ವಂಚಕರ ವಿರುದ್ಧ ಕಠಿಣ ಕ್ರಮಕ್ಕೆ ಪಿಎಸ್‌ಯು ಬ್ಯಾಂಕ್‌ಗಳಿಗೆ ಜೇಟ್ಲಿ ಸೂಚನೆ

ಸಾರ್ವಜನಿಕ ವಲಯದ ಬ್ಯಾಂಕುಗಳ ಮುಖ್ಯಸ್ಥರ ಸಭೆ ನಡೆಸಿರುವ ವಿತ್ತ ಸಚಿವ ಜೇಟ್ಲಿ, ನಿಷ್ಕ್ರಿಯ ಸಾಲ ವಸೂಲಾತಿ ಕುರಿತು ಚರ್ಚಿಸಿದ್ದಾರೆ. ಸಾಲ ಪಡೆದು ವಂಚಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ. ಇವೆಲ್ಲದರ ನಡುವೆಯೂ ಎನ್ಪಿಎ ಸಾಲ ವಸೂಲಾತಿ ಮೊದಲ ತ್ರೈಮಾಸಿಕದಲ್ಲಿ ಗಣನೀಯವಾಗಿ ತಗ್ಗಿದೆ

ಸಾಲ ಪಡೆದು ವಂಚಿಸುವವರು ಮತ್ತು ಇಚ್ಛಾವರ್ತಿ ಸುಸ್ತಿದಾರರ ವಿರುದ್ಧ ಪರಿಣಾಮಕಾರಿ ಮತ್ತು ಕಠಿಣ ಕ್ರಮ ಕೈಗೊಳ್ಳುವಂತೆ ವಿತ್ತ ಸಚಿವ ಅರುಣ್ ಜೇಟ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.

ಸಾರ್ವಜನಿಕ ವಲಯದ ಬ್ಯಾಂಕುಗಳ ಸಾಲ ನೀಡಿಕೆ, ನಿಷ್ಕ್ರಿಯ ಸಾಲದ ಪ್ರಮಾಣ ಮತ್ತಿತರ ಅಂಶಗಳ ಪರಾಮರ್ಶೆ ನಡೆಸಿದ ಜೇಟ್ಲಿ, ಅನೌಪಚಾರಿಕ ಆರ್ಥಿಕತೆಯು ಮುಖ್ಯವಾಹಿನಿಗೆ ಬಂದರೆ ದೇಶವು ಶೇ.8ರಷ್ಟು ಸುಸ್ಥಿರ ಅಭಿವೃದ್ಧಿ ಸಾಧಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬ್ಯಾಂಕ್ ಆಫ್ ಬರೋಡ, ವಿಜಯಾ ಬ್ಯಾಂಕ್ ಮತ್ತು ದೇನಾ ಬ್ಯಾಂಕುಗಳನ್ನು ವಿಲೀನಗೊಳಿಸಿ ಜಾಗತಿಕ ಮಟ್ಟದ ಬೃಹತ್ ಬ್ಯಾಂಕ್ ರಚಿಸುವ ಪ್ರಸ್ತಾಪದ ಹಿನ್ನೆಲೆಯಲ್ಲಿ ಜೇಟ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳ ಮುಖ್ಯಸ್ಥರ ಸಭೆ ನಡೆಸಿದರು. ಸಭೆಯಲ್ಲಿ ಪ್ರಮುಖವಾಗಿ ಒತ್ತಡದ ಸಾಲ ಮತ್ತು ನಿಷ್ಕ್ರಿಯ ಸಾಲಗಳ ನಿರ್ವಹಣೆ ಮತ್ತು ತ್ವರಿತ ವಿಲೇವಾರಿ ಬಗ್ಗೆ ಚರ್ಚಿಸಲಾಗಿದೆ. ನಿಷ್ಕ್ರಿಯ ಸಾಲ ವಸೂಲು ಮಾಡುವುದು ಬ್ಯಾಂಕುಗಳಿಗೆ ದೊಡ್ಡ ಸವಾಲಾಗಿದೆ.

ಕೇಂದ್ರ ಸರ್ಕಾರ ದಿವಾಳಿ ಸಂಹಿತೆ ಸೇರಿದಂತೆ ಹಲವು ಕಾನೂನು ರೂಪಿಸಿದರೂ ನಿರೀಕ್ಷಿಸಿದ ಪ್ರಮಾಣದಲ್ಲಿ ಸಾಲ ವಸೂಲಾತಿ ಸಾಧ್ಯವಾಗುತ್ತಿಲ್ಲ. ಪ್ರಸಕ್ತ ವಿತ್ತೀಯ ವರ್ಷದಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು 36,551 ಕೋಟಿ ರುಪಾಯಿ ವಸೂಲು ಮಾಡಿವೆ. ಕಳೆದ ವರ್ಷದಲ್ಲಿ ಇದೇ ಅವಧಿಯಲ್ಲಿ ವಸೂಲಾತಿ ಪ್ರಮಾಣ 74,562 ಕೋಟಿಗೆ ಹೋಲಿಸಿದರೆ ಕೇವಲ ಶೇ.49ರಷ್ಟು ಮಾತ್ರ.

