಂಡಿದೆ. ಗುರುವಾರ ಷೇರುಪೇಟೆ ಮುಕ್ತಾಯಗೊಂಡಾಗ ರಿಲಯನ್ಸ್ ಇಂಡಸ್ಟ್ರೀಸ್ ಬಂಡವಾಳ ಮಾರುಕಟ್ಟೆ ಮೌಲ್ಯವು 685,736.98 ಕೋಟಿ ರುಪಾಯಿಗಳಾಗಿತ್ತು. ಅಂದರೆ, ಮಾರುಕಟ್ಟೆ ಬಂಡವಾಳ ಮೌಲ್ಯ ಮತ್ತು ಡಾಲರ್ ವಿರುದ್ಧ ರುಪಾಯಿ ಅಂತ್ಯಗೊಂಡ ನಂತರದ ದರದ ಲೆಕ್ಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ 100 ಬಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳ ಸಾಧಿಸಿದಂತಾಗಿದೆ.

ರಿಲಯನ್ಸ್ ಇಂಡಸ್ಟ್ರೀಸ್ 100 ಬಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳ ಸಾಧಿಸುತ್ತಿರುವುದು ಇದು ಎರಡನೇ ಬಾರಿ. ವರ್ಷಗಳ ಹಿಂದೆ ರುಪಾಯಿ ಮೌಲ್ಯವು ಡಾಲರ್ ವಿರುದ್ಧ ಹೆಚ್ಚು ಕುಸಿಯದೆ ಇದ್ದಾಗ ಈ ಸಾಧನೆ ಮಾಡಿತ್ತು. ಆದರೆ, ಈಗ ಡಾಲರ್ ಸರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿ ಅದರ ಆಜುಬಾಜಿನಲ್ಲೇ ವಹಿವಾಟು ನಡೆಸುತ್ತಿದೆ. ಹೀಗಾಗಿ, ಈ ಹಂತದಲ್ಲಿ ಯಾವುದೇ ಕಂಪನಿ 100 ಬಿಲಿಯನ್ ಡಾಲರ್ ಬಂಡವಾಳ ಮಾರುಕಟ್ಟೆ ಮೌಲ್ಯ ಸಾಧಿಸಿದ್ದರೆ ಅದು ಹಿಂದೆಂದಿಗಿಂತಲೂ ಹೆಚ್ಚಿನ ಸಾಧನೆ.

ಶುಕ್ರವಾರದ ವಹಿವಾಟಿನಲ್ಲಿ ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿದರೆ ಅಥವಾ ರಿಲಯನ್ಸ್ ಷೇರು ಕುಸಿದರೆ 100 ಬಿಲಿಯನ್ ಡಾಲರ್ ಬಂಡವಾಳ ಮಾರುಕಟ್ಟೆ ಮೌಲ್ಯದಿಂದ ಕೆಳಕ್ಕೆ ಇಳಿಯಬಹುದು. ಆದರೆ, ಪ್ರಸ್ತುತ ರಿಲಯನ್ಸ್ ಇಂಡಸ್ಟ್ರೀಸ್ ಆದಾಯ, ಲಾಭ ಮತ್ತು ನಿವ್ವಳ ಲಾಭ, ಮಾರುಕಟ್ಟೆ ವಿಸ್ತರಣೆ ಮತ್ತಿತರ ಅಂಶಗಳನ್ನು ಗಮನಿಸಿದರೆ, ಬರುವ ದಿನಗಳಲ್ಲಿ ರಿಲಯನ್ಸ್ ಷೇರು ಮತ್ತಷ್ಟು ಏರುವ ನಿರೀಕ್ಷೆ ಇದೆ. ಹಾಗೆಯೇ, ರುಪಾಯಿ ಡಾಲರ್ ವಿರುದ್ಧ ಗರಿಷ್ಠ ಪ್ರಮಾಣದಲ್ಲಿ ಕುಸಿದಿದ್ದು ಮತ್ತಷ್ಟು ಕುಸಿಯುವ ಸಾಧ್ಯತೆ ಇಲ್ಲ. ಗರಿಷ್ಠ ಎಂದರೆ 70 ರುಪಾಯಿ ಮಟ್ಟ ಮುಟ್ಟಬಹುದು. ಹೀಗಾಗಿ, ದೀರ್ಘಕಾಲದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ 100 ಬಿಲಿಯನ್ ಬಂಡವಾಳ ಮಾರುಕಟ್ಟೆ ಮೌಲ್ಯ ಕಾಯ್ದುಕೊಂಡು ಮತ್ತೊಂದು ಮಜಲಿಗೆ ಏರಬಹುದು.

