ಡಾಲರ್ ವಿರುದ್ಧ ಮತ್ತೆ ಕುಸಿದ ರುಪಾಯಿ; ಒಂದು ಡಾಲರ್‌ಗೆ 70.74 ರುಪಾಯಿ

ಕಚ್ಚಾತೈಲದ ಬಿಲ್ ಪಾವತಿಗಾಗಿ ಬ್ಯಾಂಕುಗಳು ದೊಡ್ಡ ಪ್ರಮಾಣದಲ್ಲಿ ಡಾಲರ್ ಖರೀದಿಗಿಳಿದ ಪರಿಣಾಮವಾಗಿ ಗುರುವಾರ ರುಪಾಯಿ ಮತ್ತೊಂದು ಹಂತದ ಕುಸಿತ ಕಂಡಿದೆ. ಈಗಾಗಲೇ 70ರ ಗಡಿ ದಾಟಿ ವಹಿವಾಟಾಗುತ್ತಿದ್ದ ರುಪಾಯಿ, 70.50ರ ಗಡಿ ದಾಟಿ, ಈಗ 70.77ರ ಕನಿಷ್ಠ ಮಟ್ಟಕ್ಕೆ ಕುಸಿದಿದೆ

ಅಮೆರಿಕ ಡಾಲರ್ ವಿರುದ್ಧ ರುಪಾಯಿ ಕುಸಿತ ಮುಂದುವರಿದಿದ್ದು ಗುರುವಾರದ ವಹಿವಾಟಿನಲ್ಲಿ ಮತ್ತೊಂದು ಸುತ್ತಿನ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ದಿನದ ವಹಿವಾಟಿನಲ್ಲಿ 70.90ಕ್ಕೆ ಕುಸಿದಿದ್ದ ರುಪಾಯಿ, ವಹಿವಾಟಿನ ಅಂತ್ಯಕ್ಕೆ 70.74ಕ್ಕೆ ಸ್ಥಿರಗೊಂಡಿದೆ. ಆದರೆ, ಡಾಲರ್ ಬೇಡಿಕೆ ತೀವ್ರವಾಗಿರುವುದನ್ನು ಗಮನಿಸಿದರೆ, ನಾವು ಅಂದಾಜಿಸಿದ್ದಕ್ಕಿಂತಲೂ ತ್ವರಿತವಾಗಿ ರುಪಾಯಿ 71ರ ಗಡಿ ದಾಟುವ ನಿರೀಕ್ಷೆ ಇದೆ.

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಖರೀದಿಸಿದ ಕಚ್ಚಾತೈಲಕ್ಕೆ ಆಯ್ದ ಬ್ಯಾಂಕುಗಳು ಡಾಲರ್ ಮೂಲಕ ಬಿಲ್ ಪಾವತಿಸುತ್ತವೆ. ಮಾಸಾಂತ್ಯದ ಪಾವತಿಗಾಗಿ ಗರಿಷ್ಠ ಪ್ರಮಾಣದಲ್ಲಿ ಬ್ಯಾಂಕುಗಳು ಡಾಲರ್ ಖರೀದಿ ಮಾಡಿವೆ. ಹೀಗಾಗಿ, ಡಾಲರ್ ವಿರುದ್ಧ ರುಪಾಯಿ 15 ಪೈಸೆಯಷ್ಟು ಕುಸಿದಿದೆ.

ಈ ಕುಸಿತ ನಿಲ್ಲುವ ಸಾಧ್ಯತೆ ಇಲ್ಲ. ಈಗಿನ ಜಾಗತಿಕ ಮತ್ತು ದೇಶೀಯ ಪರಿಸ್ಥಿತಿಯನ್ನು ಅವಲೋಕಿಸಿದರೆ, ರುಪಾಯಿ 72ರ ಆಜುಬಾಜಿನಲ್ಲಿ ಸ್ಥಿರಗೊಳ್ಳುವ ಸಾಧ್ಯತೆ ಇದೆ. ಒಂದು ಬಾರಿ 72ರ ಆಜುಬಾಜಿನಲ್ಲಿ ಸ್ಥಿರಗೊಂಡರೆ ಅಲ್ಲಿಂದ ಚೇತರಿಸಿಕೊಳ್ಳುವುದು ಕಷ್ಟಸಾಧ್ಯ. ಮುಂದಿನ ಗುರಿ 75ಕ್ಕೆ ಕುಸಿಯಲೂಬಹುದು.

