ಪೇಟೆಯಲ್ಲಿ ಗೂಳಿ ಓಟ ಅಬಾಧಿತ, ಸಾರ್ವಕಾಲಿಕ ದಾಖಲೆ ಮಾಡಿದ ಸೆನ್ಸೆಕ್ಸ್ ನಿಫ್ಟಿ

ಜಾಗತಿಕ ವ್ಯಾಪಾರ ಸಮರ ತಗ್ಗಿಸುವ ನಿಟ್ಟಿನಲ್ಲಿ ಅಮೆರಿಕ- ಚೀನಾ ಮಾತುಕತೆ ನಡೆಸುವ ಪ್ರಸ್ತಾಪದ ನಂತರ ಷೇರುಪೇಟೆಯಲ್ಲಿ ಉತ್ಸಾಹ ಚಿಮ್ಮಿದೆ. ಬಹುತೇಕ ಎಲ್ಲ ಪೇಟೆಗಳು ಜಿಗಿಯುತ್ತಿವೆ. ಈ ಮೊದಲೇ ಏರುಹಾದಿಯಲ್ಲಿ ಸಾಗಿದ್ದ ನಿಫ್ಟಿ, ಸೆನ್ಸೆಕ್ಸ್ ಸಾರ್ವಕಾಲಿಕ ದಾಖಲೆ ಓಟ ಮುಂದುವರಿದಿದೆ

ಸತತ ಏರುಹಾದಿಯಲ್ಲಿ ಸಾಗಿರುವ ಷೇರುಪೇಟೆ ವಾರದ ಎರಡನೇ ದಿನವೂ ಜಿಗಿದಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿ ಹೊಸ ದಾಖಲೆ ಮಾಡಿವೆ. ನಿತ್ಯವೂ ಈ ಹೊಸ ದಾಖಲೆ ಮುಂದುವರಿದೇ ಇದೆ. ಸೆನ್ಸೆಕ್ಸ್ 202 ಅಂಶ ಏರಿಕೆಯೊಂದಿಗೆ 38,896ಕ್ಕೇರಿದರೆ, ನಿಫ್ಟಿ 46 ಅಂಶದೊಂದಿಗೆ 11,738 ಅಂಶಕ್ಕೇರಿತು. ಉಭಯ ಸೂಚ್ಯಂಕಗಳು ನಿರ್ಣಾಯಕ ಮಟ್ಟವಾದ 38,800 ಮತ್ತು 11,700 ಅಂಶಗಳನ್ನು ದಾಟಿ ವಹಿವಾಟಾಗಿವೆ. 50 ಪ್ರಮುಖ ಷೇರುಗಳನ್ನೊಂದಿರುವ ನಿಫ್ಟಿ ಸೂಚ್ಯಂಕದಲ್ಲಿ ಮಾರುತಿ ಸುಜುಕಿ, ಎಚ್ಡಿಎಫ್ಸಿ, ವೇದಾಂತ, ಟಾಟಾ ಸ್ಟೀಲ್ ಮತ್ತು ಅದಾನಿ ಪೋರ್ಟ್ ಶೇ.1.5ರಿಂದ ಶೇ.4.2ರಷ್ಟು ಜಿಗಿದವು. ನಿಫ್ಟಿ ಎನರ್ಜಿ ಸೂಚ್ಯಂಕ ಶೇ.1ರಷ್ಟು ಜಿಗಿಯಿತು.

ಈಗಾಗಲೇ 8 ಲಕ್ಷ ಕೋಟಿ ಮಾರುಕಟ್ಟೆ ಬಂಡವಾಳ ಮೌಲ್ಯ ಸಾಧಿಸಿದ ಮೊದಲ ಕಂಪನಿ ಎನಿಸಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಮಂಗಳವಾರದ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ ದಾಖಲಿಸಿತು. ಮಂಗಳವಾರ ವಹಿವಾಟು ಅಂತ್ಯಗೊಂಡಾಗ ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಬಂಡವಾಳ ಮೌಲ್ಯವು 8,35,429 ಕೋಟಿಗೆ ಏರಿತ್ತು.

