ಕೇಂದ್ರದ ಮಧ್ಯಪ್ರವೇಶದಿಂದಲೂ ಸ್ಥಿರಗೊಳ್ಳದ ರುಪಾಯಿ; ಪೇಟೆಯಲ್ಲಿ ರಕ್ತದೋಕುಳಿ

ರುಪಾಯಿ ಕುಸಿತ ತಡೆಗೆ ವಿತ್ತ ಸಚಿವ ಅರುಣ್ ಜೇಟ್ಲಿ ಘೋಷಿಸಿದ ಕ್ರಮಗಳಿಂದ ಏನೂ ಪ್ರಯೋಜನವಾಗಿಲ್ಲ. ದಿನದ ಮಟ್ಟಿಗೆ ಚೇತರಿಸಿದ್ದ ರುಪಾಯಿ ವಾರದ ಆರಂಭದಲ್ಲಿ ತೀವ್ರ ಕುಸಿದಿದ್ದು, ಷೇರುಪೇಟೆ ಮೇಲೂ ಪ್ರತಿಫಲಿಸಿದೆ. ಸೆನ್ಸೆಕ್ಸ್ 505, ನಿಫ್ಟಿ 138 ಅಂಶ ಕುಸಿದವು. ಚಿನ್ನಕ್ಕೆ ಮಾತ್ರ ಹೊಳಪು ಬಂದಿದೆ!

ಕೇಂದ್ರ ಸರ್ಕಾರ ಪ್ರಕಟಿಸಿದ ಕ್ರಮಗಳ ಹಿನ್ನೆಲೆಯಲ್ಲಿ ಶುಕ್ರವಾರ ಕೊಂಚ ಚೇತರಿಸಿಕೊಂಡಿದ್ದ ರುಪಾಯಿ ವಾರದ ಆರಂಭದಲ್ಲಿ ಮತ್ತೆ ಕುಸಿದಿದೆ. ಸೋಮವಾರ ಆರಂಭದಲ್ಲೇ ಶೇ.1ರಷ್ಟು ಕುಸಿದ ರುಪಾಯಿ ಮತ್ತೆ ಚೇತರಿಸಿಕೊಳ್ಳಲಿಲ್ಲ. ಅನಗತ್ಯ ವಸ್ತುಗಳ ಆಮದು ನಿರ್ಬಂಧ ಸೇರಿದಂತೆ ವಿತ್ತ ಸಚಿವ ಅರುಣ್ ಜೇಟ್ಲಿ ಪ್ರಕಟಿಸಿದ ಕ್ರಮಗಳು ಸೂಕ್ತವಾಗಿಲ್ಲ ಎಂಬುದನ್ನು ಮಾರುಕಟ್ಟೆ ಪರೋಕ್ಷವಾಗಿ ಹೇಳಿದೆ.

ರುಪಾಯಿ ಕುಸಿತದ ಪರಿಣಾಮ ಷೇರುಪೇಟೆಯಲ್ಲಿ ರಕ್ತದೋಕುಳಿ ನಡೆಯಿತು. ಸೆನ್ಸೆಕ್ಸ್ 500 ಅಂಶ ಕುಸಿದರೆ ನಿಫ್ಟಿ 138 ಅಂಶ ಕುಸಿಯಿತು. ಸೆನ್ಸೆಕ್ಸ್ 38,000 ಮತ್ತು ನಿಫ್ಟಿ 11,400ರ ನಿರ್ಣಾಯಕ ಮಟ್ಟದಿಂದ ಕೆಳಕ್ಕೆ ಇಳಿದವು. ರಫ್ತು ಆಧಾರಿತ ವಹಿವಾಟು ಕಂಪನಿಗಳಾದ ವಿಪ್ರೋ, ಸನ್ ಫಾರ್ಮಾ ಎಚ್ಸಿಎಲ್ ಟೆಕ್ನಾಲಜೀಸ್ ಜಿಗಿದರೆ, ಬಹುತೇಕ ಬ್ಯಾಂಕುಗಳ ಷೇರುಗಳು ಎಫ್ಎಂಸಿಜಿ ವಲಯದ ಷೇರುಗಳು ಕುಸಿದವು.