“ಅನೌಪಚಾರಿಕ ಆರ್ಥಿಕತೆಯು ಮುಖ್ಯವಾಹಿನಿಗೆ ಬರುವುದರಿಂದ ಸರ್ವರ ಅಭಿವೃದ್ಧಿಯೂ ಸಾಧ್ಯವಾಗುತ್ತದೆ, ಆ ಮೂಲಕ, ಆರ್ಥಿಕ ಸೇರ್ಪಡೆ ವಿಸ್ತರಿಸಿದಂತೆ ಜನರ ಅನುಭೋಗ ಶಕ್ತಿ ಹೆಚ್ಚಿ ಒಟ್ಟಾರೆ ದೇಶದ ಆರ್ಥಿಕತೆ ತ್ವರಿತವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಇದು ಭಾರತ ಸುಸ್ಥಿರವಾಗಿ ಶೇ.8ರಷ್ಟು ಅಭಿವೃದ್ಧಿ ದಾಖಲಿಸಲು ಸಾಧ್ಯವಾಗಲಿದೆ,” ಎಂದು ಜೇಟ್ಲಿ ಹೇಳಿದ್ದಾರೆ.

ಕಾರ್ಪೊರೆಟ್ ವ್ಯವಹಾರಗಳ ಖಾತೆಯನ್ನೂ ಹೊಂದಿರುವ ಜೇಟ್ಲಿ ಅವರು, “ದಿವಾಳಿ ಸಂಹಿತೆ, ಸರಕು ಮತ್ತು ಸೇವಾ ತೆರಿಗೆ, ಅಪನಗದೀಕರಣ ಮತ್ತು ಡಿಜಿಟಲ್ ಪಾವತಿ ಮತ್ತಿತರ ಕ್ರಮಗಳಿಂದಾಗಿ ಅನೌಪಚಾರಿಕ ಆರ್ಥಿಕತೆಯು ಮುಖ್ಯವಾಹಿನಿಗೆ ಬರುತ್ತಿದೆ. ಡಿಜಿಟಲ್ ಪಾವತಿ ವ್ಯವಸ್ಥೆಯಿಂದ ಆರ್ಥಿಕ ಸಾಮರ್ಥ್ಯ ಮತ್ತು ಅಪಾಯದ ಮುನ್ಸೂಚನೆಯನ್ನು ತ್ವರಿತವಾಗಿ ಮತ್ತು ಸಮರ್ಥವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿದೆ,” ಎಂದೂ ಹೇಳಿದ್ದಾರೆ.

ಇದನ್ನೂ ಓದಿ : ನಿಷ್ಕ್ರಿಯ ಸಾಲ; ಪ್ರಧಾನಿ ಮೋದಿ ಹೇಳೋದೊಂದು, ಬಿಜೆಪಿ ಹೇಳೋದು ಮತ್ತೊಂದು!

ಎಸ್ಬಿಐ ಮತ್ತು ಸಹವರ್ತಿ ಬ್ಯಾಂಕುಗಳನ್ನು ಯಶಸ್ವಿಯಾಗಿ ವಿಲೀನಗೊಳಿಸಿದ ನಂತರ ಕೇಂದ್ರ ಸರ್ಕಾರ ಬ್ಯಾಂಕ್ ಆಫ್ ಬರೋಡ, ವಿಜಯಾ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ಗಳನ್ನು ವಿಲೀನಗೊಳಿಸಲು ಮುಂದಾಗಿದೆ. ಇದರಿಂದ, ಗರಿಷ್ಠ ಪ್ರಮಾಣದ ನಿಷ್ಕ್ರಿಯ ಸಾಲ ಹೊಂದಿರುವ ದೇನಾ ಬ್ಯಾಂಕಿಗೆ ಹೆಚ್ಚಿನ ಅನುಕೂಲವಾಗಲಿದೆ.

ಆದರೆ, ಕಡಿಮೆ ನಿಷ್ಕ್ರಿಯ ಸಾಲ ಹೊಂದಿರುವ ಬ್ಯಾಂಕುಗಳಿಗೆ ವಿಲೀನ ಪ್ರಕ್ರಿಯೆಯಿಂದ ಹೆಚ್ಚಿನ ಅನುಕೂಲವಿಲ್ಲ ಎಂಬ ಭಾವನೆ ಬ್ಯಾಂಕಿಂಗ್ ವಲಯದಲ್ಲಿದೆ. ವಿಲೀನದ ನಂತರ ಏಕೀಕೃತ ಬ್ಯಾಂಕಿಗೆ ಬೇಕಾಗುವ ಅಗತ್ಯ ಬಂಡವಾಳ ನೆರವು ನೀಡುವುದಾಗಿ ಜೇಟ್ಲಿ ಭರವಸೆ ನೀಡಿದ್ದಾರೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More