ಏರಿದ ಕಚ್ಚಾ ತೈಲ ದರ, ಮತ್ತಷ್ಟು ಕುಸಿದ ರುಪಾಯಿ; ಷೇರುಪೇಟೆಯಲ್ಲಿ ಅಸ್ಥಿರತೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ 80 ಡಾಲರ್ ಸಮೀಪಿಸಿದೆ. ಹೀಗಾಗಿ, ಡಾಲರ್ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ರುಪಾಯಿ ಮತ್ತೊಮ್ಮೆ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಷೇರುಪೇಟೆಯಲ್ಲಿ ಅಸ್ಥಿರತೆ ಮನೆಮಾಡಿದ್ದು, ಬಹುತೇಕ ಎಲ್ಲ ಸೂಚ್ಯಂಕ ಇಳಿಜಾರಿಗೆ ಸರಿದಿವೆ

“ಕಚ್ಚಾ ತೈಲದ (ಬ್ರೆಂಟ್ ಕ್ರೂಡ್) ಪ್ರತಿ ಬ್ಯಾರೆಲ್‌ಗೆ 80 ಡಾಲರ್ ದರ ಹೆಚ್ಚು ಸಮರ್ಪಕ,” ಎಂದು ಸೌದಿ ಅರೇಬಿಯಾ ಹೇಳಿದ ಬೆನ್ನಲ್ಲೇ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಶೇ.1.40ರಷ್ಟು ಜಿಗಿದಿದೆ. ಕಳೆದ ವಾರ ನಿರ್ಣಾಯಕ ದರವಾದ 80 ಡಾಲರ್ ಗಡಿ ದಾಟಿದ್ದ ಕಚ್ಚಾ ತೈಲ ದರ ಮಂಗಳವಾರದ (ಸೆ.18) ವಹಿವಾಟಿನಲ್ಲಿ 79.40 ಡಾಲರ್‌ಗೆ ಏರಿತು.

ಅತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕ್ರೂಡ್ ಜಿಗಿಯುತ್ತಿದ್ದಂತೆ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಭಾರತದ ರುಪಾಯಿ ಮತ್ತಷ್ಟು ಕುಸಿಯಿತು. ದಿನದ ವಹಿವಾಟಿನ ಅಂತ್ಯಕ್ಕೆ 72.97ಕ್ಕೆ ಕುಸಿದು ಮತ್ತೊಂದು ಸಾರ್ವಕಾಲಿಕ ಕನಿಷ್ಠ ಮಟ್ಟ ದಾಖಲಿಸಿತು. ಮಾರುಕಟ್ಟೆ ತಜ್ಞರೆಲ್ಲರೂ ನಿರೀಕ್ಷಿಸುತ್ತಿರುವ 73ರ ಮಟ್ಟಕ್ಕೆ ಕುಸಿಯಲು ಕೇವಲ ಮೂರು ಪೈಸೆ ಬಾಕಿ ಇದೆ. ಕಚ್ಚಾ ತೈಲ ದರ ಏರಿಕೆಯ ಜೊತೆಗೆ ರುಪಾಯಿ ಕುಸಿದರೆ ತಿಂಗಳಾಂತ್ಯಕ್ಕೆ 74ರ ಆಜುಬಾಜಿಗೆ ಇಳಿಯುವ ಸಾಧ್ಯತೆ ಇದೆ.

ಆರಂಭದಲ್ಲೇ ತೀವ್ರ ಏರಿಳಿತದೊಂದಿಗೆ ವಹಿವಾಟು ಆರಂಭಿಸಿದ ಷೇರುಪೇಟೆಯಲ್ಲಿ ಮಧ್ಯಾಹ್ನದವರೆಗೂ ತೀವ್ರ ಏರಿಳಿತ ಮುಂದುವರಿದಿತ್ತು. ಆದರೆ, ಕಚ್ಚಾ ತೈಲ ದರ ಜಿಗಿಯುತ್ತಿದ್ದಂತೆ ಷೇರುಪೇಟೆ ಕುಸಿಯಿತು. ಸೆನ್ಸೆಕ್ಸ್ 294 ನಿಫ್ಟಿ 99 ಅಂಶಗಳಷ್ಟು ಕುಸಿದವು. ಸೋಮವಾರ ಸೆನ್ಸೆಕ್ಸ್ 505 ಅಂಶ ಕುಸಿದಿತ್ತು.

