ಮೊದಲ ದಿನವೇ ಹೂಡಿಕೆದಾರರಿಗೆ ಶೇ.65ರಷ್ಟು ಲಾಭ ತಂದುಕೊಟ್ಟ ಎಚ್‌ಡಿಎಫ್‌ಸಿ ಎಎಂಸಿ

ಎಚ್‌ಡಿಎಫ್‌ಸಿ ಎಎಂಸಿ ಸೋಮವಾರ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ (ಎನ್ಎಸ್ಇ) ಶೇಕಡ 58ರಷ್ಟು ಲಾಭಾಂಶದೊಂದಿಗೆ ಲಿಸ್ಟಾಗಿದೆ. ಈ ವರ್ಷದ ಅತಿ ಹೆಚ್ಚು ಲಾಭ ತಂದುಕೊಟ್ಟ ಎರಡನೇ ಕಂಪನಿ ಹಾಗೂ ಕಳೆದ ಎಂಟು ವರ್ಷಗಳಲ್ಲಿ ಹೆಚ್ಚು ಲಾಭ ತಂದ ಹತ್ತನೇ ಕಂಪನಿ ಎಂಬ ದಾಖಲೆ ಬರೆದಿದೆ

ಅತಿ ಹೆಚ್ಚು ಬೇಡಿಕೆಯಿಂದ ದಾಖಲೆ ಸೃಷ್ಟಿಸಿದ್ದ ಎಚ್‌ಡಿಎಫ್‌ಸಿ ಎಎಂಸಿ ಷೇರು ಲಿಸ್ಟಾದ ಮೊದಲ ದಿನವೇ ಹೂಡಿಕೆದಾರರಿಗೆ ದಾಖಲೆಯ ಲಾಭ ತಂದುಕೊಟ್ಟಿದೆ. 1,100 ಐಪಿಒ ದರ ನಿಗದಿಯಾಗಿತ್ತು. ಐಪಿಒ ಮಾರುಕಟ್ಟೆಯಲ್ಲಿ ಖರಿದಿಗೆ ಮುಕ್ತ ವಾದ ದಿನವೇ ಪೂರ್ಣ ಪ್ರಮಾಣದಲ್ಲಿ ಬೇಡಿಕೆ ಬಂದಿತ್ತು. ಐಪಿಒ ಬೇಡಿಕೆ ಸಲ್ಲಿಕೆ ಮುಕ್ತಾಯದ ದಿನ 83 ಪಟ್ಟು ಬೇಡಿಕೆ ಬಂದಿತ್ತು. ಅರ್ಹ ಸಾಂಸ್ಥಿಕ ಖರೀದಿದಾರರಿಂದ 192 ಪಟ್ಟು ಬೇಡಿಕೆ ಸಲ್ಲಿಕೆಯಾಗಿತ್ತು.

ರಿಟೇಲ್ ಹೂಡಿಕೆದಾರರಿಗೆ ಮೀಸಲಾದ ಷೇರುಗಳಿಗೆ ಶೇ.6.70 ರಷ್ಟು ಬೇಡಿಕೆ ಸಲ್ಲಿಸಲಾಗಿತ್ತು. ಸಾಂಸ್ಥಿಕೇತರ ಹೂಡಿಕೆದಾರರಿಂದ 195 ಪಟ್ಟು ಬೇಡಿಕೆ ಬಂದಿತ್ತು. ಬೇಡಿಕೆ ಪ್ರಮಾಣ ನಿರೀಕ್ಷಿತ ಮಟ್ಟ ಮೀರಿದ್ದರಿಂದ ಮಾರುಕಟ್ಟೆ ತಜ್ಞರು ಶೇ. 35-45 ರಷ್ಟು ಲಾಭಾಂಶ ದೊಂದಿಗೆ ಲಿಸ್ಟಾಗುತ್ತದೆಂದು ನಿರೀಕ್ಷಿಸಿದ್ದರು. ಆದರೆ, ನಿರೀಕ್ಷೆ ಮೀರಿ ಶೇ.58ರಷ್ಟು ಲಾಭಾಂಶದೊಂದಿಗೆ 1,738 ರುಪಾಯಿಗೆ ಲಿಸ್ಟಾಯಿತು.

