ಜಿಎಸ್ಟಿ ಕಡಿತ ಪರಿಣಾಮ ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದ ಸೆನ್ಸೆಕ್ಸ್

ಸರಕು ಮತ್ತು ಸೇವಾ ತೆರಿಗೆ ಕಡಿತ ಮಾಡಿದ ಹಿನ್ನೆಲೆಯಲ್ಲಿ ಷೇರುಪೇಟೆಯಲ್ಲಿ ಉತ್ಸಾಹ ಹೆಚ್ಚಿದ್ದು, ಸೆನ್ಸೆಕ್ಸ್ ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದೆ. ತ್ವರಿತ ಮಾರಾಟವಾಗುವ ಗೃಹೋಪಯೋಗಿ ವಸ್ತುಗಳ ಕಂಪನಿಗಳು, ಬ್ಯಾಂಕುಗಳ ಷೇರುಗಳು ಜಿಗಿದಿವೆ. ಮತ್ತೊಂದು ಗೂಳಿ ಓಟ ಆರಂಭವಾದಂತಿದೆ

ಸರಕು ಮತ್ತು ಸೇವಾ ತೆರಿಗೆ ಕಡಿತ ಮಾಡಿದ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ 36,501ಅಂಶಗಳೊಂದಿಗೆ ವಹಿವಾಟು ಆರಂಭಿಸಿತು. ತೀವ್ರ ಖರೀದಿಯ ಪರಿಣಾಮ ದಿನದ ವಹಿವಾಟಿನಲ್ಲಿ 36,749.69 ಅಂಶಕ್ಕೆ ಏರಿ ಸಾರ್ವಕಾಲಿಕ ಗರಿಷ್ಠ ಮಟ್ಟ ದಾಖಲಿಸಿತು. ಎಫ್ಎಂಸಿಜಿ ಕಂಪನಿಗಳಾದ ಐಟಿಸಿ, ಹಿಂದೂಸ್ತಾನ್ ಲಿವರ್, ಏಷಿಯನ್ ಪೇಂಟ್ಸ್ ಮತ್ತಿತರ ಕಂಪನಿಗಳ ಷೇರುಗಳು ಜಿಗಿದವು.

36,749.69 ಅಂಶದಷ್ಟು ಏರಿದ ಸೆನ್ಸೆಕ್ಸ್ ಸರ್ವಕಾಲಿಕ ದಾಖಲೆ ನಂತರ ದಿನದ ಅಂತ್ಯಕ್ಕೆ 36,718.60 ಅಂಶಕ್ಕೆ ಸ್ಥಿರಗೊಂಡಿತು. ಒಟ್ಟಾರೆ 222 ಅಂಶಗಳ ಏರಿಕೆ ದಾಖಲಿಸಿತು. ಜಾಗತಿಕ ವ್ಯಾಪಾರ ಸಮರ ಮತ್ತು ಕರೆನ್ಸಿ ಸಮರದ ನಡುವೆಯೂ ದೇಶೀಯ ಪೇಟೆಯು ಏರುಹಾದಿಯಲ್ಲಿ ಸಾಗಿದ್ದಲ್ಲದೆ, ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದ್ದು ವಿಶೇಷ. ನಿಫ್ಟಿ 74 ಅಂಶ ಏರಿದ್ದು, 11,084.75ಕ್ಕೆ ಸ್ಥಿರಗೊಂಡಿದೆ. ಒಂದೆರಡು ವಹಿವಾಟು ದಿನಗಳಲ್ಲಿ ನಿಫ್ಟಿ ಸಹ ಸರ್ವಕಾಲಿಕ ದಾಖಲೆ ಮಟ್ಟಕ್ಕೇರುವ ನಿರೀಕ್ಷೆ ಇದೆ.

ದಿನದ ವಹಿವಾಟಿನಲ್ಲಿದ್ದ ತ್ವರಿತ ಖರೀದಿ ಪ್ರಕ್ರಿಯೆಯು ಮಾರುಕಟ್ಟೆ ಕೆಲವು ದಿನಗಳ ಕಾಲ ಏರುಹಾದಿಯಲ್ಲಿ ಸಾಗುವ ಮುನ್ಸೂಚನೆ ನೀಡಿದ್ದು, ಮತ್ತೊಂದು ಸುತ್ತಿನ ಗೂಳಿ ಓಟ ಆರಂಭವಾದಂತಿದೆ. ಇದು ಸರಕು ಮತ್ತು ಸೇವಾ ತೆರಿಗೆ ಕಡಿತದ ಜೊತೆಗೆ ಎಸ್ಐಪಿ ರೂಪದಲ್ಲಿ ಮ್ಯೂಚುವಲ್ ಫಂಡ್‌ಗಳಿಗೆ ಗರಿಷ್ಠ ಪ್ರಮಾಣದಲ್ಲಿ ಹೂಡಿಕೆ ಹರಿದುಬರುತ್ತಿರುವುದು ಪ್ರಮುಖ ಕಾರಣವಾಗಿದೆ.

ಹೀಗಾಗಿ, ಬಹುತೇಕ ಉದಯಿಸುತ್ತಿರುವ ಮಾರುಕಟ್ಟೆಗಳಲ್ಲಿ ಜಾಗತಿಕ ಸಮರದ ನಂತರ ಶೇ.8-10ರಷ್ಟು ಕುಸಿತ ಕಂಡಿದ್ದರೆ ಸೆನ್ಸೆಕ್ಸ್ ಮಾತ್ರ ಗರಿಷ್ಠ ಮಟ್ಟಕ್ಕೇರಿದೆ. ದೇಶಿಯ ಪೇಟೆಯಲ್ಲಿ ಸ್ಮಾಲ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಸೂಚ್ಯಂಕಗಳು ಗರಿಷ್ಠ ಪ್ರಮಾಣದಲ್ಲಿ ಕುಸಿದಿದ್ದು, ಈಗ ಮತ್ತೆ ಚೇತರಿಕೆಯ ಹಾದಿಯಲ್ಲಿವೆ.