ರುಪಾಯಿ ಕುಸಿತ ಮುಂದುವರಿದಂತೆ ಚಿನಿವಾರ ಪೇಟೆಯಲ್ಲಿ ಚಿನ್ನಕ್ಕೆ ಹೊಳಪು ಬಂತು. ಚಿನ್ನ 252 ರುಪಾಯಿ ಜಿಗಿದು 30,688ಕ್ಕೆ ಏರಿತು.

ಪೇಟೆ ತೀವ್ರ ಕುಸಿತಕ್ಕೆ ಪ್ರಮುಖ ನಾಲ್ಕು ಕಾರಣಗಳು

ರುಪಾಯಿ ಕುಸಿತ ಮುಂದುವರಿಕೆ: ರುಪಾಯಿ ದಿನದ ವಹಿವಾಟಿನಲ್ಲಿ 79 ಪೈಸೆಯಷ್ಟು ಕುಸಿಯಿತು. ದಿನದ ಆರಂಭದಲ್ಲಿ 67 ಪೈಸೆ ಕುಸಿತದೊಂದಿಗೆ ವಹಿವಾಟು ಆರಂಭಿಸಿ 72.52ಕ್ಕೆ ಕುಸಿದದ್ದು, ಮತ್ತಷ್ಟು ಕುಸಿದು ದಿನದ ವಹಿವಾಟು ಅಂತ್ಯಗೊಂಡಾಗ 72.64ಕ್ಕೆ ಸ್ಥಿರಗೊಂಡಿತ್ತು. ಒಂದು ಹಂತದಲ್ಲಿ ಕೊಂಚ ಚೇತರಿಸಿಕೊಂಡು 72.48ಕ್ಕೆ ಏರಿದ್ದ ರುಪಾಯಿ ಮತ್ತೆ ಕುಸಿಯಿತು. ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವಿಸ್‌ನ ನವನೀತ್ ದಮಾನಿ ಪ್ರಕಾರ, ರುಪಾಯಿ ಅಲ್ಪಾವಧಿಯಲ್ಲಿ 70.80, 71.30ರ ಮಟ್ಟದಲ್ಲಿ ಬೆಂಬಲವಿದ್ದು 72.50- 72.90ರ ಮಟ್ಟದಲ್ಲಿ ಒತ್ತಡ ಇದೆ.

ಸರ್ಕಾರದ ಅಸಮರ್ಪಕ ಕ್ರಮಗಳು: ರುಪಾಯಿ ಕುಸಿತ ತಡೆಗೆ ಮತ್ತು ಚಾಲ್ತಿ ಖಾತೆ ಕೊರತೆ ಹಿಗ್ಗುವುದನ್ನು ತಡೆಯಲು ವಾರಾಂತ್ಯದಲ್ಲಿ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಪ್ರಕಟಿಸಿತು. ಆದರೆ, ಸರ್ಕಾರ ಕೈಗೊಂಡ ಕ್ರಮಗಳು ಸಮರ್ಪಕವಾಗಿಲ್ಲ ಎಂಬ ಭಾವನೆ ಪೇಟೆಯಲ್ಲಿದೆ. ಹೀಗಾಗಿ, ಪೇಟೆಯಲ್ಲಿ ಅಸ್ಥಿರತೆ ಮುಂದುವರಿದಿದೆ. ಮಸಾಲ ಬಾಂಡ್‌ಗಳ ಮೇಲಿನ ನಿರ್ಬಂಧ ತೆರವು, ವಿದೇಶಿ ಹೂಡಿಕೆದಾರರಿಗೆ ನಿಯಮ ಸಡಿಲಿಕೆ, ಅನಗತ್ಯ ವಸ್ತುಗಳ ಆಮದು ಮೇಲೆ ನಿರ್ಬಂಧ ಕ್ರಮಗಳನ್ನು ಕೇಂದ್ರ ಪ್ರಕಟಿಸಿತ್ತು. “ಭಾರತದ ಬೃಹದಾರ್ಥಿಕತೆ ಹೆಚ್ಚು ಉತ್ತಮ ಸ್ಥಿತಿಯಲ್ಲಿದೆ. ಹೆಚ್ಚಿನ ಅಭಿವೃದ್ಧಿ, ಸ್ಥಿರ ಹಣದುಬ್ಬರ ಮತ್ತು ವಿತ್ತೀಯ ಬದ್ಧತೆ 2013ರಲ್ಲಿ ಇದ್ದುದಕ್ಕಿಂತಲೂ ಪ್ರಬಲವಾಗಿರುವುದರಿಂದ ಸರ್ಕಾರ ಘೋಷಿಸಿದ ಕ್ರಮಗಳು ಪೂರಕವಾಗಿವೆ. ಸರ್ಕಾರ ತೀವ್ರತರ ಕ್ರಮ ಕೈಗೊಳ್ಳುವ ಅಗತ್ಯವೇನೂ ಇಲ್ಲ,” ಎಂದು ನೊಮುರಾ ಹೇಳಿದೆ.