ಮೊದಲ ದಿನ ಲಾಭ ನಗರೀಕರಣದಿಂದ ಷೇರು ದರ ಕುಸಿಯಬಹುದೆಂಬ ಲೆಕ್ಕಾಚಾರವೂ ತಲೆಕೆಳಗಾಯಿತು. ಲಿಸ್ಟಾದ ನಂತರದ ವಹಿವಾಟಿನಲ್ಲಿ ಶೇ.10ರಷ್ಟು ಏರಿತು. ದಿನದ ವಹಿವಾಟು ಅಂತ್ಯಗೊಂಡಾಗ 1,815 ರುಪಾಯಿಗೆ ಏರಿ, ಮೊದಲ ದಿನವೇ ಹೂಡಿಕೆದಾರರಿಗೆ ಶೇ.65ರಷ್ಟು ಲಾಭ ತಂದುಕೊಟ್ಟಿತು.

ಎಚ್‌ಡಿಎಫ್‌ಸಿ ಎಎಂಸಿ ಸಂಪತ್ತು ನಿರ್ವಹಣೆ ಕಂಪನಿಗಳ ಮುಂಚೂಣಿಯಲ್ಲಿರುವ ಕಂಪನಿ. ಎಚ್‌ಡಿಎಫ್‌ಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಈಗಾಗಲೇ ಉತ್ತಮ ಆಡಳಿತ ನಿರ್ವಹಣೆ ಹಾಗೂ ಗರಿಷ್ಠ ಲಾಭಾಂಶ ನೀಡಿಕೆಯಿಂದ ಮಾರುಕಟ್ಟೆಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿವೆ. ಹೀಗಾಗಿ ಎಚ್‌ಡಿಎಫ್‌ಸಿ ಎಎಂಸಿ ಸಹ ಉತ್ತಮ ಆಡಳಿತ ಹಾಗೂ ಗರಿಷ್ಠ ಲಾಭಾಂಶಕ್ಕೆ ಹೆಸರಾಗಿದೆ.

ಜನರಲ್ಲಿ ಹೂಡಿಕೆ ಪ್ರಜ್ಞೆ ಜಾಗೃತವಾದಂತೆ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ವೃದ್ಧಿಸುತ್ತಿದೆ. ದೇಶವ್ಯಾಪಿ ಸುಸಜ್ಜಿತ ವಿತರಣಾ ವ್ಯವಸ್ಥೆ ಹೊಂದಿದ್ದು, ವಾರ್ಷಿಕ ಸರಾಸರಿ ವಹಿವಾಟು ಶೇಕಡ 30ರಷ್ಟು ಮೀರಿದೆ.

ಸಂಪತ್ತು ನಿರ್ವಹಣೆಯ ಮೊದಲ ಹಂತದಲ್ಲಿ ನಾವಿದ್ದೇವೆ. ಮುಂಬರುವ ವರ್ಷಗಳಲ್ಲಿ ಹೂಡಿಕೆ ವಿಧಾನ ಮತ್ತು ಸ್ವರೂಪ ಬದಲಾಗಲಿದೆ. ಹೆಚ್ಚು ಹೂಡಿಕೆದಾರರು ಮ್ಯೂಚುವಲ್ ಫಂಡ್ ಪ್ರಮುಖ ಹೂಡಿಕೆ ಮಾರ್ಗವಾಗಿ ಆಯ್ಕೆ ಮಾಡಿಕೊಳ್ಳಲಿದ್ದಾರೆ.  ಬರುವ ದಿನಗಳಲ್ಲಿ ಎಚ್‌ಡಿಎಫ್‌ಸಿ ಎಎಂಸಿ ದೊಡ್ಡ ಪ್ರಮಾಣದಲ್ಲಿ ಲಾಭ ಗಳಿಸಲಿದೆ. ಹೂಡಿಕೆದಾರರಿಗೆ ಹೆಚ್ಚಿನ ಲಾಭ ತಂದುಕೊಡಲಿದೆ. ಹೀಗಾಗಿ, ಶೇಕಡ 58ರ ಲಾಭಾಂಶಕ್ಕೆ ಲಿಸ್ಟಾದ ನಂತರವೂ ಲಾಭ ನಗದೀಕರಣವಾಗಿಲ್ಲ. ಶೇ.65ರಷ್ಟು ಲಾಭಾಂಶದೊಂದಿಗೆ ವಹಿವಾಟು ಅಂತ್ಯಗೊಳಿಸಿದೆ.