ಸರಕು ಮತ್ತು ಸೇವಾ ತೆರಿಗೆ ಮಂಡಳಿಯು ಗರಿಷ್ಠ ಪ್ರಮಾಣದಲ್ಲಿ ತೆರಿಗೆ ಕಡಿತ ಮಾಡಿದ್ದು, ಬರುವ ದಿನಗಳಲ್ಲಿ ಜನರ ಖರೀದಿ ಶಕ್ತಿಯನ್ನು ಹೆಚ್ಚಿಸಲಿದ್ದು, ಆರ್ಥಿಕತೆ ಚೇತರಿಕೆ ನಿರೀಕ್ಷಿಸಲಾಗಿದೆ. ಗ್ರಾಮೀಣ ಪ್ರದೇಶದ ಜನರ ವಿನಿಯೋಜನೆಯೂ ಹಿಗ್ಗಲಿದೆ. ಇದು ಪೇಟೆ ಜಿಗಿಯಲು ಕಾರಣವಾಗಿದೆ. ಸ್ಯಾನಿಟರಿ ನ್ಯಾಪ್ಕಿನ್ ಮೇಲಿನ ತೆರಿಗೆ ರದ್ದು ಮಾಡಿದ್ದು ಸಹ, ಅದನ್ನು ಉತ್ಪಾದಿಸಿ ಮಾರುಕಟ್ಟೆ ಮಾಡುತ್ತಿರುವ ಕಂಪನಿಗಳ ಷೇರುಗಳು ಜಿಗಿಯುವಂತೆ ಮಾಡಿದೆ.

ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಸೋಲುಂಟಾದ ಪರಿಣಾಮ ಪೇಟೆಯಲ್ಲಿ ಚೇತರಿಕೆ ಕಂಡುಬಂದಿದೆ. ಮುಂದಿನ ಲೋಕಸಭಾ ಚುನಾವಣೆವರೆಗೂ ಯಾವುದೇ ನಿರೀಕ್ಷಿತ ನಕಾರಾತ್ಮಕ ಬೆಳವಣಿಗೆಗಳು ಇಲ್ಲದಿರುವುದು ಹೂಡಿಕೆದಾರರನ್ನು ಉತ್ತೇಜಿಸಿದೆ.

ಇದನ್ನೂ ಓದಿ : ಸರ್ಕಾರಿ ಬ್ಯಾಂಕ್ ಷೇರುಗಳ ಜಿಗಿತ; ಏರು ಹಾದಿಯಲ್ಲಿ ಸಾಗಿರುವ ಪೇಟೆ

ನಿಫ್ಟಿ ಎಫ್ಎಂಸಿಜಿ ಸೂಚ್ಯಂಕ ಶೇ.2.46ರಷ್ಟು ಜಿಗಿದಿದೆ. ನಿಫ್ಟಿ ಪಿಎಸ್ಯು ಬ್ಯಾಂಕ್, ನಿಫ್ಟಿ ಎಂಎನ್ಸಿ, ನಿಫ್ಟಿ ನೆಕ್ಸ್ಟ್ 50, ನಿಫ್ಟಿ ರಿಯಾಲ್ಟಿ, ನಿಫ್ಟಿ ಲಿಕ್ವಿಡ್ 15, ನಿಫ್ಟಿ ಮೆಟಲ್, ನಿಫ್ಟಿ ಇನ್ಫ್ರಾ ಸೂಚ್ಯಂಕಗಳು ಶೇ.1.50ರಿಂದ ಶೇ.2.40ರಷ್ಟು ಜಿಗಿದಿವೆ.

ಉತ್ತಮ ಫಲಿತಾಂಶ ಪ್ರಕಟಿಸಿದ ಯುಪಿಎಲ್ ಶೇ.15ರಷ್ಟು ಜಿಗಿದಿದೆ. ಎಲ್ಅಂಡ್ ಟಿ ಫೈನಾನ್ಸ್ ಶೇ.10ರಷ್ಟು, ಹಾವೆಲ್ಸ್ ಇಂಡಿಯಾ ಶೇ.9, ಅದಾನಿ ಟ್ರಾನ್ಸ್ಮಿಷನ್ ಶೇ.7, ಇನ್ಫೊ ಎಡ್ಜ್ ಶೇ.6ರಷ್ಟು ಜಿಗಿದಿವೆ. ವಾಹನ ಮಾರಾಟ ಕಡಮೆ ಆದ ಕಾರಣ ಮತ್ತು ದ್ವಿಚಕ್ರ ವಾಹನಗಳ ವರ್ಗದಲ್ಲಿ ತೀವ್ರ ಸ್ಪರ್ಧೆ ಏರ್ಪಟ್ಟ ಕಾರಣದಿಂದಾಗಿ ಹೀರೊ ಮೊಟೊಕಾರ್ಪ್, ಬಜಾಜ್ ಆಟೋ, ಟಿವಿಎಸ್ ಮೋಟಾರ್ ಶೇ.5-7ರಷ್ಟು ಕುಸಿದು, ವರ್ಷದ ಕನಿಷ್ಠ ಮಟ್ಟಕ್ಕೆ ಇಳಿದವು.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More