ದೇಶದಲ್ಲಿ ಆಗಾಗ ಕಾಣಿಸಿಕೊಳ್ಳುವ ನೋಟುಗಳ ಕೊರತೆಗೆ ಮುಖ್ಯ ಕಾರಣ ಏನು ಗೊತ್ತೇ?

ಪ್ರಧಾನಿ ನರೇಂದ್ರ ಮೋದಿ ಅಪನಗದೀಕರಣ ಜಾರಿ ಮಾಡಿದ ನಂತರ ಇಡೀ ದೇಶದಲ್ಲಿ ನಗದು ಕೊರತೆ ತಲೆದೋರಿ ಜನತೆ ಕಂಗೆಟ್ಟಿದ್ದರು. 500, 1000 ರು. ನೋಟು ರದ್ದು ಮಾಡಿದ್ದರಿಂದ ನಗದು ಕೊರತೆ ಎದುರಾಗಿತ್ತು. ಹೊಸ ನೋಟುಗಳು ಸಕಾಲದಲ್ಲಿ ಲಭ್ಯವಾಗಲಿಲ್ಲ. ಈ ಸಮಸ್ಯೆ ಇನ್ನೂ ಏಕಿದೆ?

ಅಪನಗದೀಕರಣ ಜಾರಿಗೆ ತಂದ ನಂತರ ದೇಶವ್ಯಾಪಿ ನೋಟುಗಳ ಕೊರತೆ ತೀವ್ರವಾಗಿತ್ತು. ಆರ್ಥಿಕತೆಯೇ ಕುಸಿಯುವ ಹಂತಕ್ಕೆ ಬಂದಿತ್ತು. ರದ್ದಾದ 500 ಮತ್ತು 1000 ರುಪಾಯಿ ನೋಟುಗಳ ಬದಲಿಗೆ ಆರ್ಬಿಐ ಮುದ್ರಿಸಿದ ಹೊಸ 500 ಮತ್ತು 2000 ನೋಟುಗಳನ್ನು ಎಟಿಎಂಗಳಲ್ಲಿ ವಿತರಿಸಲು ವಿಳಂಬವಾಗಿತ್ತು. ಅದಕ್ಕೆ ಮುಖ್ಯ ಕಾರಣ ಎಟಿಎಂಗಳನ್ನು ಹೊಸ ನೋಟುಗಳ ವಿತರಣೆಗೆ ಮರು ಹೊಂದಾಣಿಕೆ (ರಿಕ್ಯಾಲಿಬ್ರೇಷನ್) ಮಾಡಬೇಕಿತ್ತು. ಮರುಹೊಂದಾಣಿಕೆ ಪೂರ್ಣಗೊಳ್ಳಲು ಸಾಕಷ್ಟು ಸಮಯ ಹಿಡಿಯಿತು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲಾ ಎಟಿಎಂಗಳನ್ನು ಮರು ಹೊಂದಾಣಿಕೆ ಮಾಡಲಾಗಿದೆ ಎಂದು ಘೋಷಿಸಿತು. ನಗದು ಕೊರತೆ ಇರುವುದಿಲ್ಲ ಎಂದು ಸಾರಿತು. ಅದಾದ ನಂತರವೂ ದೇಶದಲ್ಲಿ ಆಗಾಗ್ಗೆ ನೋಟುಗಳ ಕೊರತೆ ಎದ್ದು ಕಾಣುತ್ತಿತ್ತು. ಎಟಿಎಂಗಳ ಮುಂದೆ ‘ಔಟ್ ಆಫ್ ಆರ್ಡರ್’ ಇಲ್ಲವೇ ‘ನೋ ಕ್ಯಾಶ್’ ಬೋರ್ಡ್ ತೂಗು ಹಾಕಲಾಗುತ್ತಿತ್ತು.

ಈಗ ಆರ್‌ಟಿಐ ಮೂಲಕ ಆತಂಕಕಾರಿ ಅಂಶವೊಂದು ಬಹಿರಂಗವಾಗಿದೆ. ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನಗೆ ಸೇರಿದ 18135 ಎಟಿಎಂಗಳನ್ನು ಇದುವರೆಗೂ ಮರು ಹೊಂದಾಣಿಕೆ ಮಾಡಿಯೇ ಇಲ್ಲ. ಅಂದರೆ, ಶೇ.30ರಷ್ಟು ಎಟಿಎಂಗಳಲ್ಲಿ ಹೊಸ ನೋಟು ವಿತರಿಸುತ್ತಿಲ್ಲ.

