ಮೊದಲ ತ್ರೈಮಾಸಿಕದಲ್ಲೂ ನಷ್ಟ ಘೋಷಿಸಿದ ಎಸ್‌ಬಿಐ; ಕಾರಣಗಳೇನು ಗೊತ್ತೇ?

ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸತತ ಮೂರನೇ ತ್ರೈಮಾಸಿಕದಲ್ಲೂ ನಷ್ಟ ಘೋಷಣೆ ಮಾಡಿದೆ. ಸಮಾಧಾನದ ಅಂಶ ಎಂದರೆ, ಬ್ಯಾಂಕ್ ನಿಷ್ಕ್ರಿಯ ಸಾಲ ತಗ್ಗುತ್ತಿದೆ. ಸಾಲ ವಿತರಣೆ, ಲಾಭಾಂಶ ಪ್ರಮಾಣ ಮತ್ತು ಬಡ್ಡಿಮೂಲದ ಆದಾಯವೂ ವೃದ್ಧಿಸುತ್ತಿದೆ

ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) 2018-19ನೇ ಸಾಲಿನ ಮೊದಲ ತ್ರೈಮಾಸಿಕದಲ್ಲೂ 4,876 ಕೋಟಿ ನಷ್ಟ ಘೋಷಣೆ ಮಾಡಿದೆ. ಇದು ಎಸ್‌ಬಿಐ ನಷ್ಟ ಘೋಷಣೆ ಮಾಡುತ್ತಿರುವ ಸತತ ಮೂರನೇ ತ್ರೈಮಾಸಿಕವಾಗಿದೆ. ಆದರೆ, ಕಳೆದ ವರ್ಷದ ಇದೇ ಅವಧಿಯಲ್ಲಿ ಅಂದರೆ, ಮೊದಲ ತ್ರೈಮಾಸಿಕದಲ್ಲಿ 2,005 ಕೋಟಿ ಲಾಭ ಗಳಿಸಿತ್ತು.

ಹಿಂದಿನ ಎರಡು ತ್ರೈಮಾಸಿಕಗಳಲ್ಲೂ ನಷ್ಟ ಘೋಷಣೆ ಮಾಡಿದ್ದ ಎಸ್‌ಬಿಐ, ಈ ತ್ರೈಮಾಸಿಕದಲ್ಲೂ ನಷ್ಟ ಘೋಷಣೆ ಮಾಡಿರುವುದು ಷೇರುಪೇಟೆಯಲ್ಲಿ ಅಚ್ಚರಿ ಮತ್ತು ಆಘಾತ ಉಂಟುಮಾಡಿದೆ. ಬಹುತೇಕ ಮಾರುಕಟ್ಟೆ ತಜ್ಞರು ಕನಿಷ್ಠ 250 ಕೋಟಿ ರುಪಾಯಿ ನಿವ್ವಳ ಲಾಭ ಘೋಷಣೆ ಮಾಡುತ್ತದೆಂಬ ನಿರೀಕ್ಷೆಯಲ್ಲಿದ್ದರು. ಫಲಿತಾಂಶ ಹೊರಬಿದ್ದ ನಂತರ ಎಸ್‌ಬಿಐ ಷೇರು ಶೇ.4ರಷ್ಟು ಕುಸಿಯಿತು. ಎಸ್‌ಬಿಐ, ಡಿಸೆಂಬರ್ ತ್ರೈಮಾಸಿಕದಲ್ಲಿ 7,718.17 ಕೋಟಿ, ಮಾರ್ಚ್ ತ್ರೈಮಾಸಿಕದಲ್ಲಿ 2,416.37 ಕೋಟಿ ನಷ್ಟ ಘೋಷಿಸಿತ್ತು.