ನಿಫ್ಟಿ ಕಳೆದ ಎರಡು ತಿಂಗಳಿಂದ ದಾಖಲೆ ಮಟ್ಟದಲ್ಲಿ ಜಿಗಿಯುತ್ತಿದೆ. ಏಷ್ಯಾ ಮಾರುಕಟ್ಟೆಯಲ್ಲಿ 2018ರಲ್ಲಿ ಗರಿಷ್ಠ ಸಾಧನೆ ಮಾಡಿದ ಹೆಗ್ಗಳಿಕೆ ಸೆನ್ಸೆಕ್ಸ್‌ಗೆ ದಕ್ಕಿದೆ. ಜಾಗತಿಕವಾಗಿ ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಭಾರತ. ಬಹುತೇಕ ಕಂಪನಿಗಳು ಜೂನ್ ತಿಂಗಳ ಮೊದಲ ತ್ರೈಮಾಸಿಕದಲ್ಲಿ ಶೇ.11ರಷ್ಟು ಲಾಭ ದಾಖಲಿಸಿವೆ. ಹಿಂದಿನ ಐದು ತ್ರೈಮಾಸಿಕಗಳಿಗೆ ಹೋಲಿಸಿದರೆ ಇದು ಗರಿಷ್ಠ ಲಾಭ ಗಳಿಕೆ. ಈ ಕಾರಣಗಳಿಗಾಗಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರಲ್ಲಿ ಮತ್ತೆ ಆಸಕ್ತಿ ಮೂಡಿದೆ. ಈ ಅಂಶವೂ ಷೇರುಪೇಟೆ ಜಿಗಿತಕ್ಕೆ ಒಂದು ಕಾರಣವಾಗಿದೆ. ಜೂನ್ ತ್ರೈಮಾಸಿಕದಲ್ಲಿ ಉತ್ತಮ ಫಲಿತಾಂಶ ಪ್ರಕಟಿಸಿದ ಬಹುತೇಕ ಪ್ರಮುಖ ಕಂಪನಿಗಳು ವರ್ಷದ ಗರಿಷ್ಟ ಮಟ್ಟದಲ್ಲಿ ವಹಿವಾಟಾಗುತ್ತಿವೆ.

ಡಾಲರ್ ವಿರುದ್ಧ ರುಪಾಯಿ ಕುಸಿಯುತ್ತಿರುವುದರಿಂದ ಐಟಿ ವಲಯದ ಷೇರುಗಳ ಜಿಗಿಯುತ್ತಿವೆ. ನಿಫ್ಟಿ ಐಟಿ ಸೂಚ್ಯಂಕ ಶೇ.0.4ರಷ್ಟು ಏರಿದೆ. ಈ ನಡುವೆ, ಸೋಮವಾರದ ವಹಿವಾಟಿನಲ್ಲಿ ಕುಸಿದಿದ್ದ ರುಪಾಯಿ ಮಂಗಳವಾರದ ವಹಿವಾಟಿನಲ್ಲಿ 10 ಪೈಸೆಯಷ್ಟು ಚೇತರಿಸಿಕೊಂಡಿದೆ; ಆದರೆ, 70ರ ಮಟ್ಟದಿಂದ ಸುಧಾರಿಸಿಲ್ಲ. 2018ರಲ್ಲಿ ರುಪಾಯಿ ಡಾಲರ್ ವಿರುದ್ಧ ಶೇ.9ರಷ್ಟು ಕುಸಿದಿದೆ. ಐಟಿ ವಲಯದ ದೈತ್ಯ ಕಂಪನಿಗಳಾದ ಟಿಸಿಎಸ್, ಇನ್ಫೊಸಿಸ್ ಬಹುತೇಕ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟಾಗುತ್ತಿವೆ. ಮಿಡ್ ಕ್ಯಾಪ್ ಐಟಿ ಕಂಪನಿಗಳೂ ಸತತ ಏರುತ್ತಿವೆ.

ಜೂನ್ ತ್ರೈಮಾಸಿಕದಲ್ಲಿ ಬಹುತೇಕ ಕಂಪನಿಗಳು ಉತ್ತಮ ಫಲಿತಾಂಶ ಪ್ರಕಟಿಸಿದ ನಂತರ ಹೊರಹೋಗುತ್ತಿದ್ದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮತ್ತೆ ದೊಡ್ಡ ಮೊತ್ತದ ಹೂಡಿಕೆ ಮಾಡುತ್ತಿದ್ದಾರೆ. ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳತ್ತಲೂ ಆಸಕ್ತಿ ವಹಿಸಿದ್ದಾರೆ.

