ವಿಆರ್‌ಎಲ್ ಲಾಜಿಸ್ಟಿಕ್ ಲಾಭ ಶೇ.28.31ರಷ್ಟು ಕುಸಿತ; ಹೂಡಿಕೆಗಿದು ಸಕಾಲವೇ?

ಸರಕು ಸಾಗಾಣಿಕೆ ವಲಯದಲ್ಲಿ ದ.ಭಾರತದ ಪ್ರಮುಖ ಸಂಸ್ಥೆಯಾಗಿರುವ ವಿಆರ್‌ಎಲ್ ಲಾಜಿಸ್ಟಿಕ್ ಮೊದಲ ತ್ರೈಮಾಸಿಕದಲ್ಲಿ ನಿವ್ವಳ ಲಾಭ 24.18 ಕೋಟಿ ಗಳಿಸಿದ್ದು, ಶೇ.28.31ರಷ್ಟು ಕುಸಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ವಿಆರ್‌ಎಲ್ 33.73 ಕೋಟಿ ರು. ನಿವ್ವಳ ಲಾಭ ದಾಖಲಿಸಿತ್ತು

ದಕ್ಷಿಣ ಭಾರತದ ಪ್ರಮುಖ ಸರಕು ಸಾಗಣೆ ಕಂಪನಿ ಆಗಿರುವ ಹುಬ್ಬಳ್ಳಿ ಮೂಲದ ವಿಆರ್‌ಎಲ್ ಲಾಜಿಸ್ಟಿಕ್ ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕದಲ್ಲಿ 24.18 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದ್ದು, ಶೇ.28.31ರಷ್ಟು ಕುಸಿತ ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 33.73 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿತ್ತು.

ನಿವ್ವಳ ಆದಾಯವು 530.95 ಕೋಟಿ ರುಪಾಯಿಗೆ ಏರಿದೆ. ಕಳೆದ ವರ್ಷ ನಿವ್ವಳ ಆದಾಯವು 497.64 ಕೋಟಿ ರುಪಾಯಿಗಳಾಗಿತ್ತು. ಆದರೆ, ಮೊದಲ ತ್ರೈಮಾಸಿಕದಲ್ಲಿ ಕಂಪನಿಯ ವೆಚ್ಚವು 448.03 ಕೋಟಿ ರುಪಾಯಿಗಳಿಂದ 494.34 ಕೋಟಿ ರುಪಾಯಿಗಳಿಗೆ ಜಿಗಿದಿದೆ. ಹೀಗಾಗಿ, ನಿವ್ವಳ ಲಾಭದ ಪ್ರಮಾಣವು ತಗ್ಗಿದೆ.

ಮೊದಲ ತ್ರೈಮಾಸಿಕದಲ್ಲಿ ನಿವ್ವಳ ಲಾಭವು ಶೇ.28.31ರಷ್ಟು ಕುಸಿದಿರುವ ಸುದ್ದಿಗೆ ಷೇರುಪೇಟೆ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸುವ ನಿರೀಕ್ಷೆ ಇದೆ. ಶುಕ್ರವಾರ ವಿಆರ್‌ಎಲ್ ಲಾಜಿಸ್ಟಿಕ್ ಷೇರು ಶೇ.3.99ರಷ್ಟು ಕುಸಿದು ಷೇರು ದರವು 317.95 ರುಪಾಯಿಗೆ ಇಳಿದಿತ್ತು.

ವಿಆರ್‌ಎಲ್ ಲಾಜಿಸ್ಟಿಕ್ ಷೇರಿನಲ್ಲಿ ಹೂಡಿಕೆ ಮಾಡಬಹುದೇ?

ದಕ್ಷಿಣ ಭಾರತದ ಪ್ರಮುಖ ಸರಕು ಸಾಗಣೆ ಕಂಪನಿಯಾಗಿರುವ ವಿಆರ್‌ಎಲ್ ಲಾಜಿಸ್ಟಿಕ್ ರಾಷ್ಟ್ರವ್ಯಾಪಿ ತನ್ನ ಕಾರ್ಯಾಚರಣೆ ನಡೆಸುತ್ತಿದೆ. ಸಕಾಲದಲ್ಲಿ ಮತ್ತು ಸುರಕ್ಷಿತವಾಗಿ ಸರಕು ತಲುಪಿಸುವುದಕ್ಕೆ ಹೆಸರಾಗಿರುವ ವಿಆರ್‌ಎಲ್ ಲಾಜಿಸ್ಟಿಕ್ ದೀರ್ಘಕಾಲೀನ ಹೂಡಿಕೆಗೆ ಸೂಕ್ತವಾದ ಷೇರು.

ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬಂದ ನಂತರ ಸರಕು ಸಾಗಾಣಿಕೆ ವಲಯದಲ್ಲಿ ತೀವ್ರ ಬದಲಾವಣೆಗಳು ಆಗುತ್ತಿವೆ. ಅಸಂಘಟಿತ ವಲಯದಲ್ಲಿದ್ದ ಸರಕು ಸಾಗಾಣಿಕೆದಾರರ ಪಾಲು ತಗ್ಗುತ್ತಿದ್ದು, ಸಂಘಟಿತ ವಲಯದ ಪಾಲು ಹಿಗ್ಗುತ್ತಿದೆ. ದೇಶ ಆರ್ಥಿಕತೆ ಚೇತರಿಸಿಕೊಳ್ಳುತ್ತಿರುವುದು ಮತ್ತು ಆರ್ಥಿಕತೆ ಚೇತರಿಕೆಯಲ್ಲಿ ಸರಕು ಸಾಗಾಣಿಕೆ ವಲಯವು ಪ್ರಮುಖ ಪಾತ್ರ ವಹಿಸುವುದರಿಂದ ಮುಂಬರುವ ದಿನಗಳಲ್ಲಿ ವಿಆರ್‌ಎಲ್ ಲಾಜಿಸ್ಟಿಕ್ ಕಂಪನಿಯ ವಹಿವಾಟು ಮತ್ತಷ್ಟು ಹೆಚ್ಚಲಿದೆ.

ನಿವ್ವಳ ಲಾಭ ಕುಸಿದಿರುವುದರಿಂದ ವಿಆರ್‌ಎಲ್ ಷೇರು ಸೋಮವಾರದ ವಹಿವಾಟಿನಲ್ಲಿ ಕೊಂಚ ಕುಸಿಯಬಹುದು. ಆದರೆ, ಷೇರು ವರ್ಷದ ಗರಿಷ್ಠ ಮಟ್ಟ 492 ರುಪಾಯಿಯಿಂದ ಶುಕ್ರವಾರ ವಹಿವಾಟು ಅಂತ್ಯಗೊಂಡಾಗ 317.95ಕ್ಕೆ ಇಳಿದಿದೆ. ನಿವ್ವಳ ಲಾಭ ಕುಸಿತದಿಂದ ಮತ್ತಷ್ಟು ಕುಸಿದು 300 ರುಪಾಯಿ ಮುಟ್ಟಬಹುದು. ಆದರೆ, ದೀರ್ಘಕಾಲದಲ್ಲಿ ಈ ಷೇರು ಮತ್ತೆ ಚೇತರಿಸಿಕೊಂಡು ವರ್ಷದ ಗರಿಷ್ಠ ಮಟ್ಟವನ್ನು ಮುಟ್ಟಲಿದೆ.

ದೀರ್ಘಕಾಲದ ಹೂಡಿಕೆದಾರರು ವಿಆರ್‌ಎಲ್ ಷೇರು ಖರೀದಿಸಬಹುದು. ಈಗಿನ ಷೇರು ದರ 317 ರುಪಾಯಿ ಹೆಚ್ಚು ಆಕರ್ಷಕವಾಗಿದೆ. ವಿಆರ್‌ಎಲ್ ಷೇರು 300ರ ಮಟ್ಟಕ್ಕಿಂತ ಕೆಳಕ್ಕೆ ಇಳಿಯುವ ಸಾಧ್ಯತೆ ಇಲ್ಲ.

ಇದನ್ನೂ ಓದಿ : ಇನ್ಫಿ ಲಿಸ್ಟಾಗಿ 25 ವರ್ಷ; ಆಗ ₹100 ಹೂಡಿಕೆ ಮೌಲ್ಯ ಈಗ ₹6,80,000!

ವಿಜಯ ಸಂಕೇಶ್ವರ ಅವರ ಒಡೆತನದಲ್ಲಿರುವ ವಿಆರ್‌ಎಲ್ ಲಾಜಿಸ್ಟಿಕ್ ಮಾರುಕಟ್ಟೆ ಬಂಡವಾಳ ಮೌಲ್ಯವು 2879.25 ಕೋಟಿ (ಆ.11ರಂದು ಇದ್ದಂತೆ). ಪ್ರವರ್ತಕರು ಶೇ.68.05ರಷ್ಟು ಷೇರುಗಳನ್ನು ಹೊಂದಿದ್ದಾರೆ. ಸಾರ್ವಜನಿಕರು, ವಿದೇಶಿ ಮತ್ತು ದೇಶಿಯ ಸಾಂಸ್ಥಿಕ ಹೂಡಿಕೆದಾರರು ಶೇ.31.95ರಷ್ಟು (2018ರ ಮಾರ್ಚ್) ಹೊಂದಿದ್ದಾರೆ.

ಪ್ರತಿ ಷೇರಿನ ಗಳಿಕೆಯು 10.25ರಷ್ಟಿದ್ದು, ಷೇರು ದರಕ್ಕೆ ಪ್ರತಿ ಷೇರಿನ ಗಳಿಕೆ ಹೋಲಿಸಿದರೆ ಗಳಿಕೆ ದರ (ಪಿಇ) 31.09ರಷ್ಟಿದೆ. ಮಾರುಕಟ್ಟೆಯಲ್ಲಿರುವ ಇತರ ಸಾರಿಗೆ ಸಾಗಾಣಿಕೆ ಕಂಪನಿಗಳ ಸರಾಸರಿ ಇ 43.52ರಷ್ಟಿದೆ. ಹೀಗಾಗಿ, ವಿಆರ್‌ಎಲ್ ಲಾಜಿಸ್ಟಿಕ್ ಹೂಡಿಕೆ ಮಾಡಲು ಹೆಚ್ಚು ಆಕರ್ಷಕವಾಗಿದೆ. ದೀರ್ಘಕಾಲೀನ ಹೂಡಿಕೆದಾರರಿಗೆ ಇದು ಹೆಚ್ಚು ಸೂಕ್ತ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More