ಅಷ್ಟಕ್ಕೂ ಎಸ್‌ಬಿಐ 4,876 ಕೋಟಿ ನಷ್ಟ ಘೋಷಣೆ ಮಾಡಿರುವುದು ಏಕೆ? ಎಸ್‌ಬಿಐ ಸಿಎಂಡಿ ರಜನಿಶ್ ಕುಮಾರ್ ಅವರ ಪ್ರಕಾರ, “ಬಾಂಡ್ ಗಳಿಕೆ ಏರುಪೇರಿನಿಂದಾದ ನಷ್ಟ, ವೇತನ ಪರಿಷ್ಕರಣೆ, ಗ್ರಾಚ್ಯುಯಿಟಿ ಮಿತಿ ಹೆಚ್ಚಳ ಮತ್ತು ನಿಷ್ಕ್ರಿಯ ಸಾಲ ನಿರ್ವಹಣೆಗಾಗಿ ಮೀಸಲಿಟ್ಟ ನಿಧಿ ಹೆಚ್ಚಳದಿಂದಾಗಿ ನಷ್ಟ ಘೋಷಣೆ ಮಾಡಲಾಗಿದೆ.”

ಎಸ್‌ಬಿಐ ನಿವ್ವಳ ಬಡ್ಡಿ ಆದಾಯವು ಹಿಂದಿನ ವರ್ಷದ ಇದೇ ಅವಧಿಯಲ್ಲಿದ್ದ 17,606 ಕೋಟಿಗೆ ಹೋಲಿಸಿದರೆ ಈಗ 21,798 ಕೋಟಿಗೆ ಏರಿದ್ದು, ಶೇ.23.81ರಷ್ಟು ಹೆಚ್ಚಳ ದಾಖಲಿಸಿದೆ. ವ್ಯವಹಾರ ಮೂಲದ ಆದಾಯವು ತಗ್ಗಿದ ಪರಿಣಾಮ ಬಡ್ಡಿಯೇತರ ಆದಾಯವು 8,006 ಕೋಟಿ ರುಪಾಯಿಯಿಂದ 6,679 ಕೋಟಿ ರುಪಾಯಿಗೆ ಕುಸಿದಿದೆ. ಟ್ರಷರಿ ಆದಾಯದ ಹೊರತಾಗಿ ವಾರ್ಷಿಕ ಬಡ್ಡಿಯೇತರ ಆದಾಯವು ಶೇ.27.39ರಷ್ಟು ಹೆಚ್ಚಿದೆ.

ನಿರ್ವಹಣಾ ಲಾಭ 11,973 ಕೋಟಿಗೆ ಏರಿದ್ದು ಅತ್ಯಲ್ಪ ಅಂದರೆ, ಶೇ.0.83ರಷ್ಟು ಮಾತ್ರ ಹೆಚ್ಚಳವಾಗಿದೆ. ನಿರ್ವಹಣಾ ಆದಾಯವು 25,612 ಕೋಟಿಯಿಂದ 28,478 ಕೋಟಿಗೆ ಏರಿದ್ದು ಶೇ.11.19ರಷ್ಟು ಹೆಚ್ಚಳ ಸಾಧಿಸಿದೆ.

ನಿಷ್ಕ್ರಿಯ ಸಾಲ ನಿರ್ವಹಣೆ ಮತ್ತು ಅನಿರೀಕ್ಷಿತ ವೆಚ್ಚಗಳಿಗಾಗಿ 19,228.26 ಕೋಟಿ ರುಪಾಯಿ ಮೀಸಲಿಡಲಾಗಿದೆ. ಮಾರ್ಚ್ ತ್ರೈಮಾಸಿಕದಲ್ಲಿ ಈ ಮೊತ್ತವು 28,096 ಕೋಟಿ ರುಪಾಯಿ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಮೊತ್ತ 8,929 ಕೋಟಿ ಇತ್ತು.

ಒಟ್ಟು ನಿಷ್ಕ್ರಿಯ ಸಾಲವು ಮಾರ್ಚ್ ತ್ರೈಮಾಸಿಕದಲ್ಲಿದ್ದ 2,23,427 ಕೋಟಿಯಿಂದ 2,12,840 ಕೋಟಿಗೆ ತಗ್ಗಿದೆ. ನಿವ್ವಳ ನಿಷ್ಕ್ರಿಯ ಸಾಲವು 1,10,855 ಕೋಟಿಯಿಂದ 99,236 ಕೋಟಿಗೆ ತಗ್ಗಿದೆ.