ಇದನ್ನೂ ಓದಿ : ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಸೆನ್ಸೆಕ್ಸ್, ನಿಫ್ಟಿ; ಹೂಡಿಕೆಗಿದು ಸಕಾಲವೇ?

ಅಮೆರಿಕ-ಚೀನಾ ನಡುವೆ ವ್ಯಾಪಾರ ಸಮರದ ಬಿಕ್ಕಟ್ಟು ಆರಂಭದಲ್ಲಿ ಬಹುತೇಕ ಷೇರುಪೇಟೆಗಳಲ್ಲಿ ತಲ್ಲಣ ಮೂಡಿಸಿತ್ತು. ಕಬ್ಬಿಣ ಮತ್ತು ಅಲ್ಯೂಮಿನಿಯಂ ಮತ್ತು ಇತರ ಮೆಟಲ್ ವಲಯದ ಷೇರುಗಳು ಕುಸಿದಿದ್ದವು. ಈಗ ವ್ಯಾಪಾರ ಸಮರ ತಗ್ಗಿಸುವ ನಿಟ್ಟಿನಲ್ಲಿ ಪ್ರಗತಿ ಕಾಣಿಸುತ್ತಿರುವುದರಿಂದ ಮೆಟಲ್ ವಲಯದ ಷೇರುಗಳು ಚೇತರಿಸಿಕೊಂಡಿದೆ. ಆರಂಭದಲ್ಲಿ ಶೇ.25-50ರಷ್ಟು ಕುಸಿದಿದ್ದ ಷೇರುಗಳು ವ್ಯಾಪಾರ ಸಮರದ ಬಿಕ್ಕಟ್ಟು ಆರಂಭದ ಪೂರ್ವದಲ್ಲಿದ್ದ ಮಟ್ಟಕ್ಕೆ ಚೇತರಿಸಿಕೊಂಡಿವೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಏರುವ ಸಾಧ್ಯತೆ ಇದೆ.

ಮಾರುಕಟ್ಟೆ ಗರಿಷ್ಠ ಮಟ್ಟದಲ್ಲಿರುವಾಗ ಸಣ್ಣ ಹೂಡಿಕೆದಾರರು ಏನು ಮಾಡಬೇಕು? ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿರುವ ಷೇರುಗಳಲ್ಲಿ ಒಂದಷ್ಟು ಭಾಗ ಲಾಭ ನಗದೀಕರಣ ಮಾಡಿಕೊಳ್ಳಬೇಕು. ಶೇ.50-60ರಷ್ಟು ಲಾಭ ನಗದೀಕರಣ ಮಾಡಿಕೊಳ್ಳಲೂಬಹುದು. ಸತತ ಜಿಗಿದಿರುವ ಷೇರುಪೇಟೆ ಸೂಚ್ಯಂಕಗಳು ಜಾಗತಿಕ ಅಥವಾ ದೇಶಿಯ ಮಟ್ಟದಲ್ಲಿ ಯಾವುದೋ ಒಂದು ನಕಾರಾತ್ಮಕ ಸುದ್ದಿಗೆ ತೀವ್ರವಾಗಿ ಸ್ಪಂದಿಸಿ ಕುಸಿಯುತ್ತವೆ, ಷೇರುಗಳು ಸಹ ಕುಸಿಯುತ್ತವೆ. ಈ ಕುಸಿತವು ಶೇ.5-10ರಷ್ಟಿರಬಹುದು. ಕುಸಿದಾಗ ಮತ್ತೆ ಮಾರುಕಟ್ಟೆ ಪ್ರವೇಶಿಸಬಹುದು. ದೀರ್ಘಕಾಲದ ಹೂಡಿಕೆ ಮಾಡಿರುವವರು ಸಹ ಈ ಹಂತದಲ್ಲಿ ಲಾಭ ನಗದೀಕರಣ ಮಾಡಿಕೊಂಡು ನಂತರ ಮರುಪ್ರವೇಶ ಮಾಡುವುದು ಸೂಕ್ತ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More