ನಿಷ್ಕ್ರಿಯ ಸಾಲ ಇತ್ಯರ್ಥ ಒಪ್ಪಂದಕ್ಕೆ ಕೆಲ ಖಾಸಗಿ ಬ್ಯಾಂಕುಗಳಿಂದ ತಕರಾರು

ನಿಷ್ಕ್ರಿಯ ಸಾಲವನ್ನು ತ್ವರಿತವಾಗಿ ನಿರ್ವಹಿಸುವ ಸಲುವಾಗಿ ಪಿಎನ್‌ಬಿ ಅಧ್ಯಕ್ಷ ಸುನಿಲ್ ಮೆಹ್ತಾ ನೇತೃತ್ವದ ಸಮಿತಿ, ಅಂತರ್ ಬ್ಯಾಂಕರುಗಳ ಒಪ್ಪಂದಕ್ಕೆ ಶಿಫಾರಸು ಮಾಡಿತ್ತು. ಕೇಂದ್ರ ಸರ್ಕಾರ ಅದನ್ನು ಸಶಕ್ತ್ ಯೋಜನೆಯಲ್ಲಿ ಅಳವಡಿಸಿಕೊಂಡಿದೆ. ಆದರೆ, ಕೆಲ ಬ್ಯಾಂಕುಗಳು ತರಕಾರೆತ್ತಿವೆ

ನಿಷ್ಕ್ರಿಯ ಸಾಲವನ್ನು ತ್ವರಿತವಾಗಿ ನಿರ್ವಹಣೆ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ರೂಪಿಸಿದ ಸಶಕ್ತ್ ಯೋಜನೆಯ ಭಾಗವಾಗಿರುವ ಅಂತರ ಬ್ಯಾಂಕರುಗಳ ಒಪ್ಪಂದಕ್ಕೆ (ಇಂಟರ್ ಕ್ರೆಡಿಟರ್ಸ್ ಅಗ್ರಿಮೆಂಟ್) ಖಾಸಗಿ ವಲಯದ ಪ್ರಮುಖ ಬ್ಯಾಂಕುಗಳಾದ ಎಚ್ಡಿಎಫ್ಸಿ ಬ್ಯಾಂಕ್, ಕೊಟಕ್ ಮಹಿಂದ್ರ ಬ್ಯಾಂಕ್, ಆರ್ಬಿಎಲ್ ಬ್ಯಾಂಕ್ ತಕರಾರು ಎತ್ತಿವೆ. ಈ ಬ್ಯಾಂಕುಗಳ ಜೊತೆಗೆ ವಿದೇಶಿ ಬ್ಯಾಂಕುಗಳೂ ದನಿಗೂಡಿಸಿವೆ.

ಕೈಮೀರಿ ಬೆಳೆಯುತ್ತಿದ್ದ ನಿಷ್ಕ್ರಿಯ ಸಾಲವನ್ನು ತ್ವರಿತವಾಗಿ ನಿರ್ವಹಿಸುವ ಸಲುವಾಗಿ ಮಾರ್ಗೋಪಾಯ ಸೂಚಿಸಲು ರಚಿಸಲಾಗಿದ್ದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧ್ಯಕ್ಷ ಸುನಿಲ್ ಮೆಹ್ತಾ ನೇತೃತ್ವದ ಸಮಿತಿಯು, ಅಂತರ ಬ್ಯಾಂಕರುಗಳ ಒಪ್ಪಂದವನ್ನು ಶಿಫಾರಸು ಮಾಡಿತ್ತು. ಒಪ್ಪಂದದಲ್ಲಿ ಮೂರು ಪ್ರಮುಖ ಅಂಶಗಳಿದ್ದವು.

ಸಾಲಗಾರ ಸುಸ್ತಿದಾರನಾದರೆ ಅಥವಾ ಸುಸ್ತಿದಾರನಾಗುವ ಮುನ್ಸೂಚನೆ ಸಿಕ್ಕರೆ, ಲೀಡ್ ಬ್ಯಾಂಕ್ ಪ್ರವರ್ತಕರ ಜೊತೆಗೆ ಅಥವಾ ನಿಷ್ಕ್ರಿಯ ಸಾಲ ನಿರ್ಹವಣೆಗೆ ಮುಂದಾದ ಬಿಡ್ಡರ್‌ಗಳ ಜೊತೆಗೆ ನೇರವಾಗಿ ವ್ಯವಹರಿಸಬಹುದು. ಒಂದು ವೇಳೆ, ಅದಕ್ಕೆ ಸಹಮತ ವ್ಯಕ್ತವಾಗದೆ ಇದ್ದಾಗ ಲೀಡ್ ಬ್ಯಾಂಕ್ ಇತರ ಬ್ಯಾಂಕರುಗಳಿಂದ ಸಾಲ ಖರೀದಿಸುವುದು ಅಥವಾ ಅವರಿಗೇ ಶೇ.15ರಷ್ಟು ರಿಯಾಯ್ತಿ ದರದಲ್ಲಿ ಮಾರಾಟ ಮಾಡುವುದು. ಸಾಲ ವಿತರಿಸಿದ ಮೂರನೇ ಎರಡರಷ್ಟು ಬ್ಯಾಂಕರುಗಳು ಐಸಿಎಗೆ ಸಹಿ ಹಾಕಿದ್ದರೆ, ಅದನ್ನು ಐಸಿಎಗೆ ಸಹಿ ಹಾಕಿರುವ ಎಲ್ಲ ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಖಾಸಗಿ ಬ್ಯಾಂಕುಗಳು ಒಪ್ಪಬೇಕು ಎಂಬುದಾಗಿತ್ತು.