ಈ ನಡುವೆ, ಕೇಂದ್ರ ಸರ್ಕಾರವು ದೇನಾ ಬ್ಯಾಂಕ್, ವಿಜಯಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡ- ಈ ಮೂರು ಬ್ಯಾಂಕುಗಳನ್ನು ವಿಲೀನಗೊಳಿಸಿ ದೇಶದ ಮೂರನೇ ಬೃಹತ್ ಬ್ಯಾಂಕಾಗಿ ರೂಪಿಸುವ ಘೋಷಣೆ ಮಾಡಿದ ಬೆನ್ನಲ್ಲೇ ಷೇರುಪೇಟೆ ಮಿಶ್ರ ಪ್ರತಿಕ್ರಿಯೆ ನೀಡಿತು. ದಿನದ ಆರಂಭದ ವಹಿವಾಟಿನಲ್ಲೇ ದೇನಾ ಬ್ಯಾಂಕ್ ಷೇರು ಶೇ.20ರಷ್ಟು ಜಿಗಿದರೆ ಬ್ಯಾಂಕ್ ಆಫ್ ಬರೋಡಾ ಷೇರು ಶೇ.16ರಷ್ಟುು ಕುಸಿಯಿತು. ವಿಜಯಾ ಬ್ಯಾಂಕ್ ಶೇ.6ರಷ್ಟು ಕುಸಿಯಿತು. ಅಸಲಿಗೆ, ಈ ವಿಲೀನ ಪ್ರಕ್ರಿಯೆಯಿಂದ ದೇನಾ ಬ್ಯಾಂಕ್‌ಗೆ ಹೆಚ್ಚಿನ ಅನುಕೂಲವಾಗಲಿದೆ; ಈ ಷೇರು ಮತ್ತಷ್ಟು ಏರುವ ಸಾಧ್ಯತೆ ಇದೆ. ಹಾಗೆಯೇ ಬ್ಯಾಂಕ್ ಆಫ್ ಬರೋಡ ಮತ್ತು ವಿಜಯಾ ಬ್ಯಾಂಕ್ ಷೇರುಗಳು ಕುಸಿಯಬಹುದು.

ಇದನ್ನೂ ಓದಿ : ರುಪಾಯಿ ಕುಸಿತ ಪರಿಣಾಮ; ಬೊಕ್ಕಸಕ್ಕಾಗುವ ಹೆಚ್ಚುವರಿ ಹೊರೆ ₹1 ಲಕ್ಷ ಕೋಟಿ

ದಿನದ ವಹಿವಾಟಿನಲ್ಲಿ ನಿಫ್ಟಿ ಪಿಎಸ್ಯು ಸೂಚ್ಯಂಕ ಶೇ.5ರಷ್ಟು ಕುಸಿದಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಬ್ಯಾಂಕುಗಳ ವಿಲೀನ ಪ್ರಕ್ರಿಯೆ ನಿರೀಕ್ಷಿಸಲಾಗಿದೆ. ಆದರೆ, ಭಾರತೀಯ ರಿಸರ್ವ್ ಬ್ಯಾಂಕ್ ಹೆಚ್ಚು ನಿಷ್ಕ್ರಿಯ ಸಾಲ ಹೊಂದಿರುವ ಹನ್ನೊಂದು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಸರಿದಾರಿಗೆ ತರುವ ಕ್ರಮಗಳ ವ್ಯಾಪ್ತಿಗೆ ತಂದಿದೆ. ದಿನದ ವಹಿವಾಟಿನಲ್ಲಿ ಬಹುತೇಕ ಬ್ಯಾಂಕುಗಳು ಕುಸಿದವು.

ವಿಸ್ತೃತ ಮಾರುಕಟ್ಟೆಯಲ್ಲಿ ಎಫ್ಎಂಸಿಜಿ ಸೂಚ್ಯಂಕ ಹೊರತಾಗಿ ಎಲ್ಲ ಸೂಚ್ಯಂಕಗಳು ಕುಸಿದವು. ಬರುವ ದಿನಗಳಲ್ಲಿ ಮಾರುಕಟ್ಟೆ ಮತ್ತಷ್ಟು ಕುಸಿಯುವ ಸಾಧ್ಯತೆ ನಿರೀಕ್ಷಿಸಲಾಗಿದೆ. ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿದ್ದ ಸೂಚ್ಯಂಕಗಳು ಸ್ಥಿರವಾಗುವ ಮುನ್ನ ಒಂದು ಸುತ್ತು ಕುಸಿಯಲಿವೆ. ಈ ಕುಸಿತದ ಪ್ರಮಾಣ ಶೇ.10ರಷ್ಟಾಗಬಹುದು ಅಥವಾ ಹೆಚ್ಚಲೂಬಹುದು. ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆ ಇರುವುದರಿಂದ ಪೇಟೆಯಲ್ಲಿ ಅಸ್ಥಿರತೆ ಮುಂದುವರಿಯಲಿದೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More