ಇದನ್ನೂ ಓದಿ : ವಾಹನ ಸಾಲದ ಬಡ್ಡಿ ಜೊತೆಗೆ ಕಾರುಗಳ ದರವೂ ಏರಿಕೆ; ಗ್ರಾಹಕರಿಗೆ ಎರಡೆರಡು ಬರೆ

ಹೂಡಿಕೆದಾರರು ಈ ಹಂತದಲ್ಲಿ ಹೂಡಿಕೆ ಮಾಡಬಹುದೇ? ಮಾಡಬಹುದು. ಆದರೆ, ಲಿಸ್ಟಾದ ನಂತರದ ಉತ್ಸಾಹ ಬಹಳ ದಿನ ಇರದು. ಒಂದು ಹಂತ ತಲುಪಿದ ನಂತರ ಲಾಭ ನಗರೀಕರಣಕ್ಕೆ ಹೂಡಿಕೆದಾರರು ಮುಂದಾಗುತ್ತಾರೆ. ಆ ಹಂತದಲ್ಲಿ ಷೇರು ದರ ಕುಸಿಯುತ್ತದೆ. ಆಗ ಹೂಡಿಕೆ ಮಾಡುವುದು ಉತ್ತಮ. ಈಗಿನ ಷೇರು ಮೌಲ್ಯ ಇತರ ಎಎಂಸಿ ಕಂಪನಿಗೆ ಹೋಲಿಸಿದರೆ ಕೊಂಚ ದುಬಾರಿಯೇ. ಹೀಗಾಗಿ, ಕೆಲ ದಿನಗಳ ನಂತರ ಹೂಡಿಕೆ ಮಾಡುವುದು ಸೂಕ್ತ.

ದೀರ್ಘಕಾಲದ ಹೂಡಿಕೆಗೆ ಹೇಳಿ ಮಾಡಿಸಿದಂತಹ ಷೇರು ಇದು. ಮಕ್ಕಳ ಉನ್ನತಾಭ್ಯಾಸ, ಮನೆ ನಿರ್ಮಾಣ ಮತ್ತಿತರ ದೀರ್ಘಕಾಲದ ದೊಡ್ಡ ವೆಚ್ಚಕ್ಕಾಗಿ ಈ ಷೇರಿನ ಮೇಲೆ ಹೂಡಿಕೆ ಮಾಡಬಹುದು. ಸಾಮಾನ್ಯವಾಗಿ ಮ್ಯೂಚುವಲ್ ಫಂಡ್‌ಗಳು ಹೆಚ್ಚು ಸುರಕ್ಷಿತ ಹೂಡಿಕೆ. ಆದರೆ ಎಚ್‌ಡಿಎಫ್‌ಸಿ ಎಎಂಸಿ ಮ್ಯೂಚುವಲ್ ಫಂಡ್ ನಿರ್ವಹಣೆ ಮಾಡುವ ಕಂಪನಿಯಾದ್ದರಿಂದ ಇದೂ ಸುರಕ್ಷಿತ!

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More