ಈ ಒಪ್ಪಂದಕ್ಕೆ ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಫೆಡರಲ್ ಬ್ಯಾಂಕ್ ಸೇರಿದಂತೆ ಹಲವು ಸಣ್ಣ ಖಾಸಗಿ ಬ್ಯಾಂಕುಗಳು ಒಪ್ಪಿವೆ. ಆದರೆ, ಎಚ್ಡಿಎಫ್ಸಿ ಬ್ಯಾಂಕ್, ಕೊಟಕ್ ಬ್ಯಾಂಕ್, ಆರ್ಬಿಎಲ್ ಬ್ಯಾಂಕ್ ಗಳು ಒಪ್ಪಂದಕ್ಕೆ ಸಹಿ ಹಾಕಿಲ್ಲ. ಬದಲಿಗೆ, ಈ ಸಂಬಂಧ ಕಾನೂನು ತಜ್ಞರ ಸಲಹೆ ಪಡೆದ ನಂತರ ನಿರ್ಧರಿಸುವುದಾಗಿ ಹೇಳಿವೆ. ಭಾರತದಲ್ಲಿರುವ ವಿದೇಶಿ ಬ್ಯಾಂಕುಗಳು ಸಹ ಸಹಿ ಹಾಕಲು ಹಿಂದೇಟು ಹಾಕಿವೆ. ಸಾಲಗಾರರ ಮೇಲಿನ ತಮ್ಮ ಹಕ್ಕನ್ನು ಬಿಟ್ಟುಕೊಡಲು ಜಾಗತಿಕ ಆಡಳಿತ ಮಂಡಳಿಗಳು ಒಪ್ಪುದಿಲ್ಲ ಎಂಬ ಕಾರಣವನ್ನು ಮುಂದಿಟ್ಟಿವೆ.

ಸಿಎನ್‌ಬಿಸಿ ಟಿವಿ ವರದಿ ಪ್ರಕಾರ, ಖಾಸಗಿ ಬ್ಯಾಂಕುಗಳ ವಾದ ಏನೆಂದರೆ, ಸಾಲವು ಸುಸ್ತಿಯಾದಾಗ ಆದೇ ಸಾಲವನ್ನು ಕೆಲವು ಪ್ರತಿ ಗ್ಯಾರಂಟಿಯೊಂದಿಗೆ ಮರುಹೊಂದಾಣಿಕೆ ಮಾಡಿಕೊಳ್ಳುತ್ತವೆ. ಬೇರೆ ಮೂಲದಿಂದ ಸಾಲ ವಸೂಲು ಮಾಡಲು ಪ್ರಯತ್ನಿಸುತ್ತವೆ. ಆದರೆ, ಬಹುತೇಕ ಎಲ್ಲ ನಿಷ್ಕ್ರಿಯ ಸಾಲಗಳಲ್ಲಿ ಲೀಡ್ ಬ್ಯಾಂಕ್ ಆಗಿರುವ ಎಸ್ಬಿಐ ಅಥವಾ ಐಸಿಐಸಿಐ ಬ್ಯಾಂಕುಗಳನ್ನು ತಮ್ಮ ಪರವಾಗಿ ಮಾತುಕತೆ ನಡೆಸಲು ಬಿಟ್ಟರೆ ಹೆಚ್ಚಿನ ಲಾಭ ಆಗಲಾರದು. ಸಾಲ ಮರು ವಸೂಲಾತಿ ಪ್ರಮಾಣ ತಗ್ಗುತ್ತದೆ. ಒಪ್ಪಂದಕ್ಕೆ ಸಹಿ ಹಾಕುವುದರಿಂದ ಈ ಬ್ಯಾಂಕುಗಳು ತಮ್ಮ ಸಾಲವನ್ನು ಅಸೆಟ್ ರಿಕರ್ನಸ್ಟ್ರಕ್ಷನ್ ಕಂಪನಿಗಳಿಗೆ (ಎಆರ್ಸಿ) ಮಾರಾಟ ಮಾಡುವುದನ್ನು ನಿರ್ಬಂಧಿಸುತ್ತದೆ. ಸಾಲವನ್ನು ಇತರ ಬ್ಯಾಂಕುಗಳಿಗೆ, ಅದೂ ರಿಯಾಯ್ತಿಯಲ್ಲಿ ಮಾರಾಟ ಮಾಡಬೇಕಾಗುತ್ತದೆ. ಅದಕ್ಕಿಂತಲೂ ಆಘಾತಕರ ಸಂಗತಿ ಎಂದರೆ, ಈ ಬ್ಯಾಂಕುಗಳಿಗೆ ಪ್ರಭಾವಿಗಳು ದೂರವಾಣಿ ಕರೆ ಮಾಡಿ ಏಕೆ ಇನ್ನೂ ಸಹಿ ಮಾಡಿಲ್ಲ ಎಂದು ಪ್ರಶ್ನಿಸಿ ಒತ್ತಡ ಹೇರುತ್ತಿದ್ದಾರೆ.

