ರೆಪೊ ದರ ಏರಿಕೆಗೆ ಮುನ್ನವೇ ಠೇವಣಿ ಬಡ್ಡಿದರ ಏರಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಭಾರತೀಯ ರಿಸರ್ವ್ ಬ್ಯಾಂಕ್ ಆ.1ರಂದು ದ್ವೈಮಾಸಿಕ ಹಣಕಾಸು ನೀತಿ ಸಮಿತಿ ಸಭೆ ನಡೆಸಲಿದ್ದು, ಬಡ್ಡಿದರ ಏರಿಸುವ ನಿರೀಕ್ಷೆ ಇದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜು.30ರಿಂದಲೇ ಜಾರಿಯಾಗುವಂತೆ ಠೇವಣಿಗಳ ಮೇಲಿನ ಬಡ್ಡಿದರ ಏರಿಕೆ ಮಾಡಿದೆ. ಇದು ಸಾಲಗಳ ಬಡ್ಡಿದರ ಏರಿಕೆಯ ಮುನ್ಸೂಚನೆ!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಠೇವಣಿಗಳ ಮೇಲಿನ ಬಡ್ಡಿದರ ಏರಿಕೆ ಮಾಡಿದೆ. ಏರಿಕೆ ಪ್ರಮಾಣವು ವಿವಿಧ ಠೇವಣಿಗಳ ಮೇಲೆ ಹತ್ತು ಮೂಲ ಅಂಶಗಳಷ್ಟು ಇದೆ; ಹತ್ತು ಮೂಲ ಅಂಶಗಳು ಎಂದರೆ ಶೇ.0.10ರಷ್ಟು.

ಪರಿಷ್ಕೃತ ಬಡ್ಡಿದರವು ಜುಲೈ 30ರಿಂದಲೇ ಜಾರಿಗೆ ಬರಲಿದೆ. 1 ಕೋಟಿಗಿಂತ ಕಡಿಮೆ ಇರುವ ವಿವಿಧ ಠೇವಣಿಗಳ ಮೇಲೆ ಮೂಲ ಅಂಶ 5ರಿಂದ 10ರಷ್ಟು ಅಂದರೆ, ಶೇ.0.05-0.10ರಷ್ಟು ಏರಿಕೆ ಮಾಡಿದೆ.

ಹಿರಿಯ ನಾಗರಿಕರ ಠೇವಣಿ ಮೇಲಿನ ಬಡ್ಡಿದರ ಈಗಿರುವ ಶೇ.7.15ರಿಂದ ಶೇ.7.20ಕ್ಕೆ ಏರಲಿದೆ. ಈಗ ಎರಡು ವರ್ಷದಿಂದ ಮೂರು ವರ್ಷದ ಅವಧಿಯ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ.7.15ರಿಂದ ಶೇ.7.30ಗೆ ಏರಿಸಲಾಗಿದೆ.

ಸಾಮಾನ್ಯ ನಾಗರಿಕರಿಗೆ ಮತ್ತು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಠೇವಣಿ ಮೇಲಿನ ಹಾಲಿ ಮತ್ತು ಪರಿಷ್ಕೃತ ದರ ವಿವರ ಕೆಳಗಿನ ಪಟ್ಟಿಯಲ್ಲಿದೆ.

ಉದ್ದೇಶಿತ ಪರಿಷ್ಕೃತ ದರವು ಹೊಸ ಠೇವಣಿಗಳು ಮತ್ತು ನವೀಕರಿಸುವ ಠೇವಣಿಗಳಿಗೆ ಅನ್ವಯವಾಗಲಿದೆ. ಎಸ್‌ಬಿಐ ಟ್ಯಾಕ್ಸ್ ಸೇವಿಂಗ್ ಸ್ಕೀಮ್ 2006, ರಿಟೇಲ್ ಡಿಪಾಸಿಟ್ಸ್ ಮತ್ತು ಎನ್ಆರ್‌ಒ ಡಿಪಾಸಿಟ್‌ಗಳ ಬಡ್ಡಿದರವನ್ನು ಹೊಸ ದರದೊಂದಿಗೆ ಮರುಹೊಂದಾಣಿಕೆ ಮಾಡಲಾಗುತ್ತದೆ ಎಂದು ಎಸ್‌ಬಿಐ ತಿಳಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಆಗಸ್ಟ್ 1ರಂದು ಹಣಕಾಸು ನೀತಿ ಸಮಿತಿ ಸಭೆ ನಡೆಸಲಿದೆ. ಅಂದು ರೆಪೊ ದರವನ್ನು ಶೇ.0.25ರಿಂದ 0.50ರಷ್ಟು ಏರಿಸುವ ನಿರೀಕ್ಷೆ ಇದೆ. ಆರ್‌ಬಿಐ ರೆಪೊ ದರ ಏರಿಸುವ ಮುಂಚಿತವಾಗಿ ಎಸ್‌ಬಿಐ ಠೇವಣಿಗಳ ಮೇಲಿನ ಬಡ್ಡಿದರ ಏರಿಕೆ ಮಾಡಿದೆ.

ಇದನ್ನೂ ಓದಿ : ಎಫ್‌ಡಿ ಬಡ್ಡಿದರ 5-25 ಅಂಶ ಏರಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಜೂನ್ ತಿಂಗಳ ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆಗೂ ಮುಂಚಿತವಾಗಿಯೇ ಎಸ್‌ಬಿಐ ಠೇವಣಿಗಳ ಮೇಲಿನ ಬಡ್ಡಿದರ ಏರಿಸಿತ್ತು. ಅದಾದ ನಂತರ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಸೇರಿದಂತೆ ವಿವಿಧ ಸಾಲಗಳ ಮೇಲಿನ ಬಡ್ಡಿದರ ಹೆಚ್ಚಿಸಿತ್ತು. ಈಗ ಠೇವಣಿ ದರ ಹೆಚ್ಚಿಸಿರುವುದು ಸಾಲಗಳ ಮೇಲಿನ ಬಡ್ಡಿದರ ಏರಿಸುವ ಮುನ್ಸೂಚನೆ ಆಗಿದೆ. ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಸೇರಿದಂತೆ ವಿವಿಧ ಸಾಲ ಪಡೆದವರು ಹೆಚ್ಚಿನ ಇಎಂಐ (ಸಮಾನ ಮಾಸಿಕ ಕಂತು) ಪಾವತಿಸಲು ಸಿದ್ಧರಾಗಬೇಕಿದೆ.

ಎಸ್‌ಬಿಐ ಹಾದಿಯನ್ನೇ ಬಹುತೇಕ ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಖಾಸಗಿ ವಲಯದ ಬ್ಯಾಂಕುಗಳು ಅನುಸರಿಸುತ್ತವೆ. ಅಂದರೆ, ಉಳಿದೆಲ್ಲ ಬ್ಯಾಂಕುಗಳೂ ಠೇವಣಿ ಮತ್ತು ಸಾಲಗಳ ಮೇಲಿನ ಬಡ್ಡಿದರ ಹೆಚ್ಚಿಸಲಿವೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More