ಇದನ್ನೂ ಓದಿ : ಭಾರತದ ಮೊದಲ 100 ಬಿಲಿಯನ್ ಡಾಲರ್ ಕಂಪನಿ ಎನಿಸಿ ಇತಿಹಾಸ ಸೃಷ್ಟಿಸಿದ ಟಿಸಿಎಸ್

ಕಳೆದ ತಿಂಗಳು ಈ ಸಾಧನೆ ಮಾಡಿದ್ದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಈಗ, 754,612.17 ಕೋಟಿ ರು. ಮಾರುಕಟ್ಟೆ ಬಂಡವಾಳ ಮೌಲ್ಯ ಹೊಂದಿದೆ. ಎರಡನೇ ಸ್ಥಾನದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಇದೆ. ಕೆಲ ತಿಂಗಳ ಅವಧಿಯಲ್ಲಿ ಈ ಪಟ್ಟಿಗೆ ಸೇರಬಹುದಾದ ಮತ್ತೊಂದು ಕಂಪನಿ ಎಂದರೆ ಎಚ್‌ಡಿಎಫ್‌ಸಿ ಬ್ಯಾಂಕ್. ಪ್ರಸ್ತುತ ಎಚ್‌ಡಿಎಫ್‌ಸಿ ಬ್ಯಾಂಕ್ ಮಾರುಕಟ್ಟೆ ಬಂಡವಾಳ ಮೌಲ್ಯವು 563,852.26 ಕೋಟಿ ರುಪಾಯಿಗಳಾಗಿದೆ. ಶೇ.20ರಷ್ಟು ಷೇರು ಮೌಲ್ಯ ಹೆಚ್ಚಾದರೆ ಎಚ್‌ಡಿಎಫ್‌ಸಿ ಬ್ಯಾಂಕ್ ಸಹ 100 ಬಿಲಿಯನ್ ಡಾಲರ್ ಬಂಡವಾಳ ಮಾರುಕಟ್ಟೆ ಮೌಲ್ಯ ಹೊಂದಿದ ಪಟ್ಟಿಗೆ ಸೇರುತ್ತದೆ. ಡಾಲರ್ ವಿರುದ್ಧ ರುಪಾಯಿ ಮೌಲ್ಯ ಹೆಚ್ಚಾದರೆ ಮತ್ತಷ್ಟು ಬೇಗ ಆ ಪಟ್ಟಿಗೆ ಸೇರಬಹುದು.

ಈಗ 3,76,440.64 ಕೋಟಿ ರುಪಾಯಿ ಬಂಡವಾಳ ಮಾರುಕಟ್ಟೆಯೊಂದಿಗೆ ನಾಲ್ಕನೇ ಸ್ಥಾನದಲ್ಲಿ ಹಿಂದೂಸ್ಥಾನ್ ಯೂನಿಲಿವರ್ ಇದ್ದರೆ, ಐದನೇ ಸ್ಥಾನದಲ್ಲಿ ಇಂಡಿಯನ್ ಟೊಬ್ಯಾಕೊ ಕಂಪನಿ (ಐಟಿಸಿ) ಇದೆ. ಅದರ ಬಂಡವಾಳ ಮಾರುಕಟ್ಟೆ ಮೌಲ್ಯವು 337,840.14 ಕೋಟಿ ರುಪಾಯಿಗಳು.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More