ಇದನ್ನೂ ಓದಿ : ನಿಷ್ಕ್ರಿಯ ಸಾಲ ತ್ವರಿತ ನಿರ್ವಹಣೆಗೆ ಅಂತರ್ ಬ್ಯಾಂಕರುಗಳ ಒಪ್ಪಂದಕ್ಕೆ ಸಹಿ

ಕಾನೂನು ತಜ್ಞರ ಪ್ರಕಾರ, ಅಂತರ ಬ್ಯಾಂಕರುಗಳ ಒಪ್ಪಂದಕ್ಕೆ ಸಹಿ ಹಾಕಿದಾಗ ಲೀಡ್ ಬ್ಯಾಂಕ್‌ಗಳು ಹೆಚ್ಚಿನ ಅಧಿಕಾರ ಹೊಂದುತ್ತವೆ. ಇದರಿಂದ ಲೀಡ್ ಬ್ಯಾಂಕ್ ಸಾಲಗಳ ನಿರ್ವಹಣೆ ಮಾಡುವಾಗ ಇತರ ಬ್ಯಾಂಕುಗಳು ಖುದ್ದು ವ್ಯವಹಾರ ಕುದುರಿಸುವಷ್ಟು ಲೀಡ್ ಬ್ಯಾಂಕ್ ಕುದುರಿಸದಿರಬಹುದು. ಇದರಿಂದ ಖಾಸಗಿ ಬ್ಯಾಂಕುಗಳಿಗೆ ನಷ್ಟವಾಗಲಿದೆ. ಅಲ್ಲದೆ, ಆರ್ಬಿಐ ಆರಂಭಿಸಿರುವ ಬ್ಯಾಲೆನ್ಸ್ ಶೀಟ್ ಶುದ್ಧೀಕರಣ ಯೋಜನೆ ಇದರಿಂದ ಮತ್ತಷ್ಟು ವಿಳಂಬವಾಗಬಹುದು.

ಆದರೆ, ಸಾರ್ವಜನಿಕ ವಲಯದ ಬ್ಯಾಂಕುಗಳು ಈ ಆತಂಕಗಳನ್ನು ಒಪ್ಪುವುದಿಲ್ಲ. ಐಸಿಎ ನಿಷ್ಕ್ರಿಯ ಸಾಲ ನಿರ್ವಹಣೆ ತ್ವರಿತಗೊಳಿಸಲು ಸುಲಭ ವಿಧಾನವಾಗಿದೆ. ಸಹಿ ಹಾಕದ ಮೂರು ಪ್ರಮುಖ ಬ್ಯಾಂಕುಗಳ ಪೈಕಿ ಕೊಟಕ್ ಮತ್ತು ಆರ್ಬಿಎಲ್ ಬ್ಯಾಂಕ್ ಯಾವುದೇ ನಿಷ್ಕ್ರಿಯ ಸಾಲದಲ್ಲಿ ಪಾಲು ಹೊಂದಿಲ್ಲ. ಇನ್ನು, ಪಾಲು ಹೊಂದಿರುವ ಎಚ್ಡಿಎಸ್ಫಿ ಬ್ಯಾಂಕಿನದು ಒಂದೆರಡು ಕಂಪನಿಗಳಲ್ಲಿ ನಿಷ್ಕ್ರಿಯ ಸಾಲವಿರಬಹುದು. ಆದರೆ, ವಿದೇಶಿ ಬ್ಯಾಂಕುಗಳು ಐಸಿಎಗೆ ಸಹಿ ಹಾಕದೆ ಇರುವುದು ಆತಂಕಕ್ಕೆ ಎಡೆಮಾಡಿದೆ. ಈ ಬ್ಯಾಂಕುಗಳು ಪದೇಪದೇ ಸುಸ್ತಿದಾರರನ್ನು ಎನ್ಸಿಎಲ್ಟಿಗೆ ಎಳೆಯುತ್ತವೆ. ಇದರಿಂದಾಗಿ ತಗಾದೆ ಇತ್ಯರ್ಥವು ವಿಳಂಬವಾಗುತ್ತದೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More