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಏರುತ್ತಿರುವ ಕಚ್ಚಾತೈಲ ಬೆಲೆ ಮತ್ತು ಕುಸಿಯುತ್ತಿರುವ ರುಪಾಯಿ ದೇಶದ ಆರ್ಥಿಕತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ದೀರ್ಘಕಾಲದಲ್ಲಿ ಇದು ಆರ್ಥಿಕ ಬಿಕ್ಕಟ್ಟಿಗೂ ಕಾರಣವಾಗುತ್ತದೆ. ಆರ್‌ಬಿಐ ಈಗಾಗಲೇ ಹಣದುಬ್ಬರ ಮತ್ತಷ್ಟು ಏರುವ ಅಂದಾಜು ಮಾಡಿದೆ. ಜೂನ್ ತಿಂಗಳಲ್ಲಿ 5ರ ಗಡಿ ದಾಟಿದ್ದ ಚಿಲ್ಲರೆದರ ಹಣದುಬ್ಬರ ಜುಲೈನಲ್ಲಿ ಕೊಂಚ ತಗ್ಗಿತ್ತು; ಆಗಸ್ಟ್ ತಿಂಗಳಲ್ಲಿ ಮತ್ತೆ 5ರ ಗಡಿ ದಾಟುವ ಸಾಧ್ಯತೆ ಇದೆ.

ರುಪಾಯಿ 72ರ ಆಜುಬಾಜಿನಲ್ಲಿ ಸ್ಥಿರಗೊಂಡಂತೆ, ದೇಶೀಯ ಚಿಲ್ಲರೆ ಹಣದುಬ್ಬರವು ಶೇ.5ರ ಆಜುಬಾಜಿನಲ್ಲಿ ಸ್ಥಿರಗೊಳ್ಳುವ ಸಾಧ್ಯತೆ ಇದೆ. ಏಕೆಂದರೆ, ಚಿಲ್ಲರೆ ದರ ಹಣದುಬ್ಬರದಲ್ಲಿ ಇಂಧನದ ವೈಯ್ಟೇಜ್ ಗರಿಷ್ಠ ಪ್ರಮಾಣದಲ್ಲಿದೆ. ಪೆಟ್ರೋಲ್, ಡಿಸೇಲ್ ಮತ್ತು ವಿದ್ಯುತ್ ದರ ಏರಿದಂತೆ ಹಣದುಬ್ಬರವೂ ಏರುತ್ತದೆ.

ಅಲ್ಲದೆ, ಪೆಟ್ರೋಲ್ ಮತ್ತು ಡಿಸೇಲ್ ಆಧಾರಿತ ಸರಕು ಸೇವೆಗಳ ದರವೂ ಕಾಲಕ್ರಮೇಣ ಏರುವುದರಿಂದ ಹಣದುಬ್ಬರವು ನಿಯಂತ್ರಣಕ್ಕೆ ಬರುವುದು ಕಷ್ಟಸಾಧ್ಯ. ಹಣದುಬ್ಬರವನ್ನು ಶೇ.4ರ ಮಟ್ಟದಲ್ಲಿ ಕಾಯ್ದುಕೊಳ್ಳುವ ಹೊಣೆ ಹೊತ್ತಿರುವ ಭಾರತೀಯ ರಿಸರ್ವ್ ಬ್ಯಾಂಕ್, ಬಡ್ಡಿದರ ಏರಿಸುವ ಮೂಲಕ ಹಣದುಬ್ಬರ ನಿಯಂತ್ರಿಸುತ್ತದೆ. ಅಂತಿಮವಾಗಿ ಇದು ಗ್ರಾಹಕರಿಗೆ ಹೊರೆಯಾಗುತ್ತದೆ.

ಇದನ್ನೂ ಓದಿ : ಡಾಲರ್ ವಿರುದ್ಧ 69 ಗಡಿ ಮುಟ್ಟಿದ ರುಪಾಯಿ; ಇದು ಕುಸಿತದ ಆರಂಭವೋ? ಅಂತ್ಯವೋ?

ಜೂನ್ ತಿಂಗಳಲ್ಲಿ 80 ಡಾಲರ್‌ಗೆ ಏರಿ ನಂತರ 70 ಡಾಲರ್‌ಗೆ ಕುಸಿದಿದ್ದ ಬ್ರೆಂಟ್ ಕ್ರೂಡ್ ಕಳೆದ ಎರಡು ವಾರಗಳಲ್ಲಿ ಶೇ.10ರಷ್ಟು ಏರಿಕೆ ಕಂಡಿದೆ ಮತ್ತು ಏರುತ್ತಲೇ ಇದೆ. ದಿನದ ವಹಿವಾಟಿನಲ್ಲಿ ಬ್ರೆಂಟ್ ಕ್ರೂಡ್ ಪ್ರತಿ ಬ್ಯಾರೆಲ್‌ಗೆ 77.45 ಡಾಲರ್ ವಹಿವಾಟಾಗಿದೆ.

ಈ ನಡುವೆ, ಸತತ ಏರಿಕೆ ಕಂಡಿದ್ದ ಷೇರುಪೇಟೆ ಸೂಚ್ಯಂಕಗಳಾದ ನಿಫ್ಟಿ, ಸೆನ್ಸೆಕ್ಸ್ ಕ್ರಮವಾಗಿ 15 ಮತ್ತು 32 ಅಂಶಗಳಷ್ಟು ಕುಸಿದಿವೆ. ಚಿನ್ನ 38 ರುಪಾಯಿ ಏರಿ, 30.226 ರುಪಾಯಿ ಆಜುಬಾಜಿನಲ್ಲಿ ವಹಿವಾಟಾಗಿದೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More