ಜಾಗತಿಕ ಮಾರುಕಟ್ಟೆಗಳು: ವಾಲ್ ಸ್ಟ್ರೀಟ್‌ನಲ್ಲಿ ನೀರಸ ವಹಿವಾಟು ಮತ್ತು ಏಷ್ಯಾ ಮಾರುಕಟ್ಟೆಗಳಲ್ಲಿನ ತಟಸ್ಥ ವಹಿವಾಟು ಸಹ ಭಾರತದ ಪೇಟೆ ಇಳಿಜಾರಿನಲ್ಲಿ ಸಾಗಲು ಕಾರಣವಾಯಿತು. ವಾಲ್ ಸ್ಟ್ರೀಟ್‌ನಲ್ಲಿನ್ನು ಜಾಗತಿಕ ವ್ಯಾಪಾರ ಸಮರದ ಕರಿನೆರಳು ದಟ್ಟವಾಗಿಯೇ ಇದ್ದರೂ, ದಿನದ ಅಂತ್ಯಕ್ಕೆ ಏರಿಳಿತದೊಂದಿಗೆ ವಹಿವಾಟು ಅಂತ್ಯಗೊಂಡಿತ್ತು. ಚೀನಾದ ಮೇಲೆ ಮತ್ತಷ್ಟು ತೆರಿಗೆ ಹೇರುವುದಾಗಿ ವಾಷಿಂಗ್ಟನ್ ಪ್ರಕಟಿಸಿದ ಸುದ್ದಿಗೆ ಏಷ್ಯಾ ಪೇಟೆಗಳು ತೀಕ್ಷ್ಣವಾಗಿ ಸ್ಪಂದಿಸಿದವು.

ವ್ಯಾಪಾರ ಸಮರ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ಸರಕುಗಳ ಮೇಲೆ 200 ಬಿಲಿಯನ್ ಡಾಲರ್ ಸುಂಕ ಹೇರುವ ನಿರೀಕ್ಷೆ ಇದೆ ಎಂಬ ವರದಿಯು ಜಾಗತಿಕ ವ್ಯಾಪಾರ ಸಮರ ಮತ್ತೆ ಭುಗಿಲೇಳುವ ಮುನ್ಸೂಚನೆ ನೀಡಿತ್ತು. ಇದರಿಂದ ಪೇಟೆ ವ್ಯತಿರಿಕ್ತವಾಗಿ ಸ್ಪಂದಿಸಿತು. ಅಮೆರಿಕ-ಚೀನಾ ನಡುವಿನ ವ್ಯಾಪಾರ ಸಮರವು ಈಗ ಕೇವಲ ಎರಡು ದೇಶಗಳ ನಡುವಿನ ಸಮರವಾಗಿ ಉಳಿದಿಲ್ಲ. ಜಾಗತಿಕ ಸಮರವಾಗಿ ರೂಪುಗೊಂಡಿದೆ. ಹೀಗಾಗಿ, ಅಮೆರಿಕ ಪ್ರತಿ ಬಾರಿ ಸುಂಕ ಹೇರುವ ಪ್ರಸ್ತಾಪ ಮಾಡಿದಾಗಲೆಲ್ಲ ಪೇಟೆ ಕುಸಿಯುತ್ತದೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More