59,521 ಎಟಿಎಂಗಳನ್ನು ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಪೈಕಿ 41,386 ಎಟಿಎಂಗಳನ್ನು ಮಾತ್ರ ಮರುಹೊಂದಾಣಿಕೆ ಮಾಡಿದೆ. ಉಳಿದ 18,135 ಎಟಿಎಂಗಳನ್ನು ಮರು ಹೊಂದಾಣಿಕೆ ಮಾಡಿಲ್ಲ. ಇಷ್ಟು ಮರು ಹೊಂದಾಣಿಕೆ ಮಾಡಲು ಎಸ್ಬಿಐ 22.50 ಕೋಟಿ ರುಪಾಯಿ ವೆಚ್ಚಮಾಡಿದೆ.

ಮಧ್ಯಪ್ರದೇಶ ಮೂಲದ ಆರ್ಟಿಐ ಕಾರ್ಯಕರ್ತ ಚಂದ್ರಶೇಖರ್ ಗೌಡ್ ಅವರು ಎಟಿಎಂಗಳ ಮರುಹೊಂದಾಣಿಕೆ ಕುರಿತಾದ ಮಾಹಿತಿಯನ್ನು ಆರ್ಬಿಐನಿಂದ ಪಡೆದಿದ್ದಾರೆ. ಮೋದಿ ಅವರು ಅಪನಗದೀಕರಣ ಮಾಡಿದಾಗ ಮೊದಲ ಹಂತದಲ್ಲಿ ಹೊಸ 500 ಮತ್ತು 2000 ನೋಟುಗಳಿಗಾಗಿ ಮರುಹೊಂದಾಣಿಕೆ ಮಾಡಲಾಯಿತು. ನಂತರ ಹೊಸದಾಗಿ 200 ರುಪಾಯಿ ನೋಟು ಮುದ್ರಿಸಿದ ನಂತರ ಮತ್ತೆ ಮರು ಹೊಂದಾಣಿಕೆ ಮಾಡಲಾಯಿತು.

ಇದನ್ನೂ ಓದಿ : ಆರ್‌ಬಿಐ, ವಿತ್ತ ಸಚಿವಾಲಯ ಏನೇ ಹೇಳಿದರೂ ರಾಜ್ಯದಲ್ಲಿ ನಗದು ಕೊರತೆ ಇರೋದು ನಿಜ!

ಅಪನಗದೀಕರಣ ಜಾರಿ ಮಾಡಿದಾಗ ನೋಟುಗಳ ರೂಪ ಮತ್ತು ಬಣ್ಣ ಬದಲಾಯಿಸಿದ್ದರೆ ಎಟಿಎಂಗಳನ್ನು ಮರುಹೊಂದಾಣಿಕೆ ಮಾಡುವ ಅಗತ್ಯ ಇರಲಿಲ್ಲ. ಆದರೆ, ನೋಟುಗಳ ಸುತ್ತಳತೆಯನ್ನು ತಗ್ಗಿಸಲಾಗಿದೆ. 500 ರುಪಾಯಿ ನೋಟು ಹಳೆಯ 5 ರುಪಾಯಿ ನೋಟಿನಂತೆಯೂ, 200 ರುಪಾಯಿ ಹಳೆಯ 2 ರುಪಾಯಿ ನೋಟಿನ ಅಳತೆಗೆ ತಗ್ಗಿಸಲಾಗಿದೆ.

ಸದ್ಯಕ್ಕೆ ಎಟಿಎಂನಲ್ಲಿ 100, 200, 500 ಮತ್ತು 2000 ನೋಟುಗಳು ವಿತರಿಸಲಾಗುತ್ತಿದೆ. ಆದರೆ, ಎಟಿಎಂನಲ್ಲಿ ಏಕ ಕಾಲಕ್ಕೆ ನಾಲ್ಕೂ ಮೌಲ್ಯದ ನೋಟುಗಳನ್ನು ವಿತರಿಸುತ್ತಿಲ್ಲ. ಸಾಮಾನ್ಯವಾಗಿ ಎರಡು- ಮೂರು ಮೌಲ್ಯದ ನೋಟುಗಳನ್ನು ವಿತರಿಸಲಾಗುತ್ತದೆ. ಬಹುತೇಕ ಸಂದರ್ಭಗಳಲ್ಲಿ 2000 ನೋಟುಗಳು ಮಾತ್ರವೇ ಎಟಿಎಂಗಳಲ್ಲಿ ಲಭ್ಯವಾಗುತ್ತಿವೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More