ದೇಶೀಯ ಸಾಲ ವಿತರಣೆಯು 16,07,583 ಕೋಟಿಯಿಂದ 17,23,443 ಕೋಟಿಗೆ ಏರಿದ್ದು, ಶೇ.7.21ರಷ್ಟು ಹೆಚ್ಚಳ ದಾಖಲಿಸಿದೆ. ಒಟ್ಟು ಸಾಲ ವಿತರಣೆಯು 18,86,666 ಕೋಟಿಯಿಂದ 19,90,172 ಕೋಟಿ ಏರಿದ್ದು, ಶೇ.5.49ರಷ್ಟು ಹೆಚ್ಚಿದೆ. ಬ್ಯಾಂಕ್ ಒಟ್ಟು ಆದಾಯವು 62,911 ಕೋಟಿಯಿಂದ 65,493 ಕೋಟಿಗೆ ಏರಿದ್ದು ಶೇ.4.10ರಷ್ಟು ಹೆಚ್ಚಳ ಸಾಧಿಸಿದೆ.

ಇದನ್ನೂ ಓದಿ : ಖಾಸಗಿ ಬ್ಯಾಂಕುಗಳ ನಿಷ್ಕ್ರಿಯ ಸಾಲ ತ್ವರಿತ  ಹೆಚ್ಚಳವಾಗುತ್ತಿದೆ ಎಂದಿದೆ ಆರ್‌ಬಿಐ ವರದಿ

ನಿಷ್ಕ್ರಿಯ ಹೊರೆಯನ್ನು ತಗ್ಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಲೆನ್ಸ್ ಶೀಟ್ ಶುದ್ಧೀಕರಣಕ್ಕೆ ತಾಕೀತು ಮಾಡಿದ ನಂತರ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲದೆ ಖಾಸಗಿ ವಲಯದ ಬ್ಯಾಂಕುಗಳು ನಿಷ್ಕ್ರಿಯ ಸಾಲ ನಿರ್ವಹಣೆಗಾಗಿ ಹೆಚ್ಚಿನ ನಿಧಿ ಮೀಸಲಿಡುತ್ತಿವೆ. ಹೀಗಾಗಿ ನಷ್ಟವನ್ನು ಘೋಷಿಸುತ್ತಿವೆ. ಖಾಸಗಿ ವಲಯದ ಕೆಲ ಬ್ಯಾಂಕ್‌ಗಳು ಸಹ ನಷ್ಟ ಘೋಷಣೆ ಮಾಡಿವೆ.

ಎಸ್‌ಬಿಐ ಹಿಂದಿನ ತ್ರೈಮಾಸಿಕಗಳಿಂದಲೂ ನಿಷ್ಕ್ರಿಯ ಸಾಲ ನಿರ್ವಹಣೆಗಾಗಿ ಹೆಚ್ಚಿನ ಮೀಸಲು ಇಡುತ್ತಿರುವುದರಿಂದ ನಷ್ಟ ಘೋಷಣೆ ಮಾಡಿದೆ. ಸಮಾಧಾನಕರ ಅಂಶವೆಂದರೆ, ಒಟ್ಟು ನಿಷ್ಕ್ರಿಯ ಸಾಲ ಮತ್ತು ನಿವ್ವಳ ನಿಷ್ಕ್ರಿಯ ಸಾಲ ಪ್ರಮಾಣವು ತಗ್ಗಿದೆ. ಇದು ಬ್ಯಾಂಕ್ ಸುಧಾರಣೆಯತ್ತ ಸಾಗಿರುವುದರ ಸಂಕೇತ. ನಿಷ್ಕ್ರಿಯ ಸಾಲ ತಗ್ಗಿರುವುದು ಬ್ಯಾಂಕಿನ ಆರ್ಥಿಕ ಆರೋಗ್ಯದ ಸಂಕೇತ. ಅಷ್ಟರ ಮಟ್ಟಿಗೆ ಎಸ್‌ಬಿಐ ಆರ್ಥಿಕ ಸುಧಾರಣೆಯಾಗುವತ್ತ ಸಾಗಿದೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More